ಪಾಕ್ ರಾಯಭಾರದ ನಾಯಿಪಾಡು!
ಕಳೆದ 65 ವರ್ಷಗಳಲ್ಲಿ ಭಾರತ-ಪಾಕಿಸ್ತಾನಗಳ ನಡುವಿನ ಸಂಬಂಧ ಬೆಳೆದು ಬಂದಿದ್ದೇ ಮುಯ್ಯಿಗೆ ಮುಯ್ಯಿ ಎಂಬ ಧೋರಣೆಯಲ್ಲಿ. ಆದರೆ ಕೆಲವೊಮ್ಮೆ ಈ ಅಲಿಖಿತ ನೀತಿ ಭಾರೀ ಅಪದ್ಧಗಳಿಗೂ ಎಡೆ ಮಾಡುತ್ತದೆ.
ಭಾರತದ ಬೀದಿನಾಯಿಯೊಂದು ಅಕಸ್ಮಾತ್ ಆಗಿ ಅಮೃತಸರದ ಅಟ್ಟಾರಿ ರೈಲ್ವೇ ಸ್ಟೇಷನ್ನಲ್ಲಿ ಸಂಝೌತಾ ಎಕ್ಸ್ಪ್ರೆಸ್ ರೈಲನ್ನು ಏರಿಬಿಟ್ಟಿತು. ಭಾರತದ ಭದ್ರತಾ ಸಿಬ್ಬಂದಿ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಅವಗಾಹನೆಗೆ ಬರದೇ ಅದು ಲಾಹೋರ್ವರೆಗೂ ಪ್ರಯಾಣಿಸಿತು. ಅಲ್ಲಿ ಅದನ್ನು ಹಿಡಿಯಲಾಯಿತು.
ತಕ್ಷಣವೇ ಈ ಬಗ್ಗೆ ಇಸ್ಲಾಮಾಬಾದ್ನ ಉನ್ನತ ಅಧಿಕಾರಿಗಳಿಗೆ ವರದಿ ಹೋಯಿತು. ಅದು ಜನವರಿ ಸಮಯ. ಆಗಷ್ಟೇ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಯೋಧನ ಶಿರಚ್ಛೇದನ ಪ್ರಸಂಗವಾಗಿತ್ತಾದ್ದರಿಂದ ಭಾರಿ ಬಿಗುವಿನ ವಾತಾವರಣ ಇತ್ತು. ಈ ಹಿನ್ನೆಲೆಯಲ್ಲೇ ಆಲೋಚಿಸಿದ ಪಾಕಿಸ್ತಾನದ ಅಧಿಕಾರಿಗಳು, ಈ ನಾಯಿಯ ನುಸುಳುವಿಕೆ ಎಂಬುದು ಭಾರತವು ತಮ್ಮನ್ನು ಪ್ರಚೋದಿಸುವುದಕ್ಕೆಂದು ಬೇಕಂತಲೇ ಮಾಡಿದ ಕೃತ್ಯ ಎಂಬ ನಿರ್ಧಾರಕ್ಕೆ ಬಂದರು.
ಇದಕ್ಕೆ ಪ್ರತಿಯಾಗಿ ಅದೇ ರೈಲಿನಲ್ಲಿ ಪಾಕಿಸ್ತಾನದಿಂದ 50 ಬೀದಿನಾಯಿಗಳನ್ನು ಭಾರತಕ್ಕೆ ಕಳುಹಿಸುವುದು ಎಂಬ ನಿರ್ಧಾರವಾಯಿತು! ಅದರಲ್ಲೂ ಅತ್ಯಂತ ಕೊಳಕಾಗಿರುವ ಬೀದಿನಾಯಿಗಳನ್ನೇ ಆರಿಸುವುದು ಹಾಗೂ ಅವುಗಳನ್ನು ಹಸಿವಿನಲ್ಲಿ ಇಟ್ಟು, ಭಾರತೀಯರನ್ನು ಕಂಡಕೂಡಲೇ ಬೊಗಳುವುದಕ್ಕೆ ಶುರು ಮಾಡುವಂತೆ ಕ್ರಮ ಕೈಗೊಳ್ಳಲಾಯಿತು.
