ಮಯೋಸೈಟಿಸ್ (ಕುಶಲವೇ ಕ್ಷೇಮವೇ)
ಮಯೋಸೈಟಿಸ್ ದೇಹದ ಚಲನೆಗೆ ಆಧಾರವಾಗಿರುವ ಅಸ್ಥಿಪಂಜರದ ಸ್ನಾಯುಗಳನ್ನು ನೇರವಾಗಿ ಬಾಧಿಸುತ್ತದೆ. ಸ್ನಾಯುಗಳನ್ನು ದುರ್ಬಲಗೊಳಿಸುವುದರ ಜೊತೆಗೆ ತೀವ್ರವಾದ ನೋವು ಮತ್ತು ಸೆಳೆತವನ್ನು ಉಂಟುಮಾಡುತ್ತದೆ.

ಇತ್ತೀಚೆಗೆ ಧಾರವಾಡ ಜಿಲ್ಲೆಯ ಆಳ್ನಾವರದ ಕಸ್ತೂರಬಾ ಗಾಂಧಿ ವಸತಿ ಶಾಲೆಯ 40 ವಿದ್ಯಾರ್ಥಿನಿಯರು ವಿಚಿತ್ರ ಜ್ವರ ಹಾಗೂ ತೀವ್ರ ಕಾಲು ನೋವಿನಿಂದಾಗಿ ಹಠಾತ್ತನೇ ಅಸ್ವಸ್ಥರಾದರು. ಅವರಿಗೆ ತೀವ್ರ ಜ್ವರದ ಜೊತೆಗೆ ಕೈಕಾಲು ಹಾಗೂ ಸ್ನಾಯುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಿತು. ಕೈ ಕಾಲು ಮುಟ್ಟಿದರೆ ನೋವು ತಾಳಲಾರದೆ ಕಣ್ಣೀರಿಡುತ್ತಿದ್ದರು. ಅಲ್ಲದೇ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಅವರ ಸ್ನಾಯುಗಳು ಬಿಗಿದುಗೊಳ್ಳುತ್ತಿದ್ದವು. ಮಕ್ಕಳನ್ನು ತಕ್ಷಣವೇ ಆಳ್ನಾವರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬಹುತೇಕ ವಿದ್ಯಾರ್ಥಿನಿಯರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಮತ್ತು ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾರೂ ಪ್ರಾಣಾಪಾಯದಲ್ಲಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ವೈದ್ಯರ ಪ್ರಾಥಮಿಕ ತಪಾಸಣೆ ಪ್ರಕಾರ ಇದು 'ವೈರಲ್ ಮಯೋಸೈಟಿಸ್' ಇರಬಹುದು ಎಂದು ಶಂಕಿಸಲಾಯಿತು. ಇದು ಇನ್ಫ್ಲುಯೆಂಜಾ ಮತ್ತಿತರ ವೈರಸ್ಸುಗಳಿಂದ ಉಂಟಾಗುವ ಕಾಯಿಲೆ.
ಮಯೋಸೈಟಿಸ್ ಕಾಯಿಲೆ ಎಂದರೇನು?
ಹೆಚ್ಚಿನ ಸಂದರ್ಭಗಳಲ್ಲಿ ಈ ಸಮಸ್ಯೆ ತಾತ್ಕಾಲಿಕವಾಗಿದ್ದು ಕೆಲವು ದಿನಗಳಿಂದ ಒಂದು ವಾರದೊಳಗೆ ಸುಧಾರಿಸುತ್ತದೆ. ಕುದಿಸಿ ಅರಿಸಿದ ಸಾಕಷ್ಟು ಶುದ್ಧ ನೀರು ಕುಡಿಯುವುದು, ವಿಶ್ರಾಂತಿ ಮತ್ತು ವೈದ್ಯರ ಸಲಹೆಯಂತೆ ನೋವು ನಿಯಂತ್ರಣ ಚಿಕಿತ್ಸೆ ಈ ಸಮಯದಲ್ಲಿ ಮುಖ್ಯ. ಆದರೆ ತೀವ್ರ ಸ್ನಾಯು ನೋವು ಅಥವಾ ನಡೆಯಲು ಸಾಧ್ಯವಾಗದಿರುವುದು ಇಂತಹ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಮಯೋಸೈಟಿಸ್ ದೇಹದ ಚಲನೆಗೆ ಆಧಾರವಾಗಿರುವ ಅಸ್ಥಿಪಂಜರದ ಸ್ನಾಯುಗಳನ್ನು ನೇರವಾಗಿ ಬಾಧಿಸುತ್ತದೆ. ಸ್ನಾಯುಗಳನ್ನು ದುರ್ಬಲಗೊಳಿಸುವುದರ ಜೊತೆಗೆ ತೀವ್ರವಾದ ನೋವು ಮತ್ತು ಸೆಳೆತವನ್ನು ಉಂಟುಮಾಡುತ್ತದೆ. ಈ ಕಾಯಿಲೆಯು ಯಾವುದೇ ವಯಸ್ಸಿನವರಲ್ಲೂ ಕಾಣಿಸಿಕೊಳ್ಳಬಹುದು. ಆದರೂ ಸಾಮಾನ್ಯವಾಗಿ 40 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ ಮತ್ತು ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಇದು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದೆ. ಜ್ಯುವೆನೈಲ್ ಮಯೋಸೈಟಿಸ್ ರೂಪದಲ್ಲಿ ಇದು ಮಕ್ಕಳಲ್ಲೂ ಕೂಡ ಕಾಣಿಸಿಕೊಳ್ಳಬಹುದು.
