ಆಶಾ ಎಂಬ ಅನಾಥೆಗೆ ಪರಿಹಾರವೇಕಿಲ್ಲ?
ಜೂನ್ 22, 2012 ರಂದು ಒಂಟಿ ಚಿಂತತಾಂಡದಲ್ಲಿ (ಗುಲ್ಬರ್ಗಾದಿಂದ 4 ಗಂಟೆ ಪ್ರಯಾಣದ ಒಂದು ಸ್ಥಳ) ಹೆಣ್ಣು ಮಕ್ಕಳ ಮಾರಾಟ ನಡೆಯುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗ ತೊಡಗಿತ್ತು. ಕೂಡಲೇ ಆ ಸ್ಥಳಕ್ಕೆ ಭೇಟಿ ನೀಡಬೇಕೆಂದು ನಿರ್ಧರಿಸಿ ಅಲ್ಲಿಗೆ ಧಾವಿಸಿದೆ.
ಒಂಟಿ ಚಿಂತತಾಂಡ ಆಂಧ್ರಪ್ರದೇಶದ ಗಡಿ ಜಿಲ್ಲೆಗೆ ಅಂಟಿಕೊಂಡ ಗ್ರಾಮ. ಇಲ್ಲಿ ಹೆಣ್ಣು ಮಕ್ಕಳು ಏಕೆ ಮಾರಾಟವಾಗುತ್ತಾರೆ, ಅದಕ್ಕೆ ಸೂಕ್ತ ಪರಿಹಾರವೇನು ಎಂಬ ಬಗ್ಗೆ ತಾಂಡಾದಿಂದ ಹಿಂದಿರುಗಿ ರಾತ್ರಿ 9ಕ್ಕೆ ಜಿಲ್ಲಾಧಿಕಾರಿಗಳು, ಸಿಇಓ, ಎಸ್ಪಿಗಳ ಡಿಡಿಗಳೊಂದಿಗೆ ಸಭೆ ನಡೆಸಿ ಹೈದರಾಬಾದ್ಗೆ ಬಂದು ತಲುಪಿದೆ. ಅಲ್ಲಿ ಮಹಿಳೆಯರ ವಿರುದ್ಧದ ಅಪರಾಧ ದೇಶದಲ್ಲೇ ನಂ. 1 ಎಂದು ಆಗಿತ್ತು. ಅಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ಸದಸ್ಯರ ನೇಮಕಕ್ಕೆ ಹೋರಾಟ ನಡೆಯುತ್ತಿತ್ತು. ಅದರಲ್ಲಿ ಪಾಲ್ಗೊಂಡಿದ್ದಾಗಲೇ ಅಲ್ಲಿಗೆ ಎರಡು ದೂರವಾಣಿ ಕರೆ ಬಂದವು. ಮಂಡ್ಯದ ಮದ್ದೂರಿನ ಬಳಿ ಲೈಂಗಿಕ ಕಿರುಕುಳ ನೀಡಿ ಚಲಿಸುವ ರೈಲಿನಿಂದ ಯುವತಿಯೊಬ್ಬಳ್ಳನ್ನು ತಳ್ಳಲಾಗಿದೆ ಎಂದು. ಹೈದರಾಬಾದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಆ ದಿನ ಕಚೇರಿ ವಾಹನದ ಚಾಲಕ ರಜೆ ಪಡೆದಿದ್ದರಿಂದ ಟ್ಯಾಕ್ಸಿಯನ್ನು ತರಿಸಿಕೊಂಡು ಸೀದಾ ಬೆಂಗಳೂರಿನಿಂದ ಟ್ಯಾಕ್ಸಿಯ ಮೂಲಕ ಮಂಡ್ಯ ತಲುಪಿದೆ. ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ಧಾವಿಸಿದೆ. ಅಲ್ಲಿ ಯುವತಿ ಭೇಟಿ ಮಾಡಿ, ಆಕೆಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ನಂತರ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಆಕೆಯ ಆರೋಗ್ಯದ ಬಗ್ಗೆ ಚರ್ಚಿಸಿ ನನ್ನ ಅಭಿಪ್ರಾಯಗಳನ್ನು ತಿಳಿಸಿ ಮುಂದಿನ ತಪಾಸಣೆ ಬಗ್ಗೆ ಚರ್ಚಿಸಿದೆ. ಪುನಃ ಮಂಡ್ಯ ಐ.ಬಿ.ಯಲ್ಲಿ ಎ.ಸಿ.(ಮಹಿಳೆ), ತಹಶೀಲ್ದಾರ್ (ಮಹಿಳೆ), ಡಿವೈಎಸ್ಪಿ, ಡಿ.ಡಿ (ಮಹಿಳೆ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಇದೊಂದು ನಮ್ಮ ವ್ಯವಸ್ಥೆಗೆ ಒಂದು ಸವಾಲು ಎಂದು ಸ್ವೀಕರಿಸಿ ಆಕೆಯನ್ನು ಸಂಪೂರ್ಣವಾಗಿ, ರೀಹ್ಯಾಬಿಲಿಟೇಷನ್ ಮಾಡಲು ತೀರ್ಮಾನವಾಯಿತು. ಇದನ್ನು ವೈಯಕ್ತಿಕ ಹಾಗೂ ಸರ್ಕಾರಿ ನೆಲೆಗಳೆರಡರಲ್ಲೂ ತೆಗೆದುಕೊಳ್ಳೋಣ ಹಾಗೂ ಕೇವಲ ಹೇಳಿಕೆ, ಭಾಷಣಗಳಿಗೆ ಇದನ್ನು ಮುಗಿಸುವುದು ಬೇಡವೆಂದು ಹೇಳಿದಾಗ ಅಲ್ಲಿನ ತಹಶೀಲ್ದಾರ್ ಆಕೆಗಾಗಿ ಖರೀದಿಸಿದ್ದ ಬಟ್ಟೆಗಳನ್ನು ತರಿಸಿದರು. ಎಲ್ಲರೂ ಉತ್ಸಾಹದಿಂದ ಕೆಲಸಕ್ಕೆ ಸಿದ್ದರಾದರು. ಈ ಮಧ್ಯೆ ಘಟನೆ ಬಗ್ಗೆ ಸಚಿವರೊಂದಿಗೆ ಚರ್ಚಿಸಿದಾಗ ಆಕೆ ಬಗ್ಗೆ ಕೆಲ ಅನುಮಾನದ ಮಾತುಗಳನ್ನು ಆಡಿದರು. ಅದರಿಂದ ದಿಗಿಲುಗೊಂಡು ಆಕೆಗೆ ಮತ್ತಷ್ಟು ವೈದ್ಯಕೀಯ ತಪಾಸಣೆಗೆ ಮುಂದಾದೆವು. ಆದರೆ ಯಾವುದೇ ಅಹಿತಕರವಾದ ವರದಿ ಆಕೆಯ ವೈದ್ಯಕೀಯ ತಪಾಸಣೆಯಿಂದ ಬರಲಿಲ್ಲ.
