ಕೆನಡಾದಲ್ಲಿ ಹಾರಿದ ಕ್ರೌರ್ಯದ ಸಂಕೇತ!
ಒಂದು ಸ್ಥಾಪನೆಯನ್ನು ಹಂಗಿಸುವುದಕ್ಕೆ ಹಲವಾರು ಮಾರ್ಗಗಳಿವೆ. ಒಮ್ಮೊಮ್ಮೆ ಯುದ್ಧ ಸ್ಮಾರಕಗಳನ್ನು ಭಗ್ನ ಮಾಡುವ ಮೂಲಕ ಅದರ ದರ್ಶನವಾಗುತ್ತದೆ. ಆದರೆ ಬಹುತೇಕ ಬಾರಿ ಆ ಕೀಳು ವರ್ತನೆ ಯಾರ ಕಣ್ಣಿಗೂ ಬೀಳುವುದಿಲ್ಲ. ಯಾರಾದರೂ ಅದರತ್ತ ಬೊಟ್ಟು ಮಾಡಿ ತೋರಿಸುವವರೆಗೂ!
ಅಷ್ಟಾಗಿ ಗಮನಕ್ಕೆ ಬಾರದ, ವರದಿಯಾಗದ ಅಂತಹ ಒಂದು ಘಟನೆ ಬಹುತೇಕ ಕೆನಡಿಯನ್ನರಲ್ಲಿ ಸಿಟ್ಟು ಮತ್ತು ಅಸಹನೆಯನ್ನು ಹುಟ್ಟುಹಾಕಿದೆ. ದೂರದೃಷ್ಟಿಯಿಲ್ಲದ ನಾಯಕರಿಂದಾಗಿ ಹುಟ್ಟಿಕೊಂಡಿರುವ ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ತಮ್ಮ ದನಿಯೇ ಉಡುಗಿ ಹೋಗುತ್ತಿದೆ ಎಂದು ಕೆನಡಾದ ಜನತೆ ಚಡಪಡಿಸುತ್ತಿದ್ದಾರೆ.
'ವರ್ಣದ್ವೇಷ'ವನ್ನು ಆಚರಿಸುವುದಕ್ಕಾಗಿ ಮಾರ್ಚ್ 23 ರಂದು ಕೆನಡಾದಲ್ಲಿನ ಎರಡು ಪ್ರಮುಖ ನಗರಗಳಲ್ಲಿ ವಿದೇಶಿ ಧ್ವಜವೊಂದು ಹಾರಾಡಿತು. ಅಂದು ನಮ್ಮ ಧ್ವಜದಲ್ಲಿನ ಮ್ಯಾಪಲ್(ಐದು ಮೂಲೆಗಳುಳ್ಳ ಎಲೆ) ಹಿನ್ನೆಲೆಗೆ ಸರಿದುಬಿಟ್ಟಿತ್ತು!
ಮ್ಯಾಪಲ್ ಎಲೆಯನ್ನು ಹೊಂದಿರುವ ನಮ್ಮ ಧ್ವಜ ಸಾಮಾನ್ಯವಾದುದಲ್ಲ. ಅದರಲ್ಲಡಗಿರುವ ವಿಶ್ವಮಾನವ ಸಂದೇಶವನ್ನು 1965, ಫೆಬ್ರವರಿ 15 ರಂದು ಶಾಸನಸಭೆಯ ಸಭಾಧ್ಯಕ್ಷರಾದ ಮಾರೀಸ್ ಬಾರ್ಗೆಟ್ ಅವರು ಧ್ವಜ ಹಾರಿಸುವ ಮೂಲಕ ಬಣ್ಣಿಸಿದ್ದು ಹೀಗೆ- 'ಈ (ಮ್ಯಾಪಲ್) ಧ್ವಜ ದೇಶದ ಐಕ್ಯತೆಯ ಸಂಕೇತ. ದೇಶದ ಎಲ್ಲಾ ಜಾತಿಯ, ಧರ್ಮದ, ಭಾಷೆಯ, ನಂಬಿಕೆಗಳ ಜನರನ್ನು ಇದು ಪ್ರತಿನಿಧಿಸುತ್ತದೆ ಎನ್ನುವುದರಲ್ಲಿ ಸಂದೇಹವೇ ಬೇಡ.'
