ಪ್ರಧಾನಿ ಜತೆಗಿನ ವಿದೇಶ ಪ್ರವಾಸದ ಕಷ್ಟ ಸುಖ!
ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಹದಿನೆಂಟನೆ ಶತಮಾನದ ಐತಿಹಾಸಿಕ...
ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಹದಿನೆಂಟನೆ ಶತಮಾನದ ಐತಿಹಾಸಿಕ ಅರಮನೆಯಲ್ಲಿ ವಿಶ್ವದ ಇಪ್ಪತ್ತು ಬಲಿಷ್ಠ ದೇಶಗಳ ನಾಯಕರು ಸಭೆ ಸೇರಿದ್ದರು. ಜಿ-20 ಎಂದೇ ಪ್ರಸಿದ್ಧವಾಗಿರುವ ಗ್ರುಪ್ ಆಫ್ ಟ್ವೆಂಟಿ ನಾಯಕರ ಶೃಂಗಸಭೆ ಜಾಗತಿಕ ಮನ್ನಣೆ ಪಡೆದುಕೊಂಡಿರುವುದರಿಂದ ಎರಡು ದಿನ (ಸೆಪ್ಟೆಂಬರ್ 5 ಹಾಗೂ 6) ವಿಶ್ವದ ಕಣ್ಣು ಆ ಅರಮನೆಯ ಮೇಲೆ ನೆಟ್ಟಿತ್ತು. ನರಮಾನವರನ್ನು ಬಿಡಿ, ಸೊಳ್ಳೆ, ಇರುವೆ, ಪಕ್ಷಿಗಳೂ ಹತ್ತಿರ ಸುಳಿಯುವಂತಿರಲಿಲ್ಲ. ಅಂಥ ಭದ್ರತೆ!
ಅರಮನೆಯ ಕೆಳಗೆ ಯಾರು ಅಡಗಿ ಕುಳಿತಿದ್ದರೋ ಏನೋ, ಮೇಲೆ ಮಾತ್ರ ನಾಲ್ಕು ಹೆಲಿಕಾಪ್ಟರ್‌ಗಳು ಸುತ್ತುವರಿಯುತ್ತಾ ಆಗಸದಲ್ಲೂ ಭದ್ರತೆಯನ್ನೊದಗಿಸಿದ್ದವು. ಆ ಅರಮನೆಯನ್ನು ಭೇದಿಸುವುದು, ಅನಪೇಕ್ಷಿತ ವ್ಯಕ್ತಿಗಳು ಹತ್ತಿರ ಸುಳಿಯುವುದು ಸಾಧ್ಯವೇ ಇರಲಿಲ್ಲ. ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಶೃಂಗಸಭೆ ಆರಂಭವಾಯಿತು. ನಾವು ಬೆಳಗ್ಗೆ ಹನ್ನೊಂದು ಗಂಟೆಗೆ ಅರಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಭದ್ರತಾ ತಪಾಸಣೆಗೆ ನಿಂತಿದ್ದೆವು.
ಎರಡು ವರ್ಷಗಳ ಹಿಂದೆ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಪ್ರಧಾನಿ ಕಾರ್ಯಾಲಯದಲ್ಲಿ ಅಂದಿನ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಭೇಟಿ ಮಾಡಿದಾಗ ಅದನ್ನು ನೋಡಲು ಹೋದಾಗಿನ ಭದ್ರತಾ ತಪಾಸಣೆಯ ವೈಖರಿಗೆ ಸುಸ್ತು ಹೊಡೆದು ಹೋಗಿದ್ದೆ.
ಜಿ-20 ಶೃಂಗಸಭೆಯ ಕಲಾಪ ವೀಕ್ಷಣೆಗೆ ಹೋದಾಗ ಅನುಭವಿಸಿದ ಭದ್ರತಾ ಕಿರಿಕಿರಿಗೆ ಹೋಲಿಸಿದರೆ ಇಸ್ರೇಲಿಗಳೇ ಎಷ್ಟೋ ವಾಸಿ ಎಂದೆನಿಸಿತು. ಬರೋಬ್ಬರಿ ಮೂರೂವರೆ ಗಂಟೆಗಳ ಕಾಲ ನಮ್ಮನ್ನು ಹಿಡಿದು ಹಿಂಸಿಸಿದರು. ಕೋಟು, ಅಂಗಿ, ಬನ್ನಿಯನ್ನು, ಪ್ಯಾಂಟು, ಥರ್ಮಲ್ ಪ್ಯಾಂಟುಗಳನ್ನು ಬಿಡಿ, ಒಳಗಿನ ನಿಕ್ಕರನ್ನು ಸಹ ಬಿಡಲಿಲ್ಲ, ಅದನ್ನೂ ಬಿಚ್ಚುವಂತೆ ಹೇಳಿದರು.