ದಿ.28ರಂದು ಪುನಃ ನಾನು ಮಂಡ್ಯಕ್ಕೆ ಹೋಗಿ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದೆ. ಒಟ್ಟು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಸುರಕ್ಷತೆ ಕ್ರಮವೇನು ಎಂಬ ಬಗ್ಗೆ ಚರ್ಚಿಸಿದೆ. ರೈಲ್ವೆ ಅಧಿಕಾರಿಗಳು ಸಿಬ್ಬಂದಿಗಳ ಕೊರತೆ ಬಗ್ಗೆ ತಿಳಿಸಿದರು. ಶೇ. 50ರಷ್ಟು ಕೇಂದ್ರ ಸರ್ಕಾರದಿಂದ ಶೇ.50 ರಾಜ್ಯ ಸರ್ಕಾರದಿಂದ ಕೊಡುವ ಪದ್ದತಿ ಇದೆ ಎಂದು ವಿವರಿಸಿದರು. ಆ ವೇಳೆಗೆ ರಾಜ್ಯದಲ್ಲಿ ಅಧಿವೇಶನ ನಡೆಯುತ್ತಿತ್ತು. ಗೃಹ ಮಂತ್ರಿಗಳಿಗೆ ಸಂಪರ್ಕಿಸಿ ಈ ಬಗ್ಗೆ ಕೂಡಲೇ ರಾಜ್ಯಮಟ್ಟದ ರೈಲ್ವೆ ಸುರಕ್ಷತೆ ಬಗ್ಗೆ ಸಭೆ ನಡೆಸಿ ನಮ್ಮನ್ನು ಆಹ್ವಾನಿಸಿ ಎಂದು ತಿಳಿಸಿದಾಗ ಅದಕ್ಕೆ ಒಪ್ಪಿಗೆ ಸೂಚಿಸಿದರು. ಆ ಸಭೆ ಮುಂದೆ ನಡೆಯಲೇ ಇಲ್ಲ. ಗೃಹಮಂತ್ರಿಗಳು ನನ್ನ ಅಭಿಪ್ರಾಯಗಳನ್ನು ಗೌರವಿಸಿದ್ರು, ಒಪ್ಪಿದ್ರು, ಆದರೆ ಕಾರ್ಯದಲ್ಲಿ ಅನುಷ್ಠಾನವಾಗಲಿಲ್ಲ. ಅಂದಿನ ರೈಲ್ವೆ ಮಂತ್ರಿ ಕೆ.ಹೆಚ್.ಮುನಿಯಪ್ಪ ಕೆ.ಆರ್.ಪೇಟೆಗೆ ಬಂದಿದ್ದರು. ಯಾವುದೇ ಕ್ರಮ ಜರುಗಿಸದೇ ನಿಷ್ಕ್ರಿಯತೆ ತೋರಿದರು. ಮೈಸೂರಿನ ವಿರೋಧ ಪಕ್ಷದ ನಾಯಕರು ಸಂಸದ ಹೆಚ್.ವಿಶ್ವನಾಥ್ ಅನಾಥೆಯ ಬಗ್ಗೆ ಮಾತನಾಡಲೇ ಇಲ್ಲ. ಹೀಗೆ ಎಲ್ಲರೂ ನಿರುತ್ಸಾಹ ತೋರಿಸಿದರು. ಆಗ ರಾಜೀನಾಮೆ ಕೊಟ್ಟು ಹೊರಗೆ ಬಂದು ಹೋರಾಟ ಮಾಡಬೇಕು ಎಂದು ತೀವ್ರವಾಗಿ ಅನಿಸತೊಡಗಿತು.
ದಿ. 28 ರಂದು ಮಂಡ್ಯದಿಂದ ರಾತ್ರಿ ಮೈಸೂರಿಗೆ ತಲುಪಿ ವಾಸ್ತವ್ಯ ಮಾಡಿ ಬೆಳಿಗ್ಗೆ ನಾನು, ಸದಸ್ಯೆ ವಿ.ಮೈಥಿಲಿ ವೀರಾಜಪೇಟೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯನ್ನು ಅವರ ಕುಟುಂಬದವರನ್ನು ಭೇಟಿಯಾಗಿ ಕೆಲ ಕಾಲ ಚರ್ಚೆ ಹಾಗೂ ಪರಿಶೀಲನೆ ನಡೆಸಿದೆವು. ಈ ಮಧ್ಯೆ ಆಶಾ ಮೈಸೂರು ಜಿಲ್ಲೆಗೆ ಸೇರಿದ್ದ ಹುಡುಗಿಯಾದ್ದರಿಂದ ಮೈಸೂರಿಗೆ ಸ್ಥಳಾಂತರವಾಯಿತು. ಇಲ್ಲಿಯವರೆಗೂ ಮಂಡ್ಯದಲ್ಲಿ ನಡೆಸಿದ ಸಿದ್ಧತೆ ಮತ್ತೆ ಹೊಸದಾಗಿ ಮೈಸೂರಿನ ಅಧಿಕಾರಿಗಳೊಂದಿಗೆ ನಡೆಸಬೇಕಾಯಿತು.
