ಅಂಕಣಗಳು

ಸಮರಾಂಗಣದಲ್ಲೂ ಬೇಕಲ್ಲವೇ ಸಭ್ಯತೆ?

Published On :

ಕರ್ನಾಟಕ ರಾಜ್ಯ ರಾಜಕೀಯಕ್ಕೆ ಈ ಹಿಂದೆ ಒಂದು ವಿಶಿಷ್ಟ ಸ್ಥಾನ, ಗಾಂಭೀರ್ಯವಿತ್ತು. ಆಡಳಿತ ಪಕ್ಷವಿರಲೀ ಅಥವಾ ವಿರೋಧ ಪಕ್ಷವೇ ಇರಲಿ, ತಮ್ಮ ತಮ್ಮ ನಡೆ ನುಡಿಗಳ ಬಗ್ಗೆ ಒಂದು ಎಲ್ಲೆ (ಚೌಕಟ್ಟು) ಇರುವಂತೆ ವರ್ತಿಸುತ್ತಿದ್ದುದು ನಾವು ಕಂಡ ಹಿಂದಿನ ಸತ್ಯ. ವಿಶೇಷವಾಗಿ ಆಗಿನ ಮುಖ್ಯಮಂತ್ರಿಗಳಾಗಿದ್ದ ದಿ. ದೇವರಾಜ ಅರಸು, ದಿ. ರಾಮಕೃಷ್ಣ ಹೆಗಡೆಯವರಂತಹ ಮುತ್ಸದ್ಧಿಗಳು ಎಂದೂ ತಮ್ಮ ರಾಜಕೀಯ ವಿರೋಧಿಗಳನ್ನು ಹಂಗಿಸಿ, ಹೀಯಾಳಿಸಿ ತಾವು ಮಾತ್ರ ಸತ್ಯವಂತರು ಎಂಬಂತೆ ಬಿಂಬಿಸಿದ್ದಿಲ್ಲ. ತಮ್ಮ ನಡೆ-ನುಡಿ-ಮಾತಿನ ಹಿಡಿತದಿಂದಾಗಿಯೇ ಈಗಲೂ ಅವರುಗಳನ್ನು ನೆನೆಪಿಸಿಕೊಳ್ಳುವಂತಿತ್ತು ಅವರುಗಳ ವರ್ತನೆ ಹಾಗೂ ವ್ಯವಹಾರ.
ಆ ನಂತರದ ದಿನಗಳಲ್ಲಿ ರಾಜಕೀಯದ ಏರಿಳಿತ ಹಾಗೂ ಆಡಳಿತವು ಏಕಪಕ್ಷದ ವ್ಯವಸ್ಥೆಯಿಂದ ಹೊರಳಿ ಸಂಯುಕ್ತ ಸರ್ಕಾರಗಳ ವ್ಯವಸ್ಥೆಗೆ ಬರುವ ಹಂತದಲ್ಲಿ ರಾಜಕಾರಣಿಗಳೂ ಸಂಕುಚಿತರಾಗಿ ತಮ್ಮ ವೈಯಕ್ತಿಕ ಅಜಂಡವೇ ವಿಜೃಂಭಿಸುವಂತೆ ಮಾಡುವಲ್ಲಿ ವಹಿಸುತ್ತಿರುವ ಆಸಕ್ತಿ ಜನಕಲ್ಯಾಣದ ಯೋಜನೆ ಜಾರಿಗೆ ತರುವಲ್ಲಿ ವಿಫಲರಾಗಿರುವುದು ರಾಜ್ಯದ ಜನತೆಯ ದುರ್ದೈವವೇ ಸರಿ.
