ಅಂಕಣಗಳು

'ನಾಚಿಕೆ ಆಗಬೇಕಿರುವುದು ಭಾರತಕ್ಕೆ!'

Published On :

'ಅದನ್ನು ಪಿತೂರಿ ಎಂದೇಕೆ ಕರೆಯಬೇಕು? ಒಂದು ವೇಳೆ ಡಿಸೆಂಬರ್ 13ರ ಘಟನೆಯನ್ನು ಪಿತೂರಿ ಎಂದು ಕರೆದರೆ, ಕಾಶ್ಮೀರದ ಸಂಪೂರ್ಣ ಉಗ್ರವಾದವನ್ನೂ ಪಿತೂರಿ ಎಂದೇ ಕರೆದಂತೆ'
ಸಂಸತ್ ದಾಳಿಯನ್ನು ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್ 'ಪಿತೂರಿ' ಎಂದು ಕರೆದದ್ದನ್ನು ಖಂಡಿಸುತ್ತಾ ಅಫ್ಜಲ್ ಗುರು 2008ರಲ್ಲಿ ಉರ್ದು ವಾರಪತ್ರಿಕೆಯೊಂದರ ಸಂಪಾದಕರಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿದ್ದ.
ದೆಹಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬವೇರುವುದಕ್ಕೆ 5 ವರ್ಷಗಳ ಮುನ್ನ, ಶ್ರೀನಗರದ ಪತ್ರಿಕೆಗೆ ಬರೆದ  ಪತ್ರದಲ್ಲಿ ಆತ ಸಂಸತ್ ದಾಳಿಯ ಸಮರ್ಥನೆ ಮಾಡಿಕೊಂಡಿದ್ದ.
'ಕ್ವಾಮಿ ವಿಕಾರ್‌' ವಾರ ಪತ್ರಿಕೆಯ ಸಂಪಾದಕ ಶಬ್ನಮ್ ಕಯೂಮ್‌ಗೆ ಅಫ್ಜಲ್‌ನ ಈ ಪತ್ರ 2008ರಲ್ಲೇ ತಲುಪಿತ್ತಾದರೂ, ಅಫ್ಜಲ್ 'ತೀವ್ರ ಹತಾಶೆಯಲ್ಲಿದ್ದಾಗ' ಈ ಪತ್ರ ಬರೆದಿದ್ದಾನೆ ಎಂಬ ಕಾರಣದಿಂದಾಗಿ ಅವರು ಅದನ್ನು ಪ್ರಕಟಿಸಲಿಲ್ಲವಂತೆ. 'ಆತ ಅಮಾಯಕನಾಗಿದ್ದ. ಅಸಹನೆಯಿಂದಾಗಿ ತಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾನೆ ಎಂದು ನನಗನ್ನಿಸಿತ್ತು. ಈಗಂತೂ ಆತ ಜೀವಂತವಾಗಿಲ್ಲ, ಆ ಪತ್ರವನ್ನು ಪ್ರಕಟಿಸಿದೆ' ಎಂದು ಅವರು ಹೇಳಿದ್ದಾರೆ.
ತಾವು ಅಫ್ಜಲ್‌ನನ್ನು ಮುಖತಃ ಎಂದೂ ಭೇಟಿಯಾಗಿಲ್ಲ ಎನ್ನುವ ಕಯೂಮ್, ಆಜಾದಿಯ ಪರವಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಹತ್ಯೆಗಳಿಗೆ ಭಾರತದ ರಕ್ಷಣಾ ಪಡೆಗಳೇ ಹೊಣೆ ಎಂದು ಮೊದಲಿನಿಂದಲೂ ವಾದಿಸುತ್ತಾ ಬಂದಿದ್ದಾರೆ.
