ಅಂಕಣಗಳು

ವ್ಯಾಪಾರ ಕೊರತೆ ಸರಿದೂಗಿಸಲು ಚಿನ್ನದ ತೆರಿಗೆ ಹೆಚ್ಚಳ ಪರಿಹಾರವೇ? (ಜಾಗತಿಕ ಜಗಲಿ)

ಮೇಲ್ನೋಟಕ್ಕೆ ಭಾರತೀಯರು ಅತಿಯಾದ ಚಿನ್ನ ಖರೀದಿಸುತ್ತಿದ್ದಾರೆ ಎನಿಸಬಹುದು. ಆದರೆ, ವಾಸ್ತವ ಚಿತ್ರಣ ಸಂಪೂರ್ಣ ಭಿನ್ನವಾಗಿದೆ.

ವ್ಯಾಪಾರ ಕೊರತೆ ಸರಿದೂಗಿಸಲು ಚಿನ್ನದ ತೆರಿಗೆ ಹೆಚ್ಚಳ ಪರಿಹಾರವೇ? (ಜಾಗತಿಕ ಜಗಲಿ)
ಚಿನ್ನ ಖರೀದಿ (ಸಾಂಕೇತಿಕ ಚಿತ್ರ) — online desk
Published On :

ಮೇ 13, ಬುಧವಾರದಂದು ಕೇಂದ್ರ ಸರ್ಕಾರ ಒಂದು ದೊಡ್ಡ ನಿರ್ಧಾರ ಕೈಗೊಂಡಿತು. ಚಿನ್ನ ಮತ್ತು ಬೆಳ್ಳಿಯ ಆಮದಿನ ಮೇಲಿನ ತೆರಿಗೆಯನ್ನು 15% ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಯಿತು. ಈ ಕ್ರಮದ ಗುರಿ ಮೇಲ್ನೋಟಕ್ಕೆ ಬಹಳ ವಿವೇಚನಾಯುಕ್ತವಾಗಿತ್ತು. ಅದೇನೆಂದರೆ, ಭಾರತೀಯ ರೂಪಾಯಿ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ವ್ಯಾಪಾರ ಕೊರತೆಯನ್ನು ಸರಿದೂಗಿಸಿ, ನಮ್ಮ ವಿದೇಶೀ ವಿನಿಮಯ ಸಂಗ್ರಹವನ್ನು ರಕ್ಷಿಸುವುದಾಗಿತ್ತು.

ಆದರೆ, ಕೊಂಚ ಒಳಗಿಳಿದು ನೋಡಿದರೆ, ಈ ಕಥೆ ಮೇಲ್ನೋಟಕ್ಕೆ ಕಂಡಷ್ಟು ಸರಳ ಮತ್ತು ಸುಲಭವಲ್ಲ ಎನ್ನುವುದು ಅರಿವಿಗೆ ಬರುತ್ತದೆ. ಬಹಳಷ್ಟು ಅರ್ಥಶಾಸ್ತ್ರಜ್ಞರು ಮತ್ತು ಮಾರುಕಟ್ಟೆ ತಜ್ಞರು ಈ ತೆರಿಗೆ ಹೆಚ್ಚಳದ ಕ್ರಮ ಸರ್ಕಾರ ಅಂದುಕೊಂಡಷ್ಟು ಫಲಪ್ರದವಾಗಿ ಕೆಲಸ ಮಾಡದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹೀಗೇಕೆ ಎನ್ನುವುದನ್ನು ಈ ಲೇಖನದ ಮೂಲಕ ಅರ್ಥ ಮಾಡಿಕೊಳ್ಳೋಣ. 2026ರ ಹಣಕಾಸು ವರ್ಷದ ಫೆಬ್ರವರಿ ತಿಂಗಳ ವೇಳೆಗಾಗಲೇ ಭಾರತದ ಚಿನ್ನದ ಆಮದು ಬಹುತೇಕ 29% ಹೆಚ್ಚಳ ಕಂಡು, ಬಹುತೇಕ 69 ಬಿಲಿಯನ್ ಡಾಲರ್ (ಅಂದಾಜು 6.4 ಲಕ್ಷ ಕೋಟಿ ರೂಪಾಯಿ) ತಲುಪಿತ್ತು.

