ಸೊಂಟದ ಕೀಲುಗಳ ನೋವು (ಕುಶಲವೇ ಕ್ಷೇಮವೇ)
ಆರೋಗ್ಯವಂತ ವ್ಯಕ್ತಿಯಲ್ಲಿ ಈ ಚೆಂಡು ಕವಚದೊಳಗೆ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಸುತ್ತುತ್ತದೆ. ಇದರಲ್ಲಿ ತೊಂದರೆ ಇದ್ದರೆ ಮಾತ್ರ ನೋವು ಉಂಟಾಗುತ್ತದೆ.

ಸೊಂಟದ ಕೀಲುಗಳ ನೋವು ಅಥವಾ ಹಿಪ್ ಇಂಪಿಂಜ್ಮೆಂಟ್ (ಫೆಮೆರೋಅಸಿಟ್ಯಾಬುಲಾರ್ ಇಂಪಿಂಜ್ಮೆಂಟ್-ಎಫ್‌ಎಐ) ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮತ್ತು ಕ್ರೀಡಾಪಟುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಸಮಸ್ಯೆಯಾಗಿದೆ. ಸರಳವಾಗಿ ಹೇಳುವುದಾದರೆ ಸೊಂಟದ ಕೀಲಿನಲ್ಲಿರುವ ಮೂಳೆಗಳ ವಿನ್ಯಾಸದಲ್ಲಿ ಆಗುವ ಸಣ್ಣ ಬದಲಾವಣೆಯಿಂದಾಗಿ ಅವು ಚಲಿಸುವಾಗ ಒಂದಕ್ಕೊಂದು ಘರ್ಷಣೆಯಾಗಿ ನೋವುಂಟಾಗುವುದೇ ಈ ಸಮಸ್ಯೆ.
ಸೊಂಟದ ಕೀಲಿನ ರಚನೆ
ನಮ್ಮ ಸೊಂಟದ ಕೀಲು 'ಬಾಲ್ ಮತ್ತು ಸಾಕೆಟ್' ಮಾದರಿಯಲ್ಲಿದೆ. ಅಂದರೆ ತೊಡೆಯ ಮೂಳೆಯ ಮೇಲ್ಭಾಗದ ಚೆಂಡಿನಂತಹ (ಬಾಲ್) ರಚನೆ ಸೊಂಟದ ಮೂಳೆಯ ಕವಚದೊಳಗೆ (ಸಾಕೆಟ್) ಕುಳಿತುಕೊಳ್ಳುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಈ ಚೆಂಡು ಕವಚದೊಳಗೆ ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಸುತ್ತುತ್ತದೆ. ಇದರಲ್ಲಿ ತೊಂದರೆ ಇದ್ದರೆ ಮಾತ್ರ ನೋವು ಉಂಟಾಗುತ್ತದೆ.
ಸೊಂಟದ ಕೀಲುಗಳ ನೋವಿಗೆ ಕಾರಣಗಳು
ಸೊಂಟದ ಕೀಲುಗಳ ನೋವು ಸಾಮಾನ್ಯವಾಗಿ ಮೂರು ಕಾರಣಗಳಿಂದ ಸಮಸ್ಯೆ ಉಂಟಾಗಬಹುದು. ಮೊದಲನೆಯದು ಕ್ಯಾಮ್ ಎಂದರೆ ತೊಡೆಯ ಮೂಳೆಯ ಚೆಂಡಿನ ಭಾಗವು ಸಂಪೂರ್ಣವಾಗಿ ದುಂಡಗಿರದೇ ಒಂದು ಕಡೆ ಸ್ವಲ್ಪ ಹೆಚ್ಚುವರಿ ಮೂಳೆ ಬೆಳೆದಿರುತ್ತದೆ. ಇದು ಕವಚದೊಳಗೆ ಚಲಿಸುವಾಗ ಘರ್ಷಣೆ ಉಂಟಾಗಿ ನೋವಾಗುತ್ತದೆ. ಎರಡನೆಯದು ಪಿನ್ಸರ್ ಅಂದರೆ ಸೊಂಟದ ಮೂಳೆಯ ಕವಚದ ಅಂಚು ಅತಿಯಾಗಿ ಬೆಳೆದು ತೊಡೆಯ ಮೂಳೆಯನ್ನು ಆವರಿಸುತ್ತದೆ ಮತ್ತು ಮೂರನೆಯದು ಸಂಯುಕ್ತ ರಚನೆ (ಕಂಬೈನ್ಡ್) ಅಂದರೆ ಕ್ಯಾಮ್ ಮತ್ತು ಪಿನ್ಸರಿನ ಲಕ್ಷಣಗಳು ಸೊಂಟದ ಒಂದೇ ಕೀಲಿನಲ್ಲಿ ಇದ್ದು ನೋವು ಉಂಟಾಗುವುದು.