ದೇಹದ ಯಾವ ಭಾಗವನ್ನೂ ಬಿಡದೇ ಸ್ಪರ್ಶಿಸಿ, ನಮ್ಮನ್ನೆಲ್ಲ ಚೆಕ್ ಮಾಡಿದರು. ಆ ದಢೂತಿ ಮುಂದೆ ಸೊಲ್ಲೆತ್ತುವಂತಿರಲಿಲ್ಲ. ಆತ ಹೇಳಿದಂತೆ ಮಾಡುವ ಸರ್ಕಸ್ ಪ್ರಾಣಿಗಳಂತಾಗಿದ್ದೆವು. ಪೆನ್ನು, ಕೆಮರಾ, ಫೋನು, ಪರ್ಸು, ಕೀಚೈನು...ಹೀಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ. ಆತ ನೀಡಿದ ಪೆನ್ನಿನಲ್ಲಿಯೇ ಬರೆಯುವಂತೆ ತಾಕೀತು ಮಾಡಿದ. ಲ್ಯಾಪ್‌ಟಾಪ್, ಐಪ್ಯಾಡ್‌ಗಳನ್ನು ಒಯ್ಯುವಂತಿರಲಿಲ್ಲ. 'ನಿಮಗೆ ಚಳಿಯಾದರೆ ನಾನೇ ನಿಮಗೆ ಜಾಕೆಟ್ ಕೊಡ್ತೇನೆ. ನಿಮ್ಮ ಕೋಟುಗಳನ್ನು ಇಲ್ಲಿಯೇ ಬಿಚ್ಚಿಟ್ಟು ಹೋಗಿ' ಎಂದು ಖಡಾಖಡಿ ಹೇಳಿದ. ನಮ್ಮ ಮೈಮುಚ್ಚಿಕೊಳ್ಳುವಷ್ಟು ಬಟ್ಟೆಯ ಹೊರತಾಗಿ ಬೇರೆ ಯಾವ ವಸ್ತುವಿನೊಂದಿಗೂ ಅಲ್ಲಿಗೆ ಹೋಗುವಂತಿರಲಿಲ್ಲ. ಇಷ್ಟಲ್ಲದೇ ನಮ್ಮ ಮೂತ್ರ, ರಕ್ತದ ಸ್ಯಾಂಪಲ್‌ಗಳನ್ನು ತೆಗೆದುಕೊಂಡ. ಹೆಬ್ಬೆಟ್ಟಿನ ಗುರುತು, ಉಗುರು, ಕೂದಲನ್ನೂ ತೆಗೆದುಕೊಂಡ. ಹೊಟ್ಟೆಯೊಳಗೆ ಬಾಂಬ್ ಇಟ್ಟುಕೊಂಡಿರಬಹುದಾ ಎಂದು ಕ್ಷಕಿರಣವನ್ನು ಕೂಡ ಹಾಯಿಸಿದ. ನನ್ನ ಕುಲ, ಗೋತ್ರ, ಜಾತಿ, ಹಿನ್ನೆಲೆ ಎಲ್ಲವನ್ನೂ ಕಂಪ್ಯೂಟರಿನಲ್ಲಿ ದಾಖಲಿಸಿಕೊಂಡ. ಕೆಮರಾ ಮುಂದೆ ನಿಂತುಕೊಳ್ಳುವಂತೆ ಹೇಳಿದ. ನನ್ನ ಮುಖ, ತಲೆಯ ಒಂದೊಂದು ಪಾರ್ಶ್ವದ ಫೋಟೋಗಳು ಕಂಪ್ಯೂಟರ್ ಪರದೆ ಮೇಲೆ ಮೂಡಿದವು. ರೇಖಾಚಿತ್ರವೂ ಮೂಡಿ ಬಂತು. ನಾನು ಹೇರ್‌ಸ್ಟೈಲ್ ಬದಲಿಸಿದರೆ, ಗಡ್ಡ ಬಿಟ್ಟರೆ ಹೇಗೆ ಕಾಣಬಹುದು ಎಂಬ ಫೋಟೋಗಳೂ ಪರದೆ ಮೇಲೆ ಎದ್ದು ಬಂತು. ಅವನ್ನೆಲ್ಲ ಜೋಪಾನವಾಗಿ save ಮಾಡಿಕೊಂಡ.
ಒಂದು ವೇಳೆ ಅವನ ತಾಯಿಯೋ, ತಂದೆಯೋ, ಹೆಂಡತಿಯೋ ಜಿ-20 ಶೃಂಗಸಭೆಯ ಕಲಾಪ ವೀಕ್ಷಣೆಗೆ ಆ ಅರಮನೆಗೆ ಬಂದಿದ್ದರೆ, ಈ ಎಲ್ಲ ಕಸರತ್ತುಗಳನ್ನು ತನ್ನ ಮುಂದೆ ಮಾಡಿಸದೇ ಆತ ಅವರನ್ನು ಒಳ ಬಿಡುತ್ತಿರಲಿಲ್ಲ. ಹೀಗಿರುವಾಗ ನಾನು ಯಾವ ಸೀಮೆಯ ಮರದ ತೊಪ್ಪಲು?! ಇಂಟರ್‌ನ್ಯಾಷ್‌ನಲ್ ಮೀಡಿಯಾ ಸೆಂಟರ್‌ನಲ್ಲಿ ಕುಳಿತು ಕಲಾಪ ನೋಡುವುದನ್ನು ಬಿಟ್ಟು ಯಾಕಾದರೂ ಇಲ್ಲಿಗೆ ಬಂದೆನೋ ಎಂದೆನಿಸಿತು. ಅಷ್ಟು ಹೊತ್ತು ಕುಡಿಯಲು ನೀರಿಲ್ಲ. ಕಾಫಿಯಿಲ್ಲ. ತಿನ್ನಲು ಬ್ರೆಡ್ಡಿನ ಚೂರೂ ಇಲ್ಲ.
