ಶಿಕ್ಷಣವನ್ನು ಕೊಂಡುಕೊಳ್ಳುವ ಅಪಾಯಗಳು
ಬಹುತೇಕ ಶಾಲೆಗಳು ಪೋಷಕರ ಪ್ರತಿಷ್ಟೆಯ ಹಾಗೂ ಭ್ರಮೆಗಳ ವೇದಿಕೆಗಳಾಗಿ ಬದಲಾಗಿವೆ. ಇಂತಹ ‘ಬ್ರಾಂಡೆಡ್’ ಶಾಲೆಗಳಲ್ಲಿ ಓದಿದರೆ ಮಾತ್ರವೇ...

ಕಳೆದೊಂದು ದಶಕದಲ್ಲಿ ಕಾಣುತ್ತಿರುವ ಅತ್ಯಂತ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರವೂ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ವಿದ್ಯಾದಾನದಂತಹ ಮಹದೋದ್ದೇಶ ಮುಸುಕಾಗಿ ಹಣ ಗಳಿಸುವ ಮಾಫಿಯಾ ಆಗಿ ಬದಲಾಗಿದೆ. ಇಂತಹ ಮಾಫಿಯಾ ಬೆಳೆಯಲು ಇದಕ್ಕೆ ಸಾಕಷ್ಟು ಕಾರಣಗಳಿದ್ದರೂ ಬಹುಮುಖ್ಯವಾಗಿ ಎದ್ದು ಕಾಣುವುದು ಪೋಷಕರ ಧೋರಣೆ!
ಬಹುತೇಕ ಶಾಲೆಗಳು ಪೋಷಕರ ಪ್ರತಿಷ್ಟೆಯ ಹಾಗೂ ಭ್ರಮೆಗಳ ವೇದಿಕೆಗಳಾಗಿ ಬದಲಾಗಿವೆ. ಇಂತಹ ‘ಬ್ರಾಂಡೆಡ್’ ಶಾಲೆಗಳಲ್ಲಿ ಓದಿದರೆ ಮಾತ್ರವೇ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ. ಎಂಬ ಭ್ರಮೆ ತಂದೆ ತಾಯಿಗಳಲ್ಲಿ ಮನೆ ಮಾಡಿದೆ. ಇಂತಹ ಬ್ರಾಂಡೆಡ್ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಲು ತಂದೆತಾಯಿಗಳು ಹಾತೊರೆಯುತ್ತಾರೆ. ಇದಕ್ಕಾಗಿ ಕೇಳಿದಷ್ಟು ಹಣ ತೆರಲು ತಯಾರಿರುತ್ತಾರೆ.ಕೆಲ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸ್ಥಳೀಯ ಎಮ್ ಎಲ್ ಎ ಗಳ, ಎಂ ಪಿ ಗಳ ಶಿಫಾರಸು ಪತ್ರವನ್ನು ಪಡೆದವರೂ ಇದ್ದಾರೆ. ಆದರೂ ಸಹ ಅಲ್ಲಿ ಪ್ರವೇಶ ಸಿಗುತ್ತದೆಂಬ ಗ್ಯಾರಂಟಿ ಇಲ್ಲ. ಪೋಷಕರ ಇಂತಹ ಧೋರಣೆಯನ್ನು ಶಾಲೆಗಳವರು ನಗದೀಕರಿಸಿಕೊಳ್ಳುತ್ತಾರೆ. ಬೇಕೆಂತಲೇ ಪ್ರವೇಶ ಪಟ್ಟಿಗಳನ್ನು ಹಂತಹಂತವಾಗಿ ಪ್ರಕಟಿಸುತ್ತಾ ಪ್ರವೇಶ ಶುಲ್ಕವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಈ ಮಾಫಿಯಾ ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಪ್ರತೀ ಶಾಲೆಗೂ ಪ್ರವೇಶ ಕೊಡಿಸಲು ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಈ ಮಧ್ಯವರ್ತಿಗಳು ಪ್ರತೀ ವಿದ್ಯಾರ್ಥಿಯಿಂದ ಲಕ್ಷಾಂತರ ರೂಪಾಯಿ ಕಮಿಷನ್ ಪಡೆಯುತ್ತಾರೆ. ನೆನಪಿರಲಿ ಇವೆಲ್ಲ ಅವಾಂತರಗಳು ನಡೆಯುವುದು ಇನ್ನೂ ನರ್ಸರಿ ಮತ್ತು ಪ್ರಿಕೆಜಿ ಪ್ರವೇಶಗಳಲ್ಲಿ!