ಮೇಲ್ನೋಟಕ್ಕೆ ತುಂಬ ಅಸಂಬದ್ಧ ಎಂಬಂತೆ ಕಾಣುವ ಈ ವಿದ್ಯಮಾನವನ್ನು ಪಾಕಿಸ್ತಾನದಲ್ಲಿ ಪ್ರಸರಣ ಆರಂಭಿಸಿದ ಹೊಸ ಪತ್ರಿಕೆಯೊಂದು ಫೆಬ್ರವರಿ 15ರಂದು ವರದಿ ಮಾಡಿತು. ಈ ಘಟನೆಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡುವ ಗೋಜಿಗೆ ಭಾರತ ಹೋಗಿಲ್ಲ. ಆದರೆ ಈ ಲೇಖಕ ಕುತೂಹಲದಿಂದ ನಮ್ಮ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರನ್ನು ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಳಿಕೊಂಡಾಗ, ಅವರು ಈ ಘಟನೆ ತಮ್ಮ ಅರಿವಿಗೆ ಬಂದಿರುವುದು ಹೌದಾದರೂ ಈ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಇಷ್ಟಪಡುವುದಿಲ್ಲ ಎಂದಿದ್ದಾರೆ. ಇದನ್ನೇ ಭಾರತದ ರಾಜತಾಂತ್ರಿಕ ಮೂಲಗಳಲ್ಲಿ ಶೋಧಿಸಿದಾಗ ತಿಳಿದು ಬಂದ ವಿಚಾರ ಎಂದರೆ- ಈ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಹೋಗಬಾರದು ಎಂದು ಆಡಳಿತದ ಉನ್ನತ ವರ್ಗದವರ ನಾಲಗೆ ಬಿಗಿಗೊಳಿಸಲಾಗಿದೆ, ಅಲ್ಲದೇ ರಾಜತಾಂತ್ರಿಕ ದಾರಿಯ ಮೂಲಕ ಈ ಬಗ್ಗೆ ಪಾಕಿಸ್ತಾನವನ್ನು ಪ್ರಶ್ನಿಸುವ ಆಯ್ಕೆಯನ್ನೂ ಪಕ್ಕಕ್ಕೆ ಸರಿಸಲಾಗಿದೆ. 'ವಿಷಯವೇ ಅಲ್ಲದ ವಿಷಯವೊಂದಕ್ಕೆ ನಾವು ಪ್ರತಿಕ್ರಿಯೆ ನೀಡುವುದಕ್ಕೆ ಇಷ್ಟಪಡುವುದಿಲ್ಲ. ಅದು ಎಲ್ಲಿರುವುದೋ ಅಲ್ಲೇ ಬಿದ್ದಿರಲಿ. ಇಂಥ ಮೂರ್ಖತನಗಳಲ್ಲಿ ನಾವೇನು ಕಡಿಮೆ ಎಂಬಂತೆ ಪ್ರತಿಕ್ರಿಯೆ ವ್ಯಕ್ತಪಡಿಸುವುದಕ್ಕೆ ಹೋಗುವುದಿಲ್ಲ' ಎಂಬುದು ಭಾರತದ ರಾಜತಾಂತ್ರಿಕ ವಲಯದ ನಿಲುವಾಗಿದೆ.
ಒಟ್ಟಿನಲ್ಲಿ ಈ ಘಟನೆಯು ಪಾಕಿಸ್ತಾನದಲ್ಲಿ ನೆಲೆಯಾಗಿರುವ ಭಾರತ ವಿರೋಧಿ ಭಾವವನ್ನು ಬಿಂಬಿಸುತ್ತದೆ. ಬಹಳ ಮುಖ್ಯವಾಗಿ, ಸೂಕ್ಷ್ಮ ವಿಷಯಗಳಲ್ಲೂ ಕೈಯಾಡಿಸುವ ಅಧಿಕಾರವನ್ನು ಪಾಕಿಸ್ತಾನ ಸರ್ಕಾರವು ಸೇನೆಯ ಕೈಗೆ ಒಪ್ಪಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಇಂಥ ಕ್ಷುಲ್ಲಕ ವಿಷಯಗಳಲ್ಲೆಲ್ಲ ಪಾಕ್ನ ವಿದೇಶಿ ಸಚಿವಾಲಯ ತಲೆಕೆಡಿಸಿಕೊಳ್ಳುವುದಿಲ್ಲ. ಇಂಥಲ್ಲೆಲ್ಲ ಸಂಯಮ ಕಾಪಾಡಿಕೊಳ್ಳಬೇಕು ಎಂಬ ಅದರ ಅಹವಾಲಿಗೆ ಸೇನೆಯಲ್ಲಿ ಬೆಲೆ ಇಲ್ಲ.