ತಮ್ಮ ತಮ್ಮ ತಪ್ಪು ಒಪ್ಪುಗಳನ್ನು ಮರೆಮಾಚಲು ಇತರರ ಮೇಲೆ ಗೂಬೆ ಕೂರಿಸುವ ಷಡ್ಯಂತ್ರದಿಂದಾಗಿ ರಾಜಕೀಯದ ಗ್ರಹಣ ಪ್ರಾರಂಭವಾಯ್ತು. ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂಬ ಛಲ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳುವ ಬದಲು ಆತನ ಅತಿಯಾದ ಮಾತುಗಾರಿಕೆ ಹಾಗೂ ಅಪ್ರಮಾಣಿಕತೆಗೆ ಕಾರಣವಾಗಿ ರಾಜಕೀಯದ ಘನತೆಯ ಸೌಧವು ಕುಸಿಯಲು ಪ್ರಾರಂಭವಾಯ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಮಿತ್ರ ಪಕ್ಷದ ಉಪಮುಖ್ಯಮಂತ್ರಿಗೆ ವಿಶ್ವಾಸದ್ರೋಹವೆಸಗಿದರು ಎಂದು ವಚನ ಭ್ರಷ್ಟರೆಂಬ ಪದವನ್ನು ಮುಂದಿರಿಸಿಕೊಂಡು ಚುನಾವಣೆಗೆ ಹೋದಾಗ ಮಾನ್ಯ ಮತದಾರರು ಆಗಲಿ ಅವರದ್ದು ತಪ್ಪಾಗಿದ್ದಲ್ಲಿ ಅವರನ್ನು ಬಿಡೋಣ ನಿಮಗೆ ಆಡಳಿತ ನೀಡುತ್ತೇವೆ. ನೀವೇನು ಮಾಡುತ್ತೀರೆಂದು ತೆರೆಮರೆಯಲ್ಲಿ ನೋಡುತ್ತಿದ್ದರೆ ನೀವೇನು ಮಾಡಿದ್ದೀರಿ? ಈ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಂಡಿದ್ದೀರಾ? ಈಗ ಪುನಃ ನನ್ನ ಬೆನ್ನಿಗೆ ಚೂರಿ ಇರಿದಿದ್ದಾರೆಂದು ಬಂದರೆ ಜನ ನಂಬುತ್ತಾರೆಂಬ ನಂಬಿಕೆ ನಿಮಗಿದೆಯಾ?
ಈಗ ಆಯ್ಕೆ ಜನರ ಮುಂದಿದೆ. ಜನಪರ ಕೆಲಸ ಮಾಡುವ ಸರ್ಕಾರ ಬೇಕೋ ಅಥವಾ ಹಗರಣಗಳ ಸರ್ಕಾರ ಬೇಕೋ ಎಂಬುದನ್ನು ಜನತೆ ತೀರ್ಮಾನಿಸಲಿದ್ದಾರೆ.
ದಯ ಮಾಡಿ ರಾಜಕಾರಣಿಗಳು ತಮ್ಮ ತಮ್ಮ ವೈಯಕ್ತಿಕ ಅಜೆಂಡಾವನ್ನು ಮುಂದೆ ತರದೇ ಕರ್ನಾಟಕದ ಘನತೆಗೆ ಚ್ಯುತಿ ಬಾರದಂತೆ ವರ್ತಿಸುವುದು ಒಳಿತು. ನೀವು ಎಷ್ಟೇ ಸತ್ಯವಂತರು ಎಂದರೂ ನಂಬುವ ಸ್ಥಿತಿಯಲ್ಲಿ ಜನರಿಲ್ಲ. 5 ವರ್ಷಗಳ ಅವಧಿಯಲ್ಲಿ ಉತ್ತಮ ರೀತಿ ಆಡಳಿತ ನಡೆಸಲಾರದೇ ಜನರನ್ನು ಮರಳು ಮಾಡಬಹುದೆಂಬ ನಿಮ್ಮಗಳ ಪ್ರಯತ್ನಕ್ಕೆ ಈ ಬಾರಿ ಮತದಾರ ಸೂಕ್ತ ಉತ್ತರ ನೀಡಲಿದ್ದಾರೆಂಬುದನ್ನು ಮರೆಯದಿರಿ.
