ಸಿನಿಮಾ ಸುದ್ದಿ

ತೆರೆ ಮೇಲೆ ವಿಜಯನಗರ ಸಾಮ್ರಾಜ್ಯದ ವೈಭವ; ಶ್ರೀಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್, ಹೊಸ ಚಿತ್ರ ಘೋಷಣೆ..!

ವಿಶೇಷವಾದ ದಿನದಂದು ಒಂದು ಐತಿಹಾಸಿಕ ಪಾತ್ರ, ಕಾಲವನ್ನು ಮೀರಿ ನಿಲ್ಲುವ ರಾಜನ ಪರಂಪರೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಶ್ರೀಕೃಷ್ಣದೇವರಾಯನ ಈ ಪಯಣದ ಭಾಗವಾಗಲು ಹೆಮ್ಮೆ ಎನಿಸುತ್ತಿದೆ.

ತೆರೆ ಮೇಲೆ ವಿಜಯನಗರ ಸಾಮ್ರಾಜ್ಯದ ವೈಭವ; ಶ್ರೀಕೃಷ್ಣದೇವರಾಯನಾಗಿ ಕಿಚ್ಚ ಸುದೀಪ್, ಹೊಸ ಚಿತ್ರ ಘೋಷಣೆ..!
ದೇವರಾಯ ಚಿತ್ರದಲ್ಲಿ ಕಿಚ್ಚ ಸುದೀಪ್
Published On :

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಗೆ ಒಂದರ ಹಿಂದೆ ಒಂದರಂತೆ ಭರ್ಜರಿ ಸರ್ಪ್ರೈಸ್‌ಗಳು ಸಿಗುತ್ತಿವೆ.

ಇದೀಗ ವಿಜಯನಗರ ಸಾಮ್ರಾಜ್ಯದ ಖ್ಯಾತ ದೊರೆ ಶ್ರೀಕೃಷ್ಣದೇವರಾಯ ಅವರ ಜೀವನ ಹಾಗೂ ವೈಭವವನ್ನು ಆಧರಿಸಿದ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಘೋಷಿಸಲಾಗಿದೆ.

‘ದೇವರಾಯ’ ಎಂಬ ಶೀರ್ಷಿಕೆಯ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ‘ವಿಶೇಷವಾದ ದಿನದಂದು ಒಂದು ಐತಿಹಾಸಿಕ ಪಾತ್ರ, ಕಾಲವನ್ನು ಮೀರಿ ನಿಲ್ಲುವ ರಾಜನ ಪರಂಪರೆಯನ್ನು ಹಂಚಿಕೊಳ್ಳುತ್ತಿದ್ದೇನೆ. ಶ್ರೀಕೃಷ್ಣದೇವರಾಯನ ಈ ಪಯಣದ ಭಾಗವಾಗಲು ಹೆಮ್ಮೆ ಎನಿಸುತ್ತಿದೆ’ ಎಂದು ಬರೆದುಕೊಂಡು ಚಿತ್ರದ ಕಾನ್ಸೆಪ್ಟ್ ಟೈಟಲ್ ಅನೌನ್ಸ್‌ಮೆಂಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ, ಭವ್ಯ ದೇವಸ್ಥಾನಗಳ ಗೋಪುರಗಳು, ಆನೆಗಳ ಪಡೆ, ಯುದ್ಧಭೂಮಿಯ ದೃಶ್ಯಗಳು ಹಾಗೂ ರಾಜ ಗಾಂಭೀರ್ಯದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರ ಲುಕ್ ಗಮನ ಸೆಳೆಯುತ್ತಿದೆ. ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಈ ಕಾನ್ಸೆಪ್ಟ್ ವಿಡಿಯೋವನ್ನು ಸಿದ್ಧಪಡಿಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ಸ್ವರ್ಣಯುಗಕ್ಕೆ ಕಾರಣರಾದ ದೊರೆ ಎಂದೇ ಶ್ರೀಕೃಷ್ಣದೇವರಾಯ ಅವರನ್ನು ಗುರುತಿಸಲಾಗುತ್ತದೆ. ಅವರ ಯುದ್ಧ ಕೌಶಲ, ಆಡಳಿತದ ದೂರದೃಷ್ಟಿ ಹಾಗೂ ಸಾಹಿತ್ಯದ ಮೇಲಿನ ಪ್ರೀತಿಯನ್ನು ಬೆಳ್ಳಿತೆರೆಗೆ ತರುವ ಪ್ರಯತ್ನ ‘ದೇವರಾಯ’ ಚಿತ್ರದ ಮೂಲಕ ನಡೆಯಲಿದೆ.

ಈ ಹಿಂದೆ ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅವರು, ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಹಲವು ವರ್ಷಗಳ ಬಳಿಕ ಇದೇ ಐತಿಹಾಸಿಕ ಪಾತ್ರವನ್ನು ಕಿಚ್ಚ ಸುದೀಪ್ ನಿರ್ವಹಿಸುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಆಧುನಿಕ ತಂತ್ರಜ್ಞಾನ, ಅದ್ಧೂರಿ ನಿರ್ಮಾಣ ಹಾಗೂ ಭವ್ಯ ದೃಶ್ಯಗಳೊಂದಿಗೆ ಸಿನಿಮಾ ಮೂಡಿಬರುವ ನಿರೀಕ್ಷೆಯಿದೆ.

ಪ್ರಿಯಾ ಸುದೀಪ್ ಅವರ ಅರ್ಪಣೆಯಲ್ಲಿ ‘ದೇವರಾಯ’ ಸಿನಿಮಾ ನಿರ್ಮಾಣವಾಗುತ್ತಿದ್ದು, ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ.

‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಹಾಗೂ ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಸೇರಿದಂತೆ ಹಲವು ಪ್ಯಾನ್-ಇಂಡಿಯಾ ಸಿನಿಮಾಗಳನ್ನು ನಿರ್ಮಿಸಿರುವ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದೆ.

ಸದ್ಯ ಚಿತ್ರದ ಶೀರ್ಷಿಕೆ ಹಾಗೂ ಕಾನ್ಸೆಪ್ಟ್ ವಿಡಿಯೋ ಮೂಲಕವೇ ಭಾರೀ ಕುತೂಹಲ ಮೂಡಿದೆ. ಆದರೆ, ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.

ವಿಎಫ್‌ಎಕ್ಸ್ ಹಾಗೂ ಬೃಹತ್ ಸೆಟ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಕಾಗಿರುವ ಹಿನ್ನೆಲೆಯಲ್ಲಿ ‘ದೇವರಾಯ’ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.