ಸಿನಿಮಾ ಸುದ್ದಿ

ಪ್ರೀತಿ, ಕ್ರೌರ್ಯ; 2 ವರ್ಷ ನರಕ ಅನುಭವಿಸಿದೆ, ಖಿನ್ನತೆಗೆ ಒಳಗಾಗಿದ್ದೆ: ಬ್ರೇಕ್‌ಅಪ್ ಬಗ್ಗೆ ಮೌನ ಮುರಿದ 'ನಟ ಸಾರ್ವಭೌಮ' ನಟಿ ಅನುಪಮಾ!

ನಟಿ ಅನುಪಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಕೆಲವು ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದವು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಪ್ರೀತಿ, ಕ್ರೌರ್ಯ; 2 ವರ್ಷ ನರಕ ಅನುಭವಿಸಿದೆ, ಖಿನ್ನತೆಗೆ ಒಳಗಾಗಿದ್ದೆ: ಬ್ರೇಕ್‌ಅಪ್ ಬಗ್ಗೆ ಮೌನ ಮುರಿದ 'ನಟ ಸಾರ್ವಭೌಮ' ನಟಿ ಅನುಪಮಾ!
ಅನುಪಮಾ ಪರಮೇಶ್ವರನ್
Published On :

ಕನ್ನಡದಲ್ಲಿ ದಿ.ಪುನೀತ್​ ರಾಜ್​​ಕುಮಾರ್​ ಅಭಿನಯದ 'ನಟಸಾರ್ವಭೌಮ' ಚಿತ್ರದಲ್ಲಿ ನಟಿಸಿದ್ದ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ ಅವರು ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ಮಲಯಾಳಂನ ಸೂಪರ್ ಹಿಟ್ 'ಪ್ರೇಮಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ತಮಿಳು ಹಾಗೂ ತೆಲುಗಿನಲ್ಲಿ 'ಕೋಡಿ', 'ಡ್ರ್ಯಾಗನ್', 'ಬೈಸನ್ ಕಲಾಮಥನ್' ಮುಂತಾದ ಹಿಟ್ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಟಿ ಅನುಪಮಾ ಪರಮೇಶ್ವರನ್, ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಯೊಂದನ್ನು ಹಂಚಿಕೊಂಡು ಸುದ್ದಿಯಲ್ಲಿದ್ದಾರೆ.

ನಟಿ ಅನುಪಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಕೆಲವು ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದವು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಒಂದು ದಿನ ಪ್ರೀತಿ, ಮತ್ತೊಂದು ದಿನ ಕ್ರೌರ್ಯ. ಹೀಗೆ ಎರಡು ವರ್ಷಗಳ ಕಾಲ "ನರಕ" ಅನುಭವಿಸಿದ್ದಾಗಿ ನಟಿ ಬಹಿರಂಗಪಡಿಸಿದ್ದಾರೆ. ಆದರೆ ತಮ್ಮ ಬಾಯ್ ಫ್ರೆಂಡ್ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ಆದರೆ ಅಭಿಮಾನಿಗಳು ಅವರ ಪೋಸ್ಟ್‌ಗಳನ್ನು ನಟ ವಿಕ್ರಮ ಧ್ರುವ ವಿಕ್ರಮ್ ಅವರೊಂದಿಗಿನ ಸಂಬಂಧಕ್ಕೆ ಲಿಂಕ್ ಮಾಡಿದ್ದರು. ಅನುಪಮಾ ಅವರಾಗಲಿ ಅಥವಾ ಧ್ರುವ್​ ಅವರಾಗಲಿ ತಾವು ಡೇಟಿಂಗ್ ಮಾಡುತ್ತಿದ್ದೇವೆ ಎಂದು ಎಂದಿಗೂ ಸಾರ್ವಜನಿಕವಾಗಿ ದೃಢಪಡಿಸಿಲ್ಲ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅನುಪಮಾ ಪರಮೇಶ್ವರನ್ ಅವರು ತಮ್ಮ ಭಾವನಾತ್ಮಕ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಹಠಾತ್ತನೆ ಮಾಡಿದ್ದಲ್ಲ ಎಂದು ವಿವರಿಸಿದ್ದಾರೆ. "ಆ ಒಂದು ಪೋಸ್ಟ್‌ನ ಹಿಂದೆ ಎರಡು ವರ್ಷಗಳ ನೋವಿದೆ" ಎಂದು ಹೇಳಿದ್ದಾರೆ.

