ಮೆನಿಸ್ಕಸ್ ಟೇರ್ (ಕುಶಲವೇ ಕ್ಷೇಮವೇ)
ತೊಡೆಯ ಮೂಳೆ (ಫೀಮರ್) ಮತ್ತು ಮೊಣಕಾಲಿನ ಕೆಳಭಾಗದ ಮೂಳೆ (ಟಿಬಿಯಾ) ನಡುವೆ ಪ್ರತಿಯೊಂದು ಮೊಣಕಾಲಿನಲ್ಲಿಯೂ ಎರಡು ಮೆನಿಸ್ಕಸ್‌ಗಳಿರುತ್ತವೆ.

ಮೊಣಕಾಲು ನಮ್ಮ ದೇಹದ ಅತ್ಯಂತ ಸಂಕೀರ್ಣ ಹಾಗೂ ನಿರಂತರ ಶ್ರಮವಹಿಸುವ ಕೀಲುಗಳಲ್ಲಿ ಒಂದು. ನಾವು ನಡೆಯುವಾಗ, ಓಡುವಾಗ ಮತ್ತು ಜಿಗಿಯುವಾಗ ಮೊಣಕಾಲು ಸಂಪೂರ್ಣ ದೇಹದ ಭಾರವನ್ನು ಹೊರುತ್ತದೆ. ಈ ಅದ್ಭುತ ಕೀಲಿನ ಸರಾಗ ಚಲನೆಯ ರಹಸ್ಯವಿರುವುದು ಅದರ ಒಳಗೆ ಮೃದುವಾದ ಮೆತ್ತೆಯಂತೆ ಕೆಲಸ ಮಾಡುವ ಎರಡು ಸಣ್ಣ ಚಂದ್ರಾಕಾರದ ಮೃದ್ವಸ್ಥಿ ಅಂಗಾಂಶಗಳಲ್ಲಿದೆ. ಇವೇ ಮೆನಿಸ್ಕಸ್ ಮೃದ್ವಸ್ಥಿ ಅಂಗಾಂಶಗಳು.
ಮೆನಿಸ್ಕಸ್ ಟೇರ್ ಎಂದರೇನು?
ಯಾವುದೇ ಮುನ್ನೆಚ್ಚರಿಕೆಯಿಲ್ಲದೇ ಮೆನಿಸ್ಕಸ್ ಮೃದ್ವಸ್ಥಿ ಅಂಗಾಂಶಗಳು ಹರಿದುಹೋದಾಗದೇಹದ ಇಡೀ ಸಮತೋಲನವೇ ತಪ್ಪಿದಂತಾಗಿ ದೈನಂದಿನ ಜೀವನವು ಅಸ್ತವ್ಯಸ್ತಗೊಳ್ಳುತ್ತದೆ. ಹೀಗೆ ಮೊಣಕಾಲಿನ ಮೂಳೆಗಳ ನಡುವೆ ಶಾಕ್ ಅಬ್ಸಾರ್ಬರ್‌ಗಳಾಗಿ ಕಾರ್ಯನಿರ್ವಹಿಸುವ ಮೆನಿಸ್ಕಸ್ ಮೃದ್ವಸ್ಥಿಗಳಿಗೆ ಉಂಟಾಗುವ ಗಾಯವನ್ನು ಮೆನಿಸ್ಕಸ್ ಹರಿದುಹೋಗುವಿಕೆ (ಮೆನಿಸ್ಕಸ್ ಟೇರ್) ಎಂದು ಕರೆಯಲಾಗುತ್ತದೆ.
ತೊಡೆಯ ಮೂಳೆ (ಫೀಮರ್) ಮತ್ತು ಮೊಣಕಾಲಿನ ಕೆಳಭಾಗದ ಮೂಳೆ (ಟಿಬಿಯಾ) ನಡುವೆ ಪ್ರತಿಯೊಂದು ಮೊಣಕಾಲಿನಲ್ಲಿಯೂ ಎರಡು ಮೆನಿಸ್ಕಸ್‌ಗಳಿರುತ್ತವೆ. ಇವುಗಳಲ್ಲಿ ಒಳಗಿನ ಭಾಗದಲ್ಲಿರುವ ಮೀಡಿಯಲ್ ಮೆನಿಸ್ಕಸ್ ಮತ್ತು ಹೊರಗಿನ ಭಾಗದಲ್ಲಿರುವ ಲ್ಯಾಟರಲ್ ಮೆನಿಸ್ಕಸ್ ಪ್ರಮುಖವಾಗಿವೆ.
