ಶೇನ್ ವಾಟ್ಸನ್ ಗೆಲುವಿನ ವಿದಾಯಕ್ಕೆ ನೀರೆರಚಿದ ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸಮನ್ ಶೇನ್ ವಾಟ್ಸನ್ ಗೆ ಇದು ವಿದಾಯದ ಸರಣಿಯಾಗಿತ್ತಾದರೂ, ಅವರಿಗೆ ಗೆಲುವಿನ ಉಡುಗೊರೆ ನೀಡಬೇಕು ಎಂಬ ಕಾಂಗರೂಗಳ ಆಸೆಯನ್ನು ಭಾರತದ ಸ್ಫೋಟಕ ಬ್ಯಾಟ್ಸಮನ್ ನುಚ್ಚು ನೂರು ಮಾಡಿದ್ದಾರೆ.

ಮೊಹಾಲಿ: ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸಮನ್ ಶೇನ್ ವಾಟ್ಸನ್ ಗೆ ಇದು ವಿದಾಯದ ಸರಣಿಯಾಗಿತ್ತಾದರೂ, ಅವರಿಗೆ ಗೆಲುವಿನ ಉಡುಗೊರೆ ನೀಡಬೇಕು ಎಂಬ ಕಾಂಗರೂಗಳ ಆಸೆಯನ್ನು ಭಾರತದ ಸ್ಫೋಟಕ ಬ್ಯಾಟ್ಸಮನ್ ನುಚ್ಚು ನೂರು ಮಾಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ಗಳಲ್ಲಿ ಆ್ಯರಾನ್ ಫಿಂಚ್ (43ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 160 ರನ್ ಗಳಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಯಿತು. ಆರಂಭದಲ್ಲಿ ಸ್ಫೋಟಕ ಆರಂಭ ಕಂಡ ಆಸ್ಚ್ರೇಲಿಯಾಕ್ಕೆ ಭಾರತೀಯ ಬೌಲರ್ ಗಳು ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ಬ್ಯಾಟ್ಸಮನ್ ಗಳು ಪ್ರಭಾವಿಯಾಗುತ್ತಿದ್ದಂತೆಯೇ ಬೌಲಿಂಗ್ ನಲ್ಲಿ ಆಗ್ಗಿಂದ್ದಾಗ್ಗೆ ಬದಲಾವಣೆ ಮಾಡಿದ ಧೋನಿ ತಂತ್ರಗಾರಿಕೆ ನಿಜಕ್ಕೂ ಫಲ ನೀಡಿತ್ತು.
ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡ 150 ರನ್ ಗಳ ಗುರಿ ತಲುಪಬಹುದು ಎಂದೆಣಿಸುತ್ತಿದ್ದಾಗಲೇ ಜೊತೆ ಗೂಡಿದ ಶೇನ್ ವಾಟ್ಸನ್ ಮತ್ತು ನೆವಿಲ್ಲ್ ಆಂತಿಮ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು 160 ರನ್ ಗಳಿಗೆ ಹಿಗ್ಗಿಸಿದರು. ಕೊನೆಯ ಓವರ್ ನಲ್ಲಿ ಫಾಲ್ಕನರ್ ರನ್ನು ಔಟ್ ಮಾಡುವ ಮೂಲಕ ಪಾಂಡ್ಯಾ ಉತ್ತಮ ಆರಂಭ ಪಡೆದರು. ಬಳಿಕ ಕ್ರೀಸ್ ಗೆ ಬಂದ ವಾಟ್ಸನ್ ನಿಜಕ್ಕೂ ಪಾಂಡ್ಯಾರನ್ನು ದಂಡಿಸಿದ್ದರು. ಅಂತಿಮ ಮೂರು ಎಸೆತದಲ್ಲಿ 14 ರನ್ ಚಚ್ಚಿದ ವಾಟ್ಸನ್ ಆಸ್ಟ್ರೇಲಿಯಾದ ಮೊತ್ತವನ್ನು 160ಕ್ಕೆ ಏರಿಸಿದರು.
ಈ ಮೊತ್ತವನ್ನು ಬೆನ್ನುಹತ್ತಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ನಿಧಾನಗತಿಯ ಆರಂಭ ಒದಗಿಸಿದರು. ಇನ್ನೇನು ಈ ಇಬ್ಬರು ಬ್ಯಾಟ್ಸಮನ್ ಗಳು ಕ್ರೀಸ್ ಗೆ ಅಂಟಿಕೊಳ್ಳುತ್ತಿದ್ದಾರೆ ಅಂದಾಗಲೇ ಅನಗತ್ಯ ಹೊಡೆತಗಳಿಗೆ ಕೈ ಹಾಕಿ ಇಬ್ಬರೂ ಔಟ್ ಆದರು. ಬಳಿಕ ಬಂದ ಸುರೇಶ್ ರೈನಾ ಕೂಡ ಹೆಚ್ಚು ಕ್ರೀಸ್ ನಲ್ಲಿ ನಿಲ್ಲದೇ ವಿಕೆಟ್ ಕೈಚೆಲ್ಲಿದರು. ಆ ಬಳಿಕ ಕ್ರೀಸ್ ಗೆ ಬಂದ ಯುವರಾಜ್ ಸಿಂಗ್ ವಿರಾಟ್ ಕೊಹ್ಲಿ ಜೊತೆಗೂಡಿ ನಿಜಕ್ಕೂ ಭಾರತ ತಂಡಕ್ಕೆ ಆಸರೆಯಾದರು.
