ಅಂಕಣಗಳು

ಉಪಗ್ರಹ ಜಾಲದ ಚದುರಂಗ: ಮಸ್ಕ್ ತಂತ್ರಕ್ಕೆ ಜಿಯೋ ಪ್ರತಿತಂತ್ರ! (ಜಾಗತಿಕ ಜಗಲಿ)

ಮಾರ್ಚ್ 2025ರಲ್ಲಿ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳೆರಡೂ ಸ್ಪೇಸ್ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದವು.

ಉಪಗ್ರಹ ಜಾಲದ ಚದುರಂಗ: ಮಸ್ಕ್ ತಂತ್ರಕ್ಕೆ ಜಿಯೋ ಪ್ರತಿತಂತ್ರ! (ಜಾಗತಿಕ ಜಗಲಿ)
Published On :

ಹಿಮಾಲಯದ ತಪ್ಪಲಿನ ಒಂದು ಹಳ್ಳಿಯಲ್ಲಿ, ಒಂದು ಮಗು ವೀಡಿಯೋ ತರಗತಿ ಲೋಡ್ ಆಗಿ ಲಭ್ಯವಾಗಲು ಕಾಯುತ್ತಿರುತ್ತದೆ. ಓರ್ವ ವ್ಯಾಪಾರಿ ಆನ್‌ಲೈನ್ ಆರ್ಡರ್ ಸರಿಯಾಗಿ ಖಾತ್ರಿಯಾಗಲಿ ಎಂದು ನಿರೀಕ್ಷಿಸುತ್ತಿರುತ್ತಾನೆ. ದೂರದ ಕರಾವಳಿಯಲ್ಲಿ ಓರ್ವ ಆರೋಗ್ಯ ಕಾರ್ಮಿಕನಿಗೆ ತುರ್ತು ಪರಿಸ್ಥಿತಿಯಲ್ಲಿ ವೈದ್ಯರೊಡನೆ ಮಾತನಾಡಬೇಕಿರುತ್ತದೆ. ಇಂತಹ ಜನರಿಗೆ ಮತ್ತು ಭಾರತದ ದುರ್ಗಮ ಮೂಲೆಗಳ ಜನರಿಗೆ ಸಂಪರ್ಕ ಒದಗಿಸುವುದನ್ನು ಉಪಗ್ರಹ ಅಂತರ್ಜಾಲವೇ ನಿರ್ಧರಿಸುತ್ತದೆ. ಉಪಗ್ರಹ ಅಂತರ್ಜಾಲ ಸೇವೆಯ ಕೀಲಿಕೈ ಯಾರ ಕೈಯಲ್ಲಿರುತ್ತದೋ, ಅವರೂ ಇಲ್ಲಿ ನಿರ್ಣಾಯಕರಾಗುತ್ತಾರೆ.

ಮಾರ್ಚ್ 2025ರಲ್ಲಿ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳೆರಡೂ ಸ್ಪೇಸ್ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದವು. ಜಿಯೋ ತನ್ನ ರೀಟೇಲ್ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್ ಕಿಟ್‌ಗಳ ದಾಸ್ತಾನು ಇರಿಸಿ, ಗ್ರಾಹಕರಿಗೆ ಅವುಗಳನ್ನು ಅಳವಡಿಸಿಕೊಳ್ಳಲು ನೆರವಾಗಬೇಕಿತ್ತು. ಆ ಮೂಲಕ, ಸರ್ಕಾರದ ಅನುಮತಿ ಲಭಿಸಿದ ಬಳಿಕ, ಸ್ಟಾರ್‌ಲಿಂಕ್ ಅನ್ನು ಭಾರತೀಯ ಮನೆಗಳು ಮತ್ತು ಉದ್ಯಮಗಳಲ್ಲಿ ಅಳವಡಿಸಲು ನಂಬಿಕಾರ್ಹ ಸಹಯೋಗಿಯಾಗಬೇಕಿತ್ತು. ಮಹತ್ವದ ಸ್ಥಳೀಯ ಪಾಲುದಾರಿಕೆಯ ವಿಶ್ವಾಸ ಹೊಂದಿದ ಎಲಾನ್ ಮಸ್ಕ್, ತಾಂತ್ರಿಕ ವಿವರಗಳು ಮತ್ತು ವಿಸ್ತರಣಾ ಯೋಜನೆಗಳ ಕುರಿತು ಕೊಂಚ ಮುಕ್ತವಾಗಿ ಮಾತನಾಡಲಾರಂಭಿಸಿದರು.