ಈ ಬಲವಾದ ರಬ್ಬರ್ ತರಹದ ಡಿಸ್ಕ್ ಗಳು ದೇಹದ ತೂಕವನ್ನು ಕೀಲಿನಾದ್ಯಂತ ಸಮವಾಗಿ ಹಂಚಲು, ಸ್ಥಿರತೆಯನ್ನು ಒದಗಿಸಲು ಮತ್ತು ಕೀಲನ್ನು ನಯವಾಗಿಡಲು ಸಹಾಯ ಮಾಡುತ್ತವೆ. ಮೆನಿಸ್ಕಸ್ ಹರಿದಾಗ ನಯವಾದ ಮೃದ್ವಸ್ಥಿ ಸೀಳಿಕೊಳ್ಳುತ್ತದೆ ಅಥವಾ ನಾರಿನಂತೆ ಬಿಡಿಸಿಕೊಳ್ಳುತ್ತದೆ. ಇದು ಮೊಣಕಾಲಿನ ಸಾಮಾನ್ಯ ಚಲನೆಯನ್ನು ಅಸ್ತವ್ಯಸ್ತಗೊಳಿಸಿ ನೋವು, ಊತ ಮತ್ತು ಕೀಲು ಬಿಗಿತ ಆಗುವಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಈ ಗಾಯವು ಯುವಕರು ಮತ್ತು ವಯಸ್ಸಾದವರು ಇಬ್ಬರಲ್ಲೂ ಕಂಡುಬರುತ್ತದೆ ಆದರೆ ಕಾರಣಗಳು ಭಿನ್ನವಾಗಿರುತ್ತವೆ. ಫುಟ್‌ಬಾಲ್, ಸಾಕರ್, ಬಾಸ್ಕೆಟ್‌ಬಾಲ್ ಅಥವಾ ಸ್ಕೀಯಿಂಗ್‌ನಂತಹ ಕ್ರೀಡೆಗಳಲ್ಲಿ ತೊಡಗಿರುವ ಕ್ರೀಡಾಪಟುಗಳು ಮತ್ತು ಯುವಕರಲ್ಲಿ ಇದು ಹೆಚ್ಚಾಗಿ ಆಘಾತಕಾರಿ ಕಾರಣಗಳಿಂದ ಸಂಭವಿಸುತ್ತದೆ. ಪಾದವು ನೆಲದ ಮೇಲೆ ಗಟ್ಟಿಯಾಗಿ ನಿಂತುಕೊಂಡಾಗ ಮೊಣಕಾಲು ಬಲವಾಗಿ ತಿರುಗಿದಾಗ ಅಥವಾ ತಿರುಚಿದಾಗ ಇದು ಉಂಟಾಗುತ್ತದೆ.
ಐವತ್ತು ವರ್ಷ ಮೇಲ್ಪಟ್ಟ ಹಿರಿಯರಲ್ಲಿ ಇದು ವಯಸ್ಸಿಗೆ ಸಂಬಂಧಿಸಿದ ಕ್ಷೀಣತೆಯಿಂದ ಉಂಟಾಗುತ್ತದೆ. ವಯಸ್ಸಾದಂತೆ ಮೃದ್ವಸ್ಥಿ ತನ್ನ ನೈಸರ್ಗಿಕ ತೇವಾಂಶ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುತ್ತದೆ. ಇದರಿಂದ ಅದು ದುರ್ಬಲಗೊಂಡು ಕುರ್ಚಿಯಿಂದ ಏಳುವಾಗ, ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವಾಗ ಅಥವಾ ಸಮತಟ್ಟಾಗಿಲ್ಲದೇ ಇರುವ ನೆಲದ ಮೇಲೆ ಹೆಜ್ಜೆ ಇಡುವಂತಹ ಸಣ್ಣಪುಟ್ಟ ಚಲನೆಗಳಿಂದಲೂ ಹರಿದುಹೋಗಬಹುದು.