ಮೇಲ್ನೋಟಕ್ಕೆ ಭಾರತೀಯರು ಅತಿಯಾದ ಚಿನ್ನ ಖರೀದಿಸುತ್ತಿದ್ದಾರೆ ಎನಿಸಬಹುದು. ಆದರೆ, ವಾಸ್ತವ ಚಿತ್ರಣ ಸಂಪೂರ್ಣ ಭಿನ್ನವಾಗಿದೆ. ನಾವು ಖರೀದಿಸುವ ಚಿನ್ನದ ಪ್ರಮಾಣದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಹೆಚ್ಚಳ ಉಂಟಾಗಿಲ್ಲ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಅತ್ಯಂತ ದುಬಾರಿಯಾದ್ದರಿಂದ ಬೆಲೆ ಇಷ್ಟೊಂದು ಹೆಚ್ಚಾಗಿತ್ತು. ಒಂದು ವೇಳೆ ನೀವು ಕಳೆದ ದೀಪಾವಳಿಯಲ್ಲಿ ಖರೀದಿಸಿದಂತೆ ಈ ಬಾರಿಯೂ ಒಂದು ತೊಲ ಚಿನ್ನವನ್ನೇ ಖರೀದಿಸಿದರೂ, ಅದಕ್ಕೆ ಭಾರತ ತೆರುವ ಡಾಲರ್ ಮೊತ್ತ ಮಾತ್ರ ಈಗ ಸಾಕಷ್ಟು ಹೆಚ್ಚಾಗಿದೆ.

ಇಲ್ಲಿ ನಾವು ಗಮನಿಸಬೇಕಾದ ಒಂದು ಸರಳ ಲೆಕ್ಕಾಚಾರವಿದೆ. ನಿಮ್ಮ ಒಟ್ಟು ವೆಚ್ಚ ಎರಡು ವಿಚಾರಗಳ ಮೇಲೆ ಅವಲಂಬಿತವಾಗಿದೆ. ಅವೆಂದರೆ: ಬೆಲೆ ಮತ್ತು ಪ್ರಮಾಣ. ಒಂದು ವೇಳೆ ಜಾಗತಿಕ ಚಿನ್ನದ ದರ 30ರಿಂದ 35% ಹೆಚ್ಚಳವಾದರೆ, ಭಾರತ ಒಂದಷ್ಟು ಟನ್‌ಗಳಷ್ಟು ಚಿನ್ನ ಕಡಿಮೆ ಆಮದು ಮಾಡಿಕೊಂಡರೂ ಬೆಲೆ ಮಾತ್ರ ಇನ್ನಷ್ಟು ಹೆಚ್ಚೇ ತೆರಬೇಕಾಗುತ್ತಿತ್ತು.

ಇದನ್ನು ಅಂಕಿಅಂಶಗಳೂ ಸಾಬೀತುಪಡಿಸಿವೆ. 2026ರ ಹಣಕಾಸು ವರ್ಷದಲ್ಲಿ, ವಾಸ್ತವವಾಗಿ ಭಾರತ ಕೇವಲ 721 ಟನ್, ಅಂದರೆ 4.76% ಕಡಿಮೆ ಚಿನ್ನವನ್ನು ಆಮದು ಮಾಡಿಕೊಂಡಿತು. ಆದರೆ, ಆಮದು ವೆಚ್ಚ 24.1% ಹೆಚ್ಚಳ ಕಂಡು, ಭಾರತ 72 ಬಿಲಿಯನ್ ಡಾಲರ್ (ಅಂದಾಜು 6.7 ಲಕ್ಷ ಕೋಟಿ ರೂಪಾಯಿ) ಪಾವತಿಸುವಂತಾಯಿತು. ಯಾಕೆ ಹೀಗಾಯಿತು? ಯಾಕೆಂದರೆ, ಜಾಗತಿಕವಾಗಿ ಚಿನ್ನದ ದರ 30%ಕ್ಕೂ ಹೆಚ್ಚಿನ ಏರಿಕೆ ಕಂಡಿತು. ಹೆಚ್ಚುವರಿ ದರಗಳೇ ನಮ್ಮ ಚಿನ್ನದ ಆಮದು ವೆಚ್ಚಕ್ಕೆ 17.6 ಬಿಲಿಯನ್ ಡಾಲರ್ (ಅಂದಾಜು 1.64 ಲಕ್ಷ ಕೋಟಿ ರೂಪಾಯಿ) ಹೆಚ್ಚುವರಿ ಹೊರೆಯಾದವು. ಕಡಿಮೆ ಚಿನ್ನ ಖರೀದಿಯಿಂದ ಭಾರತಕ್ಕೆ ಉಳಿಸಲು ಸಾಧ್ಯವಾಗಿದ್ದು ಕೇವಲ 3.6 ಬಿಲಿಯನ್ ಡಾಲರ್ (ಅಂದಾಜು 33,500 ಕೋಟಿ ರೂಪಾಯಿ).