ಆತ ನನ್ನ ಬಗ್ಗೆ ಎಲ್ಲ ಮಾಹಿತಿ ಸಂಗ್ರಹಿಸಿದ್ದ. ಒಂದು ವೇಳೆ ನನ್ನ ಬಗ್ಗೆ ನನಗೆ ಯಾವುದಾದರೂ ಸಂಗತಿ ಗೊತ್ತಾಗದಿದ್ದರೆ ಅಥವಾ ಮರೆತು ಹೋದರೆ, ಅವನನ್ನು ಕೇಳಿದರೆ ಸಾಕು, ಕೊಡುತ್ತಾನಲ್ಲ ಎಂದು ನನಗೆ ಖಾತ್ರಿಯಾಗುವಷ್ಟು ಮಾಹಿತಿ ಸಂಗ್ರಹಿಸಿದ್ದ. ಇಲ್ಲಿಯ ತನಕ 'ನಿಮ್ಮ ಗುರುತಿನ ಮಚ್ಚೆ ಎಲ್ಲಿದೆ?' ಎಂಬ ಪ್ರಶ್ನೆ ಮುಂದೆ, ಅರ್ಜಿ ನಮೂನೆಯಲ್ಲಿ 'ಮಚ್ಚೆ ಇಲ್ಲ' ಎಂದೇ ಬರೆಯುತ್ತಿದ್ದೆ. ಆ ಭದ್ರತಾ ಅಧಿಕಾರಿ ನನ್ನ ಮೈ ಮೇಲಿನ ಮಚ್ಚೆಯನ್ನೂ ಶೋಧಿಸಿದ್ದ! ಎಲಾ ಬಡ್ಡಿಮಗನೇ ಅಂದುಕೊಂಡೆ.
ಮೂರೂವರೆ ಗಂಟೆ ಇನ್ನಿಲ್ಲದ ಹಿಂಸೆ ಅನುಭವಿಸಿದರೂ, ಅದೊಂದು ಅಪರೂಪದ, ಜೀವಮಾನದ ಅನುಭವವಾಗಿತ್ತು. ಬೆತ್ತಲಾದ ವಿಶ್ವದ ಆರ್ಥಿಕತೆ ಚರ್ಚಿಸುವ ಶೃಂಗಸಭೆಯಲ್ಲಿ ನಮ್ಮ 'ಬಂಡವಾಳ' ಬೆತ್ತಲಾಗಿತ್ತು!
ಇವೆಲ್ಲ ಇರಲಿ. ಪ್ರಧಾನ ಮಂತ್ರಿಗಳ ಜತೆ ಅಥವಾ ರಾಷ್ಟ್ರಪತಿ ಅವರ ಜತೆ ವಿದೇಶ ಪ್ರಯಾಣ ಹೋಗುವುದು ಯಾವುದೇ ಪತ್ರಕರ್ತನಿಗಾದರೂ ಸಿಗಬಹುದಾದ ಮನ್ನಣೆ ಹಾಗೂ ಅಭಿಮಾನದ ವೃತ್ತಿ ಅನುಭವವೇ. ಆದರೆ ಅದಕ್ಕಿಂತ ಮುಖ್ಯವಾಗಿ ಪ್ರಧಾನಿಯವರು ಶೃಂಗಸಭೆಯಂಥ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರಲ್ಲ, ಅದನ್ನು ವರದಿ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಪ್ರಧಾನಿಯವರ ಜತೆ ಹೋಗುವುದು ಮಜಾ ಉಡಾಯಿಸಲಿಕ್ಕೆ, ಡೌಲು ಬಜಾಯಿಸಲಿಕ್ಕೆ ಎಂಬ ಅಭಿಪ್ರಾಯ ಯಾರಲ್ಲಾದರೂ ಇದ್ದರೆ ಅದನ್ನು ತಲೆಯಿಂದ ತೆಗೆಯುವುದು ಒಳ್ಳೆಯದು. ತುರಿಸಿಕೊಳ್ಳಲು ಪುರುಸೊತ್ತು ಸಿಗೊಲ್ಲ ಅಂತಾರಲ್ಲ, ಹಾಗಿರುತ್ತದೆ ಅಲ್ಲಿನ ಸ್ಥಿತಿ.
