'ಇಂತಹ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ': ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತದೆ ಎಂದು ಕೇಳಿ ಟ್ರೋಲ್‌ಗೆ ಗುರಿಯಾಗಿದ್ದ ವಿನಯ್ ಗೌಡ!
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಉತ್ತರ ನೀಡಿರುವ ವಿನಯ್ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: ಇತ್ತೀಚೆಗೆ ನಡೆದ 'ಬಿಗ್ ಬಾಸ್ ಅಗ್ನಿಪರೀಕ್ಷೆ' ಸಂಚಿಕೆಯಲ್ಲಿ ತಾವು ಕೇಳಿದ್ದ ಪ್ರಶ್ನೆಯೊಂದಕ್ಕೆ ಟ್ರೋಲ್‌ಗಳಿಗೆ ಗುರಿಯಾಗಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಇದೀಗ ಖಡಕ್ ತಿರುಗೇಟು ನೀಡಿದ್ದು, ಇಂತಹ ಯಾವುದೇ ವಿಚಾರಗಳಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಆಡಿಷನ್‌ಗೆಂದು ಆಗಮಿಸಿದ್ದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರಿಗೆ ವಿನಯ್ ಗೌಡ ಅವರು 'ವೃತ್ತವೊಂದಕ್ಕೆ ಎಷ್ಟು ಸೈಡ್ಸ್ ಇರುತ್ತದೆ?' ಎಂದು ಪ್ರಶ್ನಿಸಿದ್ದರು. ಅದಕ್ಕೆ ಆ ಯುವಕ 'ವೃತ್ತಕ್ಕೆ ಯಾವುದೇ ಸೈಡ್ಸ್' ಇರುವುದಿಲ್ಲ ಎಂದು ಉತ್ತರಿಸಿದ್ದರು. ಆದರೆ, ಎದ್ದುನಿಂತ ವಿನಯ್ ವ್ಯಂಗ್ಯವಾಗಿ ಚಪ್ಪಾಳೆ ತಟ್ಟುತ್ತಾ, 'ವೃತ್ತಕ್ಕೆ 'ಇನ್‌ಸೈಡ್' ಮತ್ತು 'ಔಟ್‌ಸೈಡ್' ಎಂಬ ಎರಡು ಸೈಡ್‌ಗಳಿರುತ್ತವೆ' ಎಂದು ಸಮರ್ಥಿಸಿಕೊಂಡಿದ್ದರು. ಈ ಸಂಭಾಷಣೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಳಿಕ ಆ ಪ್ರಶ್ನೆಗೆ ಗೂಗಲ್‌ನಲ್ಲಿ ಉತ್ತರ ಹುಡುಕಿದ ನೆಟ್ಟಿಗರು, ವಿನಯ್ ಗೌಡ ಅವರನ್ನು ಟ್ರೋಲ್ ಮಾಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಉತ್ತರ ನೀಡಿರುವ ವಿನಯ್ ಗೌಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವೃತ್ತದ ಒಳಗಡೆ ಹಾಗೂ ಹೊರಗಡೆ ಎಂಬುದನ್ನು ವಿವರಿಸುವ ಗಣಿತದ 'ಜೋರ್ಡಾನ್ ಕರ್ವ್ ಸಿದ್ಧಾಂತ'ವನ್ನು ಉಲ್ಲೇಖಿಸಿ, ಆ ಸಂದರ್ಭದಲ್ಲಿ ತಾವು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಅಂತಹ ಪ್ರಶ್ನೆಯನ್ನು ಏಕೆ ಕೇಳಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ.
ಈ ಕುರಿತು ವಿವರಣೆ ನೀಡಿರುವ ವಿನಯ್, "ನನ್ನ ಪ್ರಶ್ನೆಯ ಹಿಂದಿದ್ದ ನೈಜ ಉದ್ದೇಶವನ್ನು ಅರ್ಥೈಸಿಕೊಂಡು ನನಗಾಗಿ ಧ್ವನಿ ಎತ್ತಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೆ, ಮಾಫಿಯಾ ಗ್ಯಾಂಗ್‌ಸ್ಟರ್ ಆಗಲು ಹೊರಟಿದ್ದ ಆ ವಿದ್ಯಾರ್ಥಿಯ ಜ್ಞಾನದ ಮಟ್ಟ ಅತ್ಯಂತ ನಿರಾಶಾದಾಯಕವಾಗಿತ್ತು. ಅದನ್ನು ಹೊರತರಲು ಆ ಪ್ರಶ್ನೆ ಕೇಳಬೇಕಾಯಿತು. ಹೀಗಾಗಿ, ಯಾವುದೇ ಪಿಆರ್ ಸೃಷ್ಟಿತ ಟ್ರೋಲ್‌ಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರಿಗೆ ಆ ಪ್ರಶ್ನೆಯನ್ನು ಏಕೆ ಕೇಳಿದೆ?