ಒಂದು ಜನಾಂಗ ಅಥವಾ ಧರ್ಮವನ್ನು, ಪಂಗಡ ಅಥವಾ ಪ್ರದೇಶವನ್ನು ಪ್ರತಿನಿಧಿಸದ, ಸಾರ್ವತ್ರಿಕ ಮಾನವ ಹಕ್ಕುಗಳ ಸಂಕೇತವನ್ನು ಎತ್ತಿಹಿಡಿಯುವ ಕೆಲವೇ ರಾಷ್ಟ್ರಗಳ ಧ್ವಜಗಳಲ್ಲಿ ಮ್ಯಾಪಲ್ ಧ್ವಜವೂ ಒಂದು. ಈ ಅಮೋಘ ಧ್ವಜ ಹಲವು ಬಾರಿ ನಮ್ಮ ವಿಚಾರಧಾರೆಗೆ ಸಂಪೂರ್ಣ ವಿರೋಧಿಯಾಗಿರುವ ರಾಷ್ಟ್ರಗಳ ಧ್ವಜಗಳೊಂದಿಗೆ ಜಾಗ ಹಂಚಿಕೊಂಡಿರುವುದನ್ನು ನಾನು ನೋಡಿದ್ದೇನೆ. ದಬ್ಬಾಳಿಕೆಯ ಪ್ರತಿನಿಧಿಗಳಂತಿರುವ ಚೀನಾ ಮತ್ತು ಸೌದಿಗಳಂತಹ ದೇಶಗಳ ಧ್ವಜದೊಂದಿಗೆ ನಮ್ಮ ಧ್ವಜ ಕಾಣಿಸಿಕೊಂಡಿದೆ.
ಪ್ರಜಾಪೀಡಕ ಅಧಿಪತ್ಯದ ಮತ್ತು ಧರ್ಮತಂತ್ರವನ್ನೇ ಪ್ರಧಾನವಾಗಿಟ್ಟುಕೊಂಡಿದ್ದರೂ, ಅಲಿಖಿತ ನಿಯಮಗಳ ಪ್ರಕಾರ ಅಂತಹ ರಾಷ್ಟ್ರಗಳ ಧ್ವಜವನ್ನು ಗೌರವಿಸಲೇಬೇಕು. ಆದರೆ ದಬ್ಬಾಳಿಕೆ ಮತ್ತು ನರಮೇಧದ ಕುರುಹಾದ ಧ್ವಜವೊಂದು ನಮ್ಮ ಮ್ಯಾಪಲ್ ಧ್ವಜದ ಪಕ್ಕದಲ್ಲಿ ಹಾರಾಡಿದ್ದು ನಿಜಕ್ಕೂ ನಮ್ಮನ್ನು ಕುಪಿತರನ್ನಾಗಿಸುತ್ತಿದೆ. ಮಾರ್ಚ್ 23ರಂದು ವಿಂಡ್ಸರ್ ಮತ್ತು ಮರ್ಖಮ್ನಲ್ಲಿ ಆಗಿದ್ದೂ ಅದೇ. ಧಾರ್ಮಿಕ ಅಂಧಾನುಕರಣೆಯ ನಾಡಾದ, ಪ್ರಪಂಚದಲ್ಲೇ ಅತಿ ಹೆಚ್ಚು ಉಗ್ರವಾದಿಗಳನ್ನು ಹುಟ್ಟುಹಾಕಿದ ಮತ್ತು ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ಪಾಶ್ಚಿಮಾತ್ಯ ದ್ವೇಷವನ್ನು ಮೈಗೂಡಿಸಿಕೊಂಡಿರುವ 'ಪಾಕಿಸ್ತಾನದ' ಧ್ವಜವದು.
ನಮ್ಮ ಮ್ಯಾಪಲ್ ಧ್ವಜ 'ಭಾಷೆ, ಬಣ್ಣ, ನಂಬಿಕೆ'ಗಳನ್ನು ಗೌರವಿಸಿದರೆ, ಪಾಕಿಸ್ತಾನದ ಧ್ಜಜದಲ್ಲಿನ ಹಸಿರು ಬಣ್ಣ ಬಹುಸಂಖ್ಯಾತ ಸುನ್ನಿ ಮುಸಲ್ಮಾನರನ್ನು, ಎಡಕ್ಕಿರುವ ಚಿಕ್ಕ ಬಿಳಿ ಪಟ್ಟಿ ಕಾಫಿರರನ್ನು ಮತ್ತು ನಾಸ್ತಿಕ ಮುಸ್ಲಿಮೇತರರನ್ನು ಪ್ರತಿನಿಧಿಸುತ್ತದೆ!