ಕ್ಷಣ ಕಲ್ಪಿಸಿಕೊಳ್ಳಿ. ಇದೇ ವಿಷಯ ಬಹುಶಃ ಅಲ್ಲಿನ ನಾಗರಿಕ ಹಾಗೂ ಮಿಲಿಟರಿ ಆಡಳಿತ ವ್ಯವಸ್ಥೆಗಳ ಮೇಲ್ಮಟ್ಟದ ಹಂತದಲ್ಲಿ ಗಂಭೀರವಾಗಿ ಚರ್ಚೆಗೆ ಬಂದಿದೆ. ವಿದೇಶಿ ಸಚಿವಾಲಯ ಹೇಳಿರುತ್ತದೆ- ಇದೊಂದು ಸಣ್ಣ ಲೋಪವಷ್ಟೆ. ಒಂದೊಮ್ಮೆ ಇದೇ ಘಟನೆ ಮರುಕಳಿಸಿದ್ದೇ ಆದರೆ ಆಗ ನಾವದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಅಷ್ಟೆ ಎಂದು. ಆದರೆ ಮಿಲಿಟರಿ ಸಮವಸ್ತ್ರದವರು ಇದನ್ನು ಒಪ್ಪುವುದಕ್ಕೆ ಸುತರಾಂ ತಯಾರಿಲ್ಲ. ಅವರಿಗೆ ಗಡಿ ಉದ್ವಿಗ್ನತೆಯದ್ದೇ ನೆನಪು. ಭಾರತವು ಈ ಮೂಲಕ ತಮ್ಮನ್ನು ಕೆಣಕುತ್ತಿದೆ ಎಂಬುದೇ ಅವರ ಅಂತಿಮ ನಿರ್ಧಾರ.
ಕ್ಷುಲ್ಲಕ ಘಟನೆಗೆ ಪಾಕಿಸ್ತಾನದ ಈ ಅತಿ ಪ್ರತಿಕ್ರಿಯೆ ಅಂತಾರಾಷ್ಟ್ರೀಯ ಸಮುದಾಯಕ್ಕೆ, ಅದರಲ್ಲೂ ಪಾಶ್ಚಿಮಾತ್ಯರಿಗೆ ಆಘಾತ ಉಂಟುಮಾಡಬೇಕು. ಆದರೆ ಭಾರತಕ್ಕೇನೂ ಇಂಥ ಪ್ರತಿಕ್ರಿಯೆಗಳು ಅಚ್ಚರಿ ತರಿಸುವುದಿಲ್ಲ. ಈ ಘಟನೆಯನ್ನು ತಿಳಿಗೊಳಿಸುವುದಕ್ಕೆ ಅತ್ತ ಇಸ್ಲಾಮಾಬಾದ್ನಲ್ಲಿ ಕುಳಿತವರು ಹೊಸದೆಹಲಿಯ ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಒಂದು ಫೋನಾಯಿಸುವ ಕಷ್ಟ ತೆಗೆದುಕೊಂಡಿದ್ದರೆ ಸಾಕಿತ್ತು. ಆದರೆ ಇದನ್ನೇನೂ ಭಾರತೀಯರ ಸಂಚಿನ ಭಾಗವಾಗಿ ಅವರು ಕಂಡರು.