ಮೊನ್ನೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಶೃಂಗಸಭೆಯ ಅನುಭವಗಳನ್ನು ಹೇಳುವುದಾದರೆ, ಪ್ರತಿದಿನ ಕಲಾಪ ಬೆಳಗ್ಗೆ ಒಂಭತ್ತು ಗಂಟೆಗೆ ಆರಂಭವಾಗಿ ಸಾಯಂಕಾಲ ಏಳುಗಂಟೆಗೆ ಮುಗಿಯುತ್ತಿತ್ತು. ಶೃಂಗಸಭೆ ನಡೆಯುವ ಅರಮನೆಗೇ ಹೋಗಬೇಕೆಂದರೆ, ಬೆಳಗಿನ ಜಾವ ಮೂರು ಗಂಟೆಗೆ ಎದ್ದು, ನಾಲ್ಕು ಗಂಟೆಗೆ ಹೋಟೆಲ್ ಬಿಟ್ಟು ಅಲ್ಲಿಂದ ಅರ್ಧ ಗಂಟೆ ಬಸ್‌ನಲ್ಲಿ ಪ್ರಯಾಣ ಮಾಡಿ, ಮುಕ್ಕಾಲು ಗಂಟೆ ಸ್ಪೀಡ್ ಬೋಟ್‌ನಲ್ಲಿ ಸಮುದ್ರ ದಾಟಿ, ಮೂರು ತಾಸು ಭದ್ರತಾ ತಪಾಸಣೆಗೆ ತುತ್ತಾಗಿ ಒಂಭತ್ತು ಗಂಟೆಗೆ ಹೋಗಿ ಕುಳಿತುಕೊಳ್ಳಬೇಕಿತ್ತು. ಒಮ್ಮೆ ಹೋಗಿ ಕುಳಿತು ಜಮಾ ಆದರೆ, ಮಧ್ಯಾಹ್ನ ಹನ್ನೆರಡವರೆಗೆ ಏಳುವಂತಿಲ್ಲ. ಪದೇ ಪದೆ ಎದ್ದು ಅಲ್ಲಿ ಓಡಾಡುವಂತಿರಲಿಲ್ಲ.
ಸಾಯಂಕಾಲ ಏಳುಗಂಟೆಗೆ ಕಲಾಪ ಮುಗಿಯುತ್ತಿದ್ದಂತೆ ಏದುಸಿರು ಬಿಡುತ್ತಾ ಅಲ್ಲಿಂದ ಹೊರಬಿದ್ದು ಅರ್ಧ ಗಂಟೆ ನಡೆದು ಅಥವಾ ಕಾರಿನಲ್ಲಿ ಐದು ನಿಮಿಷ ಕ್ರಮಿಸಿ ಮೀಡಿಯಾ ಸೆಂಟರ್‌ಗೆ ಬರಬೇಕು. ಅಷ್ಟೊತ್ತಿಗೆ ಅಲ್ಲಿ ಎಲ್ಲ ಪತ್ರಕರ್ತರು (ಸುಮಾರು ಮೂರು ಸಾವಿರ) ಬಂದು ಜಮಾಯಿಸುತ್ತಿದ್ದರು. ಎಲ್ಲರಿಗೂ ಸುದ್ದಿ ಕಳಿಸುವ ಧಾವಂತ. ಮೂಗಿನ ಮೇಲೆ ಚೇಳು ಕುಟುಕಿದರೂ ಅದನ್ನು ಎತ್ತಿ ಬಿಸಾಡುವಷ್ಟು ವ್ಯವಧಾನ ಯಾರಿಗೂ ಇರುವುದಿಲ್ಲ. ಸಮಯ ವ್ಯತ್ಯಾಸದಿಂದಾಗಿ ಭಾರತದಲ್ಲಿ ಅಷ್ಟೊತ್ತಿಗೆ ರಾತ್ರಿ ಎಂಟೂವರೆಯಾಗಿರುತ್ತದೆ. ಪತ್ರಿಕೆಯನ್ನು ಮುದ್ರಣಕ್ಕೆ ಕಳಿಸುವ ಡೆಡ್‌ಲೈನ್ ರಾತ್ರಿ ಒಂಭತ್ತೂವರೆ. ಅಂದರೆ ಇಡೀ ದಿನ ಕಲಾಪ ವರದಿಗೆ ಸಿಗುವುದು ಅಬ್ಬಬ್ಬಾ ಅಂದ್ರೆ ಒಂದು ಗಂಟೆ. ಆ ಅವಧಿಯಲ್ಲಿ ಎಷ್ಟೂ ಅಂತ ಬರೆಯಲು ಸಾಧ್ಯ?! ಪತ್ರಕರ್ತನ ಬಂಡವಾಳ ಗೊತ್ತಾಗುವುದೇ ಇಲ್ಲಿ. ನಿಮಗೆ ಅರ್ಥವಾಗದ ಸಂಗತಿಯನ್ನು ಕೇಳಿ ತಿಳಿದುಕೊಳ್ಳೋಣ ಅಂದ್ರೆ ಪಕ್ಕದಲ್ಲಿದ್ದವ ಅಪರಿಚಿತ. ಅಲ್ಲದೇ ಆತನಿಗೂ ಸಹ ಗಡಿಬಿಡಿಯೇ. ಇನ್ನು ನನ್ನೊಂದಿಗೆ ಹೋದ ಭಾರತೀಯ ಪತ್ರಕರ್ತರು ಚದುರಿ ಹೋಗಿ, ಎಲ್ಲೆಲ್ಲೋ ಕುಳಿತು ವರದಿ ಫೈಲ್ ಮಾಡುವ ಆತುರದಲ್ಲಿರುತ್ತಾರೆ.