ಈಗ ಪ್ರಾಯೋಗಿಕವಾಗಿ ಆಲೋಚಿಸೋಣ. ಆಮದು ದರವನ್ನು ಕಳೆದ ವರ್ಷದ ಮಟ್ಟಕ್ಕೆ ತರಬೇಕಾದರೆ, ಭಾರತ ತನ್ನ ಚಿನ್ನದ ಆಮದು ಪ್ರಮಾಣವನ್ನು ಬಹುತೇಕ 47% ಕಡಿಮೆಗೊಳಿಸಬೇಕಾದೀತು. ಅಂದರೆ, ಈಗಿನ ಅಂದಾಜು 721 ಟನ್ ಚಿನ್ನದ ಆಮದನ್ನು ಕೇವಲ 384 ಟನ್‌ಗಳಿಗೆ ಇಳಿಸಬೇಕಾಗುತ್ತದೆ. ಭಾರತದಲ್ಲಿ ಚಿನ್ನ ಮದುವೆಗಳು, ಹಬ್ಬಗಳು, ಉಳಿತಾಯ, ಅಷ್ಟೇ ಏಕೆ, ಭಾವನೆಗಳಲ್ಲೂ ಬಹಳ ಮುಖ್ಯವಾಗಿರುವುದರಿಂದ ಅಷ್ಟೊಂದು ಭಾರೀ ಪ್ರಮಾಣದ ಕಡಿತ ನಡೆಸುವುದು ನಮ್ಮಿಂದ ಬಹುತೇಕ ಅಸಾಧ್ಯವೇ ಸರಿ.

ಇಲ್ಲಿಯೇ ನಮ್ಮ 15% ಆಮದು ತೆರಿಗೆ ತನ್ನ ಉದ್ದೇಶ ತಲುಪುವುದು ಕಷ್ಟವಾಗುತ್ತದೆ. ಭಾರತೀಯರು ತೆರಿಗೆ ಹೆಚ್ಚಾಯಿತೆಂದು ಚಿನ್ನ ಖರೀದಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಅವರು ಸರಳವಾಗಿ ತಮ್ಮ ಚಿನ್ನ ಖರೀದಿಯ ವಿಧಾನವನ್ನು ಬದಲಾಯಿಸುತ್ತಾರೆ. ಜನರು ತಮ್ಮ ಖರೀದಿಯನ್ನು ವಿಳಂಬಗೊಳಿಸುತ್ತಾರೆ, ಹಗುರವಾದ ಆಭರಣಗಳನ್ನು ಖರೀದಿಸುತ್ತಾರೆ, ಹಳೆಯ ಚಿನ್ನದ ಆಭರಣಗಳನ್ನು ಕರಗಿಸಿ, ಅದನ್ನು ಮರುಬಳಕೆ ಮಾಡುತ್ತಾರೆ, ಅಥವಾ ಮೌನವಾಗಿಯೇ ಅನಧಿಕೃತ ಮಾರ್ಗಗಳಿಂದ ಚಿನ್ನ ಖರೀದಿಸುತ್ತಾರೆ. ಅನಧಿಕೃತ ಮಾರ್ಗ ಎಂದರೆ ಚಿನ್ನದ ಕಳ್ಳ ಸಾಗಾಣಿಕೆ ಎಂದೇ ನಾವು ಭಾವಿಸಬಹುದು. ಅಧಿಕೃತವಾಗಿ ಚಿನ್ನ ಖರೀದಿಸುವುದು ಅತ್ಯಂತ ದುಬಾರಿಯಾದಾಗ, ಚಿನ್ನ ಹಿಂದಿನ ಬಾಗಿಲ ಮೂಲಕವಾದರೂ ಒಳಗೆ ಪ್ರವೇಶಿಸುತ್ತದೆ. ಮೊದಲ ವರ್ಷದಲ್ಲಿ ಚಿನ್ನದ ಬೇಡಿಕೆ 3%ಕ್ಕಿಂತಲೂ ಕಡಿಮೆ ಕುಸಿತ ಕಾಣುತ್ತದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಭಿಪ್ರಾಯ ಪಟ್ಟಿದ್ದು, ಬಳಿಕ ಅದು ಸಹಜ ಸ್ಥಿತಿಗೆ ಮರಳುತ್ತದೆ ಎಂದಿದೆ. ಆದ್ದರಿಂದ, ದೀರ್ಘಾವಧಿಯಲ್ಲಿ ಚಿನ್ನದ ಬೇಡಿಕೆಯ ಮೇಲೆ ಹೆಚ್ಚುವರಿ ತೆರಿಗೆಯ ಪರಿಣಾಮ ಬಹುತೇಕ ಶೂನ್ಯವೇ ಆಗಿರುತ್ತದೆ.