ಸೊಂಟದ ಕೀಲುಗಳ ನೋವಿನ ಲಕ್ಷಣಗಳು
ಈ ಸಮಸ್ಯೆಯು ಆರಂಭದಲ್ಲಿ ಸಣ್ಣ ನೋವಾಗಿ ಕಾಣಿಸಿಕೊಂಡು ದಿನಕಳೆದಂತೆ ತೀವ್ರಗೊಳ್ಳುತ್ತದೆ. ಸೊಂಟದ ಮುಂಭಾಗ ಅಥವಾ ತೊಡೆ ಸಂಧಿಯಲ್ಲಿ ಚುಚ್ಚಿದಂತಾಗುವುದು. ಕಾಲುಗಳನ್ನು ಪೂರ್ತಿಯಾಗಿ ಬಗ್ಗಿಸಲು ಅಥವಾ ಒಳಗಡೆ ತಿರುಗಿಸಲು ಕಷ್ಟವಾಗುವುದು. ಕಾರ್ ಚಲಾಯಿಸುವಾಗ ಅಥವಾ ಆಫೀಸ್ ಕುರ್ಚಿಯಲ್ಲಿ ದೀರ್ಘಕಾಲ ಕುಳಿತಾಗ ನೋವು ಹೆಚ್ಚಾಗುವುದು. ಸೊಂಟದ ಮೂಳೆಗಳನ್ನು ಆಡಿಸುವಾಗ 'ಕ್ಲಿಕ್' ಎಂಬ ಶಬ್ದ ಕೇಳಿಬರುವುದು ಅಥವಾ ಏನೋ ಸಿಕ್ಕಿಹಾಕಿಕೊಂಡ ಅನುಭವವಾಗುವುದು. ಇವು ಈ ಸಮಸ್ಯೆ ಸಾಮಾನ್ಯ ಲಕ್ಷಣಗಳಾಗಿವೆ.
ವೈದ್ಯರು ದೈಹಿಕ ಪರೀಕ್ಷೆಯ ಮೂಲಕ ಸೊಂಟದ ಕೀಲಿನ ನೋವಿನ ತೀವ್ರತೆಯನ್ನು ಪರಿಶೀಲಿಸುತ್ತಾರೆ. ಮೂಳೆಗಳ ವಿನ್ಯಾಸ ಮತ್ತು ಕೀಲಿನ ಒಳಭಾಗದ ಮೃದ್ವಸ್ಥಿಗೆ ಹಾನಿಯಾಗಿದೆಯೇ ಎಂದು ತಿಳಿಯಲು ಎಕ್ಸ್-ರೇ ಅಥವಾ ಎಂಆರ್‌ಐ ಸ್ಕ್ಯಾನ್ ಮಾಡುವುದು ಅಗತ್ಯವಿರುತ್ತದೆ.
ಸೊಂಟದ ಕೀಲುಗಳ ನೋವಿಗೆ ಚಿಕಿತ್ಸೆ
ಹಿಪ್ ಇಂಪಿಂಜ್‌ಮೆಂಟಿಗೆ ಚಿಕಿತ್ಸೆಯು ಸಮಸ್ಯೆಯ ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ. ಸಾಂಪ್ರದಾಯಿಕ ಚಿಕಿತ್ಸೆಯ ಆರಂಭಿಕ ಹಂತದಲ್ಲಿ ಕ್ರೀಡೆ ಅಥವಾ ಹೆಚ್ಚು ಶ್ರಮದಾಯಕ ಕೆಲಸಗಳಿಂದ ವಿರಾಮ ಪಡೆಯುವುದು ಮೊದಲ ಹಂತ. ವೈದ್ಯರು ಸೂಚಿಸುವ ನೋವು ನಿವಾರಕ ಮಾತ್ರೆಗಳು ಮತ್ತು ಉರಿಯೂತ ಕಡಿಮೆ ಮಾಡುವ ಔಷಧಿಗಳು ಸಹಕಾರಿ.
ನಂತರದ ಹಂತದಲ್ಲಿ ಫಿಸಿಯೋಥೆರಪಿ ಅತ್ಯಂತ ಪ್ರಮುಖವಾದದ್ದು. ಇದರ ಮೂಲಕ ಸೊಂಟದ ಸುತ್ತಲಿನ ಸ್ನಾಯುಗಳನ್ನು ಬಲಪಡಿಸುವ ಮೂಲಕ ಕೀಲಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.
ಈ ಕ್ರಮಗಳಿಂದ ನೋವು ಕಡಿಮೆಯಾಗದಿದ್ದರೆ 'ಆಥ್ರೋಂಸ್ಕೋಪಿ' ಎಂಬ ಸಣ್ಣ ರಂಧ್ರದ ಮೂಲಕ ಮಾಡುವ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಇದರಲ್ಲಿ ಹೆಚ್ಚುವರಿ ಬೆಳೆದ ಮೂಳೆಯನ್ನು ಸರಿಪಡಿಸಿ, ಕೀಲು ಸರಾಗವಾಗಿ ಚಲಿಸುವಂತೆ ಮಾಡಲಾಗುತ್ತದೆ.
