ವಿಷ್ಣುವರ್ಧನ್ ಅಮೃತ ಮಹೋತ್ಸವ: "ವಿಷ್ಣು ಅಂಕಲ್ ಮೇಲಿನ ಪ್ರೀತಿಗೆ ಸಾಕ್ಷಿ ಬೇಕಿಲ್ಲ"; ವೇದಿಕೆಯಲ್ಲೇ ಭಾವುಕರಾದ ಶಿವಣ್ಣ..!
ವಿಷ್ಣುವರ್ಧನ್ ಅವರ ಮೇಲಿನ ನಮ್ಮ ಪ್ರೀತಿ ಮತ್ತು ಗೌರವ ನಮಗೆ ಗೊತ್ತಿದೆ, ನಿಮಗೆಲ್ಲ ಅಭಿಮಾನಿಗಳಿಗೂ ಗೊತ್ತಿದೆ. ಅದನ್ನು ಬೇರೆಯವರಿಗೆ ತೋರಿಸಬೇಕಾಗಿಲ್ಲ, ಯಾರಿಗೂ ಸಾಬೀತುಪಡಿಸಬೇಕಾಗಿಲ್ಲ.

ಬೆಂಗಳೂರು: ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ವರ್ಷಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಭಾನುವಾರ ನಡೆದ ‘ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ’ದಲ್ಲಿ ನಟ ಶಿವರಾಜ್‌ಕುಮಾರ್ ಭಾಗವಹಿಸಿ, ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಆತ್ಮೀಯ ಬಾಂಧವ್ಯವನ್ನು ನೆನಪಿಸಿಕೊಂಡರು.
ತಮ್ಮ ಕುಟುಂಬ ಹಾಗೂ ವಿಷ್ಣುವರ್ಧನ್ ಕುಟುಂಬದ ನಡುವಿನ ಸಂಬಂಧದ ಕುರಿತು ವರ್ಷಗಳಿಂದ ಕೇಳಿಬರುತ್ತಿದ್ದ ವಿವಿಧ ಮಾತುಗಳಿಗೂ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು.
ವಿಷ್ಣು ಸೇನಾ ಸಮಿತಿ ಆಯೋಜಿಸಿದ್ದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರು, ನಿರ್ದೇಶಕರು, ತಂತ್ರಜ್ಞರು ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ವೇದಿಕೆಗೆ ಆಗಮಿಸಿದಾಗ ಕಾರ್ಯಕ್ರಮ ಮತ್ತಷ್ಟು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಶಿವರಾಜ್‌ಕುಮಾರ್ ಅವರು, ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಕುಟುಂಬಗಳ ನಡುವಿನ ಸಂಬಂಧದ ಬಗ್ಗೆ ಹೊರಗಿನಿಂದ ಹರಡುತ್ತಿದ್ದ ಹಲವು ಊಹಾಪೋಹಗಳಿಗೆ ತೆರೆ ಎಳೆಯುವ ರೀತಿಯಲ್ಲಿ ಮಾತನಾಡಿದರು.
ವಿಷ್ಣುವರ್ಧನ್ ಅವರ ಮೇಲಿನ ನಮ್ಮ ಪ್ರೀತಿ ಮತ್ತು ಗೌರವ ನಮಗೆ ಗೊತ್ತಿದೆ, ನಿಮಗೆಲ್ಲ ಅಭಿಮಾನಿಗಳಿಗೂ ಗೊತ್ತಿದೆ. ಅದನ್ನು ಬೇರೆಯವರಿಗೆ ತೋರಿಸಬೇಕಾಗಿಲ್ಲ, ಯಾರಿಗೂ ಸಾಬೀತುಪಡಿಸಬೇಕಾಗಿಲ್ಲ ಎಂದು ಶಿವರಾಜ್‌ಕುಮಾರ್ ಅವರು ಭಾವುಕರಾಗಿ ಹೇಳಿದರು. ಅವರ ಈ ಮಾತಿಗೆ ಅಭಿಮಾನಿಗಳಿಂದ ಭಾರಿ ಚಪ್ಪಾಳೆ ಕೇಳಿಬಂದಿತು.
“ನಾನು ಇಂದು ವಿಷ್ಣುವರ್ಧನ್ ಅವರಿಗಾಗಿ ಇಲ್ಲಿಗೆ ಬಂದಿದ್ದೇನೆ. ಮುಂದೆಯೂ ಬರುತ್ತೇನೆ. ನೀವು ಯಾವಾಗ ಕರೆದರೂ ನಾನು ಇಲ್ಲಿಗೆ ಬರುತ್ತೇನೆ” ಎಂದು ಹೇಳಿದರು.
ಬಳಿಕ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಶಿವರಾಜ್‌ಕುಮಾರ್, ವಿಷ್ಣುವರ್ಧನ್ ಅವರೊಂದಿಗಿನ ತಮ್ಮ ಮೊದಲಿನ ಒಡನಾಟವನ್ನೂ ನೆನಪಿಸಿಕೊಂಡರು.
ನಾನು ಚಿಕ್ಕವನಿದ್ದಾಗ ವಿಷ್ಣು ಅಂಕಲ್ ಅವರ ಕೈ ಹಿಡಿದುಕೊಂಡು ‘ಭೂತಯ್ಯನ ಮಗ ಅಯ್ಯು’ ಚಿತ್ರದ (1974) 100ನೇ ದಿನದ ಸಂಭ್ರಮಕ್ಕೆ ಹೋಗಿದ್ದೆ. ಆಗ ಆರಂಭವಾದ ಆ ಬಾಂಧವ್ಯ ಕೊನೆಯವರೆಗೂ ಹಾಗೆಯೇ ಉಳಿಯಿತು. ಅಪ್ಪಾಜಿ (ಡಾ. ರಾಜ್‌ಕುಮಾರ್) ಅವರಿಗೆ ವಿಷ್ಣು ಸರ್ ಮೇಲೆ ಅಪಾರ ಪ್ರೀತಿ ಇತ್ತು. ಅವರಿಬ್ಬರ ನಡುವಿನ ಸಂಬಂಧವೇ ವಿಶಿಷ್ಟವಾಗಿತ್ತು. ಹೊರಗಿನವರು ಏನೇ ಮಾತನಾಡಿದರೂ ಆ ಬಾಂಧವ್ಯದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ ಎಂದು ಹೇಳಿದರು.
“ವಿಷ್ಣು ಅಂಕಲ್ ನಮ್ಮೊಂದಿಗೆ ಇಲ್ಲ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ಅವರು ಯಾವುದೋ ಒಂದು ಮೂಲೆಯಲ್ಲಿ, ಆತ್ಮೀಯವಾಗಿ, ಸದಾ ನಮ್ಮ ಪಕ್ಕದಲ್ಲೇ ಇದ್ದಾರೆ” ಎಂದು ಭಾವುಕರಾಗಿ ನುಡಿದರು.
ವಿಷ್ಣುವರ್ಧನ್ ಅವರ 40 ವರ್ಷಗಳಿಗೂ ಅಧಿಕ ಕಾಲದ ಅದ್ಭುತ ಸಿನಿ ಕೊಡುಗೆಯನ್ನು ಸ್ಮರಿಸಲು ನಡೆದ ‘ಅಮೃತ ಮಹೋತ್ಸವ’ದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಒಂದೇ ವೇದಿಕೆಯಲ್ಲಿ ಸೇರಿದ್ದರು.
ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ದಿವಂಗತ ನಟನ ಅಳಿಸಲಾಗದ ನೆನಪು ಮತ್ತು ಪರಂಪರೆಗೆ ಸಾಕ್ಷಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