ಮೈಸೂರಿನಲ್ಲಿ ಪುನಃ ಆರಂಭಿಸಬೇಕಾದ ವ್ಯವಸ್ಥೆ ಬಗ್ಗೆ ಬೇಸರಿಸಿಕೊಳ್ಳದೆ ಆಶಾ ಬದುಕಿಗೆ ಒಂದು ಪರಿಹಾರ ಸಿಗಲೇಬೇಕೆಂದು ಪುನಃ ಮೈಸೂರು ಅಧಿಕಾರಿಗಳೊಂದಿಗೆ ಚರ್ಚಿಸಿ ಆಕೆಗೆ ಒಂದು ಉತ್ತಮ ಎನ್ಜಿಒನಲ್ಲಿ ಪುನರ್ವಸತಿ ಕಲ್ಪಿಸಿ ಕೆಲಸ ಆರಂಭಿಸಿದೆವು. ಮೈಸೂರು ಎನ್ಜಿಒಗೆ ಭೇಟಿ ನೀಡಿದಾಗ ಆಕೆ ಕಣ್ಣೀರಿಟ್ಟಳು. 'ನನಗೆ ತಂದೆ ತಾಯಿ ಇಲ್ಲ ಅಜ್ಜಿ ಒಬ್ಬರೇ ನಾನು ದುಡಿಯಲು ಹೋಗಬೇಕು. ನನ್ನ ಅಜ್ಜಿ ಉಪವಾಸ ಬೀಳುತ್ತಿದ್ದಾರೆ' ಎಂದು. ಕೂಡಲೇ ಈ ಬಗ್ಗೆ ಮೈಸೂರು ಡಿ.ಸಿ.ಗೆ ಸಂಪರ್ಕಿಸಿ ಅವರ ಅಜ್ಜಿಗೆ ಆಹಾರ ಧಾನ್ಯಗಳನ್ನು ಒದಗಿಸಲು ವಿನಂತಿಸಿದೆ. ತದನಂತರ ಅವರ ಅಜ್ಜಿ ಇನ್ನಿತರ ಕುಟುಂಬದ ಹಿತೈಷಿಗಳೊಂದಿಗೆ ಚರ್ಚಿಸಿ ವರದಿ ತಯಾರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂತ್ರಿಗಳ ಮೂಲಕ ಸರ್ಕಾರದಿಂದ ಕ್ರಮ ವಹಿಸಲು ವರದಿ ನೀಡಿ ಪರಿಹಾರ ನೀಡಲು ಕೋರಿದೆ. ಮಂತ್ರಿಗಳು ಅತ್ಯಂತ ನಿಕೃಷ್ಟವಾಗಿ ಈ ಕೋರಿಕೆಯನ್ನು ತಿರಸ್ಕರಿಸಿದರು. ಅಲ್ಲದೆ ಕೆಲ ನಿಮಿಷ ಚರ್ಚಿಸಲೂ ತಯಾರಾಗಲಿಲ್ಲ. ಈ ಬಗ್ಗೆ ತೀವ್ರ ನಿರಾಶೆಗೊಂಡ ನಾನು ಮನನೊಂದು ರಾಜಿನಾಮೆ ಕೊಟ್ಟು ಹೊರಬರುವುದರೊಂದಿಗೆ ಅಂತ್ಯವಾಗಿದೆ.
