ಇಂಗ್ಲೀಷ್ ಮಾಧ್ಯಮದ ಬಿಸಿಲ್ಗುದುರೆ ಮತ್ತು ತಾಯ್ನುಡಿಯ ಕೀಳರಿಮೆ
ಕೆಲವೊಮ್ಮೆ ಈ ರೀತಿಯ ಅಜ್ಞಾನದ ಬಗ್ಗೆ ಕೋಪವೂ, ಅಸಹನೆಯೂ, ನಗುವೂ, ಕರುಣೆಯೂ ಒಟ್ಟಿಗೇ ಸೇರಿದ ಮಿಶ್ರಭಾವವಾಗಿ ನನ್ನಂತಹ ಶಿಕ್ಷಕರನ್ನು...

ಕೆಲವೊಮ್ಮೆ ಈ ರೀತಿಯ ಅಜ್ಞಾನದ ಬಗ್ಗೆ ಕೋಪವೂ, ಅಸಹನೆಯೂ, ನಗುವೂ, ಕರುಣೆಯೂ ಒಟ್ಟಿಗೇ ಸೇರಿದ ಮಿಶ್ರಭಾವವಾಗಿ ನನ್ನಂತಹ ಶಿಕ್ಷಕರನ್ನು ಅಪ್ಪಳಿಸುವುದುಂಟು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪಾಠ ಮಾಡುವಾಗ ಶಿಕ್ಷಕರಿಗೆ ಇಂಗ್ಲೀಷ್ ಹೊರತು ಪಡಿಸಿ ಬೇರೆ ನುಡಿಯ ಒಂದೇ ಒಂದು ಪದವನ್ನೂ ಬಳಸುವ ಅನುಮತಿ ಸಿಗುವುದಿಲ್ಲ. ಇದು ಶಿಕ್ಷಣ ಸಂಸ್ಥೆಗಳು ಮಾಡುವ ಕಡ್ಡಾಯ ನಿಯಮವಲ್ಲ. ಬದಲಾಗಿ ಪೋಷಕರ ಮತ್ತು ವಿದ್ಯಾರ್ಥಿಗಳ ಒತ್ತಾಯ! ಹೈಸ್ಕೂಲ್ ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳಿಗೆ ಪಾಠ ಮಾಡುವಾಗ ಒಮ್ಮೊಮ್ಮೆ ವಿದ್ಯಾರ್ಥಿಗಳು ಲೆಕ್ಕಗಳನ್ನು ತಪ್ಪು ಮಾಡುವುದು, ಗಲಾಟೆ ಮಾಡುವುದು ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಒಂದೆರಡು ಮಾತು ಬೈಯುವ ಅನಿವಾರ್ಯತೆಯಿರುತ್ತದೆ. ಕನ್ನಡದಲ್ಲಿ ಬೈದರೆ ವಿದ್ಯಾರ್ಥಿಗಳು "ಮೇಡಮ್ ನೀವು ಬೈದಿದ್ದು ಅರ್ಥವಾಗಲಿಲ್ಲ. ದಯವಿಟ್ಟು ಇಂಗ್ಲೀಷಿನಲ್ಲಿ ಬೈಯಿರಿ" ಎಂದು ವಿಧೇಯರಾಗಿ ವಿನಂತಿಸುತ್ತಾರೆ. ಆ ಮಾತು ನಮ್ಮ ಸಿಟ್ಟನ್ನು ಹೆಚ್ಚಿಸಿ ಇನ್ನೊಂದೆರಡು ಮಾತು ಹೆಚ್ಚು (ಕನ್ನಡದಲ್ಲೇ) ಬೈಯಲು ಪ್ರೇರೇಪಿಸುತ್ತದೆ. ಮರುದಿನ ಅವರ ಪೋಷಕರು ಬರುತ್ತಾರೆ. "ಮೇಡಮ್ ನಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ಎಂದೇ ಬೈಯುತ್ತೀರಿ ಎಂದು ಗೊತ್ತು. ಆದರೆ ಕನ್ನಡದ ಬದಲು ಇಂಗ್ಲೀಷಿನಲ್ಲಿ ಬೈದರೆ ಅರ್ಥಮಾಡಿಕೊಂಡು ತಿದ್ದಿಕೊಳ್ಳುತ್ತಾರೆ" ಎಂದು ಕೇಳಿಕೊಳ್ಳುತ್ತಾರೆ.
