ಅಂಕಣಗಳು

ಈ ಭರವಸೆಯ ಸಣ್ಣ ಶಿಳ್ಳೆ ಕಿವಿಗಿಂಪಾಗಿ ಹಬ್ಬಲಿ...

ಮೊನ್ನೆ ಲೋಕಸತ್ತಾ ಪಕ್ಷದ ಕೆಲವು ಪ್ರಮುಖರು, ಆ ಪಕ್ಷದಿಂದ ಚುನಾವಣೆಗೆ...

Published On :

ಮೊನ್ನೆ ಲೋಕಸತ್ತಾ ಪಕ್ಷದ ಕೆಲವು ಪ್ರಮುಖರು, ಆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿರುವ ಮೂವರು ಅಭ್ಯರ್ಥಿಗಳು ಹಾಗೂ ಕೆಲ ಕಾರ್ಯಕರ್ತರು, ನಮ್ಮ ಆಫೀಸಿಗೆ ಬಂದಿದ್ದರು. ಅವರೆಲ್ಲರೂ ವಿದ್ಯಾವಂತರು. ಇಂಗ್ಲಿಷ್, ಹಿಂದಿ, ಕನ್ನಡದಲ್ಲಿ ಚೆನ್ನಾಗಿ ಮಾತನಾಡಬಲ್ಲವರು, ವಿವೇಕವುಳ್ಳವರು, ತಮ್ಮನ್ನು ಚೆನ್ನಾಗಿ, ಪರಿಣಾಮಕಾರಿಯಾಗಿ ಪ್ರಸೆಂಟ್ ಮಾಡಿಕೊಳ್ಳಬಲ್ಲವರು. ಅವರಲ್ಲಿ ಮೂರ್ನಾಲ್ಕು ಮಂದಿ ಅಮೆರಿಕ, ಬ್ರಿಟನ್‌ನಲ್ಲಿ ಓದಿದವರು, ನೆಲೆಸಿದವರು, ಉದ್ಯೋಗ ಮಾಡಿದವರು. ಅವರಲ್ಲೊಬ್ಬರು ವರ್ಷಕ್ಕೆ ಲಕ್ಷಾಂತರ ರೂಪಾಯಿ ಪಗಾರ ಬರುವ ನೌಕರಿಯನ್ನು ಬಿಟ್ಟು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರೆಲ್ಲ ಹತ್ತಾರು ದೇಶ ಸುತ್ತಿದವರು. ಆ ದೇಶದ ಮೆರುಗಿಗೆ ಮಾರು ಹೋಗದೇ, ನಮ್ಮ ಊರು, ನಗರ, ದೇಶವನ್ನೂ ಅದೇ ರೀತಿ ಮಾಡಬೇಕೆಂಬ ಹಂಬಲ, ಕನಸು ಹೊತ್ತವರು. ಅವರ ಜತೆ ಹತ್ತು ನಿಮಿಷ ಮಾತಾಡಿದರೆ ಅವರಲ್ಲಿರುವ ಕಾಳಜಿ, ಶ್ರದ್ಧೆಯನ್ನು ಅರ್ಥಮಾಡಿಕೊಳ್ಳಬಹುದು. ನಮ್ಮ ನಗರ ಹೇಗಿರಬೇಕು, ಇಂದಿನ ಸ್ಥಿತಿಯಿಂದ ಮೇಲೇಳುವುದು ಹೇಗೆ, ಕಾನೂನು ತೊಡಕುಗಳೇನು, ಇವೆಲ್ಲವುಗಳಿಂದ ಉದ್ಧಾರವಾಗಲು ಏನು ಮಾಡಬೇಕು... ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಅವರೆಲ್ಲರಿಗೆ ನಿಶ್ಚಿತ ಕಲ್ಪನೆಗಳಿವೆ, ಕನವರಿಕೆಗಳಿವೆ. ಅವರ ಪ್ರಾಮಾಣಿಕತೆ, ಉದ್ದೇಶ, ಗುರಿ, ಕಾರ್ಯಕ್ರಮ, ಯೋಜನೆ, ಪ್ರಣಾಳಿಕೆಯಲ್ಲಿ ನನಗೆ ಯಾವ ಗೊಂದಲ, ಸಂದೇಹ ಕಾಣಲಿಲ್ಲ. ಕಾರ್ಯರೂಪಕ್ಕೆ ತರಲಾಗದ 