ಅಂಕಣಗಳು

ಬೇಲ್-ಇನ್ ಬಗ್ಗೆ ಭಯವೇಕೆ?

ವಾಟ್ಸಪ್ ನಲ್ಲಿ ಬ್ಯಾಂಕಿನಲ್ಲಿರುವ ನಮ್ಮ ಹಣವನ್ನ ಬ್ಯಾಂಕು ವಾಪಸ್ಸು ಕೊಡದೆ ಹೋಗುವಂತ ಕಾನೂನು ತರುತ್ತಿದ್ದಾರಂತೆ ಎನ್ನುವ ಜನರಲ್ಲಿ ಭಯ ಮತ್ತು ಮೌಢ್ಯ ಹೆಚ್ಚಿಸುವ ಮೆಸೇಜ್ ಹರಿದಾಡುತ್ತಿದೆ. ಗಮನಿಸಿ...

ಬೇಲ್-ಇನ್ ಬಗ್ಗೆ ಭಯವೇಕೆ?
ಬೇಲ್-ಇನ್ ಬಗ್ಗೆ ಭಯವೇಕೆ?
ಕಳೆದ ವಾರದ 'ನಮ್ಮ  ಬ್ಯಾಂಕ್ಗಳು ಎಷ್ಟು ಸುರಕ್ಷಿತ' ಲೇಖನಕ್ಕೆ ಬಂದ ಪ್ರತಿಕ್ರಿಯೆ ಬೆಚ್ಚಿಬೀಳಿಸುವಂತಿತ್ತು. ಏಕೆಂದರೆ ಹೆಚ್ಚಿನ ಓದುಗರು 'ಬೇಲ್-ಇನ್' ಬಗ್ಗೆಯ ಲೇಖನಗಳನ್ನ ಓದಿ ಭಯಗೊಂಡಿದ್ದರು. ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಹೊಂದಿದ ಮಾತುಗಳ ಮೇಲ್ ಕೂಡ ಬಂದಿದ್ದವು. ಗೆಳೆಯ ಟಿ.ಜಿ ಶ್ರೀನಿಧಿ ಅವರು ಮಾತ್ರ 'ಕೆಲವು ಪತ್ರಿಕೆಗಳು ಬೇಲ್-ಇನ್ ಬಗ್ಗೆ ಬರೆದು ಜನರಲ್ಲಿ ಭಯೋದ್ಪಾದನೆ ಮಾಡುತ್ತಿವೆ ಹೀಗಾಗಿ ಬೇಲ್-ಇನ್ ಬಗ್ಗೆ ಬರೆಯಿರಿ' ಎಂದಿದ್ದರು. ಈ ಮಧ್ಯದಲ್ಲಿ ಎಂದಿನಂತೆ ವಾಟ್ಸಪ್ ನಲ್ಲಿ ಬ್ಯಾಂಕಿನಲ್ಲಿರುವ ನಮ್ಮ ಹಣವನ್ನ ಬ್ಯಾಂಕು ವಾಪಸ್ಸು ಕೊಡದೆ ಹೋಗುವಂತ ಕಾನೂನು ತರುತ್ತಿದ್ದಾರಂತೆ ಎನ್ನುವ ಜನರಲ್ಲಿ ಭಯ ಮತ್ತು ಮೌಢ್ಯ ಹೆಚ್ಚಿಸುವ ಮೆಸೇಜ್ ಹರಿದಾಡುತ್ತಿದೆ. ಗಮನಿಸಿ ಭಯ ಎನ್ನುವುದು ಮೌಢ್ಯದ ಇನ್ನೊಂದು ಮುಖ. ಯಾವಾಗ ವಿಷಯದ ಜ್ಞಾನದಲ್ಲಿ ಕೊರತೆ ಇರುತ್ತದೋ ಆಗ ವ್ಯಕ್ತಿಯಲ್ಲಿ ಭಯ ಉತ್ಪನ್ನವಾಗುವುದು ಸಹಜ. ನಿಮ್ಮ ಮೊಬೈಲ್ ಗೆ ಬಂದು ಬಿದ್ದ ವಿಷಯಗಳೆಲ್ಲಾ ನಿಜವೆಂದು ನಂಬಬೇಕೆಂದಿಲ್ಲ. ನಮ್ಮಲ್ಲಿ ಒಂದು ಗಾದೆಯಿದೆ 'ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡು' ಎಂದು. ವಿಷಯ ಯಾವುದೇ ಇರಲಿ ಅರೆಕ್ಷಣ ಅದರ ಬಗ್ಗೆ ವಿವೇಚನೆಯಿಂದ ಪರಾಮರ್ಶಿಸಿ ನೋಡಿದರೆ ನಿಜವೂ ತಿಳಿದೀತು. ಇರಲಿ. ಏನಿದು ಬೇಲ್-ಇನ್? ಇಂದು ಬಹಳ ಚರ್ಚೆಯಲ್ಲಿರುವ FRDI ಎಂದರೇನು? ನಿಜಕ್ಕೂ ಬ್ಯಾಂಕ್ನಲ್ಲಿರುವ ನಮ್ಮ ಹಣವನ್ನ ಬ್ಯಾಂಕ್ ವಾಪಸ್ಸು ಕೊಡದೆ ಹೋಗಬಹುದೇ? ಎನ್ನುವ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ. 