ಈ ಸ್ನೇಹ ಒಂದು ರಹಸ್ಯ ಲಾಭವನ್ನೂ ಒಳಗೊಂಡಿತ್ತು. ಸ್ಟಾರ್‌ಲಿಂಕ್ ಜೊತೆಗೂಡುವುದರಿಂದ, ಜಿಯೋಗೆ ಭೂಮಿಯ ಕೆಳ ಕಕ್ಷೆಯಿಂದ ಲಭಿಸುವ ಬಾಹ್ಯಾಕಾಶ ಸೇವೆಗಳು ಭಾರತದಲ್ಲಿ ಹೇಗೆ ಕಾರ್ಯಾಚರಿಸುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಅಂದರೆ, ಉಪಕರಣಗಳು ದೇಶಾದ್ಯಂತ ಹೇಗೆ ಸಂಚರಿಸುತ್ತವೆ, ಯಾವೆಲ್ಲ ಕಾನೂನು ಕ್ರಮಗಳು ಬಾಕಿ ಉಳಿದಿವೆ, ಮತ್ತು ಭೂ ಹಂತದಲ್ಲಿ ಯಾವೆಲ್ಲ ಮೂಲಭೂತ ವ್ಯವಸ್ಥೆಗಳು ಬೇಕು ಎನ್ನುವುದನ್ನು ತಿಳಿಯಬಹುದಿತ್ತು. ಇದೊಂದು ಅಪರೂಪದ ತರಗತಿಯಾಗಿದ್ದು, ಜಿಯೋ ಉತ್ತಮವಾಗಿಯೇ ಅಧ್ಯಯನ ಮಾಡಿತ್ತು. ಇದಾದ ಬಳಿಕ, ಜಿಯೋದ ಆಲೋಚನೆ ಬೇರೆಯವರ ಉಪಗ್ರಹ ವ್ಯವಸ್ಥೆಯನ್ನು ಹಂಚುವ ಬದಲು, ತನ್ನದೇ ಆದ ಸಂಪೂರ್ಣ ದೇಶೀಯ ವ್ಯವಸ್ಥೆಯೊಂದನ್ನು ಪ್ರಸ್ತಾಪಿಸುವತ್ತ ಬದಲಾಯಿತು.