ಯದ್ಭಾವಂ ತದ್ಭವತಿ ಎಂಬಂತೆ ಯಾವತ್ತಿಗೂ ಯಾವುದೇ ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆಗನುಗುಣವಾಗಿ ನಡೆಯುತ್ತದೆ. ಇದು ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಇತ್ತೀಚಿನ ತಂದೆ ತಾಯಂದಿರ ಕೆಟ್ಟ ಯೋಚನೆಯೆಂದರೆ ಹಣದಿಂದ ಏನನ್ನಾದರೂ ಕೊಂಡು ಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಬಿದ್ದಿರುವುದು! ಪ್ರತಿಷ್ಟಿತ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ಕೊಟ್ಟು ಮಕ್ಕಳನ್ನು ಸೇರಿಸಿಬಿಟ್ಟರೆ ತಮ್ಮ ಕೆಲಸ ಮುಗಿಯಿತು ಎಂದುಕೊಳ್ಳುತ್ತಾರೆ. ಮಕ್ಕಳು ಸರಿಯಾಗಿ ಓದುತ್ತಿವೆಯೆ, ಎಲ್ಲಿ ತೊಂದರೆ ಅನುಭವಿಸುತ್ತಿದೆ. ಯಾವ ವಿಷಯ ಅದಕ್ಕೆ ಕಷ್ಟ ಎನಿಸುತ್ತಿದೆ ಎಂದು ತಿಳಿಯುವ ಪ್ರಯತ್ನವನ್ನೂ ಮಾಡುವುದಿಲ್ಲ. ತಂದೆ ತಾಯಿ ಇಬ್ಬರೂ ದುಡಿಯುವವರಾದುದರಿಂದ ಸಂಜೆ ಬಂದು ಮಗುವನ್ನು ವಿಚಾರಿಸಿಕೊಳ್ಳುವ ವ್ಯವಧಾನ ಇರದಷ್ಟೂ ಬಳಲಿರುತ್ತಾರೆ. ಮನೆಗೆ ಬಂದ ಕೂಡಲೇ ಟಿವಿಯನತಹ ಮನರಂಜನೆ ಮಾಧ್ಯಮಕ್ಕೋ ಅಥವಾ ಮತ್ತೆ ತಮ್ಮ ಆಫೀಸು ಕೆಲಸಕ್ಕೋ ಅಂಟಿಕೊಂಡು ಬಿಡುತ್ತಾರೆ. ತಿಂಗಳಿಗೊಮ್ಮೆ ನಡೆಯುವ ಪೋಷಕರ ಸಭೆಗಳಿಗೆ ಹೋಗಿ ತಮ್ಮ ಮಗು ಓದಿನಲ್ಲಿ ಹಿಂದಿದೆ ಎಂದು ತಿಳಿದ ಕೂಡಲೇ ಸಂಜೆ ಹೊತ್ತು ಮನೆಪಾಠಕ್ಕೆ ಕಳಿಸುತ್ತಾರೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಮನೆ ಪಾಠಗಳಿಗಾಗಿ ಮತ್ತೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ಹೆಚ್ಚು ಹಣ ವ್ಯಯಿಸಿಬಿಟ್ಟರೆ ತಮ್ಮ ಮಗು ಉದ್ಧಾರವಾಗಿಬಿಡುತ್ತದೆ ಎಂದು ಭ್ರಮಾಧೀನರಾಗುತ್ತಾರೆ. ಹೀಗೆ ಎಲ್ಲೆಡೆ ಖರ್ಚು ಮಾಡಿ ಮಕ್ಕಳಿಗಾಗಿ ಶಿಕ್ಷಣವನ್ನು ಖರೀದಿಸಿ ಬಿಡುತ್ತೇವೆ ಎಂದು ಬೀಗುತ್ತಾರೆ.
