ಶಂಕರನ ತಲೆ ತಾಡಿಸಿದ ಗಂಗಾ ದೇವಿ
ನಾನಾಕೆಯನ್ನು ನನ್ನ ಶಿರದಲ್ಲಿ ತಡೆ ಹಿಡಿಯುವೆ. "ಹೀಗೆ ಹೇಳಿದ ರುದ್ರ, ತನ್ನೆರಡು ಕಾಲುಗಳನ್ನಗಲಿಸಿ ಭದ್ರವಾಗಿ ನಿಂತು, ಕೈಗಳಲ್ಲಿದ್ದ ತ್ರಿಶೂಲ-ಡಮರುಗಳು ಮಾಯವಾಗುತ್ತಿದ್ದಂತೆಯೇ, ಕೈಗಳನ್ನು ಸೊಂಟದ...

Published On :
ಮತ್ತೆ ತಪ; ಮತ್ತೆ ಕಾತುರ; ಮತ್ತೆ ನಿರೀಕ್ಷಣೆ; ಮತ್ತೆ ಸಹನೆ. ಈ ಭಾವ ತೊರೆಗಳು ಒಂದರಮೇಲೊಂದೊಂದು. ಒಂದೆರಡು ದಿನಗಳೇ, ತಿಂಗಳುಗಳೇ? "ಏನೇ ಆಗಲಿ ಗಂಗೆಯನ್ನೊಯ್ಯಲೇ ಬೇಕು ತನ್ನ ರಾಜ್ಯಕ್ಕೆ. ಜನರ ಕಷ್ಟ ನಿವಾರಣೆಯಾಗಲೇ ಬೇಕು. ತನ್ನ ಇಡೀ ಆಯುಷ್ಯ ಇಲ್ಲೇ ಕಳೆದು ಹೋದರೂ ಚಿಂತಿಲ್ಲ!
ತಾನು ಮುದುಕನಾಗುವುದರೊಳಗಾದರೂ ಗಂಗೆ, ಸ್ವರ್ಗದಿಂದ ಧುಮುಕಿ ಬರಲೇ ಬೇಕು. ಆಕೆ ಹರಿದು ಜನರು ಸಂತುಷ್ಟರಾಗಲೇ ಬೇಕು. "ಇದು ಸದಾ ಭಗೀರಥನ ಮನದಲ್ಲಿ ಸ್ಥಿರವಾಗಿ ಮತ್ತೆ-ಮತ್ತೆ ಬೆಳಗುತ್ತಿದ್ದ ಚಿಂತನೆ. ಇತ್ತೀಚೆಗೆ ಆತ ಹಗಲು-ರಾತ್ರಿಗಳೆನ್ನದೇ ಧ್ಯಾನ ನಿರತ. ಸದಾ ಶಿವಚಿಂತನೆ; ಸದಾ ರುದ್ರರೂಪಧಾರಣ; ಸದಾ ಶಂಕರಧ್ಯಾನ. ಭಕ್ತರನ್ನು ಬೇಗ ಉದ್ಧರಿಸುವನೆಂಬ ಪ್ರತೀತಿ ಈಶ್ವರನಿಗೆ. ಶಿವನೇ ತನಗೆ ದಾರಿ ತೋರಿಸಬೇಕು. ಹಾಗೆ ಈಶ್ವರನನ್ನೇ ಕುರಿತು ತಪ ಮಾಡುತ್ತಿರುವುದಕ್ಕೂ ಮತ್ತೊಂದು ಬಲವಾದ ಕಾರಣವಿದೆ. ಹಿಮವಂತನಿಗೆ ಇಬ್ಬರು ಮಕ್ಕಳು. ಒಬ್ಬಳು ಹೈಮವತಿ, ಅಥವ ಉಮೆ. ಮತ್ತೊಬ್ಬಳೇ ಗಂಗೆ. ಅಕ್ಕನಾದ ಗಂಗೆಯನ್ನು ಸ್ವರ್ಗಕ್ಕೆ ಕರೆದೊಯ್ದಿದ್ದರು ದೇವತೆಗಳು. ತಂಗಿಯಾದ ಉಮೆ ತಪಿಸಿ ತಪಿಸಿ ಶಿವನನ್ನು ಒಲಿಸಿದ್ದಳು. ಎಂದರೆ, ತಂಗಿಯ ಗಂಡನಾದ ಶಿವ ಒಲಿದರೆ, ಕರೆದರೆ, ಗಂಗೆ ಮೃದುವಾಗಬಹುದೆಂಬುದು ಭಗೀರಥನ ಲೆಕ್ಕಾಚಾರ.