ಅಕ್ಟೋಬರ್ 2026ರ ಆರಂಭದ ವೇಳೆಗೆ, ಜಿಯೋ ಭಾರತದಾದ್ಯಂತ 23 ಭೂ ಕೇಂದ್ರಗಳನ್ನು ಒಳಗೊಂಡ 1,600 ಭೂಮಿಯ ಕೆಳ ಕಕ್ಷೆಯ ಉಪಗ್ರಹ ಯೋಜನೆಯನ್ನು ಪ್ರಸ್ತಾಪಿಸಿತು. ಭೂಮಿಯ ಕೆಳ ಕಕ್ಷೆ ಎಂದರೆ, ಹಿಂದಿನ ಉಪಗ್ರಹಗಳಿಗೆ ಹೋಲಿಸಿದರೆ ಈಗಿನ ಉಪಗ್ರಹಗಳು ಭೂಮಿಗೆ ಸನಿಹದಿಂದ ಪರಿಭ್ರಮಣೆ ನಡೆಸುವ ಕಕ್ಷೆಗಳಾಗಿವೆ. ಇಲ್ಲಿ ಸಂಕೇತಗಳು ಕಡಿಮೆ ಅಂತರವನ್ನು ಕ್ರಮಿಸುವುದರಿಂದ, ಅಂತರ್ಜಾಲವನ್ನು ಬಳಸುವುದು ಪಕ್ಕದ ಮನೆಯವರಿಗೆ ಕರೆ ಮಾಡಿದಷ್ಟು ಕ್ಷಿಪ್ರವಾಗಿರುತ್ತದೆ. ಇನ್ನು ಭೂ ಕೇಂದ್ರಗಳು ರೈಲ್ವೇ ಜಂಕ್ಷನ್‌ಗಳಂತಿದ್ದು, ಬಾಹ್ಯಾಕಾಶದ ಸಂಕೇತಗಳು ಈಗಾಗಲೇ ಬಳಕೆಯಲ್ಲಿರುವ ನೆಟ್‌ವರ್ಕ್‌ಗಳೊಡನೆ ಬೆರೆಯುತ್ತವೆ. ಇದರಿಂದ ಪ್ರತಿಯೊಂದು ಡೇಟಾ ಸಹ ದೇಶದೊಳಗೇ ಉಳಿಯಲಿದ್ದು, ಸ್ಟಾರ್‌ಲಿಂಕ್‌ಗೆ ಗೃಹ ಸಚಿವಾಲಯದ ಅಂತಿಮ ಅನುಮೋದನೆಗೆ ತಡೆಯಾಗಿರುವ ಭದ್ರತಾ ಷರತ್ತು ಪೂರೈಸಿದಂತಾಗುತ್ತದೆ. ಎಲ್ಲ ಅಂತರ್ಜಾಲ ಟ್ರಾಫಿಕ್ ಸ್ಥಳೀಯ ಗೇಟ್‌ವೇಗಳ ಮೂಲಕ ಸಾಗುವುದರಿಂದ, ಇಂಟರ್‌ಸೆಪ್ಷನ್ ಮತ್ತು ಡೇಟಾ ಲೋಕಲೈಸೇಶನ್ ನಿಯಮಗಳನ್ನು ವಿದೇಶೀ ಪೂರೈಕೆದಾರನ ಒಪ್ಪಿಗೆಯ ಅವಶ್ಯಕತೆಯಿಲ್ಲದೆ ಪೂರೈಸುತ್ತದೆ. ಇದು ಸ್ಟಾರ್‌ಲಿಂಕ್ ಭರವಸೆ ನೀಡಿರುವ ರೀತಿಯಲ್ಲೇ ದುರ್ಗಮ ಹಳ್ಳಿಗಳಿಗೆ, ಗಡಿ ಪ್ರದೇಶಗಳಿಗೆ, ಸಂಪರ್ಕ ರಹಿತ ಪ್ರದೇಶಗಳಿಗೆ ಸಂಪರ್ಕ ಒದಗಿಸುತ್ತದೆ. ಆದರೆ, ಮೊದಲ ದಿನದಿಂದಲೂ ಇದು ಸಂಪೂರ್ಣವಾಗಿ ಭಾರತೀಯ ನಿಯಂತ್ರಣದಲ್ಲೇ ಇರುತ್ತದೆ.

ಜಿಯೋ ಈಗಾಗಲೇ ಜಿಯೋ ಸ್ಪೇಸ್ ಟೆಕ್ನಾಲಜಿ ಎನ್ನುವ ಹಳೆಯ ಉಪಗ್ರಹ ಯೋಜನೆಯನ್ನು ಹೊಂದಿದ್ದು, ಇದನ್ನು ಲಕ್ಸೆಂಬರ್ಗ್‌ನ ಎಸ್ಇಎಸ್ ಜೊತೆ ರೂಪಿಸಿದೆ. ಇದರಲ್ಲಿ ಜಿಯೋ 51% ಮಾಲೀಕತ್ವ ಹೊಂದಿದೆ. ಇದು ಬಹಳಷ್ಟು ಎತ್ತರದ ಉಪಗ್ರಹಗಳನ್ನು ಬಳಸುತ್ತಿದ್ದು, ಅವುಗಳಲ್ಲಿ ಕೆಲವು ಒಂದೇ ಸ್ಥಳದ ಮೇಲೆ ಜೋಡಿಸಿದಂತೆ ಕಾಣುತ್ತವೆ. ಇನ್ನುಳಿದ ಉಪಗ್ರಹಗಳಾದ ಎಸ್ಇಎಸ್‌ನ 03ಬಿ ಎಂಪವರ್ ನಂತಹವು ಮಧ್ಯಮ ಎತ್ತರದಲ್ಲಿ ಪರಿಭ್ರಮಣೆ ನಡೆಸುತ್ತವೆ. ಇನ್ನು ನೂತನ ಉಪಗ್ರಹ ಪುಂಜ ಇದಕ್ಕೆ ಪೂರಕವಾದ ವ್ಯವಸ್ಥೆಯಂತೆ ತೋರುತ್ತದೆ. ಜಿಯೋ ಕ್ಷಿಪ್ರ ಆರಂಭಕ್ಕಾಗಿ ತನ್ನ ಸಹಯೋಗಿ ಕಂಪನಿಯ ಸಾಮರ್ಥ್ಯವನ್ನು ಬಳಸಿಕೊಳ್ಳಲಿದ್ದು, ಬಳಿಕ ದೀರ್ಘಾವಧಿಯ ಸ್ವಾವಲಂಬಿ ಸಾಮರ್ಥ್ಯ ವೃದ್ಧಿಸಿಕೊಳ್ಳಲಿದೆ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

