ಸೆಬೋರಿಯಿಕ್ ಡರ್ಮಟೈಟಿಸ್ ಅಥವಾ ಸೆಬೇಷಿಯಸ್ ಎಕ್ಸಿಮಾ ಚರ್ಮದ ಸಮಸ್ಯೆ (ಕುಶಲವೇ ಕ್ಷೇಮವೇ)
ವೈಯಕ್ತಿಕ ಸ್ವಚ್ಛತೆಯ ಕೊರತೆಯೇ ಈ ಕಾಯಿಲೆಗೆ ನೇರ ಕಾರಣವಲ್ಲ. ಆದರೆ ಚರ್ಮವನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇಂದು ಬಹುತೇಕ ಪ್ರತಿಯೊಬ್ಬರಿಗೂ ಕಾಡುತ್ತಿರುವ ಚರ್ಮದ ಸಮಸ್ಯೆಗಳಲ್ಲಿ ತಲೆಯಲ್ಲಿ ಹೊಟ್ಟು, ತುರಿಕೆ ಮತ್ತು ಮುಖದ ಮೇಲೆ ಕೆಂಪು ಬಣ್ಣದ ಸಿಪ್ಪೆಯಂತಹ ಚರ್ಮ ಉದುರುವುದು ಪ್ರಮುಖವಾಗಿದೆ. ಹಲವರು ಇದನ್ನು ಸಾಮಾನ್ಯ ಹೊಟ್ಟು ಅಥವಾ ಸ್ವಚ್ಛತೆಯ ಕೊರತೆಯ ಪರಿಣಾಮ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ಆದರೆ ಈ ಲಕ್ಷಣಗಳು ಪದೇ ಪದೇ ಕಾಣಿಸಿಕೊಂಡು, ತಲೆ, ಹುಬ್ಬು, ಮೂಗಿನ ಬದಿಗಳು, ಕಿವಿಯ ಸುತ್ತ ಹಾಗೂ ಎದೆಯಂತಹ ಭಾಗಗಳಲ್ಲಿ ತುರಿಕೆ ಮತ್ತು ಉರಿಯೂತ ಉಂಟಾಗುತ್ತಿದ್ದರೆ ಅದು 'ಸೆಬೋರಿಯಿಕ್ ಡರ್ಮಟೈಟಿಸ್' ಅಥವಾ ಹಿಂದೆ 'ಸೆಬೇಷಿಯಸ್ ಎಕ್ಸಿಮಾ' ಎಂದು ಕರೆಯಲಾಗುತ್ತಿದ್ದ ಚರ್ಮದ ಕಾಯಿಲೆ ಆಗಿರಬಹುದು. ಇದು ಅಪಾಯಕಾರಿಯಲ್ಲದಿದ್ದರೂ ದೀರ್ಘಕಾಲ ಕಾಡುವ ಮತ್ತು ಆಗಾಗ ಮರುಕಳಿಸುವ ಸಮಸ್ಯೆಯಾಗಿದ್ದು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಕಾಯಿಲೆ ಸಾಂಕ್ರಾಮಿಕವಲ್ಲ. ಅಂದರೆ ಒಬ್ಬರಿಂದ ಮತ್ತೊಬ್ಬರಿಗೆ ಸ್ಪರ್ಶದಿಂದ ಅಥವಾ ಜೊತೆಯಾಗಿ ವಾಸಿಸುವುದರಿಂದ ಹರಡುವುದಿಲ್ಲ. ಆದರೆ ಸರಿಯಾದ ಆರೈಕೆ ಮತ್ತು ಚಿಕಿತ್ಸೆ ಪಡೆಯದಿದ್ದರೆ ಇದು ಮತ್ತೆ ಮತ್ತೆ ಕಾಣಿಸಿಕೊಳ್ಳಬಹುದು.
ಸೆಬೋರಿಯಿಕ್ ಡರ್ಮಟೈಟಿಸ್ ಮುಖ್ಯವಾಗಿ ದೇಹದಲ್ಲಿ ಎಣ್ಣೆ ಉತ್ಪಾದಿಸುವ ಸೆಬೇಷಿಯಸ್ ಗ್ರಂಥಿಗಳು ಹೆಚ್ಚು ಇರುವ ಭಾಗಗಳಲ್ಲಿ ಕಂಡುಬರುತ್ತದೆ. ತಲೆಯ ತ್ವಚೆ, ಹುಬ್ಬುಗಳು, ಮೂಗಿನ ಎರಡೂ ಬದಿಗಳು, ಕಿವಿಯ ಒಳಭಾಗ ಮತ್ತು ಹಿಂಭಾಗ, ಗಡ್ಡ ಮತ್ತು ಮೀಸೆ ಇರುವ ಪ್ರದೇಶ, ಎದೆ ಹಾಗೂ ಬೆನ್ನಿನ ಮೇಲ್ಭಾಗದಲ್ಲಿ ಇದರ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.