FRDI ಎಂದರೇನು? 
ಫೈನಾನ್ಸಿಯಲ್ ರೆಸೊಲ್ಯೂಷನ್ ಅಂಡ್ ಡೆಪಾಸಿಟ್ ಇನ್ಶೂರೆನ್ಸ್ ಎಂದರ್ಥ. ಇದೊಂದು ಇಡೀ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ದಿವಾಳಿ (ಇನ್ಸಾಲ್ವೇನ್ಸಿ ಆಕ್ಟ್) ಕಾನೂನಿನಲ್ಲಿ ಸಮಗ್ರ ಬದಲಾವಣೆ ತರುವ ಕೇಂದ್ರ ಸರಕಾರದ ಮಹತ್ವದ ಮಸೂದೆಯಲ್ಲಿ ಮಂಡನೆಯಾಗಿರುವ ಒಂದು ಅಂಶ ಅಥವಾ ಬಿಲ್. ನನ್ನ ಹಿಂದಿನ ಲೇಖನದಲ್ಲಿ ಮಲ್ಯನಂತಹ ಸುಸ್ತಿದಾರ ಬ್ಯಾಂಕಿನಿಂದ ಪಡೆದ ಸಾಲದಲ್ಲಿ ಬ್ಯಾಂಕಿನ ಬಾಂಡ್ ಕೊಂಡು ಹೇಗೆ ಮಾಲೀಕನಾಗಬಹದು ಎನ್ನುವುದರ ಬಗ್ಗೆ ಬರೆದಿದ್ದೆ. ವ್ಯವಸ್ಥೆಯಲ್ಲಿದ್ದ ಇಂತಹ ಲೋಪದೋಷಗಳನ್ನ ಸರಿಪಡಿಸಲು ಮತ್ತು ಇನ್ಶೂರೆನ್ಸ್ ಅಲ್ಲದೆ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ ಗಳ ಮೇಲೂ ಹೆಚ್ಚಿನ ನಿಗಾ ಇರಿಸಲು ಕಾನೂನಿನಲ್ಲಿ ಅಮೂಲಾಗ್ರ ಬದಲಾವಣೆ ತರಲು ಇಟ್ಟ ಒಂದು ದಿಟ್ಟ ಹೆಜ್ಜೆ ಇದಾಗಿದೆ. ಇದು ಒಳ್ಳೆಯದಾದರೆ ಸಮಾಜದಲ್ಲಿ ಇದರ ಬಗ್ಗೆ ಏಕಿಷ್ಟು ಭಯ? ಎನ್ನುವ ಪ್ರಶ್ನೆ ಸಹಜವಾಗೇ ಉದ್ಭವವಾಗುತ್ತದೆ. ಈ ಬದಲಾವಣೆ ಇನ್ನೂ ಕರಡು (ಡ್ರಾಫ್ಟ್) ರೂಪದ್ದು ಇದನ್ನ 2017 ರ ಆಗಸ್ಟ್ ತಿಂಗಳಲ್ಲಿ ಪ್ರಥಮ ಬಾರಿ ಮಂಡಿಸಲಾಗಿತ್ತು. ಇದರಲ್ಲಿ ಮೊದಲೇ ಹೇಳಿದಂತೆ ಬ್ಯಾಂಕ್ ಮಾತ್ರವಲ್ಲದೆ ಇನ್ಶೂರೆನ್ಸ್ ಕಂಪನಿಗಳು, ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಾರ್ಪೋರೇಶನ್ ಗಳು ದಿವಾಳಿ ಆದರೆ ಏನು ಮಾಡಬೇಕು ಅಥವಾ ಅವು ದಿವಾಳಿ ಆಗದಂತೆ ಅವುಗಳ ಮೇಲೆ ನಿಗಾ ಇಡುವ ಒಂದು ಸಂಸ್ಥೆಯನ್ನ ಹುಟ್ಟಿಹಾಕುವ ಪ್ರಸ್ತಾವವಿದೆ ಇಂತಹ ಸಂಸ್ಥೆಗೆ 'ರೆಸೊಲ್ಯೂಷನ್ ಕಾರ್ಪೋರೇಶನ್' ಎಂದು ಹೆಸರಿಸುವ ಯೋಚನೆ ಇದೆ. ಈ ಸಂಸ್ಥೆಗೆ ಬ್ಯಾಂಕ್ಗಳು ದಿವಾಳಿ ಆಗುವುದನ್ನ ತಪ್ಪಿಸಲು ಎಲ್ಲಾ ಕ್ರಮವನ್ನ ಕೈಗೊಳ್ಳುವ ಅಧಿಕಾರ ಕೂಡ ನೀಡಲಾಗುತ್ತದೆ. ಗಮನಿಸಿ ಈ ಕರಡು ಮಸೂದೆಯಲ್ಲಿ  ಒಂದು ಸಾಲು 'writing down of the liabilities” ಎಂದು ಹೇಳುತ್ತದೆ. ಅಂದರೆ ಗ್ರಾಹಕರು ಇರಿಸಿರುವ ಡೆಪಾಸಿಟ್ ಬ್ಯಾಂಕಿನ ಪಾಲಿಗೆ ಲಯಬಲಿಟಿ ಆಕಸ್ಮಾತ್ ಬ್ಯಾಂಕ್ ದಿವಾಳಿಯಾದರೆ ಆಗ ಗ್ರಾಹಕನ ಹಣಕ್ಕೆ ಭದ್ರತೆಯಿಲ್ಲ, ಇಟ್ಟ ಹಣವನ್ನ ಕೊಡುವುದಿಲ್ಲ ಎಂದು ಕೆಲವು ಆರ್ಥಿಕ ತಜ್ಞರು ಅರ್ಥೈಸಿಕೊಂಡು ಅದನ್ನ ಬರೆದು ಹಂಚುತ್ತಿದ್ದಾರೆ. ಎಂದಿನಂತೆ 'ನೆಗಟಿವ್' ವಿಷಯಗಳು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ ಈ ವಿಷಯದಲ್ಲೂ ಹೀಗೆ ಆಗಿದೆ. 
ಅದನ್ನ ಹೀಗೂ ಅರ್ಥೈಸಬಹದು, ಯಾವ ಬ್ಯಾಂಕ್ ಸರಿಯಾಗಿ ಕೆಲಸಮಾಡುತ್ತಿಲ್ಲ ಅಥವಾ ಲಾಭದಾಯಕವಲ್ಲ ಅಂತಹ ಬ್ಯಾಂಕಿನ ಲಯಬಲಿಟಿಯನ್ನ ಅಳಿಸಿಹಾಕುವುದು  (“writing down of the liabilities”) ಮತ್ತು ಇನ್ನೊಂದು ಸಶಕ್ತ ಬ್ಯಾಂಕ್ ಅದನ್ನ ಕೊಂಡುಕೊಳ್ಳುವುದು ಅಥವಾ ಸಶಕ್ತ ಬ್ಯಾಂಕಿನಲ್ಲಿ ವಿಲೀನಗೊಳಿಸುವುದು. ಇದು ಹೇಗಾಯಿತೆಂದರೆ ಎಲ್ಲದರಲ್ಲೂ ಕೆಟ್ಟದ್ದನ್ನೇ ನೋಡುವ ಮನಸ್ಸಿನವನು ಬಾಗಿಲು ಅರ್ಧ ಮುಚ್ಚಿದೆ ಅಂದಹಾಗೆ. ಬಾಗಿಲು ಅರ್ಧ ತೆಗೆದಿದೆ ಕೂಡ ಅಲ್ಲವೇ? ನಾವು ತೆಗೆದಿರುವ ಬಾಗಿಲ ಕುರಿತು ಮಾತನಾಡೋಣ. 
ಬೇಲ್-ಇನ್ ಎಂದರೇನು? 