ಅಲ್ಲಿರುವ ಮೂರು ಚಿಲ್ಲರೆ ಸಾವಿರ ಪತ್ರರ್ತರೆಲ್ಲ ಯುದ್ಧಭೂಮಿಯಲ್ಲಿರುವ ಸೈನಿಕರಂತೆ ವರ್ತಿಸುತ್ತಿರುತ್ತಾರೆ. ಸಮಯದ ವಿರುದ್ಧ ಅವರೆಲ್ಲ ಕಾದಾಡುತ್ತಿರುತ್ತಾರೆ. ಇಲ್ಲಿ ಪತ್ರಿಕಾ ಕಚೇರಿಯಲ್ಲಿ ಸುದ್ದಿ ಸಂಪಾದಕರು ಇನ್ನೂ ಸುದ್ದಿ ಬಂದಿಲ್ಲ ಎಂದು ಗೊಣಗುತ್ತಿರುತ್ತಾರೆ. ಯಾವಾಗ ಸುದ್ದಿ ಕಳಿಸುತ್ತಾರೆ, ಅದನ್ನು ಯಾವಾಗ ಕಂಪೋಸ್ ಮಾಡಿಸುವುದು, ಯಾವಾಗ ಪುಟ ವಿನ್ಯಾಸ ಮಾಡಿಸುವುದು, ಯಾವಾಗ ಪುಟಗಳನ್ನು ಮುದ್ರಣಕ್ಕೆ ಕಳಿಸುವುದು ಎಂದು ವಟವಟ ಎನ್ನಲಾರಂಭಿಸುತ್ತಾರೆ.
ಈ ಐನ್ ಟೈಮಿನಲ್ಲಿ ಸೂಕ್ತಪದಗಳೇ ಸಿಗದೇ, ವಾಕ್ಯ ಮುಂದಕ್ಕೆ ಹೋಗುವುದಿಲ್ಲ. ತಲೆಯೆಲ್ಲ ಸಂಪೂರ್ಣ ಖಾಲಿಯಾದಂತೆನಿಸಿ ಎಲ್ಲ ಶೂನ್ಯ ಎಂದೆನಿಸಿಬಿಡುತ್ತದೆ. ಪರೀಕ್ಷೆಯಲ್ಲಿ ಇನ್ನು ಕೊನೆಯ ಹತ್ತು ನಿಮಿಷವಿದೆ, ಎಂಟು ಪ್ರಶ್ನೆಗಳು ಇನ್ನೂ ಬಾಕಿ ಇವೆ ಅಂದ್ರೆ ಹೇಗೆ ಕಂಗಾಲಾಗುತ್ತೇವೋ ಅದೇ ಸ್ಥಿತಿ. ತಲೆಯಲ್ಲಿದ್ದದ್ದೂ ಮರೆತು ಹೋಗಿ ಬಿಡುತ್ತದೆ. ಆ ಟೆನ್‌ಶನ್‌ನಲ್ಲಿ ಕೆಲಸ ಮಾಡುವ ಕಷ್ಟ, ಒತ್ತಡ, ವೇದನೆ ಹಾಗೂ ಅದ್ಭುತ ಆನಂದವನ್ನು ಬಣ್ಣಿಸಲಾಗದು. ಅದನ್ನು ಅನುಭವಿಸಿಯೇ ಹೀರಿಕೊಳ್ಳಬೇಕು. ಈ ಎಲ್ಲ ಜಂಜಾಟಗಳ ನಡುವೆ ವರದಿ ಕಳಿಸಿದರೆ, ಯುದ್ಧ ಗೆದ್ದ ಸಂಭ್ರಮ, ಸಮಾಧಾನ! ಪತ್ರಕರ್ತರಿಗೆ ಅನುಕೂಲವಾಗಲೆಂದು ನಮ್ಮ ವಿದೇಶಾಂಗ ವ್ಯವಹಾರಗಳ ಖಾತೆಯ ಅಧಿಕಾರಿಗಳು ಇಡೀ ದಿನಗಳ ಕಲಾಪವನ್ನು ಸಂಕ್ಷಿಪ್ತವಾಗಿ ತಿಳಿಸುವುದಕ್ಕಾಗಿ ಬ್ರೀಫಿಂಗ್ ಏರ್ಪಡಿಸುತ್ತಾರೆ. ಈ ಬ್ರೀಫಿಂಗ್‌ನಲ್ಲಿ ಭಾಗವಹಿಸಿದರೆ, ಕಲಾಪಗಳಲ್ಲಿ ಪಾಲ್ಗೊಳ್ಳಬೇಕಿಲ್ಲ. ಆದರೆ ಈ ಅಧಿಕಾರಿಗಳು ತಮಗೆ ಪಥ್ಯವೆನಿಸುವ ಅಂಶಗಳನ್ನೇ ಕೊಡುತ್ತಾರೆ.
