'ಬರೆಯೋದೊಂದು, ಶೂಟ್ ಮಾಡೋದು ಇನ್ನೊಂದು': ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್‌ದಾಸ್ ಹಳೆ ವಿಡಿಯೋ ವೈರಲ್; ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು!
ಟಾಕ್ಸಿಕ್ ಸಿನಿಮಾ ಬಗ್ಗೆ ಪಾಸಿಟಿವ್, ನೆಗೆಟಿವ್ ವಿಮರ್ಶೆಗಳೂ ಬರುತ್ತಿರುವ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'(Toxic: A Fairy Tale for Grown-Ups) ಬುಧವಾರ ವಿಶ್ವದಾದ್ಯಂತ ಏಕ ಕಾಲಕ್ಕೆ ತೆರೆ ಕಂಡಿದ್ದು, ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕಲೆಕ್ಷನ್ ವಿಚಾರದಲ್ಲಿ ಆಶಾದಾಯಕವಾಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
ಟಾಕ್ಸಿಕ್ ಸಿನಿಮಾ ಬಗ್ಗೆ ಪಾಸಿಟಿವ್, ನೆಗೆಟಿವ್ ವಿಮರ್ಶೆಗಳೂ ಬರುತ್ತಿರುವ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದು, ಅವರು ನೀಡಿದ್ದ ಹೇಳಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗೀತು ಮೋಹನ್‌ದಾಸ್ ಅವವರು ಸಿನಿಮಾ ಮಾಡುವ ವಿಧಾನದ ಕುರಿತು ಮಾತನಾಡಿರುವ ಅವರ ಹಳೆಯ ವಿಡಿಯೋವೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹಳೆಯ ವಿಡಿಯೋದಲ್ಲಿ ಗೀತು ಮೋಹನ್‌ದಾಸ್ ಹೇಳಿದ್ದೇನು?
"ಬರೆಯೋದು ಒಂದು, ಶೂಟ್ ಮಾಡೋದು ಇನ್ನೊಂದು, ಏನಾದರೊಂದು ಶೂಟ್ ಮಾಡುತ್ತೇನೆ, ಮತ್ತೇನೋ ಎಡಿಟ್ ಮಾಡುತ್ತೇನೆ, ಕೊನೆಗೆ ಸಿನಿಮಾ ಹೇಗೋ ಹಾಗೆ ರೂಪುಗೊಳ್ಳುತ್ತದೆ ಮತ್ತು ಅದರಿಂದ ನನಗೆ ಖುಷಿಯಾಗುತ್ತದೆ ಎಂದು ಗೀತು ಮೋಹನ್‌ದಾಸ್ ಹೇಳಿದ್ದಾರೆ.
ನಾನು ಎಂದಿಗೂ ಸ್ಕ್ರಿಪ್ಟ್‌ಗೆ ಅಂಟಿಕೊಳ್ಳುವುದಿಲ್ಲ ಎಂಬುದನ್ನು ಗೀತು ಅವರು ಈ ಮೂಲಕ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಮುಂದುವರೆದು ಮಾತನಾಡುತ್ತಾ, ತಾವು ನಿರ್ಮಾಪಕರನ್ನು ಭೇಟಿಯಾದಾಗಲೂ ಕೂಡ ಈ ಮಾತನ್ನು ಮೊದಲೇ ಸ್ಪಷ್ಟಪಡಿಸುವುದಾಗಿ ಅವರು ತಿಳಿಸಿದ್ದಾರೆ. "ನೀವು ಸ್ಕ್ರಿಪ್ಟ್‌ನಲ್ಲಿ ಏನು ಓದುತ್ತೀರೋ, ಅಚ್ಚುಕಟ್ಟಾಗಿ ಅದೇ ಸಿನಿಮಾ ನಿಮಗೆ ಸಿಗುವುದಿಲ್ಲ ಎಂದು ನಾನು ನಿರ್ಮಾಪಕರಿಗೆ ಮೊದಲೇ ಹೇಳಿರುತ್ತೇನೆ ಎಂದು ಗೀತು ಮೋಹನ್‌ದಾಸ್ ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ.
ನಿರ್ದೇಶಕಿಯ ಈ ವಿಚಿತ್ರ ಹಾಗೂ ಬೇಜವಾಬ್ದಾರಿಯ ಹೇಳಿಕೆಯು ಈಗ ಸಿನಿಪ್ರಿಯರು ಮತ್ತು ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಓಹೋ ಅದಕ್ಕೇನೆ ಟಾಕ್ಸಿಕ್ ಸಿನಿಮಾ ಹೀಗಿದೆ ಎಂದ ನೆಟ್ಟಿಗರು ಕಿಡಿ ಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