ಬ್ಯಾಂಕ್ಗಳು ಸಂಕಷ್ಟ ಸ್ಥಿತಿಯಲ್ಲಿದ್ದಾಗ ಅವುಗಳಿಗೆ ಮರು ಬಂಡವಾಳ ಬೇಕಾಗುತ್ತದೆ. ಹೀಗೆ ಹಣವನ್ನ ಹೊರಗಿನಿಂದ ತಂದು ಬ್ಯಾಂಕಿನಲ್ಲಿ ಹೂಡಿಕೆ ಮಾಡಿದರೆ ಅದನ್ನ ಬೈಲ್ ಔಟ್ ಅಥವಾ ರಿ ಕ್ಯಾಪಿಟಲೈಸೇಶನ್ ಎನ್ನುತ್ತೇವೆ. ಹಣವನ್ನ ಹೊರಗಿನಿಂದ ತರದೇ ಬ್ಯಾಂಕಿನಲ್ಲಿ ಇದ್ದ ಹಣವನ್ನೇ ಉಪಯೋಗಿಸಿಕೊಂಡು ಬ್ಯಾಂಕು ಸಂಕಷ್ಟದಿಂದ ಪಾರಾಗುವ ಕ್ರಿಯೆಗೆ ಬೇಲ್-ಇನ್ ಎನ್ನುತ್ತಾರೆ. ಉದಾಹರಣೆ ನೋಡಿ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕೋಟಿ ರೂಪಾಯಿ ಇದೆ ಎಂದುಕೊಳ್ಳಿ  ಬೇಲ್-ಇನ್ ಸಂಧರ್ಭದಲ್ಲಿ ಬ್ಯಾಂಕ್ ಈ ಹಣವನ್ನ ನಿಮಗೆ ಕೊಡದೆ ಅದನ್ನ ಐದು ವರ್ಷಕ್ಕೋ ಅಥವಾ ಹತ್ತು ವರ್ಷಕ್ಕೋ ಡೆಪಾಸಿಟ್ ಆಗಿ ಅಥವಾ ಬಾಂಡ್ ಆಗಿ ಮಾರ್ಪಾಡು ಮಾಡುತ್ತದೆ. ಆ ಸದ್ಯಕ್ಕೆ ನಿಮಗೆ ನಿಮ್ಮ ಹಣ ಸಿಗದೇ ಹೋಗಬಹದು. ಇದಕ್ಕೆ ಬೇಲ್-ಇನ್ ಎನ್ನುತ್ತಾರೆ. ಬ್ಯಾಂಕಿನಲಿದ್ದ ಹಣವನ್ನೇ ಬಾಂಡ್ ಅಥವಾ ಡೆಪಾಸಿಟ್ ಆಗಿ ಮಾರ್ಪಡಿಸುವ ಕ್ರಿಯೆಯ ಇಂತಹ ಒಂದು ಸನ್ನಿವೇಶವನ್ನು ಕಣ್ಣಾರೆ ಕಂಡು ಅನುಭವಿಸುವ ಅವಕಾಶ ಕೂಡ ನನ್ನದಾಗಿತ್ತು. ಸ್ಪೇನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ನಿಮಗೆಲ್ಲ ತಿಳಿದ ವಿಷಯ. ಅಲ್ಲಿನ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿದ್ದ ಅರ್ಧ ಹಣವನ್ನ 'ಪ್ರೆಫೆರೆನ್ಸ್ ಕ್ರೆಡಿಟೋರ್' ಎಂದು ವಿಭಾಗಿಸಿ ಆ ಹಣವನ್ನ ಮೂರು ವರ್ಷದ ನಂತರ ಹಿಂತಿರುಗಿಸುವ ಮಾತು ಕೊಟ್ಟಿತ್ತು. ಅಲ್ಲಿನ ಸಾವಿರಾರು ಜನ ಬ್ಯಾಂಕಿನ ಈ ನೀತಿಯನ್ನ ವಿರೋಧಿಸಿ ಬೀದಿಗಿಳಿದ್ದಿದರು. 
ನಿಜಕ್ಕೂ ಬ್ಯಾಂಕ್ನಲ್ಲಿರುವ ನಮ್ಮ ಹಣವನ್ನ ಬ್ಯಾಂಕ್ ವಾಪಸ್ಸು ಕೊಡದೆ ಹೋಗಬಹುದೇ? 