ಮೆನಿಸ್ಕಸ್ ಟೇರ್ ಲಕ್ಷಣಗಳು
ಮೆನಿಸ್ಕಸ್ ಹರಿದಾಗ ಕೆಲವು ನಿರ್ದಿಷ್ಟ ಲಕ್ಷಣಗಳು ಗೋಚರಿಸುತ್ತವೆ. ಗಾಯವಾದ ತಕ್ಷಣವೇ ಮೊಣಕಾಲಿನಲ್ಲಿ ಒಂದು ಸಣ್ಣ ಶಬ್ದ ಅಥವಾ ಅನುಭವವಾಗಬಹುದು. ಕೀಲನ್ನು ತಿರುಗಿಸುವಾಗ ಅಥವಾ ತಿರುಚುವಾಗ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಗಾಯವಾದ ಮೊದಲ ಇಪ್ಪತ್ನಾಲ್ಕರಿಂದ ನಲ್ವತ್ತೆಂಟು ಗಂಟೆಗಳ ಒಳಗೆ ಮೊಣಕಾಲು ಊದಿಕೊಳ್ಳುತ್ತದೆ ಮತ್ತು ಗಟ್ಟಿಯಾಗುತ್ತದೆ. ಕೆಲವೊಮ್ಮೆ ಮೊಣಕಾಲು ಸಂಪೂರ್ಣವಾಗಿ ಚಾಚಿಕೊಳ್ಳದೆ ಲಾಕ್ ಆದಂತೆ ಅಥವಾ ಸಿಕ್ಕಿಹಾಕಿಕೊಂಡಂತೆ ಭಾಸವಾಗುತ್ತದೆ. ನಡೆದಾಡುವಾಗ ಮೊಣಕಾಲು ಕುಸಿದುಹೋಗುವ ಅಥವಾ ಅಸ್ಥಿರತೆಯ ಅನುಭವವಾಗಬಹುದು. ಮೊಣಕಾಲನ್ನು ಪೂರ್ಣವಾಗಿ ಮಡಚಲು ಅಥವಾ ಚಾಚಲು ಆಗದಂತೆ ಚಲನೆಯ ವ್ಯಾಪ್ತಿ ಕಡಿಮೆಯಾಗುತ್ತದೆ.
ಮೆನಿಸ್ಕಸ್ ಟೇರ್ ಗೆ ಚಿಕಿತ್ಸಾ ವಿಧಾನಗಳು
ಈ ಸಮಸ್ಯೆಯ ಚಿಕಿತ್ಸಾ ವಿಧಾನಗಳು ಹರಿದಿರುವ ಭಾಗದ ಗಾತ್ರ, ಸ್ವರೂಪ ಮತ್ತು ರಕ್ತಪರಿಚಲನೆಯ ಮೇಲೆ ಅವಲಂಬಿತವಾಗಿರುತ್ತವೆ. ಮೆನಿಸ್ಕಸ್‌ನ ಹೊರಗಿನ ಮೂರನೇ ಒಂದು ಭಾಗಕ್ಕೆ ಉತ್ತಮ ರಕ್ತಸಂಚಾರವಿರುವುದರಿಂದ ಅಲ್ಲಿನ ಸಣ್ಣಪುಟ್ಟ ಹಾನಿಗಳು ತಾವಾಗಿಯೇ ವಾಸಿಯಾಗಬಹುದು. ಆದರೆ ಒಳಗಿನ ಭಾಗದಲ್ಲಿ ರಕ್ತಪರಿಚಲನೆ ಇಲ್ಲದಿರುವುದರಿಂದ ಅದು ತನ್ನಷ್ಟಕ್ಕೆ ತಾನು ಗುಣಮುಖವಾಗುವುದು ಕಷ್ಟ. ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ವಿಶ್ರಾಂತಿ, ಐಸ್ ಒತ್ತುವುದು, ಕಂಪ್ರೆಷನ್ ಬ್ಯಾಂಡೇಜ್ ಬಳಸುವುದು ಮತ್ತು ಕಾಲನ್ನು ಮೇಲಕ್ಕೆತ್ತಿಡುವುದು ಮುಂತಾದ ಕ್ರಮಗಳನ್ನು ಅನುಸರಿಸಲಾಗುತ್ತದೆ. ಇದರೊಂದಿಗೆ ನೋವು ನಿವಾರಕಗಳು ಮತ್ತು ಮೊಣಕಾಲಿನ ಸ್ನಾಯುಗಳನ್ನು ಬಲಪಡಿಸಲು ಫಿಸಿಯೋಥೆರಪಿಯನ್ನು ಸೂಚಿಸಲಾಗುತ್ತದೆ.
ಸಮಸ್ಯೆ ಗಂಭೀರವಾಗಿದ್ದರೆ ಕೀಲು ನೋವು ತಜ್ಞರು ಆರ್ಥೋಸ್ಕೋಪಿಕ್ ಸರ್ಜರಿಯನ್ನು ನಡೆಸುತ್ತಾರೆ. ಇದರಲ್ಲಿ ಹರಿದ ಭಾಗವನ್ನು ಹೊಲಿದು ಜೋಡಿಸಬಹುದು ಅಥವಾ ವಾಸಿಯಾಗದ ಭಾಗವನ್ನು ಕತ್ತರಿಸಿ ಸರಿಪಡಿಸಬಹುದು.