'ಆದರ್ಶ' ಸಮಾಜದ ನಿರ್ಮಾಣದ ಬಗ್ಗೆ ಮಾತಾಡುತ್ತಿದ್ದಾರೆ ಎಂದೂ ಅನಿಸಲಿಲ್ಲ. ಅಮೆರಿಕ, ಇಂಗ್ಲೆಂಡಿನಲ್ಲಿ ಕಂಡಿದ್ದನ್ನು ಇಲ್ಲೂ ಅಳವಡಿಸಬೇಕೆಂದು ಚಡಪಡಿಸುವ ಅವಾಸ್ತವವಾದಿಗಳಂತೆ ಅವರು ಗೋಚರಿಸಲಿಲ್ಲ. ಅವರೆಲ್ಲರೂ ಅನುಕೂಲವಂತರೇ. ತಮ್ಮ ಜೀವನಕ್ಕೆ ಸಾಕಾಗುವಷ್ಟು ಸ್ಥಿತಿವಂತರೇ. ಆಗರ್ಭ ಶ್ರೀಮಂತರಲ್ಲದಿರಬಹುದು. ಹತ್ತು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿವಂತರಲ್ಲ. ಅವರ ಪ್ರಾಮಾಣಿಕತೆ, ಕಳಕಳಿ, ಹೊಸತನ ತರುವ ಆಸೆ ಅವರೆಲ್ಲರನ್ನೂ ಚುನಾವಣೆಯ ಕಣಕ್ಕೆ ಇಳಿಸಿದೆಯೆಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಅವರು ಸುಮ್ಮನೆ ಬಡಬಡಿಸಲಿಲ್ಲ. ತಮ್ಮ ವಾದವನ್ನು ಪುಷ್ಟೀಕರಿಸಲು, ಸಮರ್ಥನೆ ನೀಡಲು ಅಂಕಿ-ಅಂಶ, ದಾಖಲೆ, ಕಾಗದ ಪತ್ರಗಳನ್ನು ಒದಗಿಸುತ್ತಾರೆ. ಬೇರೆಯವರ ಮೇಲೆ ಗದಾಪ್ರಹಾರ ಮಾಡುವಾಗ ಎಚ್ಚರ ವಹಿಸುತ್ತಾರೆ.
ಲೋಕಸತ್ತಾ ಪಕ್ಷದ ಪ್ರಮುಖರ ಜತೆ ಕಳೆದ ಆ ಮುಕ್ಕಾಲು ಗಂಟೆ, ವಿಚಾರ ಪ್ರಚೋದಕ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ಪುಟ್ಟ ಅನುಭವದಂತಿತ್ತು. ಅವರೆಲ್ಲರ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿತು.
ಎಲ್ಲರೂ ಮಾತಾಡುತ್ತಾರೆ, ಆದರೆ ಯಾರೂ ಮಾಡೊಲ್ಲ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಬಲ್ಲ ಶಿವಾಜಿ, ಆಜಾದ್, ಭಗತ್‌ಸಿಂಗ್ ಹುಟ್ಟಿಬರಬೇಕೆಂದು ಎಲ್ಲರೂ ಬಯಸುತ್ತಾರೆ, ಆದರೆ ಅವರು ನಮ್ಮ ಮನೆಯಲ್ಲಲ್ಲ ಪಕ್ಕದ ಮನೆಯಲ್ಲಿ ಹುಟ್ಟಲಿ ಎಂದೇ ಎಲ್ಲರೂ ಆಶಿಸುತ್ತಾರೆ. ಎಲ್ಲರೂ ತಮ್ಮ ತಮ್ಮ ವಾಹನಗಳನ್ನು ನೆರಳಿನಲ್ಲಿ ಪಾರ್ಕ್ ಮಾಡಲು ಬಯಸುತ್ತಾರೆ. ಆದರೆ ಯಾರೂ ಗಿಡ ನೆಡಲು ಮುಂದಾಗುವುದಿಲ್ಲ. ನಾವು ಹೇಳ್ತೇವೆ, ಆದರೆ ಮಾಡೊಲ್ಲ.