ಇದ್ದಕ್ಕಿದ್ದಂತೇ ಒಂದು ಶುಭ ಮುಹೂರ್ತ. ಭಗೀರಥನ ಮುಂದೆ ಭೂ-ಗಗನದೆತ್ತರಕ್ಕೆ ಹಬ್ಬಿ ನಿಂತ ತೇಜೋಮೂರ್ತಿ! ವ್ಯಾಘ್ರ ಚರ್ಮವನ್ನು ಸೊಂಟಕ್ಕೆ ಸುತ್ತಿರುವ ಶಿವಶಂಕರ!! ಬಲದ ಕೈಯ್ಯಲ್ಲಿ ತ್ರಿಶೂಲ, ಎಡದ ಕೈಯ್ಯಲ್ಲಿ ಡಮರುಗ. ಮೈತುಂಬ ತ್ರಿಪುಂಡ್ರಗಳ ಸಾಲು-ಸಾಲು. ಕಟಿ, ಕಂಠ, ಕರಗಳಲ್ಲೆಲ್ಲ ಸುತ್ತಿದ ಹಾವುಗಳು;ಸರ್ಪಗಳು;ನಾಗರಗಳು.
ಹಸನ್ಮುಖ; ಶಾಂತಮುಖ; ಗಭೀರಮುಖ; ಸುಂದರ ಮುಖ. ತಲೆಯ ಮೇಲೆ ಜಟೆ! ಅದೇ ಕಿರೀಟವಿದ್ದಂತೆ. ಬೇರೆಯ ದೇವತೆಗಳಿಗೆ ಚಿನ್ನದ ಕಿರೀಟವಿದ್ದರೆ ಈತನಿಗೆ ತಲೆಕೂದಲುಗಳೇ ಕಿರೀಟ. (ಈ ದೇವನನ್ನನುಕರಿಸಿಯೇ ಋಷಿ-ಮುನಿಗಳೂ ತಮ್ಮ ತಲೆಗೂದಲುಗಳನ್ನು ಗೋಪುರಾಕಾರದಲ್ಲಿ ಮೇಲೆ ಕಟ್ಟುವುದು!!) ಎಷ್ಟೋ ದೂರವಿದ್ದರೂ ಹತ್ತಿರವಿದ್ದಂತೆಯೇ ಕಾಣುವ ಕೌತುಕ. ಭಗೀರಥ ಬಾಯಿ ಬಿಡುವ ಮುನ್ನವೇ ಶಂಕರನೆಂದ, ಅತ್ಯಂತ ಮೃದುವಾದ ಕರುಣಾ ಧ್ವನಿಯಲ್ಲಿ; "ಭಗೀರಥ, ನಿನ್ನ ಪ್ರಜಾ ವಾತ್ಸಲ್ಯ ಪ್ರಶಂಸನೀಯ. ನಾನು ಸಂತುಷ್ಟನಾಗಿದ್ದೇನೆ. ಗಂಗೆಯನ್ನು ಭೂಮಿಗಿಳಿಸುವ ನಿನ್ನ ಪ್ರಯತ್ನ ನಿಜವಾಗಲಿ. ಹೇಳು. ನಾನೇನು ಮಾಡಬೇಕು?"
ಹಿಮಾಲಯದಲ್ಲಿದ್ದರೂ ಶಂಕರನನ್ನು ನೋಡಿ ಹೆದರಿಕೆಯಿಂದಲೋ, ಸಂತೋಷದಿಂದಲೋ ಬೆದರಿ ಹೋಗಿ ಬೆವರಿದ್ದ ಭಗೀರಥ ತೊದಲುತ್ತ ನುಡಿದ; "ಮಹಾಸ್ವಾಮಿ, ನಾನು ಕೃತಾರ್ಥನಾದೆ. ಗಂಗೆಯ ಪ್ರವಾಹದ ಹೊಡೆತವನ್ನು ಈ ಭೂಮಿ ಧರಿಸಲಾಗದೆಂದೂ ಆಕೆಯನ್ನು ಯಾರಾದರೂ ತಡೆದು, ನಿಧಾನವಾಗಿ ಭೂಮಿಗೆ ಇಳಿಸಬೇಕೆಂದೂ ಆಕೆ ಕೇಳಿದ್ದಾಳೆ. ತಾವು ದಯಮಾಡಿ ಮುಂದಿನದನ್ನು ಹೇಳಬೇಕು" .ಮುಂದೇನಾಗುವುದೋ ಎಂದು ತಿಳಿಯದ ಭಗೀರಥ ತನಗಿರುವ ಸಮಸ್ಯೆಯನ್ನು ಮುಂದಿಟ್ಟ.