ಪೈಲೊನೈಡಲ್ ಸಿಸ್ಟ್ (ಕುಶಲವೇ ಕ್ಷೇಮವೇ)
ಈ ಗಾಯದಿಂದ ಸಂಪೂರ್ಣವಾಗಿ ರಕ್ಷಣೆ ಪಡೆಯಲು ಸಾಧ್ಯವಿಲ್ಲದಿದ್ದರೂ, ಕೆಲವು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಕಾಲುಗಳ ಕ್ವಾಡ್ರಿಸೆಪ್ಸ್, ಹ್ಯಾಮ್‌ಸ್ಟ್ರಿಂಗ್ಸ್ ಮತ್ತು ಕಾಫ್ ಸ್ನಾಯುಗಳನ್ನು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಬಲಪಡಿಸಬೇಕು. ಬಲವಾದ ಸ್ನಾಯುಗಳು ಮೊಣಕಾಲಿನ ಕೀಲಿಗೆ ಉತ್ತಮ ಬೆಂಬಲ ನೀಡುತ್ತವೆ. ಮುಖ್ಯ ಸ್ನಾಯುಗಳ ದೃಢತೆಯು ದೇಹದ ಸಮತೋಲನವನ್ನು ಕಾಪಾಡುತ್ತದೆ. ಕ್ರೀಡೆಗಳಲ್ಲಿ ತೊಡಗುವಾಗ ಅಥವಾ ಭಾರವಾದ ವಸ್ತುಗಳನ್ನು ಎತ್ತುವಾಗ ಸರಿಯಾದ ಭಂಗಿ ಇರಬೇಕು ಮತ್ತು ತಂತ್ರಗಳನ್ನು ಬಳಸುವುದು ಅತ್ಯಗತ್ಯ. ವ್ಯಾಯಾಮದ ತೀವ್ರತೆಯನ್ನು ಹಂತ ಹಂತವಾಗಿ ಹೆಚ್ಚಿಸಬೇಕು. ಅಧಿಕ ದೇಹದ ತೂಕವು ಮೊಣಕಾಲಿನ ಮೃದ್ವಸ್ಥಿ ಮೇಲೆ ನಿರಂತರವಾಗಿ ಬೀರುವ ಒತ್ತಡವನ್ನು ಹೆಚ್ಚಿಸುವುದರಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮೊಣಕಾಲಿನ ದೀರ್ಘಾವಧಿಯ ಆರೋಗ್ಯಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
ಮೆನಿಸ್ಕಸ್ ಟೇರನ್ನು ನಿರ್ಲಕ್ಷಿಸಿದರೆ ನೋವು, ಊತ ಹಾಗೂ ಮೊಣಕಾಲಿನ ಚಲನೆಯಲ್ಲಿನ ತೊಂದರೆ ಮುಂದುವರಿಯಬಹುದು. ಆದರೆ ಆರಂಭದಲ್ಲೇ ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದರೆ ಬಹುತೇಕ ಸಂದರ್ಭಗಳಲ್ಲಿ ಉತ್ತಮ ಚೇತರಿಕೆ ಸಾಧ್ಯ. ಗಾಯದ ತೀವ್ರತೆ, ವಯಸ್ಸು, ದೈಹಿಕ ಚಟುವಟಿಕೆ ಮತ್ತು ಮೆನಿಸ್ಕಸ್‌ನ ಹಾನಿಯ ಸ್ವರೂಪವನ್ನು ಆಧರಿಸಿ ಚಿಕಿತ್ಸೆ ಬದಲಾಗುತ್ತದೆ. ಆದ್ದರಿಂದ ಮೊಣಕಾಲಿನಲ್ಲಿ ನಿರಂತರ ನೋವು, ಊತ, ‘ಲಾಕ್’ ಆಗುವಿಕೆ ಅಥವಾ ಚಲನೆಗೆ ತೊಂದರೆ ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ವ್ಯಾಯಾಮಕ್ಕೂ ಮುನ್ನ ಸರಿಯಾದ ವಾರ್ಮ್ ಅಪ್, ಸ್ನಾಯುಗಳ ಬಲವರ್ಧನೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಮೆನಿಸ್ಕಸ್ ಗಾಯದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