ನಮ್ಮ ರಾಜಕಾರಣ, ರಾಜಕಾರಣಿಗಳಲ್ಲಿರುವ ದೋಷ, ಗುಣದೋಷಗಳ ಬಗ್ಗೆ ಯಾರಿಗೆ ಗೊತ್ತಿಲ್ಲ? ಆದರೆ ಅದನ್ನು ಸರಿಪಡಿಸುವ ಉಸಾಬರಿ, ಉಪದ್ಯ್ವಾಪಿತನ ನನಗೇಕೆ ಎಂದು ಸುಮ್ಮನಾಗುತ್ತೇವೆ. ನನ್ನ ಮನೆ ಕ್ಲೀನಾಗಿದ್ದರೆ ಸಾಕು, ಬೇಕಾದರೆ ಬೀದಿ ಗಬ್ಬೆದ್ದು ನಾರಲಿ ಎಂಬ ಮನೋಭಾವವನ್ನು ಎಲ್ಲೆಡೆ ನೋಡುತ್ತೇವೆ.
ಹೀಗಿರುವಾಗ ಸೋಲೋ-ಗೆಲುವೋ, ಹಿನ್ನಡೆಯೋ-ಮುನ್ನಡೆಯೋ, ಜನ ಬೆಂಬಲಿಸುತ್ತಾರೋ-ಬೆಂಬಲಿಸುವುದಿಲ್ಲವೋ ಈ ಯಾವ ಅಂಶಗಳನ್ನು ಸಹ ಗಮನಿಸದೇ, ವ್ಯವಸ್ಥೆ ಸರಿ ಇಲ್ಲ ಎಂದು ಗೊಣಗುವುದನ್ನು ಬಿಟ್ಟು, ಎಲ್ಲವುಗಳಿಗೂ ರಾಜಕಾರಣಿಗಳೇ ಕಾರಣ ಎಂದು ಬೊಟ್ಟು ಮಾಡುವುದನ್ನು ಬಿಟ್ಟು ಚುನಾವಣಾ ಕಣಕ್ಕೆ ಇವರೆಲ್ಲ ಧುಮುಕಿದ್ದಾರಲ್ಲ, ಅವರ ಬಗ್ಗೆ ನಿಜಕ್ಕೂ ಮೆಚ್ಚುಗೆಯಾಯಿತು.
ಲೋಕಸತ್ತಾ ಪಕ್ಷದ ಪ್ರಮುಖರು, ಅಭ್ಯರ್ಥಿಗಳು ಹೊರಡುವಾಗ ಒಂದು ಕರಪತ್ರ ನೀಡಿದರು. ಅದರಲ್ಲಿ ಒಂದೆಡೆ ಬರೆದಿತ್ತು- Answer to bad politics is not no politics.ನಮ್ಮ ನಡುವೆ ತಾಂಡವವಾಡುತ್ತಿರುವ ಕೆಟ್ಟ ರಾಜಕಾರಣಕ್ಕೆ ಉತ್ತರ ರಾಜಕಾರಣದಿಂದ ದೂರ ಸರಿಯುವುದಿಲ್ಲ, ದೂರ ಸರಿದಾಗಲೆಲ್ಲ ಪುನಃ ಪುನಃ ಕೆಟ್ಟ ರಾಜಕಾರಣಿಗಳೇ ಬರುತ್ತಾರೆ, ಅವರೇ ಆವರಿಸಿಕೊಳ್ಳುತ್ತಾರೆ. ಅಂಥವರು ಬಂದು ಮೊದಲೇ ಕೆಟ್ಟು ಕಿಲುಸಾರೆದ್ದು ಹೋಗಿರುವ ರಾಜಕೀಯವನ್ನು ಮತ್ತಷ್ಟು ಹದಗೆಡಿಸುತ್ತಾರೆ. ಸಂಭಾವಿತರು, ಸುಬಗರು ಹತ್ತಿರ ಸುಳಿಯದಷ್ಟು ಹೊಲಸೆಬ್ಬಿಸುತ್ತಾರೆ. ಆಗಿರುವುದು ಅದೇ ತಾನೆ?