ಕಲಾಪದಲ್ಲಿನ ಲೋಪ-ದೋಷ, ವೈಶಿಷ್ಟ್ಯ, ಕುತೂಹಲದಾಯಕ ಸಂಗತಿಗಳನ್ನು ಹೇಳುವುದಿಲ್ಲ. ಒಂದು ವೇಳೆ ಭಾರತಕ್ಕೆ ಮುಖಭಂಗವಾಯಿತೆನ್ನಿ, ನಮ್ಮ ಪ್ರಧಾನಿ ಏನೋ ಯಡವಟ್ಟು ಮಾಡಿದರೆನ್ನಿ ಅದನ್ನೆಲ್ಲ ಹೇಳುವುದಿಲ್ಲ. ಅಲ್ಲದೇ ಈ ಅಧಿಕಾರಿಗಳು ಭಾರತದ ದೃಷ್ಟಿಕೋನಕ್ಕೆ ಸೀಮಿತವಾದ ಮಾಹಿತಿಯನ್ನಷ್ಟೇ ಕೊಡುತ್ತಾರೆ. ಮೊನ್ನೆ ಸಿರಿಯಾ ವಿಷಯ ಶೃಂಗಸಭೆಯಲ್ಲಿ ಚರ್ಚೆಗೆ ಬಂತು. ಸಿರಿಯಾ ವಿಷಯದಲ್ಲಿ ಭಾರತದ ನಿಲುವೇನು ಎಂಬುದಷ್ಟನ್ನೇ ಹೇಳುತ್ತಾರೆಯೇ ಶಿವಾಯ್, ರಷ್ಯಾ ಹಾಗೂ ಉಳಿದ ದೇಶಗಳ ಬಗ್ಗೆ ಹೇಳುವುದಿಲ್ಲ. ಹೇಳಿ ಅಂತ ವರಾತ ಮಾಡಿದರೆ, ಆ ದೇಶಗಳ ನಂಟಿನ ಬಗ್ಗೆ ನಾವು ಹೇಗೆ ಹೇಳೋದು ಎಂದು ಬಿಡುತ್ತಾರೆ. ಆಗ ಶೃಂಗಸಭೆಯ ವರದಿ ಶುಷ್ಕವಾಗುವ ಸಾಧ್ಯತೆಯಿರುತ್ತದೆ. ಕೆಲವು ಅನಿವಾರ್ಯ ಪ್ರಸಂಗಗಳಲ್ಲಿ ಈ ಬ್ರೀಫಿಂಗ್‌ಅನ್ನು ನೆಚ್ಚಿಕೊಳ್ಳಬಹುದು. ಆದರೆ ಎಲ್ಲದಕ್ಕೂ ಇದನ್ನು ಅವಲಂಬಿಸಿದರೆ, ಅದು ಪತ್ರಕರ್ತನ ಆಲಸ್ಯದ ಪ್ರತೀಕ ಎಂದೆನಿಸಿಕೊಳ್ಳಬಹುದು. ಯಾರದೋ ಕಣ್ಣಲ್ಲಿ ಕಂಡಿದ್ದನ್ನು ಅವರು ನೋಡಿ ತಮಗೆ ಬೇಕಾದ್ದಷ್ಟನ್ನೇ ಹೇಳಿ, ಅದನ್ನು ಮತ್ತಷ್ಟು ಸೀಮಿತವಾಗಿ ಅರ್ಥಮಾಡಿಕೊಂಡು ಬರೆದ ನೀರಸ ವರದಿಯಾಗಬಹುದು. ಇಡೀ ದಿನ ಊರು ತಿರುಗಿ, ಸಾಯಂಕಾಲ 'ಭ್ರೀಫಿಂಗ್'ಗೆ ಹಾಜರಾಗಿ ವರದಿ ಮಾಡುವ ಪತ್ರಕರ್ತರಿಗೇನೂ ಕೊರತೆಯಿಲ್ಲ. ಆದರೆ ಅಂಥವರ ವರದಿಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿಲ್ಲ.
