ಪೈಲೊನೈಡಲ್ ಸಿಸ್ಟ್ (ಕುಶಲವೇ ಕ್ಷೇಮವೇ)
'ಪೈಲೊನೈಡಲ್ ಸಿಸ್ಟ್' ಸಮಸ್ಯೆ ಯಾರಿಗಾದರೂ ಬರಬಹುದು ಆದರೆ ಯುವಜನರಿಂದ ನಲವತ್ತು ವರ್ಷ ವಯಸ್ಸಿನೊಳಗಿನ ಪುರುಷರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಮಹಿಳೆಯರಲ್ಲಿಯೂ ಇದು ಕಾಣಿಸಿಕೊಳ್ಳಬಹುದು.

ಒಂದು ಸಂಜೆ ನಮ್ಮ ಕ್ಲಿನಿಕ್ಕಿಗೆ ಸುಮಾರು ನಲವತ್ತು ವರ್ಷದ ವ್ಯಕ್ತಿಯೊಬ್ಬರು ಬಂದು ಬಃಳ ಮುಜುಗರದಿಂದ “ಡಾಕ್ಟರೇ, ಕಳೆದ ಕೆಲವು ದಿನಗಳಿಂದ ಪೃಷ್ಠದ ಭಾಗದಲ್ಲಿ ತಡೆಯಲಾರದಷ್ಟು ನೋವು ಹಾಗೂ ಕುಳಿತುಕೊಳ್ಳಲು ಸಹ ಆಗುತ್ತಿಲ್ಲ. ಯಾರಿಗೂ ಹೇಳಿಕೊಳ್ಳುವಂತೆಯೂ ಇಲ್ಲ. ಬಹಳ ನೋವು ಅನುಭವಿಸುತ್ತಿದ್ದೇನೆ”ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಅವರ ಮಾತನ್ನು ಕೇಳಿ ಅವರಿಗೆ ಟೇಲ್ ಬೋನಿನ (ಬೆನ್ನಿನ ಕೊನೆಯ ಮೂಳೆ-ಬಾಲದ ಮೂಳೆ) ಸಮೀಪ ಚರ್ಮದ ಕೆಳಗೆ ಒಂದು ಸೋಂಕಿತ ಗುಳ್ಳೆ ಅಥವಾ ಚೀಲ ರೂಪಗೊಂಡಿರುವುದು ಸ್ಪಷ್ಟವಾಯಿತು. ಇದು ಸಾಮಾನ್ಯವಾದ ಗಾಯವಲ್ಲ ಬದಲಿಗೆ 'ಪೈಲೊನೈಡಲ್ ಸಿಸ್ಟ್' ಎಂಬ ಚರ್ಮದ ಸಮಸ್ಯೆಯೆಂದು ಗೊತ್ತಾಯಿತು.
ಪೈಲೊನೈಡಲ್ ಸಿಸ್ಟ್ ಎಂದರೇನು?
ಪೈಲೊನೈಡಲ್ ಸಿಸ್ಟ್ ಎಂದರೆ ಪೃಷ್ಠಭಾಗದ ಎರಡು ಭಾಗಗಳ ನಡುವಿನ ಸೀಳಿನಲ್ಲಿ ಬಾಲದ ಮೂಳೆಯ ಸಮೀಪ ಚರ್ಮದ ಕೆಳಗೆ ಉಂಟಾಗುವ ಒಂದು ಸಣ್ಣ ಚೀಲ ಅಥವಾ ಗುಳ್ಳೆಯಾಗಿದೆ. ಇದರಲ್ಲಿ ಸಾಮಾನ್ಯವಾಗಿ ಕೂದಲು ಸತ್ತ ಚರ್ಮದ ಕಣಗಳು ಮತ್ತು ಉರಿಯೂತದ ದ್ರವ ಇರಬಹುದು. ಇದು ಯಾವುದೇ ರೀತಿಯ ಸಾಂಕ್ರಾಮಿಕ ಕಾಯಿಲೆಯಲ್ಲ.