ರಾಜಕೀಯ ನಮ್ಮಂಥವರಿಗೆ ಹೇಳಿ ಮಾಡಿಸಿದ್ದಲ್ಲ, ಅದೇನಿದ್ದರೂ ಮೂರೂ ಬಿಟ್ಟವರಿಗೆ ಎಂದು ಭಾವಿಸಿ ಪರೋಕ್ಷವಾಗಿ ಅದು ಇನ್ನಷ್ಟು ಹದಗೆಡಲು ಕಾರಣರಾದವರು ನಾವೇ. ಈ ಕಾರಣದಿಂದ ಸುಶಿಕ್ಷಿತರು, ವಿದ್ಯಾವಂತರು, ಮರ್ಯಾದಸ್ಥರು, ಎಂಜಿನಿಯರ್‌ಗಳು, ವೈದ್ಯರು, ವೃತ್ತಿಪರರು ರಾಜಕಾರಣದೆಡೆಗೆ ಮುಖ ಮಾಡುವುದಿಲ್ಲ. ಒಂದು ರೀತಿಯಲ್ಲಿ ನಾವು ರಾಜಕಾರಣವನ್ನು ಕ್ರಿಮಿನಲ್‌ಗಳಿಗೆ, ದಗಾಕೋರರಿಗೆ, ಹಣವಂತವರಿಗೆ, ಆಡಳಿತ ನಡೆಸಿ ಅನುಭವವಿಲ್ಲದವರಿಗೆ, ಅಪಾತ್ರರಿಗೆ ಬಿಟ್ಟು ಕೊಟ್ಟಿದ್ದೇವೆ. ನಮ್ಮನ್ನು ಆಳುವ ಅಧಿಕಾರವನ್ನು ಅವರಿಗೆ ಕೊಟ್ಟು, ಕಾಲ ಕೆಟ್ಟು ಹೋಯ್ತು, ಎಂಥೆಂಥವರು ಶಾಸಕರಾದರು, ಮಂತ್ರಿಯಾದರು, ಸರ್ಕಾರ ನಡೆಸುತ್ತಿದ್ದಾರೆ ಎಂದು ಗೊಣಗುತ್ತೇವೆ. ಆದರೆ ಒಂದು ಕ್ಷಣವಾದರೂ ಯೋಚಿಸಿದ್ದೇವಾ ಇವುಗಳಿಗೆಲ್ಲ ನಾವೇ ಕಾರಣ ಅಂತ. ಉಹುಂ... ಇಲ್ಲವೇ ಇಲ್ಲ.