ಅವರಿವರನ್ನು ವೈಯಕ್ತಿಕವಾಗಿ ನಿಂದಿಸುವ ನಿಮ್ಮ ನಾಲಿಗೆಗೆ ಮೊದಲು ಬ್ರೇಕ್ ಹಾಕಿಕೊಳ್ಳಿ. ರಾಜಕಾರಣದಲ್ಲಿ ಮೊದಲು ಸಭ್ಯತೆಗೆ ಹೆಚ್ಚಿನ ಮಹತ್ವ ನೀಡಿರಿ. ಪರರನ್ನು ನಿಂದಿಸಿ ತಾನು ಸತ್ಯಸಂಧನು ಎಂಬ ಭ್ರಮೆಯಿಂದ ಮೊದಲು ಹೊರಬನ್ನಿ . ಸಾಮಾಜಿಕವಾಗಿ ಚಿಂತಿಸುವ ಹಾಗೂ ಮೌಲ್ಯಯುತ ರಾಜಕಾರಣದತ್ತ ಹೆಜ್ಜೆ ಹಾಕಿದಲ್ಲಿ ಜನ ಈ ಚುನಾವಣೆಯಲ್ಲಿ ಕೈ ಬಿಟ್ಟರೂ ಮುಂದಿನ ಬಾರಿ ಮತ ನೀಡಬಹುದು. ಅಧಿಕಾರವೊಂದು ಸಿಗುವುದಾದಲ್ಲಿ ಯಾವ ಪಕ್ಷವಾದರೇನಂತೆ-ಯಾವ ಸಿದ್ಧಾಂತವಾದರೇನಂತೆ ಎಂಬ ವರ್ತನೆಗೆ ಸ್ವಯಂ ಕಡಿವಾಣ ಹಾಕದ ಹೊರತು ರಾಜ್ಯ ಅಭಿವೃದ್ಧಿ ಹೊಂದಲಾರದೆಂಬುದನ್ನು ಮನಗಾಣಿ. ರಾಜಕಾರಣಿಗಳ ಮೇಲೆ ಎಫ್.ಐ.ಆರ್. ದಾಖಲಾಗುವುದು-ಜೈಲು ಸೇರುವುದು ಇವು ಅಭಿವೃದ್ಧಿ ಹೊಂದುವ ಸರ್ಕಾರದ ಲಕ್ಷಣವಲ್ಲ. ಈ ಬಾರಿಯಾದರೂ ಯೋಗ್ಯರು ಆರಿಸಿ ಬರಲಿ ರಾಜ್ಯ ಸುಭಿಕ್ಷೆ ಹೊಂದಲಿ ಎಂಬುದೇ ಆಶಯ.
ಕೊನೆಹನಿ: ಹಿಂದೊಮ್ಮೆ ಚುನಾವಣಾ ಸಂದರ್ಭವೊಂದರಲ್ಲಿ ಎಸ್.ಎಂ. ಕೃಷ್ಣರವರು ಮಾತನಾಡುತ್ತಿರುವಾಗ ಪತ್ರಕರ್ತರು ಸದಾನಂದಗೌಡರ ಬಗ್ಗೆ ಕೇಳಿದ ಪ್ರಶ್ನೆಗೆ ಅವರ ಬಗ್ಗೆ ಏನು ಹೇಳುವುದು ಅವರು ಸದಾ ಹಲ್ಲು ಗಿಂಜುತ್ತಿರುತ್ತಾರೆ ಎಂದಿದ್ದರು. ಆನಂತರವೇ ಕೃಷ್ಣರವರಿಗೆ ತಿಳಿಯಿತು. ನಾನು ಹಾಗೆ ಮಾತನಾಡಬಾರದಿತ್ತೇನೋ ಎಂದು. ತಕ್ಷಣ ಅವರು ಸದಾನಂದಗೌಡರಿಗೆ ಫೋನ್ ಮಾಡಿ ತಮ್ಮ ಮಾತಿನಿಂದ ನೋವಾಗಿದ್ದಲ್ಲಿ ಕ್ಷಮಿಸಿರೆಂದು. ಇದು ರಾಜಕಾರಣಿಗಳಲ್ಲಿರಬೇಕಾದ ಘನತೆಗೆ ತಕ್ಕ ನಡೆ. ಜನ ಇಂತಹ ಸಭ್ಯ ರಾಜಕಾರಣಿಗಳನ್ನು ಇಷ್ಟಪಡುತ್ತಾರೆ.

- ಡಿ.ಆರ್. ಶ್ರೀಶಂಕರ್, ಚಿಕ್ಕಮಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.