ಕ್ಷಣ ಕಾಲ ಯೋಚಿಸಿದ ಈಶ್ವರ ಹೇಳಿದ, "ಕರೆ ಗಂಗೆಯನ್ನು! ನಾನಾಕೆಯನ್ನು ನನ್ನ ಶಿರದಲ್ಲಿ ತಡೆ ಹಿಡಿಯುವೆ. "ಹೀಗೆ ಹೇಳಿದ ರುದ್ರ, ತನ್ನೆರಡು ಕಾಲುಗಳನ್ನಗಲಿಸಿ ಭದ್ರವಾಗಿ ನಿಂತು, ಕೈಗಳಲ್ಲಿದ್ದ ತ್ರಿಶೂಲ-ಡಮರುಗಳು ಮಾಯವಾಗುತ್ತಿದ್ದಂತೆಯೇ, ಕೈಗಳನ್ನು ಸೊಂಟದ ಮೇಲಿಟ್ಟು, ತಲೆಯನ್ನೊಮ್ಮೆ ಕೊಡವಿದ. ಕಟ್ಟಿದ್ದ ಶಿಖೆ ಬಿಚ್ಚಿತು, ಶಿಖರ ವಿಸ್ತರಿಸಿತು, ಕೇಶಗಳು ಬೆಳೆಯತೊಡಗಿದುವು. ಸುತ್ತಲೂ ಕೂದಲುಗಳ ತಟ್ಟೆಯೊಂದು ಸಿದ್ಧವಾಯಿತು. ಸಿದ್ಧವಾದಂತೆ; ಆ ತಟ್ಟೆ ಅಗಲವಾಗುತ್ತಿರುವಂತೆ; ಬೆಳೆಯುತ್ತಿರುವಂತೆ; ದಿಕ್ಕುಗಳಿಗೆ ವ್ಯಾಪಿಸುತ್ತಿರುವಂತೆ; ಕಪ್ಪಗಿನ ಕೂದಲುಗಳ ತಟ್ಟೆಯೊಂದು ಬಾಣಲೆಯಾಗಿ ಪರಿವರ್ತಿತವಾಗುತ್ತಿದ್ದಂತೆ, ಭಗೀರಥನಿಗೆ ಅಯೋಮಯ!!!! "ಗಂಗೆ, ಬಾರಮ್ಮ! ಮಾತು ಕೊಟ್ಟಿದ್ದಂತೆ ಬಾರಮ್ಮ. ನಿನ್ನ ವೇಗ ತಡೆಯುವಲು ಶಿವನೇ ಸಿದ್ಧನಾಗಿ ನಿನ್ನ ರಭಸಕ್ಕೆ ತನ್ನ ತಲೆಯನ್ನೇ ಒಡ್ಡಿದ್ದಾನೆ ಬಾರಮ್ಮ! ಈಶ್ವರನ ಶಿರೋ ನಿಲ್ದಾಣದಲ್ಲಿಳಿದು ನಿಧಾನವಾಗಿ ಧುಮ್ಮಿಕ್ಕಮ್ಮ, ಧರಣಿಗೆ. ಬಾ ತಾಯಿ, ಬಾ!"