ಈ ನಿಟ್ಟಿನಲ್ಲಿ ಲೋಕಸತ್ತಾ ಪಕ್ಷದವರು ಒಂದು ದಿಟ್ಟ ಹೆಜ್ಜೆ ಇಟ್ಟಿದ್ದಾರಲ್ಲ... ಅವರ ಪ್ರಯತ್ನಕ್ಕೆ ಮನಸ್ಸಿನಲ್ಲೊಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಹಾಗಾದ್ರೆ ನೋಡ್ತಾ ಇರಿ, ಲೋಕಸತ್ತಾ ಪಾರ್ಟಿ ಎಷ್ಟು ಸೀಟು ಗೆಲ್ಲುತ್ತದೆ? ಒಬ್ಬನೇ ಒಬ್ಬ ಆರಿಸಿ ಬಂದರೆ ಹೇಳಿದಂತೆ ಕೇಳ್ತೇನೆ ಎಂದು ನೀವು ಹೇಳಬಹುದು. ಇಂಥವರಿಗೆ ಹೇಳೋದಿಷ್ಟೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಷ್ಟು ಎತ್ತರಕ್ಕೆ ಬೆಳೆದ ಭಾರತೀಯ ಜನತಾಪಕ್ಷ ಒಂದು ಕಾಲಕ್ಕೆ ಸ್ಪರ್ಧಿಸಿದ ಎಲ್ಲ ಕ್ಷೇತ್ರಗಳಲ್ಲೂ ಸೋತಿತ್ತು ಎಂಬುದನ್ನು ಮರೆಯಬಾರದು. ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಇದೇ ಬಿಜೆಪಿಗೆ ಒಂದು ಕಾಲಕ್ಕೆ ಒಂದು ಮತ್ತು ಒಂದು ಸೀಟು ಗಳಿಸಲೂ ಏಳು-ಹನ್ನೊಂದಾಗಿತ್ತು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ರಾಜಕೀಯ ನಮಗೆ ಹೇಳಿ ಮಾಡಿಸಿದ್ದಲ್ಲ ಎಂಬ ವಾದವನ್ನೇ ಸದಾ ಹೊಸೆಯುತ್ತಿದ್ದರೆ ಲೋಕಸತ್ತಾ ಎಂಬ ಪಕ್ಷವೇ ಹುಟ್ಟುತ್ತಿರಲಿಲ್ಲ. 1996ರಲ್ಲಿ ಒಂದು ಸ್ವಯಂ ಸೇವಾ ಸಂಸ್ಥೆಯಾಗಿ (ಎನ್‌ಜಿಒ) ಹುಟ್ಟಿದ ಲೋಕಸತ್ತಾ, 2006ರಲ್ಲಿ ಒಂದು ರಾಜಕೀಯ ಪಕ್ಷವಾಗಿ ಮೈದಾಳಿದೆ. ಇಂದು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ದಿಲ್ಲಿ, ಮಹಾರಾಷ್ಟ್ರಗಳಲ್ಲೂ ಈ ಪಕ್ಷ ಸಂಘಟನಾತ್ಮಕವಾಗಿ ಬೆಳೆಯುತ್ತಿದೆ.
ಎಷ್ಟು ಮಂದಿಗೆ ಗೊತ್ತಿದೆಯೋ ತಿಳಿಯೆ.  ಲೋಕಸತ್ತಾ ಪಕ್ಷದ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ ನಾರಾಯಣ ಸಹ ರಾಜಕಾರಣ ಮರ್ಯಾದಸ್ಥರ ಕ್ಷೇತ್ರವಲ್ಲ ಎಂದು ಯೋಚಿಸಿದ್ದರೆ ಪ್ರಾಯಶಃ ಅವರು ಪ್ರತಿಷ್ಠಿತ ಐಎಎಸ್ ಸೇವೆಗೆ ರಾಜಿನಾಮೆ ಬಿಸಾಕುತ್ತಿರಲಿಲ್ಲ. ಮೂಲತಃ ಡಾಕ್ಟರ್ ಆಗಿರುವ ಅವರು ಈಗ ಸರ್ಕಾರದ ಯಾವುದೋ ಆಯಕಟ್ಟಿನ ಜಾಗದಲ್ಲಿರುತ್ತಿದ್ದರು. 1980ರ ಬ್ಯಾಚ್‌ನ ಐಎಎಸ್ ಟಾಪರ್ ಆಗಿದ್ದ ಅವರು ಆಂಧ್ರದ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳಿಗೆ ಸೆಕ್ರೆಟರಿ ಆಗಿ ಸೇವೆ ಸಲ್ಲಿಸಿದವರು. ಅತ್ಯುತ್ತಮ, ದಕ್ಷ ಅಧಿಕಾರಿ ಎಂಬ ಅಗ್ಗಳಿಕೆಗೆ ಪಾತ್ರರಾದ ಅವರು, ವ್ಯವಸ್ಥೆಯಲ್ಲಿನ ದೋಷ, ಭ್ರಷ್ಟಾಚಾರವನ್ನು ಸಹಿಸಲಾಗದೇ ತಮ್ಮ ನೌಕರಿಗೆ ರಾಜಿನಾಮೆ ನೀಡಿ, ಉತ್ತಮ ಕೆಲಸ ನನ್ನಿಂದಲೇ ಆರಂಭವಾಗಲಿ ಎಂದು ಲೋಕಸತ್ತಾ ಆರಂಭಿಸಿದರು. ಚುನಾವಣೆ ಸುಧಾರಣೆಯಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು, ಮಾಹಿತಿಹಕ್ಕು ಕಾಯ್ದೆ ಜಾರಿಗೆ ಬರುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದರು.