ಇದು ಯಾವುದೇ ವಯಸ್ಸಿನವರಿಗೂ ಬರಬಹುದಾದರೂ ಶಿಶುಗಳಲ್ಲಿ, ಹದಿಹರೆಯದವರಲ್ಲಿ ಮತ್ತು 30 ರಿಂದ 60 ವರ್ಷ ವಯಸ್ಸಿನವರಲ್ಲಿ ಹೆಚ್ಚು ಕಂಡುಬರುತ್ತದೆ. ಮಹಿಳೆಯರಿಗಿಂತ ಪುರುಷರಲ್ಲಿ ಇದರ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಪಾರ್ಕಿನ್ಸನ್ಸ್ ಕಾಯಿಲೆ ಅಥವಾ ಎಚ್ಐವಿ ಸೋಂಕು ಇರುವವರು ಹಾಗೂ ದೀರ್ಘಕಾಲದ ಮಾನಸಿಕ ಒತ್ತಡದಲ್ಲಿರುವವರಲ್ಲಿ ಇದರ ಸಂಭವ ಹೆಚ್ಚು.
ಸೆಬೋರಿಯಿಕ್ ಡರ್ಮಟೈಟಿಸ್ ಏಕೆ ಬರುತ್ತದೆ?
ಈ ಕಾಯಿಲೆ ಏಕೆ ಬರುತ್ತದೆ ಎಂಬುದಕ್ಕೆ ಒಂದೇ ಒಂದು ನಿರ್ದಿಷ್ಟ ಕಾರಣವಿಲ್ಲ. ಚರ್ಮದಲ್ಲಿ ಸಹಜವಾಗಿಯೇ ಇರುವ ಮಲಸೇಜಿಯಾ ಎಂಬ ಶಿಲೀಂಧ್ರದ ಬೆಳವಣಿಗೆಗೆ ದೇಹದ ರೋಗನಿರೋಧಕ ವ್ಯವಸ್ಥೆ ಅತಿಯಾಗಿ ಪ್ರತಿಕ್ರಿಯಿಸುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜೊತೆಗೆ ಚರ್ಮದಲ್ಲಿ ಅಧಿಕ ಎಣ್ಣೆ ಉತ್ಪತ್ತಿಯಾಗುವುದು, ಅನುವಂಶಿಕತೆ, ಹಾರ್ಮೋನುಗಳ ಬದಲಾವಣೆ, ಚಳಿಗಾಲ ಅಥವಾ ಒಣ ಹವಾಮಾನ, ನಿದ್ರೆಯ ಕೊರತೆ, ಮಾನಸಿಕ ಒತ್ತಡ, ದೈಹಿಕ ಆಯಾಸ ಹಾಗೂ ಕೆಲವು ಔಷಧಿಗಳ ಬಳಕೆಯೂ ಈ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
ವೈಯಕ್ತಿಕ ಸ್ವಚ್ಛತೆಯ ಕೊರತೆಯೇ ಈ ಕಾಯಿಲೆಗೆ ನೇರ ಕಾರಣವಲ್ಲ. ಆದರೆ ಚರ್ಮವನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಸೆಬೋರಿಯಿಕ್ ಡರ್ಮಟೈಟಿಸ್ ಲಕ್ಷಣಗಳು