ಒಂದು ಹಂತದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾದ ಯುವಿ ರನ್ ಓಡುವುದೇ ದುಸ್ತರವಾಗಿ ಎರಡೆರಡು ಬಾರಿ ಮೈದಾನದಲ್ಲೇ ವೈದ್ಯರಿಂದ ಚಿಕಿತ್ಸಲೆ ಪಡೆದು ಮತ್ತೆ ಬ್ಯಾಟಿಂಗ್ ಗೆ ಅಣಿಯಾದರು. ಆದರೆ ದುರಾದೃಷ್ಟವಶಾತ್ ಅವರು ಕೂಡ 21 ರನ್ ಗಳಿಸಿ ಔಟ್ ಆದರು. ಆ ಬಳಿಕ ಆರಂಭವಾಗಿದ್ದೇ ವಿರಾಟ್ ಮೇನಿಯಾ. ಕೊಹ್ಲಿ ನಿಜಕ್ಕೂ ಆ ಸಮಯದಲ್ಲಿ ರನ್ ಮೆಷಿನ್ ಆಗದಿ ಪರಿವರ್ತನೆಯಾಗಿದ್ದರು. ಪ್ರತೀ ಓವರ್ ನಲ್ಲಿಯೂ ಬೌಂಡರಿ ಗಳಿಸುವ ಮೂಲಕ ರನ್ ವೇಗವನ್ನು ಹೆಚ್ಚಿಸಿದ್ದೇ ಅಲ್ಲದೇ ಅರ್ಧಶತಕ ಕೂಡ ಗಳಿಸದರು.
ಯುವಿ ಔಟಾದ ಬಳಿಕ ಕ್ರೀಸ್ ಗೆ ಆಗಮಿಸಿದ್ದ ನಾಯಕ ಧೋನಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಅಜೇಯ ಆಟವಾಡಿದ ಈ ಜೋಡಿ ಭಾರತದ ಗೆಲುವಿನ ಲೆಕ್ಕಾಚಾರವನ್ನು ಯಶಸ್ವಿಯಾಗಿ ಪೂರ್ತಿ ಮಾಡಿದರು. 18ನೇ ಓವರ್ ನಲ್ಲಿಯಂತೂ ಕೊಹ್ಲಿ ನೈಲ್ ರನ್ನು ಮನಸೋ ಇಚ್ಛೆ ದಂಡಿಸಿದ್ದರು. 17ನೇ ಓವರ್ ನ ಮೊದಲ ಮತ್ತು 2ನೇ ಎಸೆತಗಳನ್ನು ಬೌಂಡರಿಗೆ ಅಟ್ಟಿದ ಕೊಹ್ಲಿ 3ನೇ ಎಸೆತವನ್ನು ಸಿಕ್ಸರ್ ಗೆ ಎತ್ತಿದರು. ಆ ಮೂಲಕ ಭಾರತದ ಗೆಲುವಿನ ಆಸೆಯನ್ನು ಚಿಗುರಿಸಿದರು. ಬಳಿಕದ 18ನೇ ಓವರ್ ನಲ್ಲಿಯೂ ವಿರಾಟ್ ಮ್ಯಾಜಿಕ್ ಮುಂದುವರೆದಿತ್ತು. 18ನೇ ಓವರ್ ನ ಮೊದಲ ಎಸೆತವನ್ನು ಹೊರತು ಪಡಿಸಿದರೆ ನಂತರದ ನಾಲ್ಕೂ ಎಸೆತಗಳನ್ನು ಬೌಂಡರಿಗೆ ಅಟ್ಟುವ ಮೂಲಕ ಕೊಹ್ಲಿ ಭಾರತದ ಗೆಲುವನ್ನು ಸ್ಪಷ್ಟಪಡಿಸಿದ್ದರು.
ಅಂತಿಮವಾಗಿ ಧೋನಿ ಬೌಂಡರಿ ಮೂಲಕ ಗೆಲುವಿನ ರನ್ ಸಿಡಿಸಿ ಭಾರತದ ಜಯಕ್ಕೆ ಕಾರಣರಾದರು. ಈ ಪಂದ್ಯದೆ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಗೆ ಲಗ್ಗೆ ಇಟ್ಟರೆ, ಆಸ್ಟ್ರೇಲಿಯಾ ತಂಡ ಶೇನ್ ವಾಟ್ಸನ್ ಗೆ ಸೋಲಿನ ವಿದಾಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