ಇಲ್ಲಿನ ಕಠಿಣ ಸವಾಲೆಂದರೆ, 1,600 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸುವವರು ಯಾರು? ಇಲ್ಲಿಯ ತನಕ ಯಾವುದೇ ಉಡಾವಣಾ ಒಪ್ಪಂದ ಏರ್ಪಟ್ಟಿಲ್ಲ. ಆದರೆ, ಜಿಯೋ ಜಗತ್ತಿನ ಬಹುತೇಕ ಹೆಚ್ಚು ತೂಕವನ್ನು ಹೊತ್ತು ಸಾಗುವ ಸ್ಪೇಸ್ಎಕ್ಸ್ ಸಂಸ್ಥೆಯ ರಾಕೆಟ್‌ನತ್ತ ಮುಖ ಮಾಡುವ ಸಾಧ್ಯತೆಗಳಿವೆ. ಇಸ್ರೋದ ಅತಿದೊಡ್ಡ ರಾಕೆಟ್ ಆದ ಎಲ್‌ವಿಎಂ3 ಅಂದಾಜು 8 ಟನ್ ತೂಕವನ್ನು ಭೂಮಿಯ ಕೆಳ ಕಕ್ಷೆಗೆ ಒಯ್ಯಬಲ್ಲದು. ಆದರೆ, ಸ್ಪೇಸ್ಎಕ್ಸ್ ರಾಕೆಟ್‌ಗಳು ಉಡಾವಣೆಯ ಬಳಿಕ ಭೂಮಿಗೆ ಮರಳಿ, ಮರುಬಳಕೆಗೆ ಸಜ್ಜಾಗುತ್ತವೆ. ಇದರಿಂದ ಒಂದೇ ಏರ್‌ಕ್ರಾಫ್ಟ್ ಮತ್ತೆ ಮತ್ತೆ ಉಡಾವಣೆಗೊಂಡು, ಉಪಗ್ರಹಗಳನ್ನು ಕ್ಷಿಪ್ರ ತಂಡಗಳಲ್ಲಿ ಕಕ್ಷೆಗೆ ತಲುಪಿಸುತ್ತವೆ. ಭಾರತದ ಬಳಿ ಇಂತಹ ಯಾವುದೇ ರಾಕೆಟ್ ಸೇವೆ ಲಭ್ಯವಿಲ್ಲ. ಆದ್ದರಿಂದ ಇಷ್ಟೊಂದು ಉಪಗ್ರಹಗಳ ಉಡಾವಣೆ ನಿಧಾನವಾಗಲಿದೆ.

