ಅಂಕಣಗಳು

ಹೀಗಿತ್ತು ಸ್ವರ್ಣ ಲಂಕೆಯ ಪ್ರಪಂಚ

ದೇವ ದಾನವ ಯುದ್ಧದಲ್ಲಿ ಸೋತ ರಾಕ್ಷಸರು ಪಾತಾಳಕ್ಕೆ ಓಡಿದ್ದಾರೆ. ಎಷ್ಟೋ ಕಾಲದ ಮೇಲೆ ಸುಮಾಲಿ ಮಗಳೊಡನೆ ಬಂದ...

ಹೀಗಿತ್ತು ಸ್ವರ್ಣ ಲಂಕೆಯ ಪ್ರಪಂಚ
Published On :
ಬ್ರಹ್ಮನ ಸೃಷ್ಟಿಯಲ್ಲಿ ಬಂದ ಪ್ರಥಮ ದ್ವಿಪಾದಿಗಳು (ಬಹುಶಃ ಮಾನವರೋ?) ಕಕ್ಕಾವಿಕ್ಕಿಯಾಗಿದ್ದಾರೆ. ಎಲ್ಲ ಅಯೋಮಯ! ತಾವೆಲ್ಲಿಂದ ಬಂದೆವು? ಏಕೆ ಬಂದೆವು? ಮಾಡುವುದೇನು? ಏನೂ ಗೊತ್ತಾಗುತ್ತಿಲ್ಲ. ಗಗನದಲ್ಲಿ ಕಾಣಿಸಿದ ಚತುರ್ಮುಖನ ಗಂಭೀರವಾಣಿ. " ನಿಮ್ಮ ಗಮ್ಯ, ನಿಮ್ಮ ಮುಂದಿನ ಈ ಅಗಾಧ ಜಲ ರಾಶಿಯನ್ನು ರಕ್ಷಿಸುವುದು. ಅದೇ ನಿಮ್ಮ ಜೀವನದ ಗುರಿಯಾಗಲಿ. ಅದರಿಂದಲೇ ನಿಮ್ಮ ಬದುಕು ಬಂಗಾರವಾಗುತ್ತದೆ. ನಿಮ್ಮ ಕಾಲ ಸುಖವಾಗಿ ಕಳೆಯುತ್ತದೆ." 
ನೀರನ್ನು ಕಾಲುವೆಗಳಲ್ಲಿ ಹರಿಸಿದರು . ಬರಡು ನೆಲವನ್ನು ತಣಿಸಿದರು . ಕೆಸರನ್ನು ಉತ್ತರು . ಬೀಜ ಬಿತ್ತಿದರು . ಬೆಳೆದರು . ದವಸ , ಧಾನ್ಯ , ತರಕಾರಿ , ಹಣ್ಣುಗಳನ್ನು ಉಂಡರು . ಸುಖ ಜೀವನವನ್ನು ಅನುಭವಿಸಿದರು . ಒಟ್ಟಿನಲ್ಲವರು ನೀರನ್ನು ರಕ್ಷಿಸಿದ್ದರಿಂದ ಅವರು ರಾಕ್ಷಸರಾದರು. (ರಕ್ಷಾಮ ಇತಿಚೈರ್ಯುಕ್ತಂ ರಾಕ್ಷಸಾಸ್ತೇ ಭವಂತು ವಃ) ಬ್ರಹ್ಮ ಹೇಳಿದಾಗ ಕೆಲವರಿಗದು ವಿಚಿತ್ರವಾಗಿ ಕೇಳಿಸಿತು. "ರಕ್ಷಿಸಿ" ಎಂದದ್ದು ಅವರಿಗೆ "ಯಕ್ಷಿಸಿ" ಎಂದು ಅರಿತರು. "ಯಕ್ಷಿಸಿ" ಎಂದರೆ "ಪೂಜಿಸಿ" ಎಂದು ಅರ್ಥೈಸಿದರು. ಅವರು ವರುಣ ಸೂಕ್ತಗಳನ್ನು ವಿರಚಿಸಿದರು. ಜಲಾಭಿಮಾನಿ ದೇವತೆಯ ಪೂಜೆಗೈದರು. ಮೇಘಗಳನ್ನು ಕೊಂಡಾಡಿದರು. ಬದುಕಲು ಆಧಾರವೇ ಜಲವೆಂದರು. ಅರ್ಚಿಸಿದರು. ಈಗಲೂ ಯಾವುದೇ ಶುಭಕಾರ್ಯಕ್ಕೆ ಮುನ್ನ ನಾವು ಆಚರಿಸುವ "ಉದಕ ಶಾಂತಿ" ಇದೇ. ಈ ಮಂದಿ ನೀರನ್ನು ಪೂಜಿಸಿ ಪಾರಾಯಣ ಮಾಡಿದ್ದರಿಂದ ಇವರು ಯಕ್ಷರಾದರು. 