ಗಂಭೀರವಾದ ವಿಷಯವೆಂದರೆ ಸಮಾಜದ ದೊಡ್ಡ ಸವಾಲು ಮತ್ತು ಕಳಂಕ ನಾಪತ್ತೆಯಾಗುತ್ತಿರುವ ಹದಿಹರೆಯದ ಹಿನ್ನೆಲೆ. ಆಶಾ ಕೇವಲ ಪ್ರಯಾಣ ಮಾಡುವ ಉದ್ಯೋಗಿ ಅಷ್ಟೇ ಆಗಿರಲಿಲ್ಲ. ಈ ಘಟನೆಗೆ 9 ತಿಂಗಳ ಹಿಂದೆ ತಂದೆ ತಾಯಿ, ಇಲ್ಲದ ಅನಾಥೆ. ತಮ್ಮ ಅಜ್ಜಿ ಅವರೊಂದಿಗೆ ಜೀವನ ನಡೆಸುತ್ತಿದ್ದಳು. ಬಡತನ ಜಗಳದಿಂದ ಬೇಸತ್ತು ಮನೆ ಬಿಟ್ಟು ಮೈಸೂರಿನಿಂದ ಬೆಂಗಳೂರಿಗೆ ರೈಲ್ವೆನಿಲ್ದಾಣಕ್ಕೆ ಬಂದು ಇಳಿದಿದ್ದಾಳೆ. ಅಲ್ಲಿ ಅನಾಥೆಯಾಗಿ ಓಡಾಡಿದ್ದಾಳೆ. ಇವಳು ಅನಾಥೆ ಎಂದು ಗುರುತಿಸಿದ್ದು ಈ ರೀತಿ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಎನ್ಜಿಒ ಡಾನ್ ಬಾಸ್ಕೊ. ಅವಳನ್ನು ಪುನರ್ವಸತಿ ಕೇಂದ್ರಕ್ಕೆ ಕರೆತಂದು, ಅಲ್ಲಿ ಆಕೆಗೆ ಆಪ್ತ ಸಮಾಲೋಚನೆ ಮಾಡಿದ್ದಾರೆ. ಈಕೆಯನ್ನು ಅಲ್ಲಿಗೆ ಸುಮಾರು ಒಂದು ವಾರ ಎನ್ಜಿಒನಲ್ಲೇ ಉಳಿಸಿಕೊಂಡಿದ್ದಾರೆ. ಈ ಮಧ್ಯೆ ತನ್ನ ಹತ್ತಿರದ ಸಂಬಂಧಿಗಳು ಬೆಂಗಳೂರಿನಲ್ಲೇ ಇರುವ ಬಗ್ಗೆ ಆಶಾ ಆಪ್ತ ಸಮಲೋಚನೆಯಲ್ಲಿ ತಿಳಿಸಿದ್ದಾಳೆ. ಆ ಮಾಹಿತಿ ಆಧಾರದ ಮೇಲೆ ಆಕೆಯ ಸಂಬಂಧಿಕರನ್ನು ಎನ್ಜಿಒಗೆ ಕರೆಯಿಸಿ ಸಮಾಲೋಚನೆಯ ನಂತರ ಆಶಾಳನ್ನು ಅವರೊಂದಿಗೆ ಎನ್ಜಿಒ ಕಳುಹಿಸಿಕೊಟ್ಟಿದೆ. ಸಂಬಂಧಿಕರ ಮನೆಯಲ್ಲೇ ಇದ್ದ ಆಶಾ ಇನ್ನು ಬಹಳ ದಿವಸ ಸಂಬಂಧಿಕರ ಮನೆಯಲ್ಲಿ ಇರಲು ಸಾಧ್ಯವಿಲ್ಲವೆಂದು ಭಾವಿಸಿ ಎನ್ಜಿಒನಲ್ಲಿ ಪರಿಚಯವಾದ ಸ್ನೇಹಿತೆಯನ್ನು ಫೋನ್ ಮೂಲಕ ಸಂಪರ್ಕಿಸಿದ್ದಾಳೆ. ಗಾರ್ಮೆಂಟ್ನಲ್ಲಿ ನೌಕರಳಾಗಿದ್ದ ಆಕೆ, ಆಶಾ ಬಂದರೆ ಅಲ್ಲೇ ಸೇರಿಸುವುದಾಗಿ ಭರವಸೆ ನೀಡಿದ್ದಾಳೆ. ಅದನ್ನು ನಂಬಿದ ಆಶಾ ಈಕೆಯ ಜೊತೆ ಹೋಗಿ ಗಾರ್ಮೆಂಟ್ ಕೆಲಸಕ್ಕೆ ಸೇರುತ್ತಾಳೆ.