ಕೇಂದ್ರ ಸರಕಾರ ಎರಡು ಲಕ್ಷದ ಹನ್ನೊಂದು ಸಾವಿರ ಕೋಟಿ ರೂಪಾಯಿಯನ್ನ ಹೊರಗಿನಿಂದ ತಂದು ಬ್ಯಾಂಕಿನಲ್ಲಿ ಹೊಸದಾಗಿ ಹೂಡುತ್ತಿದೆ. ಇದು ಬಹಳ ದೊಡ್ಡ ಮೊತ್ತ ಇದೆಷ್ಟು ದೊಡ್ಡ ಮೊತ್ತ ಎನ್ನುವುದನ್ನ ನಾನಿಲ್ಲಿ ಉದಾಹರಣೆಯೊಂದಿಗೆ ಹೇಳಲು ಆಗದು ಅಷ್ಟು ದೊಡ್ಡ ಮೊತ್ತ. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ 'ಬೇಲ್-ಇನ್' ಆಗುವಂತಹ ಪರಿಸ್ಥಿತಿ ಉದ್ಭವಾಗುವುದಿಲ್ಲ.  ಈಗಿರುವ ಕಾನೂನಿನ ಪ್ರಕಾರ ಹಾಗೊಮ್ಮೆ ಬ್ಯಾಂಕ್ ದಿವಾಳಿಯಾದರೆ ನಿಮ್ಮ ಖಾತೆಯಲ್ಲಿ ಎಷ್ಟೇ ಹಣವಿರಲಿ ನಿಮಗೆ ಮರಳಿ ಬರುವ ಗ್ಯಾರಂಟಿ ಹಣ (ಇನ್ಶೂರ್ಡ್ ಹಣ) ಕೇವಲ ಒಂದು ಲಕ್ಷ ರೂಪಾಯಿ. ಅಂದರೆ ನಿಮ್ಮ ಖಾತೆಯಲ್ಲಿ ಕೋಟಿ ಇದ್ದರೂ ಗ್ಯಾರಂಟಿ ಇರುವ ವಿಮೆ ಹಣ ಕೇವಲ ಒಂದು ಲಕ್ಷ ಮಾತ್ರ. ವಸ್ತುಸ್ಥಿತಿ ಹೀಗಿರುವಾಗ ಹೊಸ ಮಸೂದೆ ಬಗ್ಗೆ ಗೊಣಗಲು ಏನಿದೆ? ಹಾಗೆ ನೋಡಲು ಹೋದರೆ 'ರೆಸೊಲ್ಯೂಷನ್ ಕಾರ್ಪೋರೇಶನ್' ಎನ್ನುವ ಸಂಸ್ಥೆ ರಚನೆಯಾದರೆ ಅದು ಬ್ಯಾಂಕ್ಗಳು ದಿವಾಳಿಯಾಗುವುದನ್ನು ತಪ್ಪಿಸಲು ಶ್ರಮಿಸಲಿದೆ ಹೀಗಾಗಿ ಹಿಂದಿಗಿಂತ ನಮ್ಮ ಹಣ ಬ್ಯಾಂಕಿನಲ್ಲಿ ಸುರಕ್ಷಿತವಾಗಿರಲಿದೆ. 
ಕೊನೆ ಮಾತು:  ಬೇಲ್-ಇನ್ ಅನ್ನುವುದು ಕಟ್ಟ ಕಡೆಯ ಅಸ್ತ್ರ. ಸದ್ಯದ ಮಟ್ಟಿಗೆ ಇದು ಭಾರತದಲ್ಲಿ ಆಗುವ ಯಾವುದೇ ಸೂಚನೆಯಿಲ್ಲ. 2.11 ಟ್ರಿಲಿಯನ್ ರೂಪಾಯಿಯನ್ನ ಹೊಸದಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಹರಿಬಿಡಲಾಗಿದೆ. ನನ್ನ ಕಣ್ಣ ಮುಂದೆ ಸ್ಪೇನ್ ದೇಶದಲ್ಲಿ ಕೆಲವೊಂದು ಬ್ಯಾಂಕ್ಗಳು ಬೇಲ್-ಇನ್ ಮಾಡಿದ್ದವು ಅಲ್ಲಿಯೂ ಎಲ್ಲಾ ಬ್ಯಾಂಕ್ ನಲ್ಲಿ ಹೀಗಾಗಿರಲಿಲ್ಲ. ಹಿಂದಿನ ಕಾನೂನಿಗಿಂತ ಈಗ ಮಂಡಿಸಿರುವ ಮಸೂದೆ ಹೆಚ್ಚು ನಮ್ಮ ಹಿತವನ್ನ ರಕ್ಷಣೆಮಾಡಲಿದೆ. ವ್ಯವಸ್ಥೆಯಲ್ಲಿ ನಂಬಿಕೆ ಇರಲಿ. ಸಂಶಯ ಬೇಡ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.