ಕಂಪ್ಯೂಟರ್ ಸೈನ್ಸ್‌ನಲ್ಲಿ, 'ಜೋರ್ಡಾನ್ ಕರ್ವ್ ಸಿದ್ಧಾಂತ'ವು (Jordan Curve Theorem) ಕಂಪ್ಯೂಟೇಶನಲ್ ಜಿಯೊಮೆಟ್ರಿ ಮತ್ತು ಪ್ರಾದೇಶಿಕ ತಾರ್ಕಿಕತೆಯ (spatial reasoning) ಮೂಲಾಧಾರವಾಗಿದೆ. ನಿರ್ದಿಷ್ಟ ಗಡಿಯೊಳಗೆ ಅಥವಾ ಹೊರಗೆ ನಿರ್ದೇಶಾಂಕವೊಂದು (coordinate) ಅಥವಾ ವಸ್ತುವೊಂದು ಇದೆಯೇ ಎಂದು ನಿರ್ಧರಿಸುವ ಅಲ್ಗಾರಿದಮ್‌ಗಳಿಗೆ ಇದು ಸೈದ್ಧಾಂತಿಕ ಆಧಾರವನ್ನು ಒದಗಿಸುತ್ತದೆ. ನಾನು ಕಾರ್ಯಕ್ರಮದಲ್ಲಿ ಹೇಳಿದಂತೆ...
ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬನಿಗೆ ಕೇಳಲಾದ ಪ್ರಶ್ನೆಗಳು, ಆ ಪ್ರಶ್ನೆಗಳ ಹಿಂದಿನ ಸಂದರ್ಭ ಮತ್ತು ವಾಸ್ತವಿಕ ಚಿತ್ರಣವನ್ನು ಸರಿಯಾಗಿ ಅರ್ಥಮಾಡಿಕೊಂಡು ನನ್ನ ಪರವಾಗಿ ನಿಂತ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾವುದೇ ಅರಿವಿಲ್ಲದ, ಆದರೆ ಗ್ಯಾಂಗ್‌ಸ್ಟರ್ ಆಗಲು ಮತ್ತು ಮಾಫಿಯಾವನ್ನು ಕಟ್ಟಲು ಬಯಸುವ ವ್ಯಕ್ತಿಯೊಬ್ಬನಿಗೆ ಆ ಪ್ರಶ್ನೆಯನ್ನು ಕೇಳಿದಾಗ ಬಂದ ಉತ್ತರವು ಅತ್ಯಂತ ನಿರಾಶಾದಾಯಕವಾಗಿತ್ತು. 'ಮಾಫಿಯಾ' ಕಟ್ಟಲು ಮತ್ತು ಗ್ಯಾಂಗ್‌ಸ್ಟರ್ ಆಗಲು ಈ ಪೀಳಿಗೆಯನ್ನು ಪ್ರೇರೇಪಿಸುವ ಮೂಲಕ ಬೆಂಬಲಿಸಿದವರಿಗೂ, ಹಾಗೆಯೇ ಹಣ ನೀಡಿ ನಡೆಸುವ ಪ್ರಚಾರದ ತಂತ್ರಗಳು (paid PR) ಮತ್ತು ನನ್ನ ಅಸ್ತಿತ್ವವನ್ನು ಸಹಿಸಿಕೊಳ್ಳಲಾಗದ ಕೆಲವರಿಗೂ ವಿಶೇಷ ಧನ್ಯವಾದಗಳು; ಇಂತಹ ಪ್ರಚಾರದ ತಂತ್ರಗಳನ್ನು ಕೆಲವರು ಕುರುಡಾಗಿ ಅನುಸರಿಸುವುದನ್ನು ನೋಡುವುದು ವಿಷಾದನೀಯ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