 ( ಯಕ್ಷಾಮ ಇತಿಚೈರ್ಯುಕ್ತಂ ಯಕ್ಷಾ ಏವ ಭವಂತುವಃ )
*****************
ರಾಕ್ಷಸರ ಆರಂಭದ ನಾಯಕರುಗಳು ಇಬ್ಬರು. ಅವರೇ ಹೇತಿ ಮತ್ತು ಪ್ರಹೇತಿ. ಅದೆಂತೋ ಪ್ರಹೇತಿಗೆ ಹುಟ್ಟಿನಿಂದಲೇ ಜೀವನದ ಬಗ್ಗೆ ವಿರಕ್ತಿ. ಮಡದಿ, ಮಕ್ಕಳು, ಆಸ್ತಿ, ಸಂಗ್ರಹ, ಅದರ ರಕ್ಷಣೆ, ಅದರ ಅಭಿವೃದ್ಧಿ, ಇದೆಲ್ಲ ಅರ್ಥಹೀನವೆನಿಸಿ ಆತ ಮುನಿಯಾಗಿ ಬಿಟ್ಟ. ಇವನ ಸಹೋದರ ಹೇತಿಯೇ ಮುಂದಿನ ರಾಕ್ಷಸ ಮೂಲಪುರುಷ. ಈತನ ವಾಮಾಂಗಿಯಾದಾಕೆ ಯಮನ ಸಹೋದರಿ ಭಯಾ. ಹೆಸರೇ ಭಯ ಹುಟ್ಟಿಸುವಂತೆ !! ಆದರೆ ಆ ಭಯ ನಮಗೆ. ಹೇತಿಗಲ್ಲ. ಹೇತಿಗೆ ಪುತ್ರಸಂತಾನ ಈಕೆಯಲ್ಲಿ. ಅವನೇ ವಿದ್ಯುತ್ಕೇಶ. ರಾಕ್ಷಸ ಕುಲಾಧೀಶನೀತನ ಕೈ ಹಿಡಿದದ್ದು ಸಾಯಂ ಸಂಧ್ಯೆಯ ಅಭಿಮಾನ ದೇವಿಯ ಪುತ್ರಿ. ಆಕೆಯೇ ಸಾಲಕಟಂಕಟೆ. ಅನ್ಯೋನ್ಯ ಜೋಡಿ. ಅಮಿತ ಆಕರ್ಷಣೆ ಪರಸ್ಪರರಲ್ಲಿ. ವರ್ಷಗಳುರುಳಿದರೂ ಕಾಮ ತೃಷ್ಟೆ ಕೇವಲ ಏರಿಕೆ. ಸದಾ ಭೋಗಮುಖ. ಮಿತಿಮೀರಿದ ಈ ಸಂಯೋಗ ತೀವ್ರತೆ ಎಷ್ಟಿತ್ತೆಂದರೆ,  ಹೆತ್ತ ಮಗನ ಮರೆತು ಜೋಡಿಯಾಗಿ ವಿಹರಿಸ ಹೋಗಿದ್ದರು. ತಾಯ ಸಾನ್ನಿಧ್ಯವಿಲ್ಲದೆ; ಮಾತೆಯ ಮಡಿಲಿಲ್ಲದೆ; ಕ್ಷೀರ ಭಾಗ್ಯವಿರದೇ ಸುಕೇಶ ಕಿರಿಚುತ್ತಿದ್ದ. ಅರಚುತ್ತಿದ್ದ . ಹಶಿವಿನಿಂದ ಬೊಬ್ಬಿಡುತ್ತಿದ್ದ. ಬಳಿಯಲ್ಲೇ ಹಾದು ಹೋಗುತ್ತಿದ್ದ ಪಾರ್ವತಿಯ ಮಾತೃ ರಕ್ಷಣೆಯೇ ಸಿಕ್ಕಿತವನಿಗೆ. ಇರಲಿ, ಆ ಕಥೆಯನ್ನು ಹೆಚ್ಚು ಲಂಬಿಸುವುದು ಬೇಡ. ಇವನ ಮಕ್ಕಳೇ ಮಾಲ್ಯವಂತ, ಸುಮಾಲಿ, ಮತ್ತು ಮಾಲಿ. ಈ ಸುಮಾಲಿಯ ಮಗಳೇ ಕೈಕಸಿ; ನಮ್ಮ ಖಳನಾಯಕನ ಮಹಾ ಜನನಿ.
***************
ದೇವ ದಾನವ ಯುದ್ಧದಲ್ಲಿ ಸೋತ ರಾಕ್ಷಸರು ಪಾತಾಳಕ್ಕೆ ಓಡಿದ್ದಾರೆ. ಎಷ್ಟೋ ಕಾಲದ ಮೇಲೆ ಸುಮಾಲಿ ಮಗಳೊಡನೆ ಬಂದ. ತಮ್ಮ ಹಳೆಯ ಲಂಕೆಯನ್ನು ನೋಡಲು. ಆ ಸಹೋದರರ ನೆಲೆಗಾಗಿ ಸುರೇಂದ್ರನೇ ಈ ಭವನವನ್ನು ಮಯನಿಂದ ಕಟ್ಟಿಸಿದ್ದ. ಅದು ಅನನ್ಯ ಪ್ರದೇಶ. ರಕ್ಷಣೆಯ ಜಲದುರ್ಗ ಅದು. ಅದೊಂದು ದ್ವೀಪ. ಆ ದ್ವೀಪದ ನಡುವೆ ಒಂದು ಬೆಟ್ಟ. ಆ ಪರ್ವತದಂತಹ ಬೆಟ್ಟದ ಶಿಖರದಲ್ಲಿ ಒಂದು ಪುರವನ್ನೇ ನಿರ್ಮಿಸಿದ್ದ ದೇವಶಿಲ್ಪಿ. ಕೋಟೆ ಗೋಡೆಯಿರಲಿ; ಮನೆಗಳ ಸಾಲಿರಲಿ; ಉಪ್ಪರಿಗೆರಳಿರಲಿ; ತೋಟದ ಮಧ್ಯದ ಸಾಲ ಭಂಜಿಕೆಗಳಿರಲಿ; ಆಭರಣಗಳಿರಲಿ; ವಸ್ತ್ರ ವಿನ್ಯಾಸಗಳಿರಲಿ; ವಾಹನಗಳಿರಲಿ; ಬಳಸುವ ಬಟ್ಟಲುಗಳಿರಲಿ... ಎಲ್ಲವೂ ಸ್ವರ್ಣಸಾನ್ನಿಧ್ಯ. ಇಡೀ ನಗರವೇ ಚಿನ್ನ ಕಾಂತಿಯಿಂದ ಸದಾ ಹಳದಿ ಬಣ್ಣದಿಂದ ಜಗಜಗಿಸುತ್ತಿತ್ತು. ಊರಿನ ಹೆಸರೇ ಸ್ವರ್ಣ ಲಂಕೆ ಎಂದು ಪ್ರಸಿದ್ಧವಾಗಿತ್ತು ( ಲಂಕಾ ನಿರ್ಮಾಣ ರಾವಣನದಲ್ಲ ಎಂಬುದನ್ನು ಓದುಗರು ಗಮನಿಸಬೇಕು.  