ಸೊಂಟದ ಕೀಲುಗಳ ನೋವು ತಡೆಗಟ್ಟುವುದು ಹೇಗೆ?
ಹಿಪ್ ಇಂಪಿಂಜ್ಮೆಂಟ್ ಕೇವಲ ದೈಹಿಕ ಸಮಸ್ಯೆ ಮಾತ್ರವಲ್ಲ. ಜನರ ದೈನಂದಿನ ಕಾರ್ಯಕ್ಷಮತೆಯ ಮೇಲೂ ಪ್ರಭಾವ ಬೀರುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳು ಅತ್ಯಗತ್ಯ.
ಮೊದಲನೆಯದಾಗಿ ದೀರ್ಘಕಾಲ ಕುಳಿತು ಕೆಲಸ ಮಾಡುವವರು ಪ್ರತಿ ಗಂಟೆಗೆ ಒಮ್ಮೆ ಎದ್ದು ಅಡ್ಡಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಸೊಂಟದ ಕೀಲುಗಳ ಮೇಲಿನ ನಿರಂತರ ಒತ್ತಡ ಕಡಿಮೆಯಾಗುತ್ತದೆ.
ಎರಡನೆಯದಾಗಿ ಸ್ನಾಯುಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸೊಂಟದ ಹಿಂಭಾಗದ ಸ್ನಾಯುಗಳು (ಗ್ಲೂಟಿಯಸ್ ಮಸಲ್ಸ್) ಮತ್ತು ಹೊಟ್ಟೆಯ ಸ್ನಾಯುಗಳು (ಕೋರ್ ಮಸಲ್ಸ್) ಬಲವಾಗಿದ್ದರೆ ಅವು ಕೀಲುಗಳಿಗೆ ರಕ್ಷಾ ಕವಚದಂತೆ ಕೆಲಸ ಮಾಡುತ್ತವೆ ಮತ್ತು ಮೂಳೆಗಳ ಘರ್ಷಣೆಯನ್ನು ಕಡಿಮೆ ಮಾಡುತ್ತವೆ.
ನೃತ್ಯ ಅಥವಾ ಕ್ರೀಡೆಗಳಲ್ಲಿ ತೊಡಗಿರುವವರು 'ವಾರ್ಮ್ ಅಪ್' ಮತ್ತು 'ಕೂಲ್ ಡೌನ್' ವ್ಯಾಯಾಮಗಳನ್ನು ಎಂದಿಗೂ ಬಿಡಬಾರದು. ಸರಿಯಾದ ತರಬೇತಿಯಿಲ್ಲದೆ ದಿಢೀರನೆ ಭಾರ ಎತ್ತುವುದು ಅಥವಾ ಕಠಿಣ ವ್ಯಾಯಾಮ ಮಾಡುವುದು ಅಪಾಯಕಾರಿ. ಅನೇಕ ಬಾರಿ ಜನರು ಸೊಂಟದ ನೋವನ್ನು ಸಾಮಾನ್ಯ ಬೆನ್ನು ನೋವು ಅಥವಾ ಸ್ನಾಯು ಸೆಳೆತ ಎಂದು ತಪ್ಪು ತಿಳಿಯುತ್ತಾರೆ. ಆದರೆ ನೋವು ಕೆಲವು ವಾರಗಳ ಕಾಲ ಮುಂದುವರಿದರೆ ತಜ್ಞ ವೈದ್ಯರ ಸಲಹೆ ಪಡೆಯುವುದು ಅನಿವಾರ್ಯ. ಆರಂಭಿಕ ಹಂತದಲ್ಲಿ ಇದನ್ನು ಪತ್ತೆಹಚ್ಚುವುದರಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಯಬಹುದು.
ಕೊನೆಮಾತು: ಹಿಪ್ ಇಂಪಿಂಜ್ಮೆಂಟನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಇದು 'ಆಸ್ಟಿಯೋ ಆರ್ಥ್ರೈಟಿಸ್' ಅಥವಾ ಕೀಲು ಸವಕಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಸೊಂಟದ ನೋವು ದೀರ್ಘಕಾಲ ಕಾಡುತ್ತಿದ್ದರೆ ತಕ್ಷಣವೇ ತಜ್ಞವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಅವರ ಸಲಹೆಯಂತೆ ನಡೆದುಕೊಂಡು ಉತ್ತಮ ಜೀವನಶೈಲಿ ಅಳವಡಿಸಿಕೊಂಡು ಅಳವಡಿಸಿಕೊಂಡರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