ಏರ್‌ವೇವ್‌ಗಳು ಇನ್ನೊಂದು ಕದನಕ್ಕೆ ಹಾದಿಯಾಗಲಿವೆ. ಹೆದ್ದಾರಿಗಳಲ್ಲಿ ಪಥಗಳು ಇರುವ ಹಾಗೇ, ಉಪಗ್ರಹಗಳಿಗೆ ಸ್ಪೆಕ್ಟ್ರಮ್ ಎನ್ನುವ ರೇಡಿಯೋ ಫ್ರೀಕ್ವೆನ್ಸಿಗಳು ಬೇಕು. ಸರ್ಕಾರ ಈ ಫ್ರೀಕ್ವೆನ್ಸಿಗಳನ್ನು ಹರಾಜಿನ ಮೂಲಕ ಮಾರಾಟ ಮಾಡಬೇಕು ಎನ್ನುವುದು ಜಿಯೋ ಬಯಕೆಯಾಗಿದ್ದು, ತಮ್ಮ ಸ್ಪೆಕ್ಟ್ರಮ್‌ಗಳಿಗೆ ಅಪಾರ ಹಣ ಪಾವತಿಸಿರುವ ಟೆಲಿಕಾಂ ನಿರ್ವಾಹಕರ ರೀತಿಯಲ್ಲಿ ಇದನ್ನೂ ನಿರೀಕ್ಷಿಸುತ್ತಿದೆ. ಆದರೆ, ಉಪಗ್ರಹ ಫ್ರೀಕ್ವೆನ್ಸಿಗಳು ಬಹಳಷ್ಟು ನಿರ್ವಾಹಕರ ನಡುವೆ ಹಂಚಿಕೆಯಾಗುವುದರಿಂದ, ಜಾಗತಿಕ ಮಾದರಿಯಲ್ಲಿ ಸರ್ಕಾರ ಅದನ್ನು ಉಚಿತವಾಗಿ ನಿಯೋಜಿಸಬೇಕು ಎನ್ನುವುದು ಸ್ಟಾರ್‌ಲಿಂಕ್ ಮತ್ತು ಅಮೆಜಾ಼ನ್‌ಗಳ ನಿರೀಕ್ಷೆ. ಹರಾಜು ಪ್ರಕ್ರಿಯೆ ಉದ್ಯಮದ ಆರ್ಥಿಕತೆಗೆ ತೊಡಕು ಉಂಟುಮಾಡಬಹುದು ಎಂದು ಸರ್ಕಾರ ಹೇಳಿದ್ದು, ಕಾನೂನು ಫ್ರೀಕ್ವೆನ್ಸಿ ನಿಯೋಜನೆಗೆ ಅನುವು ಮಾಡಿಕೊಡುತ್ತದೆ.

ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದ ಮೂಲಕ 'ಪ್ರಧಾನ ಮಂತ್ರಿ ಅಂಬಾನಿ'ಗೆ ವ್ಯಂಗ್ಯವಾದ ಬಹಿರಂಗ ಪತ್ರವನ್ನು ಬರೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಏಕಸ್ವಾಮ್ಯದ ನಿಯಂತ್ರಣದ ಮೂಲಕ ಸ್ಟಾರ್‌ಲಿಂಕ್ ಅನ್ನು 1.9 ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆಯಿಂದ ತಡೆಯಲು ಪ್ರಯತ್ನಿಸುತ್ತಿದೆ ಎಂದು ಮಸ್ಕ್ ಆರೋಪಿಸಿದ್ದಾರೆ. ಆದರೆ ಸರ್ಕಾರ ಇಂತಹ ಯಾವುದೇ ಪಕ್ಷಪಾತವನ್ನು ತಳ್ಳಿಹಾಕಿದ್ದು, ಎಲ್ಲ ಮೂರು ಪರವಾನಗಿಗಳೂ ಸಮಾನ ಅನುಮೋದನೆಯನ್ನು ಕಾಯುತ್ತಿವೆ ಎಂದಿದೆ. ಆದರೆ, ಇದೇ ರಿಲಯನ್ಸ್ ಸಂಸ್ಥೆ ಸ್ಟಾರ್‌ಲಿಂಕ್‌ನ ಹಾರ್ಡ್‌ವೇರನ್ನು ತನ್ನ ಜಾಲದ ಮೂಲಕ ಮಾರಾಟ ಮತ್ತು ಅಳವಡಿಕೆ ನಡೆಸುವ ಒಪ್ಪಂದ ಮಾಡಿರುವುದನ್ನು ಬಹಿರಂಗವಾಗಿ ಮಸ್ಕ್ ಹೇಳಿಕೊಂಡಿಲ್ಲ. ಈ ಒಪ್ಪಂದದ ಕಾರಣದಿಂದ, ಭಾರತ ತನ್ನ ಭದ್ರತಾ ಅವಶ್ಯಕತೆಗಳನ್ನು ಬಲಪಡಿಸುತ್ತಿದ್ದಾಗ, ಜಾಗತಿಕ ಸ್ಪರ್ಧಿಯೊಂದು ಸನಿಹದಿಂದ ಗಮನಿಸುವಂತಾಯಿತು. ಸ್ಟಾರ್‌ಲಿಂಕ್ ಈ ಅನುಮೋದನೆಯನ್ನು ಕ್ಷಿಪ್ರವಾಗಿ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಅಷ್ಟರಲ್ಲಿ ಜಿಯೋ ಮುಂದೆ ಸಾಗಲು ಬೇಕಾದ ಜ್ಞಾನ ಮತ್ತು ವೇಗವನ್ನು ಗಳಿಸಿಕೊಂಡಿತ್ತು. ಇದರ ಪರಿಣಾಮವಾಗಿ, ಒಂದು ವಿದೇಶೀ ಸಂಸ್ಥೆಯ ಪ್ರವೇಶ ವಿಳಂಬವಾಗುವುದು ಮಾತ್ರವಲ್ಲ. ಬದಲಿಗೆ, ಒಂದು ಭಾರತೀಯ ಕಂಪನಿ ಇದಕ್ಕೆ ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸುತ್ತಿದೆ. ಇದರ ಡೇಟಾ ಭಾರತದ ನೆಲದಿಂದ ವಿದೇಶಗಳಿಗೆ ಹೋಗುವುದಿಲ್ಲ.