ಈ ಕಾಯಿಲೆಯ ಪ್ರಮುಖ ಲಕ್ಷಣವೆಂದರೆ ತಲೆಯಲ್ಲಿ ಬಿಳಿ ಅಥವಾ ಹಳದಿ ಬಣ್ಣದ ಹೊಟ್ಟು ಕಾಣಿಸಿಕೊಳ್ಳುವುದು. ಕೆಲವರಲ್ಲಿ ಹೊಟ್ಟು ಜಿಡ್ಡಾಗಿರುತ್ತದೆ. ತಲೆ, ಮುಖ ಅಥವಾ ಎದೆಯಲ್ಲಿ ಕೆಂಪು ಬಣ್ಣದ ತುರಿಕೆಗಳು ಕಾಣಿಸಿಕೊಳ್ಳುತ್ತವೆ. ತೀವ್ರ ತುರಿಕೆ, ಉರಿ, ಚರ್ಮದ ಸಿಪ್ಪೆ ಉದುರುವುದು, ಕಿವಿಯ ಒಳಭಾಗ ಅಥವಾ ಹಿಂದೆ ಚರ್ಮ ಒಡೆಯುವುದು, ಹುಬ್ಬು ಹಾಗೂ ಗಡ್ಡದಲ್ಲಿ ಹೊಟ್ಟು ಜಮೆಯಾಗುವುದು ಸಾಮಾನ್ಯ ಲಕ್ಷಣಗಳಾಗಿವೆ. ಕೆಲವರಲ್ಲಿ ಚರ್ಮ ಎಣ್ಣೆಯುಕ್ತವಾಗಿ ಕಾಣಿಸಿಕೊಂಡರೆ ಇನ್ನೂ ಕೆಲವರಲ್ಲಿ ಒಣಗಿದಂತೆ ಕಾಣಬಹುದು. ಈ ಲಕ್ಷಣಗಳು ಚಳಿಗಾಲದಲ್ಲಿ ಅಥವಾ ಮಾನಸಿಕ ಒತ್ತಡದ ಸಮಯದಲ್ಲಿ ಹೆಚ್ಚಾಗುವುದು ಸಾಮಾನ್ಯ.
ಸೆಬೋರಿಯಿಕ್ ಡರ್ಮಟೈಟಿಸ್ ಚರ್ಮದ ಸಮಸ್ಯೆಗೆ ಔಷಧಿ ಇದೆಯೇ?
ಸೆಬೋರಿಯಿಕ್ ಡರ್ಮಟೈಟಿಸನ್ನು ಶಾಶ್ವತವಾಗಿ ಗುಣಪಡಿಸುವ ಔಷಧಿ ಇಲ್ಲದಿದ್ದರೂ, ಸೂಕ್ತ ಚಿಕಿತ್ಸೆಯಿಂದ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ವೈದ್ಯರ ಸಲಹೆಯಂತೆ ಔಷಧೀಯ ಶ್ಯಾಂಪೂಗಳನ್ನು ಬಳಸಲಾಗುತ್ತದೆ. ಮುಖ ಅಥವಾ ದೇಹದ ಭಾಗಗಳಲ್ಲಿ ಉಂಟಾಗಿರುವ ಸಮಸ್ಯೆಗೆ ಶಿಲೀಂಧ್ರನಾಶಕ ಕ್ರೀಮ್‌ಗಳನ್ನು ಬಳಸಬಹುದು. ಉರಿಯೂತ ತೀವ್ರವಾಗಿದ್ದರೆ ವೈದ್ಯರ ಸಲಹೆಯಂತೆ ಅಲ್ಪಾವಧಿಗೆ ಕಡಿಮೆ ಸಾಮರ್ಥ್ಯದ ಸ್ಟಿರಾಯ್ಡ್ ಕ್ರೀಮ್ ಅಥವಾ ಇತರ ಉರಿಯೂತ ನಿವಾರಕ ಔಷಧಿಗಳನ್ನು ಬಳಸಲಾಗುತ್ತದೆ. ಸಮಸ್ಯೆ ತೀವ್ರವಾಗಿದ್ದರೆ ಚರ್ಮರೋಗ ತಜ್ಞರು ಅಗತ್ಯವಿದ್ದರೆ ಬಾಯಿಯಿಂದ ಸೇವಿಸುವ ಔಷಧಿಗಳನ್ನು ಸೂಚಿಸಬಹುದು.
ಸೆಬೋರಿಯಿಕ್ ಡರ್ಮಟೈಟಿಸ್ ಸಮಸ್ಯೆ ನಿಯಂತ್ರಣ ಹೇಗೆ?
ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಕೆಲವು ಮುನ್ನೆಚ್ಚರಿಕೆ ಕ್ರಮಗಳು ಬಹಳ ಮುಖ್ಯ. ತಲೆ ಮತ್ತು ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವೈದ್ಯರು ಸೂಚಿಸಿದ ಔಷಧೀಯ ಶ್ಯಾಂಪೂವನ್ನು ನಿಯಮಿತವಾಗಿ ಬಳಸಬೇಕು. ಅತಿಯಾದ ಎಣ್ಣೆಯುಕ್ತ ಕೂದಲಿನ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಬೇಕು. ಸಮತೋಲಿತ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು, ಪ್ರತಿದಿನ ಸಾಕಷ್ಟು ನಿದ್ರೆ ಮಾಡುವುದು ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಸಹಾಯಕವಾಗುತ್ತದೆ. ತುರಿಕೆ ಅಥವಾ ಹೊಟ್ಟನ್ನು ಉಗುರಿನಿಂದ ಕೆರೆದುಕೊಳ್ಳುವುದನ್ನು ತಪ್ಪಿಸಬೇಕು. ವೈದ್ಯರ ಸಲಹೆಯಿಲ್ಲದೆ ಸ್ಟಿರಾಯ್ಡ್ ಕ್ರೀಮ್‌ಗಳನ್ನು ದೀರ್ಘಕಾಲ ಬಳಸಬಾರದು.
ಸರಿಯಾದ ಆರೈಕೆ, ಜೀವನಶೈಲಿಯ ಬದಲಾವಣೆ ಮತ್ತು ವೈದ್ಯರ ಸಲಹೆಯಂತೆ ಚಿಕಿತ್ಸೆಯನ್ನು ಮುಂದುವರಿಸಿದರೆ, ಸೆಬೋರಿಯಿಕ್ ಡರ್ಮಟೈಟಿಸ್‌ನಿಂದ ಉಂಟಾಗುವ ತೊಂದರೆಗಳನ್ನು ಬಹುಮಟ್ಟಿಗೆ ನಿಯಂತ್ರಿಸಿ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಬಹುದು.

ಮಯೋಸೈಟಿಸ್ (ಕುಶಲವೇ ಕ್ಷೇಮವೇ)
ಸೆಬೋರಿಯಿಕ್ ಡರ್ಮಟೈಟಿಸ್ ಗೆ ಆಯುರ್ವೇದ ಪರಿಹಾರ
ಸೆಬೋರಿಯಿಕ್ ಡರ್ಮಟೈಟಿಸ್ಸನ್ನು ಆಯುರ್ವೇದ ಕಫ-ಪಿತ್ತ ದೋಷಗಳ ಅಸಮತೋಲನದಿಂದ ಉಂಟಾಗುವ ಚರ್ಮರೋಗಗಳ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತದೆ. ಕಫ ಮತ್ತು ಪಿತ್ತ ಹೆಚ್ಚಾಗಿ ರಕ್ತ ಹಾಗೂ ಚರ್ಮವನ್ನು ಬಾಧಿಸಿದಾಗ ತುರಿಕೆ, ಕೆಂಪಾಗುವುದು, ಜಿಡ್ಡುತನ ಮತ್ತು ಸಿಪ್ಪೆ ಉದುರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಜೀರ್ಣ, ಎಣ್ಣೆಯುಕ್ತ ಹಾಗೂ ಖಾರದ ಆಹಾರ, ಮಾನಸಿಕ ಒತ್ತಡ, ರಾತ್ರಿ ಜಾಗರಣೆ ಮತ್ತು ಅನಿಯಮಿತ ಜೀವನಶೈಲಿ ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಒಣ ಚರ್ಮವಿದ್ದರೆ ಮೈಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದು ಒಳ್ಳೆಯದು ಅಥವಾ ರಾತ್ರಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಬೆಳಗ್ಗೆ ಸ್ನಾನ ಮಾಡಬಹುದು.
ಚಿಕಿತ್ಸೆಯಲ್ಲಿ ದೋಷಗಳನ್ನು ಸಮತೋಲನಗೊಳಿಸುವ ಔಷಧಿಗಳು, ಅಗತ್ಯವಿದ್ದರೆ ಪಂಚಕರ್ಮ, ಔಷಧೀಯ ತೈಲಗಳು, ಜೊತೆಗೆ ಸಮತೋಲಿತ ಆಹಾರ, ನಿಯಮಿತ ನಿದ್ರೆ, ಯೋಗ ಮತ್ತು ಒತ್ತಡ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತದೆ. ಯಾವುದೇ ಔಷಧಿಯನ್ನು ಸ್ವಯಂ ಸೇವಿಸದೆ ಅರ್ಹ ಆಯುರ್ವೇದ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಸೂಕ್ತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