ಈ ತೆರಿಗೆ ಹೆಚ್ಚಳ ನಮ್ಮ ವಿದೇಶೀ ವಿನಿಮಯ ಮೀಸಲನ್ನು ರಕ್ಷಿಸಲು ಯಾಕೆ ಕಷ್ಟಪಡಲಿದೆ ಎನ್ನುವುದಕ್ಕೆ ಇನ್ನೊಂದು ಕಾರಣವೂ ಇದೆ. ಇಂದು, ಚಿನ್ನ ಕೇವಲ ಆಭರಣವಾಗಿ ಮಾತ್ರವೇ ಖರೀದಿಯಾಗುತ್ತಿಲ್ಲ. ಅದು ಇಂದೊಂದು ಗಂಭೀರವಾದ ಹೂಡಿಕೆಯ ಆಯ್ಕೆಯೂ ಹೌದು. ಷೇರು ಮಾರುಕಟ್ಟೆಗಳು ದುರ್ಬಲಗೊಂಡಿದ್ದು, ರೂಪಾಯಿ ಬೆಲೆಗಳು ಕುಸಿಯುತ್ತಾ, ಅಂತಾರಾಷ್ಟ್ರೀಯ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವಾಗ ಜನರು ತಮ್ಮ ಹಣಕ್ಕೆ ಚಿನ್ನವೇ ಉತ್ತಮ ಪರ್ಯಾಯ ಹೂಡಿಕೆಯ ಮಾರ್ಗ ಎಂದು ಪರಿಗಣಿಸುತ್ತಾರೆ. ನಾಣ್ಯಗಳು, ಬಾರ್‌ಗಳು, ಇಟಿಎಫ್‌ಗಳು, ಮತ್ತು ಡಿಜಿಟಲ್ ಚಿನ್ನದ ರೂಪದ ಹೂಡಿಕೆಯ ಬೇಡಿಕೆಗಳು ಈಗ 54% ಹೆಚ್ಚಳ ಕಂಡಿದ್ದು, ಅವು ಈಗ ಭಾರತದ ಚಿನ್ನದ ಬೇಡಿಕೆಯಲ್ಲಿ ಬಹುತೇಕ 70% ಪಾಲು ಹೊಂದಿವೆ. ಜ‌ನರು ತಮ್ಮ ಉಳಿತಾಯವನ್ನು ರಕ್ಷಿಸುವ ಸಲುವಾಗಿ ಚಿನ್ನ ಖರೀದಿಸುವಾಗ, 15% ತೆರಿಗೆ ಅವರನ್ನು ಹೆದರಿಸಿ ಸುಮ್ಮನಾಗಿಸುವುದಿಲ್ಲ.