ಮುಂದೆ ಕೆಲವು ತಿಂಗಳುಗಳ ನಂತರ ಸ್ನೇಹಿತೆಯೊಂದಿಗೆ ಜಗಳ ಉಂಟಾದಾಗ ಆಶಾ ದಾರಿ ಕಾಣದೆ ಬೆಂಗಳೂರಿನಿಂದ ಮೈಸೂರಿಗೆ ಟ್ರೈನ್ ಹತ್ತಿದ್ದಾಳೆ. ದಾರಿಯಲ್ಲಿ ಬರುವಾಗ ದುಷ್ಟರ ಕೆಂಗಣ್ಣಿಗೆ ಗುರಿಯಾಗಿ ಲೈಂಗಿಕ ಕಿರುಕುಳಕ್ಕೆ ಸಹಕರಿಸದ ಕಾರಣಕ್ಕೆ ಚಲಿಸುವ ರೈಲಿನಿಂದ ತಳಲ್ಪಟ್ಟಿದ್ದಾಳೆ. ಅದೃಷ್ಟವಶಾತ್ ಬದುಕಿ ಉಳಿದಿದ್ದಾಳೆ. ಇಷ್ಟೆಲ್ಲ ಪ್ರಚಾರದಿಂದಾಗಿ ಸಹಜವಾಗಿ ತನ್ನ ಊರಿಗೆ ಹೋಗಲಾಗದೇ, ಆರೋಪಿಗಳು ನಾಳೆ ತೊಂದರೆ ಕೊಟ್ಟರೆ ಎಂಬ ಭಯದಲ್ಲಿ ಆಶಾ ಎನ್ಜಿಒನಲ್ಲೇ ಇದ್ದಾಳೆ.
ಈ ಮಧ್ಯೆ ಮೈಸೂರಿನಲ್ಲಿ ಆಶಾ ಇರುವ ಎನ್ಜಿಒ ವ್ಯವಸ್ಥಾಪಕರು ಡಾ.ರಾಜ್ ಕುಟುಂಬಕ್ಕೆ ಹತ್ತಿರದವರು. ಅವರು ಅವಳ ಕತೆಯನ್ನು ಪಾರ್ವತಮ್ಮ ಕುಟುಂಬಕ್ಕೆ ತಿಳಿಸಿದ ಪರಿಣಾಮ ಶಿವರಾಜಕುಮಾರ್ ಅವರು ಹುಟ್ಟುಹಬ್ಬಕ್ಕೆ 25,000 ರು.ನೀಡಿದ್ದಾರೆ. ಆದರೆ ಸರ್ಕಾರ ಯಾವುದೇ ಪರಿಹಾರವನ್ನು ನೀಡಲಿಲ್ಲ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ನಾನು ಇಡೀ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಆ್ಯಸಿಡ್ ದಾಳಿ ಹಾಗೂ ಸೀಮೆ ಎಣ್ಣೆ ದಾಳಿಯ ಸರಿಸುಮಾರು 26 ಪ್ರಕರಣಗಳಿಗೂ ಖುದ್ದಾಗಿ ಹೋಗಿ ಪರಿಹಾರವನ್ನು ನೀಡಿರುತ್ತೇನೆ. ಈ ಪರಿಹಾರ ಇದೆ ಎಂದು ಜನರಿಗೆ ತಿಳಿದೇ ಇರಲಿಲ್ಲ. (ಜಸ್ಟಿಸ್ ಟು ದಿ ಡೋರ್ ಬೆಳಗಾವಿ, ಹಾಸನ, ಮೈಸೂರು, ಪಾಂಡವವುರ, ಬೆಂಗಳೂರು ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಹೀಗೆ ಎಲ್ಲೆಡೆ 20 ರಿಂದ 2 ಲಕ್ಷದ ವರೆಗೆ ಪರಿಹಾರ ನೀಡಿದೆ) ಇದು ನನ್ನ ಕರ್ತವ್ಯ ಮತ್ತು ಜವಾಬ್ದಾರಿಯಾಗಿತ್ತು.