ಮಯೋಸೈಟಿಸ್ ಕಾಯಿಲೆ ಲಕ್ಷಣಗಳು
ಈ ಕಾಯಿಲೆಗೆ ನಿಖರವಾದ ಕಾರಣಗಳು ಇನ್ನೂ ಸಂಪೂರ್ಣವಾಗಿ ವೈದ್ಯಕೀಯ ಲೋಕಕ್ಕೆ ತಿಳಿದಿಲ್ಲವಾದರೂ ಪ್ರಮುಖವಾಗಿ ಇದನ್ನು ಸ್ವಯಂ ನಿರೋಧಕ ಕಾಯಿಲೆ (ಆಟೋಇಮ್ಯುನ್ ಡಿಸೀಸ್) ಎಂದು ಪರಿಗಣಿಸಲಾಗುತ್ತದೆ. ದೇಹದ ರೋಗನಿರೋಧಕ ಶಕ್ತಿಯು ಆಕಸ್ಮಿಕವಾಗಿ ತನ್ನದೇ ಆದ ಆರೋಗ್ಯಕರ ಸ್ನಾಯು ಅಂಗಾಂಶಗಳನ್ನು ವೈರಿಗಳೆಂದು ಭಾವಿಸಿ ದಾಳಿ ಮಾಡಿದಾಗ ಮಯೋಸೈಟಿಸ್ ಸಂಭವಿಸುತ್ತದೆ. ಇದರೊಂದಿಗೆ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಅಥವಾ ಪರಾವಲಂಬಿ ಜೀವಿಗಳ ಸೋಂಕುಗಳಿಂದ ಇದು ಉಂಟಾದರೆ ಸ್ನಾಯುಗಳಿಗೆ ಹಾನಿ ಮಾಡಬಹುದು. ಕೆಲವು ನಿರ್ದಿಷ್ಟ ಔಷಧಿಗಳ ಅಡ್ಡಪರಿಣಾಮಗಳು ಹಾಗೂ ಸ್ನಾಯುಗಳ ಮೇಲೆ ತೀವ್ರವಾದ ಪೆಟ್ಟು ಅಥವಾ ಅತಿಯಾದ ದೈಹಿಕ ಶ್ರಮ ಕೂಡ ಇದಕ್ಕೆ ಕಾರಣವಾಗಬಹುದು.
ಮಯೋಸೈಟಿಸ್‌ನ ಪ್ರಮುಖ ಲಕ್ಷಣವೆಂದರೆ ಸ್ನಾಯು ದೌರ್ಬಲ್ಯ. ಕುರ್ಚಿಯಿಂದ ಏಳುವುದು, ಮೆಟ್ಟಿಲು ಹತ್ತುವುದು ಅಥವಾ ಕೈಗಳನ್ನು ಮೇಲಕ್ಕೆ ಎತ್ತುವುದು ಈ ರೋಗ ಬಂದಾಗ ಅತ್ಯಂತ ಕಷ್ಟಕರವಾಗುತ್ತದೆ. ಇದರೊಂದಿಗೆ ಸ್ನಾಯುಗಳಲ್ಲಿ ನಿರಂತರ ನೋವು, ಮುಟ್ಟಿದರೆ ನೋವು ಹಾಗೂ ಕೆಲವು ವಿಶೇಷ ವಿಧಗಳಲ್ಲಿ ಕಣ್ಣುಗಳ ಸುತ್ತ ಅಥವಾ ಕೈ-ಕಾಲುಗಳ ಮೇಲೆ ನೇರಳೆ ಅಥವಾ ಕೆಂಪು ಬಣ್ಣದ ಚರ್ಮದ ದದ್ದುಗಳು ಮೂಡುತ್ತವೆ. ರೋಗಿಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಅತಿಯಾದ ದಣಿವಿನ ಅನುಭವವಾಗುತ್ತದೆ. ಮುಖ ಮತ್ತು ಗಂಟಲಿನ ಸ್ನಾಯುಗಳು ಬಾಧಿತವಾದರೆ ಆಹಾರವನ್ನು ನುಂಗಲು ತೊಂದರೆಯಾಗಬಹುದು ಅಥವಾ ಉಸಿರಾಟದ ಸಮಸ್ಯೆಗಳು ಎದುರಾಗಬಹುದು.