ಅಲ್ಲಿಯ ಒಬ್ಬ ವಕ್ತಾರನಂತೂ ಇದನ್ನು ಕ್ಯೂಬಾ ಅಣ್ವಸ್ತ್ರ ಬಿಕ್ಕಟ್ಟಿಗೆ ಹೋಲಿಸಿ ಇಂಥ ಘಟನೆಗಳು ಅಣ್ವಸ್ತ್ರ ಯುದ್ಧಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ವಿಶ್ಲೇಷಿಸಿದ. ಭಾರತದಲ್ಲೂ ಈ ಸುದ್ದಿಕತೆಯನ್ನು ವರದಿ ಮಾಡಿದ ನಿಯತಕಾಲಿಕವೊಂದು, ಒಂದೊಮ್ಮೆ ಪಾಕ್ನಿಂದ ಬಂದ ಐವತ್ತು ನಾಯಿಗಳನ್ನು ಕೊಂದು ಭಾರತವು ಅದೇ ರೈಲಿನಲ್ಲಿ ಹಿಂದಕ್ಕೆ ಕಳುಹಿಸಿದ್ದೇ ಆದರೆ ಎಂಥ ಪರಿಸ್ಥಿತಿ ಉದ್ಭವಿಸಬಹುದೆಂಬ ಪ್ರಶ್ನೆ ಎದುರಿಗಿಟ್ಟಿತು. ನಿಜಕ್ಕೂ ಆತಂಕ ಪಡಬೇಕಾದ ಆಯಾಮ. ಏಕೆಂದರೆ ದೇಶ ವಿಭಜನೆ ನಂತರ ಭಾರತ ಮತ್ತು ಪಾಕಿಸ್ತಾನಗಳ ರೈಲಿನಲ್ಲಿ ಹೀಗೆಯೇ ರಾಶಿ ರಾಶಿ ಹೆಣಗಳು ಬಿದ್ದಿದ್ದವು.
ಪಾಕಿಸ್ತಾನದಿಂದ ಹಾಗೆ ಬಂದ ನಾಯಿಗಳನ್ನು ಭಾರತ ಏನು ಮಾಡಿತು ಎಂಬ ಬಗ್ಗೆ ವಿವರಗಳೇನೂ ಲಭ್ಯ ಇಲ್ಲ. ಆದರೆ ಪಾಕಿಸ್ತಾನದ ಕ್ಷುಲ್ಲಕ ಸಂಘರ್ಷದ ಉತ್ಸಾಹಕ್ಕೆ ತಣ್ಣೀರೆರಚಿದ ಭಾರತದ ರಾಯಭಾರಿಗಳ ವಿವೇಚನೆಗೆ ಶಹಬ್ಬಾಸ್ ಹೇಳಬೇಕು. ಆ ನಾಯಿಗಳನ್ನು ಚೆನ್ನಾಗಿ ತೊಳೆದು, ಆಹಾರ ನೀಡಿ ಹಿಂತಿರುಗಿಸುವುದು ಉತ್ತಮ ಉತ್ತರವಾಗುತ್ತಿತ್ತೇನೋ. ಅದೇನೇ ಇರಲಿ, ಆ ವಿಷಯವನ್ನು ಅಲ್ಲಿಗೇ ಬಿಡುವ ನಿರ್ಣಯ ಭಾರತದ ಅಧಿಕಾರಿ ವರ್ಗದ್ದು.
ಒಟ್ಟಿನಲ್ಲಿ ಈ ಘಟನೆ ಒಂದಂಶವನ್ನಂತೂ ಸಾರುತ್ತದೆ. ಯುಪಿಎ ಸರ್ಕಾರದ ಕೆಲವರು ಪಾಕಿಸ್ತಾನದೊಂದಿಗೆ ಶಾಂತಿಯ ಕನವರಿಕೆಯಲ್ಲಿದ್ದಾರೆ. ಆದರೆ ಇಂಥ ವಿಕ್ಷಿಪ್ತರೊಂದಿಗೆ ಶಾಂತಿ ಸಾಧಿಸುವುದು ಸುಲಭವೇ? ಹಳೆಯ ಜಾಣ ನುಡಿಯೊಂದನ್ನು ಈ ವಿದ್ಯಮಾನವು ನೆನಪಿಸುತ್ತಿದೆ. 'ಮೂರ್ಖನೊಂದಿಗೆ ವಾದಕ್ಕೆ ಹೋಗಬಾರದು. ಆತ ನಿಮ್ಮನ್ನು ಅವನ ಮಟ್ಟಕ್ಕೆ ಇಳಿಸಿ ನಂತರ ಆತನ ಅನುಭವದಿಂದ ನಿಮ್ಮನ್ನು ಹಣಿದುಹಾಕುತ್ತಾನೆ.'
- ರಾಜೀವ್ ಶರ್ಮಾ
ವಿದೇಶಿ ವ್ಯವಹಾರ ವಿಶ್ಲೇಷಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