'ಪೈಲೊನೈಡಲ್ ಸಿಸ್ಟ್' ಸಮಸ್ಯೆ ಯಾರಿಗಾದರೂ ಬರಬಹುದು ಆದರೆ ಯುವಜನರಿಂದ ನಲವತ್ತು ವರ್ಷ ವಯಸ್ಸಿನೊಳಗಿನ ಪುರುಷರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಮಹಿಳೆಯರಲ್ಲಿಯೂ ಇದು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ದೇಹದ ತೂಕ ಹೆಚ್ಚಿರುವುದು, ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಭ್ಯಾಸ ಹಾಗೂ ದೈಹಿಕ ಚಟುವಟಿಕೆ ಕಡಿಮೆ ಇರುವುದು ಅಪಾಯವನ್ನು ಈ ಸಮಸ್ಯೆಯ ಸಾಧ್ಯತೆಯನ್ನು ಬಹಳಷ್ಟು ಹೆಚ್ಚಿಸುತ್ತದೆ. ಹಾಗೆಯೆ ಕಚೇರಿಯಲ್ಲಿ ದೀರ್ಘಕಾಲ ಕೆಲಸ ಮಾಡುವವರು, ವಾಹನ ಚಾಲಕರು ಮತ್ತು ದಿನದ ಬಹುಪಾಲು ಸಮಯ ಕುಳಿತೇ ಕಾಲ ಕಳೆಯುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಬಿಗಿಯಾದ ಬಟ್ಟೆ ತೊಡುವುದು, ಅತಿಯಾಗಿ ಬೆವರುವುದು ಮತ್ತು ನಿರಂತರ ಘರ್ಷಣೆಯೂ ಇದಕ್ಕೆ ಕಾರಣವಾಗಬಹುದು.
'ಪೈಲೊನೈಡಲ್ ಸಿಸ್ಟ್' ಉಂಟಾಗಲು ನಿಖರ ಕಾರಣವೇನು?
'ಪೈಲೊನೈಡಲ್ ಸಿಸ್ಟ್' ಸಮಸ್ಯೆಗೆ ನಿಖರ ಕಾರಣ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಪೃಷ್ಠದ ಸೀಳಿನಲ್ಲಿರುವ ಸಡಿಲ ಕೂದಲು ಚರ್ಮದೊಳಗೆ ಸಿಲುಕಿಕೊಳ್ಳುವುದರಿಂದ ಸಮಸ್ಯೆ ಆರಂಭವಾಗುತ್ತದೆ ಎಂದು ನಂಬಲಾಗಿದೆ. ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ನಿರಂತರ ಘರ್ಷಣೆಯಿಂದ ಕೂದಲು ಚರ್ಮದೊಳಗೆ ನುಗ್ಗುತ್ತದೆ. ದೇಹವು ಆ ಕೂದಲನ್ನು ಹೊರಗಿನ ವಸ್ತುವೆಂದು ಪರಿಗಣಿಸಿ ಉರಿಯೂತ ಉಂಟುಮಾಡುತ್ತದೆ. ನಂತರ ಬ್ಯಾಕ್ಟೀರಿಯಾ ಒಳನುಗ್ಗಿದರೆ ಸೋಂಕು ಉಂಟಾಗಿ ಕೀವು ತುಂಬಿದ ಬಾವು ರೂಪುಗೊಳ್ಳಬಹುದು.
ಸೋಂಕಿಲ್ಲದ ಸಿಸ್ಟ್ ಯಾವುದೇ ಲಕ್ಷಣವಿಲ್ಲದೆ ಇರಬಹುದು. ಸೋಂಕಾದಾಗ ನೋವು ಕೆಂಪಾಗುವುದು ಮತ್ತು ಊತ ಕಾಣಿಸಿಕೊಳ್ಳುತ್ತದೆ. ಕುಳಿತುಕೊಳ್ಳುವಾಗ ನೋವು ಹೆಚ್ಚಾಗಬಹುದು ಮತ್ತು ಕೀವು ಅಥವಾ ರಕ್ತ ಹೊರಬರಬಹುದು. ತೀವ್ರ ಸೋಂಕಿದ್ದರೆ ಜ್ವರ ಹಾಗೂ ದಣಿವು ಉಂಟಾಗಬಹುದು. ಪದೇಪದೇ ಕೀವು ಹೊರಬರುವುದು ದೀರ್ಘಕಾಲದ ಕಾಯಿಲೆಯ ಗಂಭೀರ ಸೂಚನೆಯಾಗಿರಬಹುದು.