ಶಿವನ ತಲೆಯ ಮೇಲೆ ಬಿಳಿ-ಬಿಳಿ ಸೀರೆಯುಟ್ಟ ಗಂಗೆ; ತೇಜಸ್ವೀ ಗಂಗೆ ಪ್ರತ್ಯಕ್ಷ. "ನನ್ನ ಪೂರ್ಣ ರಭಸ ಬೇಡ, ನೂರರಲ್ಲೊಂದು ಭಾಗದ ಜಲಪಾತವನ್ನು, ಜಲ ಧಾರೆಯನ್ನು ತಡೆಯುವನೋ ಶಿವ? ತಂಗಿಯ ಕೈಹಿಡಿದು ಉಮಾಪತಿಯಾದಷ್ಟು ಸುಲಭವೆಂದುಕೊಂಡನೋ ಶಂಕರ? "ಕೊಂಚ ಜಂಭ, ಕೊಂಚ ತಿರಸ್ಕಾರ, ಕೊಂಚ ಅಸಡ್ಡೆ, ಕೊಂಚ ಕೊಂಕು, ಕೊಂಚ ಕೌತುಕಗಳು ಬೆರೆತು ಕೆಣಕುವಿಕೆಯಿಂದ ಧುಮ್ಮಿಕ್ಕಿ ತಾಡಿಸಿದಳು ಶಿವಶಿರವನ್ನು ಗಂಗೆ.
ಶಿವಶಿರ ಕೇಶ ಪಾಶ ವೃದ್ಧಿಸಿತು
ದಿಗ್ದಿಗಂತಗಳ ಅಂಚಿಗೆ ಓಡಿತು
ಕೂದಲುಗಳ ಬಹು ಬಿಗಿ ಬಲೆ ಹಬ್ಬಿತು
ರಂಧ್ರರಹಿತ ರೋಮದ ತೆರೆಯಾಯಿತು
ತೆಂಗಿನ ಕಾಂಡದ ದಪ್ಪ ರೋಮಗಳು
ಜಡೆಯನು ಹೆಣೆಯುತ ಜೋಡಿಸಿ ನಿಂದುವು
ಜಡೆಗಳ ಜಡೆಗಳು ಗಗನವ ತುಂಬುತ
ತಿಮಿರ ಕೃಷ್ಣ ಕರಿ ಸೀರೆಯ ನೇದಿತು
ಕೇಶ ಪಾಶ ವಿಸ್ತರಿಸಿತು ಗಗನಕೆ
ಕರ್ಮೋಡಗಳಂದದಿ ಹಬ್ಬಿತು ಜಟೆ
ಗ್ರಹ ತಾರೆಗಳೆಲ್ಲಾ ಮರೆಯಾದುವು
ಸೂರ್ಯ ಕಿರಣಗಳು ಕಾಣದೆ ಹೋದುವು
ಗಗನ ಭೂಮಿಗಳ ಮಧ್ಯದಿ ನಿಂತಿತು
ರವಿ ಜಲ ನಡುವಂತರ್ಪಟವಾಯಿತು
ಬೆಳಕೆಂಬುದೆ ಜಗಕಿಲ್ಲವಾಯಿತು
ಜೀವ ಜಂತುಗಳು ದಿಗಿಲು ಬಿದ್ದುವು
ಜಲ ಚರಗಳ ಓಡಾಟವು ನಿಂತಿತು
ಗಗನಗಾಮಿಗಳ ಗತಿ ಬಂಧಿಸಿತು
ಜನರಿಗೆ ದಿಕ್ಕುಗಳರಿವೇ ಹೋಯಿತು
ಹಕ್ಕಿ ಪಕ್ಷಿಗಳ ಕಣ್ಣು ಕಟ್ಟಿತು
ಗೂಬೆ ಪಿಶಾಚಗಳೆಚ್ಚರಗೊಂಡವು
ಭೂತ ಬೇತಾಳ ಕೇಕೆ ಹಾಕಿತು
ದಾನವರಿಗೆ ನಿಶೆ ಸ್ಫೂರ್ತಿ ತುಂಬಿತು
ಕುಕಾರ್ಯಗಳು ಶುರುವಾಯಿತು ಆಗಲೆ
ಗಂಗಾ ಗರ್ವದ ಗತಿ ಬಂಧನವದು
ಗಂಗೆಯ ಸೆರೆಮನೆ ರೋಮ ವ್ಯೂಹ ಅದು
ಗಂಗೆ ಕಾಲ ಕೂದಲ ಬೇಡಿಯೆ ಅದು
ಗಂಗೆಗಂಟಲಿಗೆ ಕೇಶಗಾಳ ಅದು
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
GangaಗಂಗೆLord ShivaDr. Pavagada Prakash Raoರಾಮಾಯಣ ಅವಲೋಕನRamayana Avalokanaಡಾ.ಪಾವಗಡ ಪ್ರಕಾಶ್ ರಾವ್Bhagirathaಭಗೀರಥ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