ಒಂದು ಕಡೆ ಅವರಿಗೆ ತಾಯಿನುಡಿಯ ಬಗ್ಗೆ ಅಸಡ್ಡೆ ಮತ್ತು ಕೀಳರಿಮೆಯ ಬಗ್ಗೆ ಅಸಹನೆ ಹುಟ್ಟಿಕೊಂಡರೆ ಮತ್ತೊಂದು ಕಡೆ ತಮ್ಮ ಸುತ್ತಲಿನ ಸಮಾಜದ ಒತ್ತಡಕ್ಕೊಳಗಾಗಿ ಮಕ್ಕಳಿಗೆ ಇಂಗ್ಲೀಷನ್ನು ಹೇರಿ ಅನ್ಯಾಯವಾಗಿ ಅವರನ್ನು ತಾಯ್ನುಡಿಯ ಸೊಗಡಿನಿಂದ ದೂರ ಇರಿಸಿದ ಬಗ್ಗೆ ಕೋಪವೂ ಬರುತ್ತದೆ. ಇದು ಪೋಷಕರ ಅಸಹಾಯಕತೆಯ ಮತ್ತೊಂದು ಮಜಲು. ವಿಶ್ವದಲ್ಲಿ ಎಲ್ಲೆಡೆ ಸಲ್ಲಬೇಕಾದರೆ ಇಂಗ್ಲೀಷ್ ನಲ್ಲಿ ಕಲಿಯುವುದು ಅನಿವಾರ್ಯ. ತಾಯ್ನುಡಿಯಲ್ಲಿ ಕಲಿತರೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬ ಮೂಢ ನಂಬಿಕೆಗಳು ಅದೆಷ್ಟು ಬೇರೂರಿವೆಯೆಂದರೆ ತಮ್ಮ ಮಕ್ಕಳೊಡನೆ ಮನೆಯಲ್ಲಿಯೂ ಸಹ ಇಂಗ್ಲೀಷ್ ನಲ್ಲಿಯೇ ಮಾತನಾಡುತ್ತಾರೆ. ಇಂಗ್ಲೀಷ್ ಬಾರದ ಅಜ್ಜ ಅಜ್ಜಿಯರು ಮನೆಯೊಳಗಿದ್ದರೆ ಅವರು ಮೊಮ್ಮಕ್ಕಳಿಂದ ಭಾಷೆಯ ಕಾರಣಕ್ಕಾಗಿ ಅನಿವಾರ್ಯವಾಗಿ ಮಾನಸಿಕ ಅಂತರವನ್ನು ಎದುರಿಸಬೇಕಾಗುತ್ತದೆ.
ಸಂವಹನದ ಭಾಷೆಯಾಗಿ ಇಂಗ್ಲೀಷ್ ಅನ್ನು ಕಲಿಯುವುದು ಅಂತಹ ದೊಡ್ಡ ತೊಂದರೆಯೇನಲ್ಲ. ನಿಜ ಹೇಳಬೇಕೆಂದರೆ ಜಗತ್ತಿನ ಸಾಕಷ್ಟು ವಿಜ್ಞಾನಿಗಳಿ ಮತ್ತು ಯಶಸ್ವಿ ತಂತ್ರಜ್ಞರು ತಾಯ್ನುಡಿಯಲ್ಲಿಯೇ ಶಿಕ್ಷಣವನ್ನು ಪಡೆದಿದ್ದಾರೆ. ಸ್ವೀಡನ್ ನಲ್ಲಿ ತಾಯ್ನುಡಿಯ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೆಂದರೆ ವಿದ್ಯಾರ್ಥಿಯು ಬೇರೆ ದೇಶದವನಾಗಿದ್ದರೆ ಆ ವಿದ್ಯಾರ್ಥಿಯ ದೇಶದಿಂದ ಮಾತೃಭಾಷೆಯ ಶಿಕ್ಷಕರನ್ನು ಆಮದು ಮಾಡಿಕೊಂಡು ಶಿಕ್ಷಣವನ್ನು ಒದಗಿಸಲಾಗುತ್ತದೆ! ಜಪಾನ್ ಮತ್ತು ಯುರೋಪಿನ ಎಲ್ಲ ಮುಂದುವರಿದ ದೇಶಗಳಲ್ಲೂ ಮಾತೃಭಾಷೆಯೇ ಶಿಕ್ಷಣ ಮಾದ್ಯಮವಾಗಿರುತ್ತದೆ. ತಾಯ್ನುಡಿಯಲ್ಲಿ ಶಿಕ್ಷಣ ನೀಡುವುದರಿಂದ ವಿದ್ಯಾಸಂಪಾದನೆ ಬಹಳ ಸುಲಭವಾಗುತ್ತದೆ ಎಂದು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಕೆಲ ರಾಷ್ಟ್ರಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತಾಯ್ನುಡಿಯ ಶಿಕ್ಷಣವನ್ನು ಪರಿಚಯಿಸಿದ ನಂತರ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದಲ್ಲಿ ಸಾಕಷ್ಟು ಏಳಿಗೆಯಾಗಿದೆ. ತಾಯ್ನುಡಿಯ ಶಿಕ್ಷಣದ ರಾಷ್ಟ್ರೀಯ ವೆಚ್ಚ ಇಂಗ್ಲೀಷ್ ಶಿಕ್ಷಣಕ್ಕಿಂತ ಕಡಿಮೆ ಇರುತ್ತದೆ ಎಂದು ಹಣಕಾಸು ತಜ್ಞರು ಅಭಿಪ್ರಾಯ ಪಡುತ್ತಾರೆ.