'ಪೈಲೊನೈಡಲ್ ಸಿಸ್ಟ್' ಗೆ ಚಿಕಿತ್ಸೆ
'ಪೈಲೊನೈಡಲ್ ಸಿಸ್ಟ್'ನಿಂದ ಕೀವು ತುಂಬಿದ ಬಾವು ಉಂಟಾದರೆ ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಕೀವನ್ನು ಹೊರಹಾಕಲಾಗುತ್ತದೆ. ಅಗತ್ಯವಿದ್ದರೆ ಜೀವನಿರೋಧಕ ಔಷಧಿಗಳನ್ನು ನೀಡಬಹುದು ಆದರೆ ಇದು ಮಾತ್ರದಿಂದ ಮೂಲ ಸಿಸ್ಟ್ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ.
ಈ ಸಮಸ್ಯೆ ಪದೇಪದೇ ಮರುಕಳಿಸಿದರೆ ಶಸ್ತ್ರಚಿಕಿತ್ಸೆಯ ಮೂಲಕ ಪೀಡಿತ ಭಾಗವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕಾಗಬಹುದು. ಆದ್ದರಿಂದ ಪೃಷ್ಠದ ಸೀಳಿನ ಭಾಗವನ್ನು ಸದಾ ಸ್ವಚ್ಘವಾಗಿ ಮತ್ತು ಒಣವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ. ಹೆಚ್ಚು ಬೆವರು ಬಂದರೆ ತಕ್ಷಣ ಬಟ್ಟೆ ಬದಲಾಯಿಸಬೇಕು. ದೀರ್ಘಕಾಲ ನಿರಂತರವಾಗಿ ಕುಳಿತುಕೊಳ್ಳುವುದನ್ನು ತಪ್ಪಿಸಿ ಆಗಾಗ ಎದ್ದು ನಡೆದಾಡಬೇಕು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಆರಾಮದಾಯಕವಾದ ಬಟ್ಟೆ ಧರಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ.
ಈ ಸಮಸ್ಯೆ ಈಗಾಗಲೇ ಒಮ್ಮೆ ಬಂದಿದ್ದರೆ ಆ ಭಾಗದಲ್ಲಿನ ಕೂದಲನ್ನು ಎಚ್ಚರಿಕೆಯಿಂದ ನಿಯಂತ್ರಿಸುವುದು ಮರುಕಳಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಸೋಂಕಿತ ಚರ್ಮವನ್ನು ಶೇವ್ ಮಾಡಬಾರದು. ಬಾಲದ ಮೂಳೆಯ ಬಳಿ ನೋವಿನ ಗುಳ್ಳೆ ಊತ ಕೀವು ಅಥವಾ ನಿರಂತರವಾಗಿ ದ್ರವ ಹೊರಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಜ್ವರ, ವೇಗವಾಗಿ ಹೆಚ್ಚುತ್ತಿರುವ ನೋವು ಅಥವಾ ಸೋಂಕು ಹರಡುತ್ತಿರುವ ಲಕ್ಷಣಗಳಿದ್ದರೆ ಶೀಘ್ರ ವೈದ್ರಕೀಯ ಚಿಕಿತ್ಸೆ ಅಗತ್ಯ. ಸಿಸ್ಟನ್ನು ಸ್ವತಃ ಒತ್ತಿ ಅಥವಾ ಕತ್ತರಿಸಿ ಕೀವು ಹೊರತೆಗೆಯಲು ಪ್ರಯತ್ನಿಸಬಾರದು. ಏಕೆಂದರೆ ಇದರಿಂದ ಸೋಂಕು ಹೆಚ್ಚು ಹರಡಬಹುದು.
ಸಾಮಾನ್ಯವಾಗಿ ವೈದ್ಯರು ದೈಹಿಕ ಪರೀಕ್ಷೆಯ ಮೂಲಕವೇ ಪೈಲೊನೈಡಲ್ ಸಿಸ್ಟನ್ನು ಗುರುತಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಸ್ಕ್ಯಾನ್ ಅಗತ್ಯವಿರುವುದಿಲ್ಲ. ಆರಂಭದಲ್ಲೇ ವೈದ್ಯಕೀಯ ಚಿಕಿತ್ಸೆ ಪಡೆಯುವುದರಿಂದ ದೊಡ್ಡ ಪ್ರಮಾಣದ ಬಾವು ಅಥವಾ ಮರುಕಳಿಸುವ ದೀರ್ಘಕಾಲದ ಸಮಸ್ಯೆಯಾಗುವುದನ್ನು ಸುಲಭವಾಗಿ ತಪ್ಪಿಸಲು ಖಂಡಿತ ಸಾಧ್ಯವಿದೆ.