ಈ ಕಾರಣದಿಂದ ಇಡೀ ದಿನ ಕಲಾಪದಲ್ಲಿ ಕುಳಿತುಕೊಳ್ಳುವುದು ಅನಿವಾರ್ಯ. ನಮಗೆ ಬೇರೆ ದೇಶಗಳ ನಾಯಕರು ಏನು ಹೇಳಿದ್ದಾರೆಂಬುದು ಅಷ್ಟೇನೂ ಮಹತ್ವವಾಗಲಿಕ್ಕಿಲ್ಲ. ನಮ್ಮ ಪ್ರಧಾನಿ ಏನು ಹೇಳಲಿದ್ದಾರೆಂಬ ಲಿಖಿತ ಪ್ರತಿಯನ್ನು ಮೊದಲೇ ಕೊಡುವುದರಿಂದ, ನಾವು ಅದಕ್ಕೂ ಮೀರಿದ ಸುದ್ದಿಲೇಪ ಸಿಗುವುದಾ ಎಂದು ಹೊಂಚುಹಾಕಿ ಕುಳಿತುಕೊಳ್ಳಬೇಕಾಗುತ್ತದೆ. ಔತಣಕೂಟದಲ್ಲಿ ಪತ್ರಕರ್ತರಿಗೆ ಅವಕಾಶವಿರುವುದಿಲ್ಲ. ಕುತೂಹಲಕರ ಸುದ್ದಿ ಸಿಗುವುದೇ ಇಲ್ಲಿ. ಎರಡು ದೇಶಗಳ ನಾಯಕರು ಪಕ್ಕದಲ್ಲಿ ಕುಳಿತು ಪರಸ್ಪರ ಮಾತಾಡಲು ಅವಕಾಶ ಸಿಗುವುದು ಈ ಕೂಟದಲ್ಲಿ. ಇಂಥ ಮಾತುಕತೆಗೆ Pull aside ಮೀಟಿಂಗ್ ಅಂತಾರೆ. ನಾಯಕರು ಮನಬಿಚ್ಚಿ ಆಫ್ ದಿ ರೆಕಾರ್ಡ್ ಮಾತಾಡುವುದೇ ಇಲ್ಲಿ. ಈ ಸಭೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳು ನಮ್ಮ ಪ್ರಧಾನಿ ಜತೆಗಿರುವ ಅಧಿಕಾರಿ ವೃಂದಗಳಿಗೆ ಗೊತ್ತಿರುತ್ತದೆ. ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಜತೆ ಹತ್ತು ನಿಮಿಷ ಮಾತಿಗೆ ನಿಂತರೆ, ಸಾಕಷ್ಟು ಒಳನೋಟಗಳು ಸಿಗುತ್ತಿದ್ದವು. ಸಿರಿಯಾ ವಿಷಯವಾಗಿ ಅಮೆರಿಕದ ಪರ ಯಾವ ದೇಶಗಳು ನಿಂತವು, ಯಾರು ವಿರೋಧಿಸಿದರು ಎಂಬೆಲ್ಲ ಮಾಹಿತಿಯನ್ನು ಅವರು ಮೆಲ್ಲಗೆ ತಿಳಿಸುತ್ತಿದ್ದರು, ಹೀಗಾಗಿ ಬ್ರೀಫಿಂಗ್ ನಂತರ ಅಹ್ಲುವಾಲಿಯಾ ಜತೆಗಿನ Pull aside ಹೆಚ್ಚು ಪ್ರಯೋಜನವಾಗುತ್ತಿತ್ತು.
ಕನ್ನಡ ಅಥವಾ ಭಾಷಾ ಪತ್ರಿಕೆಗಳ ಪ್ರತಿನಿಧಿಗಳು ಇಂಥ ಶೃಂಗಸಭೆಯಲ್ಲಿ ಎದುರಿಸುವ ಸಮಸ್ಯೆಗಳು ಒಂದೆರಡಲ್ಲ. ನಮ್ಮ ಓದುಗರನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ವಿವರಿಸುವ, ಹಿನ್ನೆಲೆಯನ್ನು ತಿಳಿಸುವ ಅಗತ್ಯವಿರುತ್ತದೆ. ಜಿ-ಟ್ವೆಂಟಿ ಅಂದ್ರೆ ಏನು, ಸದಸ್ಯ ದೇಶಗಳು ಯಾವವು, ಇದರ ಸದಸ್ಯರಾಗುವುದು ಎಷ್ಟು ಮುಖ್ಯ, ವಿಶ್ವದ ಆರ್ಥಿಕತೆಯನ್ನು ಜಿ-20 ಶೃಂಗಸಭೆ ಹೇಗೆ ನಿರ್ದೇಶಿಸುತ್ತದೆ, ಈ ದೃಷ್ಟಿಯಿಂದ ಶೃಂಗದ ಪ್ರಾಮುಖ್ಯವೆಷ್ಟು, ಭಾರತದ ಪಾತ್ರವೇನು, ಶೃಂಗದ ನಿರ್ಣಯಗಳು ವಿಶ್ವ ಆರ್ಥಿಕತೆ ರೂಪುಗೊಳ್ಳಲು ಹೇಗೆ ಪ್ರೇರಣೆ ನೀಡುತ್ತದೆ...