'ನೀವು ಒಳ್ಳೆಯ ಕೆಲಸ ಮಾಡುವ ಆಸೆಯಿಂದ ಮುಂದಡಿ ಇಟ್ಟಾಗ ಕೆಲವರು ತಣ್ಣೀರೆರಚುತ್ತಾರೆ. ಮತ್ತೆ ಕೆಲವರು ನಿಮ್ಮನ್ನು ಸಂದೇಹದಿಂದ ನೋಡುತ್ತಾರೆ. ಇನ್ನು ಕೆಲವರು ನಿಮ್ಮನ್ನು ಹೊಸಕಿ ಹಾಕಲು ಯತ್ನಿಸುತ್ತಾರೆ. ಆದರೆ ನೀವು ಗೆಲ್ಲುವುದು ನಿಮ್ಮ ಬದ್ಧತೆಯಿಂದ ಮಾತ್ರ. ಉದ್ದೇಶ ಈಡೇರಿಕೆಗೆ ನೀವು ತುಳಿದ ಹಾದಿ ಸರಿಯಿದ್ದರೆ, ನಿಮ್ಮನ್ನು ವಿರೋಧಿಸಿದವರೇ ಬೆಂಬಲಿಸುತ್ತಾರೆ' ಎಂಬುದು ಜಯಪ್ರಕಾಶ ನಾರಾಯಣ ಅವರ ನಂಬಿಕೆ.
ಈ ಮಾತಿಗೆ ನಿದರ್ಶನ ಅವರೇ. 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಲೋಕಸತ್ತಾ ಪಕ್ಷ ನಾಲ್ಕು ಸ್ಥಾನಗಳಿಲ್ಲಿ ಸ್ಪರ್ಧಿಸಿತ್ತು. ಎರಡು ಕ್ಷೇತ್ರಗಳಲ್ಲಿ ಎರಡನೆ ಹೆಚ್ಚು ಮತ ಗಳಿಸಿತು. ಹೈದರಾಬಾದ್‌ನ ಕುಕಟಪಲ್ಲಿ ಕ್ಷೇತ್ರದಿಂದ ಸ್ವತಃ ಜಯಪ್ರಕಾಶ ನಾರಾಯಣ ಅವರೇ ಗೆಲುವು ಸಾಧಿಸಿದರು. ಈಗ ಅವರು ಶಾಸಕರು. ಆಂಧ್ರ ವಿಧಾನಸಭೆಯಲ್ಲಿ ಲೋಕಸತ್ತಾದ ಒಬ್ಬರೇ ಸದಸ್ಯರಾಗಿ, ಸದನ ಅತ್ಯಂತ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಕಾರಣರಾಗಿರುವುದೂ ಅವರ ಕ್ರಿಯಾಶೀಲತೆ ಹಾಗೂ ಬದ್ಧತೆಗೆ ಸಾಕ್ಷಿ.