ನಮ್ಮ ದೇಹದಲ್ಲಿ ಯಾವುದೇ ರೀತಿಯ ಅಸಾಮಾನ್ಯ ನೋವು ಅಥವಾ ಚರ್ಮದ ಬದಲಾವಣೆಗಳು ಕಂಡುಬಂದಾಗ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೇ ಸೂಕ್ತ ಸಮಯದಲ್ಲಿ ಅನುಭವಿ ವೈದ್ಯರ ಸಲಹೆ ಪಡೆಯಬೇಕು. ಹಿತಮಿತ ಆಹಾರ, ವಿಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ದಿನಚರಿಯಲ್ಲಿ ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುವುದರಿಂದ ಈ ರೀತಿಯ ತೊಂದರೆದಾಯಕ ಚರ್ಮದ ಸಮಸ್ಯೆಗಳಿಂದ ದೂರವಿರಬಹುದು.
ಇಂದಿನ ಆಧುನಿಕ ಯುಗದಲ್ಲಿ ವೈದ್ಯಕೀಯ ತಂತ್ರಜ್ಞಾನವು ಹೆಚ್ಚು ಮುಂದುವರಿದಿರುವುದರಿಂದ ಇಂತಹ ಸಮಸ್ಯೆಗಳಿಗೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಧೈರ್ಯದಿಂದ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಪರಿಪೂರ್ಣವಾಗಿ ಗುಣಮುಖರಾಗಿ ಸಂತೋಷದ ಹಾಗೂ ನೆಮ್ಮದಿಯ ಜೀವನವನ್ನು ನಡೆಸುವುದು ಪ್ರತಿಯೊಬ್ಬರ ಹಕ್ಕಾಗಿದೆ.
ಆಯುರ್ವೇದದ ದೃಷ್ಟಿಯಲ್ಲಿ 'ಪೈಲೊನೈಡಲ್ ಸಿಸ್ಟ್'
ಆಯುರ್ವೇದದ ದೃಷ್ಟಿಯಲ್ಲಿ ಪೈಲೊನೈಡಲ್ ಸಿಸ್ಟ್ ದೇಹದಲ್ಲಿ ದೋಷಗಳ ಅಸಮತೋಲನ, ವಿಶೇಷವಾಗಿ ವಾತ ಮತ್ತು ಪಿತ್ತದ ಪ್ರಭಾವ, ಹಾಗೂ ಅಶುದ್ಧತೆ, ಬೆವರು, ಘರ್ಷಣೆ ಮತ್ತು ದೀರ್ಘಕಾಲ ಕುಳಿತುಕೊಳ್ಳುವಿಕೆ ಸಮಸ್ಯೆಗಳಿಂದ ಬರುತ್ತದೆ.
ದೇಹದ ಸ್ವಚ್ಛತೆ ಕಾಪಾಡುವುದು, ಪೃಷ್ಠ ಭಾಗವನ್ನು ಸದಾ ಕಾಲ ಸ್ವಚ್ಛವಾಗಿಟ್ಟುಕೊಳ್ಳುವುದು, ಮಲಬದ್ಧತೆಗೆ ಪರಿಹಾರ ಮಾಡಿಕೊಳ್ಳುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು ಸಹಾಯಕ ಕ್ರಮಗಳಾಗಿವೆ. ಅರಿಶಿನ, ತ್ರಿಫಲಾ ಮುಂತಾದ ಕೆಲವು ಔಷಧೀಯ ಪದಾರ್ಥಗಳನ್ನು ಈ ಸಮಸ್ಯೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇವುಗಳಿಂದ ತಯಾರಿಸಿದ ಕಷಾಯದಿಂದ ಬಾಧಿತ ಭಾಗವನ್ನು ಸ್ವಚ್ಛ ಮಾಡಿಕೊಳ್ಳಬೇಕು. ಆದರೆ ಸೋಂಕಿನಿಂದ ಕೀವು ತುಂಬಿದ ಬಾವು ಉಂಟಾದರೆ ಸ್ವಯಂ ಚಿಕಿತ್ಸೆ ಮಾಡದೇ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