ಸಂಗೀತ ಚಿಕಿತ್ಸೆ (ಕುಶಲವೇ ಕ್ಷೇಮವೇ)
ಮಯೋಸೈಟಿಸ್ ಕಾಯಿಲೆಗೆ ಚಿಕಿತ್ಸೆ
ಈ ಕಾಯಿಲೆಗೆ ಸಂಪೂರ್ಣ ನಿರ್ದಿಷ್ಟ ಪರಿಹಾರ ಇಲ್ಲ. ಆದರೂ ಇದರ ಲಕ್ಷಣಗಳನ್ನು ಹತೋಟಿಯಲ್ಲಿಡಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ವಿವಿಧ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಲಭ್ಯವಿವೆ. ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವ ಔಷಧಿಗಳನ್ನು ವೈದ್ಯರು ಸಾಮಾನ್ಯವಾಗಿ ಸೂಚಿಸುತ್ತಾರೆ. ಇದರ ಜೊತೆಗೆ ಫಿಸಿಯೋಥೆರಪಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.
ಫಿಸಿಯೋಥೆರಪಿ ಸ್ನಾಯುಗಳ ಬಲವನ್ನು ಕಾಪಾಡಿಕೊಳ್ಳಲು, ಕಳೆದುಹೋದ ಕಸುವನ್ನು ಮರಳಿ ಪಡೆಯಲು ಮತ್ತು ಸ್ನಾಯುಗಳ ಬಿಗಿತವನ್ನು ತಡೆಯಲು ಸಹಾಯ ಮಾಡುತ್ತದೆ. ದೇಹಕ್ಕೆ ಕಾಲಕಾಲಕ್ಕೆ ಸರಿಯಾದ ವಿಶ್ರಾಂತಿ ನೀಡುವುದು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಆರೋಗ್ಯಕರ ಪೋಷಕಾಂಶಯುಕ್ತ ಹಸಿರು ತರಕಾರಿಗಳು, ಸೊಪ್ಪುಗಳು, ತಾಜಾ ಹಣ್ಣುಗಳು ಮತ್ತು ಬೇಳೆಕಾಳುಗಳು ಇರುವ ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯ. ಬಿಸಿನೀರಿನ ಸೇವನೆ ಒಳ್ಳೆಯದು. ಬಾಧಿತ ಭಾಗಕ್ಕೆ ಅಕ್ಕಿಯನ್ನು ಅಥವಾ ಉಪ್ಪನ್ನು ಬಿಸಿ ಮಾಡಿ ಶಾಖ ತೆಗೆದುಕೊಳ್ಳುವುದು ಸಹಾಯಕಾರಿ.
ಮಯೋಸೈಟಿಸ್ ನೇರವಾಗಿ ತಡೆಯಲು ಸಾಧ್ಯವಿಲ್ಲದ ಆಟೋಇಮ್ಯೂನ್ ಕಾಯಿಲೆಯಾಗಿದೆ. ಆದರೂ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಈ ಕಾಯಿಲೆ ದುಷ್ಟರಿಣಾಮಗಳನ್ನು ಕಡಿಮೆ ಮಾಡಬಹುದು. ಇಂತಹ ಸೋಂಕುಗಳು ಹರಡದಂತೆ ವೈಯಕ್ತಿಕ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಮತ್ತು ವೈದ್ಯರ ಸಲಹೆಯಿಲ್ಲದೇ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಹೇರುವ ಅಥವಾ ಅಡ್ಡಪರಿಣಾಮ ಬೀರಬಹುದಾದ ಔಷಧಿಗಳನ್ನು ದೀರ್ಘಕಾಲ ಬಳಸದಿರುವುದು ಒಳಿತು.
ಒಂದು ವೇಳೆ ಸ್ನಾಯುಗಳಲ್ಲಿ ಅಸಾಮಾನ್ಯ ನೋವು ಅಥವಾ ದೌರ್ಬಲ್ಯ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಆರಂಭಿಕ ಹಂತದಲ್ಲೇ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಮುಖ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