ಹೊಸಪಕ್ಷ, ಹೊಸಬರು, ವಿದ್ಯಾವಂತರು ರಾಜಕೀಯಕ್ಕೆ ಬಂದು ಏನು ಸಾಧಿಸುತ್ತಾರೆ ಎಂದು ಲಘುವಾಗಿ ಮಾತಾಡುವವರು ಲೋಕಸತ್ತಾ ಪಕ್ಷವನ್ನೊಮ್ಮೆ ಗಮನಿಸಬೇಕು. ಇಲ್ಲದಿದ್ದರೆ 'ಈ ರಾಜಕೀಯ ಕೆಟ್ಟು ಹೋಗಿದೆ' ಎಂದು ಗೊಣಗುವವರು ಗೊಣಗುತ್ತಲೇ ಇರುತ್ತಾರೆ. ಈ ವ್ಯಾಧಿ ಸರ್ವವ್ಯಾಪಿ. ವಿದ್ಯಾವಂತರೂ ಇದಕ್ಕೆ ಹೊರತಲ್ಲ. ಎಲ್ಲರೂ ಹೀಗೆ ಹೇಳಲಾರಂಭಿಸಿದರೆ ವ್ಯವಸ್ಥೆಯನ್ನು ಸರಿಪಡಿಸುವವರಾದರೂ ಯಾರು? ಎಲ್ಲಿತನಕ ಸುಶಿಕ್ಷಿತರು, ಸಂಭಾವಿತರು, ಯೋಗ್ಯರು, ಅರ್ಹರು, ವೃತ್ತಿಪರರು ರಾಜಕೀಯ ಪ್ರವೇಶಿಸುವುದಿಲ್ಲವೋ ಅಲ್ಲಿತನಕ ಕ್ರಿಮಿನಲ್‌ಗಳು, ಅಯೋಗ್ಯರು, ದಗಲಬಾಜಿಗಳು ನಮ್ಮನ್ನು ಆಳುತ್ತಾರೆ. ಎಂಥವರಿಂದ ನಾವು ಆಳಿಸಿಕೊಳ್ಳಬೇಕಲ್ಲ ಎಂದು ಯಾವಜ್ಜೀವ ಹಲುಬುತ್ತಿರುತ್ತೇವೆ. ಅದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ.
ಈ ಸಲ ಲೋಕಸತ್ತಾ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆಂದು ನನಗನಿಸುವುದಿಲ್ಲ. ಆದರೆ ಆ ಪಕ್ಷದ ಮೂಲಕ ಒಂದಷ್ಟು ಯೋಗ್ಯರು, ವಿದ್ಯಾವಂತರು, ಪ್ರಾಮಾಣಿಕರು, ಸಾಮಾಜಿಕ ಕಾಳಜಿಯುಳ್ಳವರು ರಾಜಕೀಯ ರಂಗ ಪ್ರವೇಶಿಸಿದಂತಾಗಿದೆ. ಮೈ ಚಳಿ ಬಿಟ್ಟು ನೀರಿಗೆ ಇಳಿಯುವುದು ಕಷ್ಟ. ಇಳಿದ ನಂತರ ಈಜುವುದು ಕಷ್ಟವಾಗಲಾರದು. ಅಂಥ ಆರಂಭವಾಗಿದೆಯೆಂಬುದೇ ಸಮಾಧಾನ.
ಡಾ. ಶಿವರಾಮ ಕಾರಂತ, ಜನರಲ್ ಕಾರಿಯಪ್ಪನಂಥವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಗೆದ್ದಿರಲಿಲ್ಲ. ಆದರೆ ಇಂಥ ಒಂದೊಂದು ಸ್ಪರ್ಧೆ ಸಮಾಜಕ್ಕೆ ಸಕಾರಾತ್ಮಕವಾದ, ಜೀವನ್ಮುಖಿ ಸಂದೇಶವನ್ನು ಕಳಿಸುತ್ತದೆ.
ಯಾವ ದೇಶದಲ್ಲಿ ವಿದ್ಯಾವಂತರು, ಯೋಗ್ಯರು ಗುಲಾಮರಾಗುತ್ತಾರೋ ಆ ದೇಶಕ್ಕೆ ಭವಿಷ್ಯವಿಲ್ಲವೆಂದೇ ಅರ್ಥ. ಈ ಸಲದ ಚುನಾವಣೆ ಹೊಸ ಆಶಾಕಿರಣವನ್ನು ಮೂಡಿಸಿದೆ. ಕ್ರಮಿಸಬೇಕಾದ ದಾರಿ ದೀರ್ಘವಾಗಿದೆ. ಪರವಾಗಿಲ್ಲ, ಕ್ರಮಿಸೋಣ ಬಿಡಿ.

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.