ಸಿನಿಮಾ ಸುದ್ದಿ

ಕಾಂತಾರ ಮಿಮಿಕ್ರಿ ವಿವಾದ: ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಹೈಕೋರ್ಟ್ ಸೂಚನೆ; ಅರ್ಜಿ ಇತ್ಯರ್ಥ!

ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರವನ್ನು ಮಿಮಿಕ್ರಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ದೇಶಿಸಲಾಗಿದೆ...

ಕಾಂತಾರ ಮಿಮಿಕ್ರಿ ವಿವಾದ: ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಹೈಕೋರ್ಟ್ ಸೂಚನೆ; ಅರ್ಜಿ ಇತ್ಯರ್ಥ!
ರಣವೀರ್ ಸಿಂಗ್-ರಿಷಬ್ ಶೆಟ್ಟಿ
Published On :

ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರವನ್ನು ಮಿಮಿಕ್ರಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ದೇಶಿಸಲಾಗಿದೆ ಎಂದಿರುವ ಕರ್ನಾಟಕ ಹೈಕೋರ್ಟ್‌ ಶನಿವಾರ ಅರ್ಜಿ ವಿಲೇವಾರಿ ಮಾಡಿದೆ.

ರಣವೀರ್‌ ಸಿಂಗ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ, ರಣವೀರ್‌ ಬೇಷರತ್‌ ಕ್ಷಮೆಯಾಚಿಸಿರುವ ಅಫಿಡವಿಟ್‌ ಹಾಕಿದ್ದೇವೆ. ದೇವಸ್ಥಾನಕ್ಕೆ ರಣವೀರ್‌ ಸಿಂಗ್‌ ಭೇಟಿ ನೀಡುತ್ತಾರೆ. ದಿನಾಂಕ ಹಾಕಿಲ್ಲ. ಪೀಠವೇ ನಿರ್ದಿಷ್ಟ ದಿನ ನಿಗದಿ ಮಾಡಬಹುದು. ಅಂದು ರಣವೀರ್‌ ದೇವಾಲಯಕ್ಕೆ ಹೋಗಲಿದ್ದಾರೆ ಎಂದರು. ಇದಕ್ಕೆ ದೂರುದಾರರ ಪರ ವಕೀಲ ಸಿಜಿ ಮಲೆಯಾಳ್ ಅವರು 'ಪೂವಯ್ಯ ಅವರಿಗೆ ಇದೊಂದು ಪ್ರಕರಣವಷ್ಟೆ. ನಮಗೆ ಇದು ನಂಬಿಕೆಯ ವಿಚಾರ' ಎಂದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪೀಠವು ಇದೇ ಕಾರಣಕ್ಕೆ ಪ್ರಕರಣಕ್ಕೆ ಇದುವರೆಗೂ ತಡೆ ನೀಡಿಲ್ಲ ಎಂದಿತು.

ಆಗ ಸಿಜಿ ಮಲೆಯಾಳ್, ಪ್ರತಿಯೊಂದು ಪದಕ್ಕೂ ತನ್ನದೇ ಆದ ತೂಕವಿದೆ. ಪದಗಳು ಪ್ರಭಾವ ಮತ್ತು ಪರಿಣಾಮಗಳನ್ನು ಉಂಟು ಮಾಡುತ್ತವೆ. ಇದೇ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು ಎಂದು ರಣವೀರ್‌ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಸಮಯ ಬಂದಾಗ ಎಂದು ಹೇಳಿದ್ದಾರೆ. ಅದು 30, 40 ದಿನವಾಗಬಹುದು. ಒಂದು ವರ್ಷ.. ಹತ್ತು ವರ್ಷ… ಆಗಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ನಾಲ್ಕು ವಾರಗಳಲ್ಲಿ ರಣವೀರ್‌ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದರು.

ಇದನ್ನು ಇತರೆ ಸೆಲೆಬ್ರಿಟಿಗಳು ಲಘುವಾಗಿ ಪರಿಗಣಿಸಬಾರದು. ಕಠಿಣ ಎಚ್ಚರಿಕೆಯನ್ನು ಈ ನ್ಯಾಯಾಲಯ ನೀಡಬೇಕು ಎಂದು ಮಲೆಯಾಳ್ ಕೇಳಿದರು. ಇದಕ್ಕೆ ಪೀಠವು ಖಂಡಿತವಾಗಿಯೂ ಎಚ್ಚರಿಸಲಾಗುವುದು. ಕಾನೂನಿನ ಅನ್ವಯ ಉತ್ತರಿಸಬೇಕು ಎಂದಾದರೆ ಎಚ್ಚರಿಸುವ ಪರಿಸ್ಥಿತಿ ನಿರ್ಮಾಣವೇ ಆಗಲ್ಲ ಎಂದಿತು. ಈ ನಡುವೆ, ಸಜನ್‌ ಪೂವಯ್ಯ, ಈ ವಾದದಲ್ಲಿ ನಾವು ಭಾಗಿಯಾಗಲ್ಲ. ಜನರ ಭಾವನೆಗಳು ನಮಗೆ ಅರ್ಥವಾಗುತ್ತವೆ. ಅದೇ ಕಾರಣಕ್ಕಾಗಿ ಪ್ರಕರಣದ ಮೆರಿಟ್‌ ಮೇಲೆ ವಾದಿಸಲಿಲ್ಲ. ಪ್ರಕರಣದ ಸೂಕ್ಷ್ಮತೆ ಅರ್ಥವಾಗಿದ್ದು, ರಣವೀರ್‌ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.

ಈ ಹಂತದಲ್ಲಿ ಪೀಠವು ಜನರ ಭಾವನೆಗಳನ್ನು ಕೇಳಿಯಾಗಿದೆ. ಕಾನೂನಾತ್ಮಕವಾಗಿ ಉತ್ತರಿಸಬೇಕು ಎಂದಾದರೆ ಸಾಕಷ್ಟು ತೀರ್ಪುಗಳಿವೆ. ನಾಲ್ಕು ವಾರದಲ್ಲಿ ರಣವೀರ್‌ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಬೇಕು ಎಂದರು. ಆಗ ಪೂವಯ್ಯ, ಈ ಎರಡು ನಿರ್ದಿಷ್ಟ ಸಿನಿಮಾಗಳು (ದುರಂಧರ್‌) ಬಂದ ಮೇಲೆ ಭದ್ರತೆಯ ಸಮಸ್ಯೆ ಹೆಚ್ಚಾಗಿದೆ ಎಂದರು. ಇದಕ್ಕೆ ಪೀಠವು, ಭದ್ರತೆಯ ಸಮಸ್ಯೆ. ಕರ್ನಾಟಕ ಪೊಲೀಸರು ಭದ್ರತೆ ನೋಡಿಕೊಳ್ಳುತ್ತಾರೆ ಎಂದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು, ರಣವೀರ್‌ ಬರುವ ಮಾಹಿತಿಯನ್ನು ಮುಂಚಿತವಾಗಿ ನೀಡಲು ಆದೇಶಿಸಬೇಕು ಎಂದರು. ಎಲ್ಲವನ್ನು ಆಲಿಸಿದ ಪೀಠವು ರಣವೀರ್‌ ಅಫಿಡವಿಟ್‌ ಸ್ವೀಕರಿಸಿ, ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.

ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಕಾಂತಾರ ಚಾಪ್ಟರ್‌-1 ಚಿತ್ರದ ಚಾಮುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದ ಸಂಬಂಧ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ರಣವೀರ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.