(ಸ್ವರ್ಣ ಪ್ರಾಕಾರ ಸಂವಿತಾಂ ಹೇಮ ತೋರಣ ಸಂವೃತಾ
ಮಯಾ ಲಂಕೇತಿ ನಗರೀ ಶಕ್ರಾಙ್ಞಪ್ತೇನ ನಿರ್ಮಿತಾ). 
ಇಂತಹ ಚಿನ್ನದ ಲಂಕೆಯನ್ನು ಬಿಟ್ಟು ತೆರಳಿದ್ದರು ಸುರರೊಡನೆ ಸೋತಾಗ. ವರ್ಷಗಳು ಕಳೆದು ಇದೀಗ ತಮ್ಮ ಗತಕಾಲದ ಊರು ಹೇಗಿದೆಯೋ, ನಿರ್ವಸತಿಯೋ, ಇಲಿ- ಹೆಗ್ಗಣಗಳಿಗೆ ಆಶ್ರಯವೋ, ಮಳೆಗಾಳಿಗೆ ಸಿಕ್ಕ ಚಿನ್ನದ ಹೊಳಪು ಕುಂದಿ ಹಿತ್ತಳೆಯಂತಾಗಿದೆಯೋ, ಊರಲ್ಲೆಲ್ಲ ಗಿಡ, ಮರ, ಪೊದಗಳಿದ್ದು ಅರಣ್ಯನಗರಿಯಾಗಿದ್ದೀತೇನೋ ಏನೇನೋ ಲೆಕ್ಕ ಹಾಕುತ್ತ ತಮ್ಮ ಹಿಂದಿನ ವೈಭವವನ್ನು ನೆನಪಿಸಿಕೊಳ್ಳುತ್ತ ಸುಮಾಲಿ ಬಂದಿದ್ದಾನೆ ಮಗಳೊಡನೆ.  
ಅನಿರೀಕ್ಷಿತ ! ಬೆಕ್ಕಸ ಬೆರಗಾಗಿ ನಿಂತರವರು. ತಮ್ಮ ಊಹೆ ತಲೆಕೆಳಗು. ಲಂಕೆ ಮೊಂಕಾಗಿಲ್ಲ ! ಕಾಂತಿ ಮಾಸಿಲ್ಲ ! ಲಕಲಕಿಸುತ್ತಿದೆ ! ಶುಭ್ರ ಬೀದಿಗಳಿವೆ ! ತೋಟಗಳು ಕಿಲಕಿಲ ನಗುತ್ತಿವೆ ! ಮನೆಯಲ್ಲಿ ವೇದ ಘೋಷ ಕೇಳುತ್ತಿದೆ; ಸಂಗೀತದ ಅಲೆ ಅಲೆ ತೇಲಿ ಬರುತ್ತಿದೆ ; ನೂಪುರದ ಸದ್ದು ನಿನದಿಸುತ್ತಿದೆ; ವಾದ್ಯಗಳ ಮೋಹಕ ಉಲಿ ಕಿವಿ ತುಂಬುತ್ತಿದೆ; ಸುಂದರಾಂಗದ ದೃಢ ಕಾಯರು ಸುಳಿದಾಡುತ್ತಿದ್ದಾರೆ; ಕಿರೀಟ-ಭುಜ ಕೀರೀಟಗಳೊಡನೆ ಓಡಾಡುತ್ತಿದ್ದಾರೆ; ಶುದ್ಧ ಕಾಂತಿಯ ವೀರರು ಕತ್ತಿ ಹಿಡಿದು ಪಹರೆ ಕಾಯುತ್ತಿದ್ದಾರೆ. ಓಹ್ ! ಸ್ವರ್ಣ ಲಂಕೆಯ ಐಶ್ವರ್ಯ, ವೈಭವ, ಕಾಂತಿಗಳನ್ನು ಕಂಡು ಕೈಕಸಿ ಅವಾಕ್ ಆದಳು !! (ಮುಗಿದಿಲ್ಲ !! ) 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.