 'ಬಹುಶಃ ಜೈಲಿನಲ್ಲಿದ್ದಾಗ ಆತ ನನ್ನ ಪತ್ರಿಕೆ ಓದಿರಬಹುದು. ಹಿಜ್ಬುಲ್ ಮುಖ್ಯಸ್ಥನಿಗೆ ನಮ್ಮ ಪತ್ರಿಕೆಯ ಮೂಲಕ ಉತ್ತರ ನೀಡುವುದಕ್ಕಾಗಿ ಆತ ಪತ್ರ ಬರೆದಿದ್ದ. 2008ರಲ್ಲಿ ಸಾಮಾನ್ಯ ಅಂಚೆಯ ಮೂಲಕ ಆ ಪತ್ರ ನನ್ನ ಕೈ ಸೇರಿತು. ನಾನದನ್ನು ಜೋಪಾನವಾಗಿಟ್ಟೆ' ಎನ್ನುತ್ತಾರೆ
ಇನ್ನು ಅಫ್ಜಲ್ ಗುರೂನ ಸಂಬಂಧಿ ಯಾಸಿನ್ ಗುರು, ಕ್ವಾಮಿ ವಿಕಾರ್ ಪತ್ರಿಕೆಯಲ್ಲಿ ಪ್ರಕಟವಾದ ಪತ್ರ ತನ್ನಣ್ಣನದ್ದೇ ಎಂದು ಸ್ಪಷ್ಟಪಡಿಸಿದ್ದಾನೆ- 'ಬಹಳಷ್ಟು ಜನ ಆ ಪತ್ರ ಅಸಲಿಯೋ ನಕಲಿಯೋ ಎಂಬ ಬಗ್ಗೆ ಅನುಮಾನ ಪಟ್ಟರು. ಆ ಪತ್ರಿಕೆಯಿಂದ ಕಾಪಿ ಪಡೆದು ನೋಡಿದೆ. ಅದು ಅಫ್ಜಲ್‌ನದ್ದೇ ಕೈ ಬರಹ ಎಂದು ಸ್ಪಷ್ಟವಾಯಿತು' ಎಂದಿದ್ದಾನೆ.
ತನ್ನ ಪತ್ರದಲ್ಲಿ ಅಫ್ಜಲ್, 'ಭಾರತ ಕಾಶ್ಮೀರದಲ್ಲಿ ಎಲ್ಲಿಯವರೆಗೂ ರಕ್ತದೋಕುಳಿ ಹರಿಸುತ್ತಿರುತ್ತದೋ ಅಲ್ಲಿಯವರೆಗೂ 'ಪ್ರತಿರೋಧ ಚಳುವಳಿ' ನಡೆಯುತ್ತಲೇ ಇರುತ್ತದೆ. ಡಿಸೆಂಬರ್ 13ರ ಘಟನೆಯ ಬಗ್ಗೆ ನಾವು ನಾಚಿಕೆ ಪಟ್ಟುಕೊಳ್ಳಬಾರದು. ಕಾಶ್ಮೀರವನ್ನು ಸ್ಮಶಾನವನ್ನಾಗಿಸಿ, ನಮ್ಮ ಅಮಾಯಕ ಜನರ ರಕ್ತ ಹರಿಸಿ, ತಮ್ಮ ಪಡೆಗಳನ್ನೆಲ್ಲ ನಮ್ಮ ನೆಲದ ಪ್ರತಿ ಮೂಲೆಯಲ್ಲೂ ನಿಯೋಜಿಸಿರುವ ಭಾರತ ಎಂದಾದರೂ ತನ್ನ ಕೃತ್ಯಕ್ಕೆ ನಾಚಿಕೆ ಪಟ್ಟುಕೊಂಡಿದೆಯೇ? ತಾವೇ ನೀಡಿದ ಭರವಸೆಯನ್ನು, ಬದ್ಧತೆಯನ್ನು ಉಲ್ಲಂಘಿಸಿ ಕಾಶ್ಮೀರ ಭಾರತದ ಭಾಗ ಎಂದು ಹೇಳುವಾಗ ಅವರಿಗೆ ನಾಚಿಕೆಯಾಗುತ್ತದೆಯೇ? ಹಾಗಿದ್ದರೆ ನಾವೇಕೆ ನಾಚಿಕೆ ಪಟ್ಟುಕೊಳ್ಳಬೇಕು(ಸಂಸತ್ ದಾಳಿಯ ಬಗ್ಗೆ)?' ಎಂದು ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್‌ನನ್ನು ಅಫ್ಜಲ್ ಪ್ರಶ್ನಿಸಿದ್ದಾನೆ.