ತಮ್ಮ ಇಂತಹದೊಂದು ಅಪಾಯಕಾರಿ ಮನೋಭಾವ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುತ್ತಿದೆ ಎಂಬುದನ್ನು ಅವರು ಅರಿಯುವುದೇ ಇಲ್ಲ. ಯಾವ ತಂದೆತಾಯಿಗಳೂ ತಮ್ಮ ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಎಲ್ಲಾ ತಂದೆತಾಯಂದಿರು ಕಷ್ಟಪಡುವುದೇ ತಮ್ಮ ಮಕ್ಕಳ ಏಳಿಗೆಗಾಗಿ. ಒಳ್ಳೆಯ ಶಾಲೆಗಳಿಗೆ ಸೇರಿಸುವ ಅವರ ಉದ್ದೇಶ ಒಳ್ಳೆಯದಾದರೂ ಅದು ನಿರೀಕ್ಷಿತ ಪರಿಣಾಮ ಬೀರಲಿಲ್ಲವಾದರೆ ಹಣ ಖರ್ಚು ಮಾಡಿ ಏನು ಪ್ರಯೋಜನ? ಎಂತಹ ಶಾಲೆಯಾದರೂ ಪೋಷಕರು ಮಕ್ಕಳೊಡನೆ ಸಮಯ ಕಳೆಯುವುದು ಅವಶ್ಯಕ. ಮಕ್ಕಳ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಎಷ್ಟು ಇರುತ್ತದೋ ಅದಕ್ಕೂ ಹೆಚ್ಚು ತಂದೆತಾಯಿಯರದು ಇರುತ್ತದೆ. ತಾಯಿಯ ಮಡಿಲಲ್ಲಿ ಮಕ್ಕಳು ಸುರಕ್ಷಿತ ಭಾವನೆ ತಳೆಯುವಷ್ಟು ಬೇರೆಡೆ ತಳೆಯಲಾರವು. ಇಂತಹ ಸುರಕ್ಷಿತ ಭಾವನೆಗಿಂತ ಒಳ್ಳೆಯ ಕಲಿಯುವ ವಾತಾವರಣ ಎಲ್ಲೂ ಇರಲು ಸಾಧ್ಯವಿಲ್ಲ! ಕಲಿಕೆ ಎಂದರೆ ಕೇವಲ ಪಠ್ಯದಲ್ಲಿರುವ ಪಾಠಗಳನ್ನು ಕಲಿಯುವುದಲ್ಲ. ಜೀವನದ ಪಾಠವನ್ನು ತಂದೆತಾಯಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಲಿಸಲು ಸಾಧ್ಯವಿಲ್ಲ. ತಂದೆ ತಾಯಿಗಳಿಗಿಂದ ಮಾನಸಿಕವಾಗಿ ದೂರ ಇರುವ ಮಕ್ಕಳು ಖಿನ್ನತೆಗೆ ಒಳಗಾಗುತ್ತವೆ. ಹಠಮಾರಿತನವನ್ನು ಕಲಿಯುತ್ತವೆ. ಮಕ್ಕಳ ಹಠವನ್ನು ಮಣಿಸಲು ಪೋಷಕರು ಮತ್ತೆ ಹಣ ಖರ್ಚು ಮಾಡುತ್ತಾರೆ. ಡೇಕೇರ್ ಗಳಿಗೋ ಆಟದ ಕ್ಲಬ್ಬುಗಳಿಗೋ ಸೇರಿಸುತ್ತಾರೆ. ಈ ಮೂಲಕ ಮತ್ತೆ ಮಕ್ಕಳಿಂದ ದೂರವಾಗುತ್ತಾರೆ. ಹೀಗೆ ತಂದೆ ತಾಯಿಗಳಿಂದ ದೂರವಾದ ಮಕ್ಕಳು ಮಕ್ಕಳು ಮತ್ತೆ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯ ಅನುಭವಿಸುತ್ತವೆ. ಹೀಗೆ ವಿಷವರ್ತುಲ ಮುಂದುವರಿಯುತ್ತದೆ! ಎಂತಹ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದೇವೆ ಎನ್ನುವುದಕ್ಕಿಂತ ಮಕ್ಕಳ ಕಲಿಕೆಗೆ ಎಂತಹ ವಾತಾವರಣವನ್ನು ಸೃಷ್ಟಿಸಿದ್ದೇವೆ ಎನ್ನುವುದು ಮುಖ್ಯ!
-ಸಿಂಧು
ಮುಂದಿನ ವಾರ: ಮಕ್ಕಳ ಓದಿಗೆ ಮನೆಯ ವಾತಾವರಣ ಹೇಗಿರಬೇಕು?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