ಬಹಳಷ್ಟು ಜನರು ಗಮನಿಸದ ಒಂದು ದೊಡ್ಡ ಚಿತ್ರಣವಿದೆ. ಚಿನ್ನ ನಮ್ಮ ಅತಿದೊಡ್ಡ ಆತಂಕವೇ ಅಲ್ಲ. ಭಾರತ ಇದಕ್ಕಿಂತ ಸಾಕಷ್ಟು ಹೆಚ್ಚಿನ ಹಣವನ್ನು ಕಚ್ಚಾ ತೈಲ, ಇಲೆಕ್ಟ್ರಾನಿಕ್ ಉಪಕರಣಗಳು, ಮತ್ತು ಭಾರೀ ಯಂತ್ರೋಪಕರಣಗಳಿಗೆ ವೆಚ್ಚ ಮಾಡುತ್ತದೆ. ನಮ್ಮ ತಿಂಗಳ ವ್ಯಾಪಾರ ಕೊರತೆಯೇ ಅಂದಾಜು 20ರಿಂದ 25 ಬಿಲಿಯನ್ ಡಾಲರ್ (ಅಂದಾಜು 1.86ರಿಂದ 2.32 ಲಕ್ಷ ಕೋಟಿ ರೂಪಾಯಿ) ಇದೆ. ಒಂದು ವೇಳೆ ಈ ತೆರಿಗೆಯಿಂದ ಲಾಭವಾಯಿತು ಎಂದರೂ, ನಮಗೆ ವಾರ್ಷಿಕವಾಗಿ 10ರಿಂದ 15 ಬಿಲಿಯನ್ ಡಾಲರ್ (ಸುಮಾರು 93,000ದಿಂದ 1.39 ಲಕ್ಷ ಕೋಟಿ ರೂಪಾಯಿ) ಉಳಿಸಲು ನೆರವಾದೀತು. ಇದು ನಮ್ಮ ಒಟ್ಟಾರೆ ವ್ಯಾಪಾರ ಕೊರತೆಯ ಕೇವಲ 5%ಕ್ಕೆ ಸಮವಷ್ಟೇ. ಇದು ಒಂದು ರೀತಿ ಬಾಲ್ದಿಯಲ್ಲೇ ದೊಡ್ಡ ತೂತಿದ್ದಾಗ ಕೆಲವು ಹನಿ ನೀರು ಉಳಿಸಲು ಪ್ರಯತ್ನ ನಡೆಸಿದಂತಾದೀತು.

15% ಹೆಚ್ಚುವರಿ ತೆರಿಗೆ ನಿಜಕ್ಕೂ ನಮ್ಮ ವಿದೇಶೀ ವಿನಿಮಯ ಸಂಗ್ರಹವನ್ನು ಉಳಿಸಲು ನೆರವಾದೀತೇ? ಪ್ರಾಮಾಣಿಕವಾಗಿ ಹೇಳುವುದಾದರೆ, ಒಂದು ಸಣ್ಣ ಮಟ್ಟಿಗೆ, ಅದೂ ಕೆಲ ಸಮಯಕ್ಕೆ ಸಹಾಯವಾಗಬಹುದು. ನೈಜ ಪರಿಹಾರ ಬೇಕೆಂದರೆ ನಾವು ರಫ್ತಿಗೆ ಉತ್ತೇಜನ ನೀಡಿ, ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆಗೊಳಿಸಿ, ನಿಧಾನವಾಗಿ ನಮ್ಮದೇ ದೇಶೀಯ ಚಿನ್ನದ ಗಣಿಗಾರಿಕೆಯನ್ನು ಬಲಪಡಿಸಬೇಕು. ಅಲ್ಲಿಯ ತನಕ ಚಿನ್ನದ ಆಮದಿನ ಮೇಲೆ ತೆರಿಗೆ ವಿಧಿಸುವುದು ಮಳೆ ಬರುವಾಗ ಪೂರ್ತಿ ತೂತುಗಳಿರುವ ಕೊಡೆ ಹಿಡಿದಂತಾಗಲಿದೆ. ಅದು ಕೆಲವು ಹನಿಗಳು ಒಳಬರದಂತೆ ತಡೆಯಬಹುದಾದರೂ, ಅದನ್ನು ಹಿಡಿದಿರುವ ದೇಶ ನೆನೆಯದಂತೆ ಮಾಡಲು ಸಾಧ್ಯವಿಲ್ಲ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.