ಮುಂತಾದ ಅನೇಕ ಸಂಗತಿಗಳನ್ನು ಕನ್ನಡದ ಓದುಗರಿಗೆ ತಿಳಿಸಿ ಹೇಳುವ ಅಗತ್ಯವಿರುತ್ತದೆ. ಮಾಂಟ್ರಿಯಲ್ ಒಪ್ಪಂದ, ಲಾಸ್ ಕಾಬೋಸ್ ನಿರ್ಣಯ ಎಂದು ಇಂಗ್ಲಿಷ್ ಪತ್ರಕರ್ತಕರು ಏಕಾಏಕಿ ಬರೆದುಬಿಡುತ್ತಾರೆ. ಆದರೆ ಅವನ್ನೆಲ್ಲ ಕನ್ನಡದ ಓದುಗರಿಗೆ ವಿವರಿಸಿ ಹೇಳಬೇಕಾಗುತ್ತದೆ, ನೆನಪಿಸಬೇಕಾಗುತ್ತದೆ, ಹಿನ್ನೆಲೆಯನ್ನು ವಿವರಿಸಬೇಕಾಗುತ್ತದೆ. ಕೆಲವೊಮ್ಮೆ ಕ್ಲಿಷ್ಟಕರ ಇಂಗ್ಲಿಷ್ ಪದಗಳು, ವಿತ್ತಶಾಸ್ತ್ರಕ್ಕೆ ಸಂಬಂಧಿಸಿದ ಅಕೆಡೆಮಿಕ್ ಪದಗಳನ್ನು ಪ್ರಮುಖ ವ್ಯಕ್ತಿಗಳು ಬಳಸಿದರೆ, ಅದಕ್ಕೆ ಸಮನಾದ ಕನ್ನಡಪದಕ್ಕೆ ತಡಕಾಡಬೇಕಾಗುತ್ತದೆ. ಯಾರನ್ನಾದರೂ ಕೇಳೋಣ ಅಂದ್ರೆ ಅಲ್ಲಿ ಕನ್ನಡ ಯಾರಿಗೂ ಬರುವುದಿಲ್ಲ. ಹಾಗೆಂದು ಮನಸ್ಸಿಗೆ ತೋಚಿದ್ದನ್ನು ಬರೆಯುವಂತಿಲ್ಲ. ಅರ್ಥಶಾಸ್ತ್ರಜ್ಞರು ಅರ್ಥವಾಗದಂತೆ ಮಾತಾಡುತ್ತಾರೆ. ಅದನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡು ಬರೆಯದಿದ್ದರೆ ಎಲ್ಲವೂ ಅನರ್ಥವೇ.
ಇಷ್ಟೆಲ್ಲ ಮಾಡಿ ರೂಮು ಸೇರುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ. ಪುನಃ ಬೆಳಗ್ಗೆ ಮೂರು ಗಂಟೆಗೆ ಎದ್ದು, ನಾಲ್ಕು ಗಂಟೆಗೆ ಹೊರಡಲು ಸನ್ನದ್ಧರಾಗಬೇಕು. ಈ ಉಸಾಬರಿಯೇ ಬೇಡ ಎಂದು ಹೋದಂದಿನಿಂದ ರೂಮುಸೇರಿ ಹೊರಬರದ ಪತ್ರಕರ್ತರೂ ಇರುತ್ತಾರೆ.
ಅಧಿಕಾರಿಗಳಿಗೆ ಪೂಸಿ ಹೊಡೆದು ಕಾರು ಗಿಟ್ಟಿಸಿಕೊಂಡು ಊರು ಸುತ್ತುವ 'ಪ್ರವಾಸಿ ಪತ್ರಕರ್ತ'ರೂ ಇರುತ್ತಾರೆ. 'ನೀನು ಬರೆದ ವರದಿಯನ್ನು ನನಗೆ ಇ-ಮೇಲ್ ಮಾಡು, ನನ್ನ ಆಫೀಸಿಗೆ ಫಾರ್ವರ್ಡ್ ಮಾಡುತ್ತೇನೆ' ಎನ್ನುವವರೂ ಬಂದಿರುತ್ತಾರೆ. ಆದರೆ ಮೈಮೇಲೆ ಪರಿವೆ ಇಲ್ಲದೇ, ಹದಿನಾರು ಗಂಟೆ ಕೆಲಸ ಮಾಡುವವರೂ ಇರುತ್ತಾರೆ.
ನನ್ನ ಪಕ್ಕದಲ್ಲಿ ರಾಯಿಟರ್ ಸುದ್ದಿಸಂಸ್ಥೆ ವರದಿಗಾರನಿದ್ದ. ಆತ ಒಂದು ತಾಸಿನೊಳಗೆ ನಾನೂರು ಪದಗಳ ಮೂರು ವರದಿ ಸಿದ್ಧಪಡಿಸಿ, ಎಂಟು ನೂರು ಪದಗಳ ವಿಶ್ಲೇಷಣೆ ಬರೆದು, ಅರ್ಧಪ್ಯಾಕ್ ಸಿಗರೇಟ್ ಸೇದಿ, ಬಿಯರ್ ಹೀರುತ್ತಿದ್ದ. ಒಂದು ಇಡೀ ಪುಟಕ್ಕಾಗುವಷ್ಟು ವರದಿಗಳನ್ನು ಕಳಿಸಿದ ನನ್ನನ್ನು ಕರೆದು ರಷಿಯನ್ ವೋಡ್ಕಾ ಕುಡಿಯಲು ಕರೆದ.
ಇದು 'ಬುಕರ್ ಪ್ರಶಸ್ತಿ'ಗೆ ಸಮ ಎಂದು ಜೋರಾಗಿ ನಕ್ಕ. ಆತನ ಬರೆಯುವ ದೈತ್ಯಶಕ್ತಿ ಕಂಡು ಬೆರಗಾಗಿದ್ದೆ.
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