ಕಳೆದ 65 ವರ್ಷಗಳಲ್ಲಿ ಪಾಕಿಸ್ತಾನ ತನ್ನ ನೆಲದಿಂದ ಹೇಗೆ ಕ್ರಿಶ್ಚಿಯನ್ನರನ್ನು, ಹಿಂದೂಗಳನ್ನು, ಸಿಖ್ಖರನ್ನು ಅಹಮದಿ ಮತ್ತು ಶಿಯಾ ಮುಸಲ್ಮಾನರನ್ನು ವ್ಯವಸ್ಥಿತವಾಗಿ ಹಿಂಸಿಸುತ್ತಾ, ನಿರ್ನಾಮ ಮಾಡುತ್ತಾ ಬಂದಿದೆಯೆಂಬುದನ್ನು ಕೆನಡಾ ನೋಡುತ್ತಲೇ ಇದೆ. ಇಷ್ಟಾದರೂ ಕೆಲವು ಪಾಕಿಸ್ತಾನಿ-ಕೆನಡಿಯನ್ನರು ರಾಜಕಾರಣಿಗಳ ಕಿವಿ ಊದಿ, 'ಪಾಕಿಸ್ತಾನ ದಿನ'ವನ್ನು ಆಚರಿಸಿದ್ದಾರೆ. ತಮ್ಮ ಧ್ವಜವನ್ನು ಸಿಟಿ ಹಾಲ್ನ ಮೇಲೆ ಹಾರಾಡಿಸಲು ಸಫಲರಾಗಿದ್ದಾರೆ. ಕೆಲವೇ ಕೆಲವು ಓಟಿನ ಆಸೆಗಾಗಿ ಮೇಯರ್ಗಳು ಮತ್ತು ಎಂಪಿಗಳು ಈ ಕೃತ್ಯಕ್ಕೆ ಕಣ್ಣುಮುಚ್ಚಿಕೊಂಡು ಹಸಿರು ನಿಶಾನೆ ತೋರಿಸಿದ್ದಾರೆ.
ಸರ್ಖಮ್ನಲ್ಲಿ ನೂರಾರು ಪಾಕಿಸ್ತಾನಿ-ಕೆನಡಿಯನ್ನರು ಈ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಜನಾಂಗೀಯ ದ್ವೇಷದಿಂದಾಗಿ ಆ ದೇಶದಲ್ಲಿ ದಿನವೂ ಜನರು ಸಾಯುತ್ತಿದ್ದಾರೆ, ಅಂಥದ್ದರಲ್ಲಿ 'ಪಾಕಿಸ್ತಾನಿ ದಿನ' ಆಚರಿಸುವುದರಲ್ಲಿ ಅರ್ಥವೇನಿದೆ ಎಂದವರು ಕೇಳುತ್ತಿದ್ದಾರೆ. ಉದಾರತೆ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ಸಾಮ್ಯತೆಯುಳ್ಳ ದೇಶವೊಂದರ ಧ್ವಜವನ್ನು ಹಾರಿಸಿದ್ದರೆ ನಾವಾದರೂ ಏಕೆ ಪ್ರತಿಭಟಿಸುತ್ತಿದ್ದೆವು?
ಆದರೆ ಪಾಕಿಸ್ತಾನ!
ಒಸಾಮಾ ಬಿನ್ ಲ್ಯಾಡೆನ್ಗೆ ಆಶ್ರಯ ಕೊಟ್ಟ, ಬಾಂಗ್ಲಾದೇಶದಲ್ಲಿ ಸಾವಿರಾರು ಜನರ ಮಾರಣಹೋಮ ನಡೆಸಿದ, ತಾಲಿಬಾನಿಗಳ ತವರಾಗಿರುವ, ಧರ್ಮನಿಂದನೆಯ ನೆಪವೊಡ್ಡಿ ಅಮಾಯಕರ ಶಿರಚ್ಛೇದ ಮಾಡುವ, ಶಾಲಾ ಬಾಲಕಿಯ ಮೇಲೆ ಗುಂಡಿನ ದಾಳಿ ನಡೆಸುವಂತಹ ಧೂರ್ತ ದೇಶದ ಧ್ವಜವದು! ಬೇರೆಯ ನಂಬಿಕೆಗಳಿಗೆ ಜಾಗವನ್ನೇ ಕೊಡದ, ತಮ್ಮ ಧರ್ಮದವರೇ ಆದ ಶಿಯಾಗಳು ಮತ್ತು ಬಲೋಚ್ರ ಮಾರಣಹೋಮ ನಡೆಸುವ ದೇಶದ ಧ್ವಜ ಇನ್ನು ಮುಂದೆ ಕೆನಡಾದ ನೆಲದಲ್ಲಿ ಹಾರಾಡದಿರಲಿ...
- ತಾರೆಕ್ ಫತಾಹ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