ಭಾರತದ ಪ್ರಭುಗಳೂ ತಮ್ಮ ವಾಗ್ದಾನವನ್ನು ಮುರಿಯುವುದಕ್ಕೆ ನಾಚಿಕೆ ಪಟ್ಟುಕೊಳ್ಳುತ್ತಿಲ್ಲ, ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ(ಶ್ರೀನಗರ) ಭಾಗಿಯಾದ ಮಿಲಿಟರಿ ಮತ್ತು ಸರ್ಕಾರಿ ಅಧಿಕಾರಿಗಳನ್ನು ಅದು ಮತ್ತೆ ಅವರ ಸ್ಥಾನದಲ್ಲಿ ತಂದು ಕೂರಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಪ್ರತಿಭಟನೆಯ ಜತೆಗೆ ಗಣತಂತ್ರದ ಎಲ್ಲಾ ತತ್ವಗಳನ್ನೂ ಅದು ಧಿಕ್ಕರಿಸುತ್ತದೆ. ಹಾಗಿದ್ದಾಗ ನಾವೇಕೆ ಡಿಸೆಂಬರ್ 13ರ ಘಟನೆಗೆ ನಾಚಿಕೆ ಪಟ್ಟುಕೊಳ್ಳಬೇಕು?' ಎಂದು ಪ್ರಶ್ನಿಸುವ ಅಫ್ಜಲ್, 'ಹಿಜ್ಬುಲ್ ಮುಖ್ಯಸ್ಥ ಸಂಸತ್ ಮೇಲಿನ ದಾಳಿಯನ್ನು ಪಿತೂರಿ ಎಂದು ಕರೆಯುವ ಮೂಲಕ ಅದನ್ನು ಕಡೆಗಣಿಸುತ್ತಿದ್ದಾರೆ' ಎಂದಿದ್ದಾನೆ.
'ಸಂಸತ್ ದಾಳಿ ಅವರ ಹೃದಯಗಳಿಗೆ ಗಾಯ ಮಾಡಿದೆ ಎಂದಾದರೆ, ನಿರಂತರವಾಗಿ ಭಾರತೀಯ ಸೇನೆ ಕಾಶ್ಮೀರಿಗಳ ಹೃದಯಕ್ಕೆ ಮಾಡುತ್ತಾ ಬಂದಿರುವ ಗಾಯಕ್ಕೆ ಯಾರು ಹೊಣೆ? ಭಾರತೀಯರು ನಮ್ಮ ಹಿರಿಯರಿಗೆ, ಸಹೋದರಿಯರಿಗೆ, ಹೆಣ್ಣುಮಕ್ಕಳಿಗೆ ಮಾಡಿರುವ ಅನ್ಯಾಯವನ್ನು ಮರೆತರೆ ಅದು ಹೇಡಿತನ, ದೇಶದ್ರೋಹವೆನಿಸಿಕೊಳ್ಳುತ್ತದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸುವುದು ಭಯೋತ್ಪಾದನಾ ಕೃತ್ಯವೆನಿಸಿಕೊಳ್ಳುತ್ತದೆ. ಅಂತಹ ಕೆಲಸಕ್ಕೆ ನಾಚಿಕೆ ಪಟ್ಟುಕೊಳ್ಳಬೇಕು' ಎಂದು ಅಫ್ಜಲ್ ಹೇಳುತ್ತಾನೆ. ಆದರೆ ಆತ ಸಂಸತ್ತನ್ನು ಮಾತ್ರ 'ಆವಾಮಿ ಜಗಹ್‌'(ಸಾರ್ವಜನಿಕ ಸ್ಥಳ) ಎಂದು ಕರೆಯುವುದಿಲ್ಲ.
'ಏನಾದರೊಂದನ್ನು ಹೇಳಿ ಅಥವಾ ಮಾಡಿದ ನಂತರ ನಾಚಿಕೆಯಾದರೆ ನೀವು ಮಾಡಿದ್ದು ತಪ್ಪು. ಮುಚ್ಚಿಡಬೇಕು ಎಂದು ನಿಮಗೆ ಅನ್ನಿಸಿದರೆ ಅದು ನಿಶ್ಚಿತವಾಗಿಯೂ ತಪ್ಪು ಅದನ್ನು ಸಮರ್ಥಿಸಿಕೊಳ್ಳುವುದೂ ತರವಲ್ಲ. ನಾವೇನೇ ಮಾಡಿದರೂ ಅದನ್ನು ಮುಚ್ಚಿಡುವುದಿಲ್ಲ. ಪ್ರತಿರೋಧ ನಮ್ಮ ಹಕ್ಕು' ಎಂದು ಅಫ್ಜಲ್ ಹಿಜ್ಬುಲ್ ಮುಖ್ಯಸ್ಥನಿಗೆ ಪತ್ರದ ಮೂಲಕ ಹೇಳಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.