ಇದೊಂದು ತಾಳ್ಮೆಯ ಕಾರ್ಯತಂತ್ರವಾಗಿದ್ದು, ಸಮಯ ಮತ್ತು ಮಾಹಿತಿಗೆ ಹಣ ಮತ್ತು ತಂತ್ರಜ್ಞಾನದಷ್ಟೇ ಮಹತ್ವ ನೀಡಲಾಗುತ್ತಿದೆ. ಮಸ್ಕ್ ರಾಕೆಟ್ ನಿರ್ಮಾಣ ಮತ್ತು ಉಡಾವಣೆಯಲ್ಲಿ ಪ್ರಾವೀಣ್ಯತೆ ಗಳಿಸಿದ್ದು, ಭಾರತದ ಉತ್ತರ ಭೂ ಹಂತದ ಪದರಗಳಾದ ಭೂ ಕೇಂದ್ರಗಳು, ಅನುಮೋದನೆ, ಮತ್ತು ಡೇಟಾ ಸಂಚಾರದ ಮೇಲಿನ ನಿಯಂತ್ರಣಗಳತ್ತ ಗಮನ ಹರಿಸಿತ್ತು. ಇಂದು ಸಂಪರ್ಕ ವ್ಯವಸ್ಥೆಯೇ ಶಿಕ್ಷಣ, ಸಣ್ಣ ಉದ್ಯಮ, ಮತ್ತು ತುರ್ತು ಪರಿಹಾರ ಸೇವೆಗಳನ್ನು ರೂಪಿಸುವಾಗ, ಭೂ ಹಂತದ ಪದರದ ಮೇಲೆ ನಿಯಂತ್ರಣ ಸಾಧಿಸಿರುವವರು ದೀರ್ಘಾವಧಿಯ ಪ್ರಭಾವ ಹೊಂದಿರುತ್ತಾರೆ. ಬಳಕೆದಾರರಿಗೂ ಆಯ್ಕೆಯ ಅವಶ್ಯಕತೆ ಇರುವುದರಿಂದ, ಇಂದಿಗೂ ಸ್ಪರ್ಧೆ ಮುಖ್ಯವಾಗಿದೆ. ಯಾರು ಉಪಗ್ರಹಗಳ ಉಡಾವಣೆ ನಡೆಸುತ್ತಾರೋ, ಕಕ್ಷೆ ಅವರದ್ದಾಗಬಹುದು. ಆದರೆ, ಸಂಕೇತಗಳು ಹೇಗೆ ಭಾರತೀಯ ಮನೆಗಳನ್ನು, ಹಳ್ಳಿಗಳನ್ನು, ತಲುಪುತ್ತವೆ ಎನ್ನುವುದು ಭಾರತದ ಭೂ ವ್ಯವಸ್ಥೆಯನ್ನು ಆಧರಿಸಿರುತ್ತದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.