ಆದರೆ ಆಶಾಳ ವಿಷಯದಲ್ಲಿ ನಾನೇ ಅಸಹಾಯಕಳಾದೆ. (ಆಯೋಗಕ್ಕೆ ಪರಿಹಾರ ನೀಡಲು ಅವಕಾಶವಿರಲಿಲ್ಲ). ಇಲ್ಲಿ ಆಶಾಳ ಪ್ರಕರಣದ ಅಂತರಾಳವನ್ನು ಗಮನಿಸಿದರೆ- ಆಶಾ ತಂದೆ ತಾಯಿ ಇಲ್ಲದ ಹುಡುಗಿ, ಬಡತನ, ಗೊತ್ತಿಲ್ಲದ ಸ್ಥಳಕ್ಕೆ ಪಯಣ, ಎನ್ಜಿಒ ಆಸರೆ ನಂತರ ಭರವಸೆ ಇಲ್ಲದ ಬದುಕು ಇದರ ದುರ್ಲಾಭವನ್ನು ಹೆಣ್ಣು ಮಕ್ಕಳ ಸಾಗಾಟ ಜಾಲ ಬಳಸಿಕೊಳ್ಳುವ ಸಾಧ್ಯತೆಯಿತ್ತು. ಹೀಗೆ ಸಿಕ್ಕ ಹೆಣ್ಣು ಮಕ್ಕಳನ್ನು ಹಣಕ್ಕೆ ಮಾರಾಟ ಮಾಡಿ ವೇಶ್ಯಾಗೃಹಗಳು, ಅಂತರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿದೆ. ಇದು ಕೇವಲ ಹೊಟ್ಟೆ, ಬಟ್ಟೆಯ ವಿಷಯವಲ್ಲ. ಕಾನೂನು ಸುವ್ಯವಸ್ಥೆ ಮಹಿಳಾ ಸುರಕ್ಷತೆ ಮಾಫಿಯಗಳನ್ನು ಬಗ್ಗು ಬಡಿಯುವ ಒಂದು ಸವಾಲು. ಈ ಪ್ರಕರಣ ಬಹಿರಂಗಗೊಳಿಸಿದೆ. ಆದರೆ ಇದನ್ನು ವ್ಯವಸ್ಥೆಯೇ ಮರೆಯಿತು. ಆಶಾಳ ಈ ಒಂದು ಪ್ರಕರಣದ ಹಿಂದೆ ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಕಾಣೆಯಾಗುತ್ತಿರುವ 23,000 (ಇಪ್ಪತ್ಮೂರು ಸಾವಿರ) ಹೆಣ್ಣು ಮಕ್ಕಳ ಮಾನ, ಅಪಮಾನ, ನೋವು ನಲಿವು, ಕತೆ ವ್ಯಥೆ ಇದೆ. ಒಂದು ಸಣ್ಣ ಪ್ರಕರಣದಲ್ಲಿ ಪುನರ್ವಸತಿ ಮಾಡದ ನಾವು ಇನ್ನು ಇಪ್ಪತ್ಮೂರು ಸಾವಿರ ಹೆಣ್ಣು ಮಕ್ಕಳ ಬದುಕಿಗೆ ಮರು ಭರವಸೆ ತುಂಬಲು ಸಾಧ್ಯವೇ?
ಇವಕ್ಕೆಲ್ಲ ದೆಹಲಿಯ ನಿರ್ಭಯ ಪ್ರಕರಣದ ಚಳುವಳಿ ಆದರ್ಶವಾಗಬೇಕಿದೆ. ಈ ಮೂಲಕ ಸಾರ್ವಜನಿಕರಲ್ಲಿ ನನ್ನ ಕಳಕಳಿಯ ಮನವಿಯೆಂದರೆ ಈಗಲೂ ಆಶಾಗೆ ಯಾವುದೇ ಪರಿಹಾರ ದೊರೆತಿರುವುದಿಲ್ಲ. ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಲೇ ಇದ್ದೇವೆ. ಈ ಲೇಖನ ಓದಿದವರು ಸಹಾಯವನ್ನು ಒದಗಿಸಲು ಕೋರುತ್ತೇನೆ. ನನ್ನ ಟೀಕೆಯ ಹಿಂದೆ ಒಂದು ಆಳವಾದ ಒಂದು ದೂರದೃಷ್ಟಿಯ ಕಾಳಜಿಯಿದೆ.
- ಮಂಜುಳಾ ಸಿ.
ಮಾಜಿ ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