ಮಕ್ಕಳು ಮೊದಲು ಯಾವ ನುಡಿಗೆ ಹೊಂದಿಕೊಳ್ಳುತ್ತಾರೋ ಆ ನುಡಿಯಲ್ಲಿಯೇ ಅವರ ಯೋಚನಾ ಲಹರಿ ಇರುತ್ತದೆ. ಯೋಚನಾ ಲಹರಿಯ ನುಡಿಯನ್ನು ಬದಲಿಸುವುದು ಯಾವತ್ತಿಗೂ ಅಪಾಯಕಾರಿ. ಬಹುತೇಕ ಸಮಯದಲ್ಲಿ ಸುತ್ತಮುತ್ತಲಿನ ಸಮಾಜದ ನುಡಿಯೇ ಯೋಚನಾಲಹರಿಯ ಮಾಧ್ಯಮವಾಗಿರುತ್ತದೆ. ಹೀಗಿರುವಾಗ ಕಲಿಕೆಯು ಬೇರೆ ನುಡಿಯಲ್ಲಿದ್ದು ಯೋಚನೆಯು ಮತ್ತೊಂದು ನುಡಿಯಲ್ಲಿದ್ದರೆ ಕಲಿಕೆಯಲ್ಲಿ ತೊಡಕುಗಳುಂಟಾಗುತ್ತವೆ. ಇವು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಅಡ್ಡಿಯಾಗುತ್ತವೆ. ಅಲ್ಲದೇ ನಮ್ಮ ಸಂಸ್ಕೃತಿಯೊಡನೆ ತಳಕು ಹಾಕಿಕೊಂಡಿರುವ ವಿಶಿಷ್ಟವಾದ ಶಬ್ದಕೋಶಗಳು ವಿದ್ಯಾರ್ಥಿಗಳ ಬಾವಕೋಶದೊಡನೆ ಜೋಡಣೆಯೇ ಆಗುವುದಿಲ್ಲ. ಉದಾಹರಣೆಗೆ 'ಪುಣ್ಯ' ಎಂಬುದನ್ನು ಇಂಗ್ಲೀಷಿನಲ್ಲಿ ಹೇಳಿಕೊಡಲಾಗುವುದಿಲ್ಲ. good deed ಎಂಬುದು ಕೇವಲ ಸಮಾನಾರ್ಥಕ ಪದವಾಗಿ ಹೊಗುವುದೇ ಹೊರತು ಆ ಪದದ ಆಳ ಕೇವಲ ಕನ್ನಡ ನುಡಿಯಲ್ಲಿ ಸಂವಹಿಸಿದಾಗ ಮಾತ್ರ ತಿಳಿಯುತ್ತದೆ. ನಮ್ಮ ಹಿರಿಮೆಯ ಅನೇಕ ನಡೆ ನುಡಿಗಳು ಹೀಗೆ ತಾಯ್ನುಡಿಯೊಂದಿಗೆ ತಳಕು ಹಾಕಿಕೊಂಡಿರುತ್ತವೆ.
ಹಾಗೆಯೇ ಕನ್ನಡ ಮಾಧ್ಯಮದಲ್ಲಿ ಓದಿದರೆ ಉನ್ನತ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಮತ್ತು ವಿಶ್ವ ಆಗು ಹೋಗುಗಳೊಡನೆ ಗುರುತಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬುದೂ ಸಹ ತಪ್ಪು ಕಲ್ಪನೆ. ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕರು ದೇಶವಿದೇಶಗಳಲ್ಲಿ ಯಶಸ್ವಿ ತಂತ್ರಜ್ಞರು, ವಿಜ್ಞಾನಿಗಳು, ಪ್ರೊಫೆಸರ್ ಉದ್ಯಮಿಗಳಾಗಿ ವಿಶ್ವಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಕಲಾಂ, ರಾಜಾರಾಮಣ್ಣ ಸೇರಿದಂತೆ ಅನೇಕ ಹಿರಿಯ ವಿಜ್ಞಾನಿಗಳು ತಮ್ಮ ತಾಯಿನುಡಿಯಲ್ಲೇ ಅದರಲ್ಲೂ ಸರಕಾರಿ ಶಾಲೆಗಳಲಗಲಿ ಕಲಿತವರು. ಆಗಿನ ಕಾಲ ಬೇರೆ ಈಗಿನದು ಬೇರೆ ಎಂದು ಮೂಗು ಮುರಿಯುವವರಿದ್ದಾರೆ. ಆದರೆ ಅದೇ ಕ್ಷೇತ್ರದಲ್ಲಿರುವ ನಾನೇ ನೋಡಿರುವ ಪ್ರಕಾರ ಯಾವುದೂ ಬದಲಾಗಿಲ್ಲ. ಪ್ರತಿಭೆಗೆ ಯಾವತ್ತಿಗೂ ಎಲ್ಲೆಲ್ಲಿಯೂ ಬೆಲೆ ಇದ್ದೇ ಇದೆ! ತಾಯ್ನುಡಿಯಲ್ಲಿ ಪ್ರತಿಭೆ ಹೆಚ್ಚು ದೈದೀಪ್ಯಮಾನವಾಗಿ ಬೆಳಗುತ್ತದೆ.
-ಸಿಂಧು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