ಏನಾಯಿತು ಎಂಬುದರ ಕುರಿತು ಮಾತನಾಡಲು ಸಿದ್ಧವಾಗುವವರೆಗೆ ಕಾಯುತ್ತಿದ್ದೆ ಎಂಬುದಾಗಿಯೂ ನಟಿ ಸ್ಪಷ್ಟಪಡಿಸಿದ್ದಾರೆ. "ನಾನು ಸಿದ್ಧಳಾದಾಗ, ನಿಜವಾಗಿಯೂ ಗುಣಮುಖಳಾದಾಗ ಪೋಸ್ಟ್ ಮಾಡಲು ಬಯಸಿದ್ದೆ" ಎಂದು ಹೇಳಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು ಧೈರ್ಯ ತೆಗೆದುಕೊಳ್ಳುತ್ತಿದ್ದೆ ಎಂದೂ ವಿವರಿಸಿದ್ದಾರೆ. "ಎರಡು ವರ್ಷಗಳ ಕಾಲ ನಿಂದನೆ"ಗೆ (narcissistic abuse) ಒಳಗಾಗಿದ್ದೇನೆ ಮತ್ತು ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಿರುವ ಜನರೊಂದಿಗೆ ವಿಶೇಷವಾಗಿ ಮಾತನಾಡಲು ಬಯಸಿದೆ'' ಎಂದು ಹೇಳಿಕೊಂಡಿದ್ದಾರೆ.

ಖಿನ್ನತೆಗೆ ಒಳಗಾಗಿದ್ದೆ

ಆ ರಿಲೇಶನ್​​ಶಿಪ್​ ತಮ್ಮ ಮೇಲೆ ವೈಯಕ್ತಿಕವಾಗಿ ಹೇಗೆ ಪರಿಣಾಮ ಬೀರಿತು ಎಂಬುದರ ಕುರಿತಾಗಿಯೂ ನಟಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ತಾವು ಬೆಳೆಯುವ ಬದಲು "ಕುಗ್ಗುತ್ತಿರುವಂತೆ" ಭಾವಿಸಲು ಪ್ರಾರಂಭಿಸಿದೆ. ಖಿನ್ನತೆಗೆ ಒಳಗಾಗಿದ್ದೆ. ಗಣನೀಯವಾಗಿ ತೂಕ ಕಳೆದುಕೊಂಡೆ ಮತ್ತು ತಮ್ಮ ಸಂಗಾತಿಯ ನಡವಳಿಕೆಯು ಭಾವನಾತ್ಮಕವಾಗಿ ಪರಿಣಾಮ ಬೀರಿದೆ ಎಂದು ವಿವರಿಸಿದ್ದಾರೆ.

ಮೂರೇ ತಿಂಗಳಲ್ಲೇ ನಿಶ್ಚಿತಾರ್ಥಕ್ಕೆ ಒತ್ತಾಯ

"ನನ್ನ ಮಾಜಿ ಪ್ರೇಮಿ ನನ್ನನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ. ಅವನ ಕುಟುಂಬವನ್ನು ಭೇಟಿಯಾದ ಮೂರೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವಂತೆ ಒತ್ತಡ ಹೇರಿದ" ಎಂದು ಅನುಪಮಾ ಆರೋಪಿಸಿದ್ದಾರೆ.

ಒಂದು ದಿನ ಪ್ರೀತಿ, ಮತ್ತೊಂದು ದಿನ ಕ್ರೌರ್ಯ

ಪ್ರೇಮಿಯ ನಡವಳಿಕೆಯನ್ನು ವಿವರಿಸುತ್ತಾ, "ಅವನು ಒಂದು ದಿನ ಅತ್ಯಂತ ಪ್ರೀತಿಯ 'ರೆಮೋ' ತರ ಇರುತ್ತಿದ್ದ, ಮರುದಿನ ಸಂಪೂರ್ಣ ಅಪರಿಚಿತನಂತೆ ವರ್ತಿಸುತ್ತಿದ್ದ. ಆಮೇಲೆ ಸಣ್ಣ ಮಗುವಿನಂತೆ ಬಂದು ಕ್ಷಮೆ ಕೇಳುತ್ತಿದ್ದ. ಈ ನಾಟಕ ಸತತ ಎರಡು ವರ್ಷ ನಡೆಯಿತು," ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.