ರಿಷಬ್ ಶೆಟ್ಟಿ ನಟನೆ ಅನುಕರಣೆ ಮಾಡಿ ದೈವಕ್ಕೆ ಅವಮಾನ? ಸೋಷಿಯಲ್ ಮೀಡಿಯಾದಲ್ಲಿ Ranveer Singh ವಿರುದ್ಧ ಹಿಗ್ಗಾಮುಗ್ಗ ಟೀಕೆ! Video
ಚಾಮುಂಡಿ ದೇವಿಯನ್ನು ದೈವವೆನ್ನುವ ಬದಲು ದೆವ್ವ ಎನ್ನುವ ರೀತಿ ಸಂಭೋದಿಸಿ ವಿಕಾರವಾಗಿ ರಿಷಬ್ ಶೆಟ್ಟಿ ನಟನೆಯನ್ನು ಅನುಕರಿಸಿದ್ದಾರೆ.

ಬಾಲಿವುಡ್ ನಟ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಇಂದು ಟ್ರೆಂಡಿಂಗ್ ನಲ್ಲಿದ್ದಾರೆ, ಅದು ವಿವಾದದಿಂದಾಗಿ. ಅವರ ಮುಂಬರುವ ಚಿತ್ರ 'ಧುರಂಧರ್' ಬಿಡುಗಡೆಗೂ ಮುನ್ನ, ಅವರು ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಳೆದ 50 ವರ್ಷಗಳಲ್ಲಿ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ತಲೈವಾ ರಜನಿಕಾಂತ್ ಅವರಿಗೆ ಪ್ರೀತಿಯಿಂದ ಗೌರವ ಸಲ್ಲಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದ ರಣವೀರ್ ಸಿಂಗ್ ಅದೇ ಕಾರ್ಯಕ್ರಮದಲ್ಲಿ ಅಪ್ಪಟ ಕನ್ನಡ ಚಿತ್ರ ನಂತರ ದೇಶ ವಿದೇಶಗಳಲ್ಲಿ ಹೆಸರು ಮಾಡಿದ ದಂತಕಥೆ ಕಾಂತಾರ ಬಗ್ಗೆ ಅದರಲ್ಲಿ ಬರುವ ದೈವದ ರಿಷಬ್ ಶೆಟ್ಟಿ ಅವರ ನಟನೆಯನ್ನು ಅನುಕರಣೆ ಮಾಡಿದ ಬಗ್ಗೆ ಜನರು ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ.
ಚಾಮುಂಡಿ ದೇವಿಯನ್ನು ದೈವವೆನ್ನುವ ಬದಲು ದೆವ್ವ ಎನ್ನುವ ರೀತಿ ಸಂಭೋದಿಸಿ ವಿಕಾರವಾಗಿ ರಿಷಬ್ ಶೆಟ್ಟಿ ನಟನೆಯನ್ನು ಅನುಕರಿಸಿದ್ದಾರೆ. ಅವರು ಆ ರೀತಿ ಮಾಡುವಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರ್ದೇಶಕ-ನಟ ರಿಷಬ್ ಶೆಟ್ಟಿಯವರು ಅದನ್ನು ನೋಡಿ ಸುಮ್ಮನಾಗುವುದು ಅಥವಾ ವಿರೋಧಿಸುವ ಬದಲು ನಗುತ್ತಾ ಪ್ರೋತ್ಸಾಹಿಸಿದ್ದು ಕೂಡ ಹಲವರಿಗೆ ಇಷ್ಟವಾಗಿಲ್ಲ.
ರಣವೀರ್ ಸಿಂಗ್ ಕಾಂತಾರ ಮತ್ತು ಅದರ ದೈವ ದೃಶ್ಯವನ್ನು ಅಣಕಿಸಿದರಾ?
ಪ್ರೇಕ್ಷಕರ ನಡುವೆ ರಿಷಬ್ ಶೆಟ್ಟಿಯನ್ನು ನೋಡಿದ ರಣವೀರ್ ಸಿಂಗ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ಕಾಂತಾರ ಅಧ್ಯಾಯ 1 ರಲ್ಲಿ ಅವರ ಅಭಿನಯದ ಬಗ್ಗೆ ಮಾತನಾಡುತ್ತಾ, ರಣವೀರ್ ಸಿಂಗ್, ಗುಳಿಗ ದೈವ ಅವರ ಸಹೋದರಿ ಚಾಮುಂಡಿ ಅವರನ್ನು "ಸ್ತ್ರೀ ದೆವ್ವ" ಎಂದು ಕರೆದರು. ಅಡ್ಡ ಕಣ್ಣುಗಳೊಂದಿಗೆ, ನಾಲಿಗೆಯನ್ನು ಚಾಚಿದ ಅಭಿವ್ಯಕ್ತಿಯೊಂದಿಗೆ, ರಿಷಬ್ ಶೆಟ್ಟಿಯವರ ಮುಂದೆ ತಮ್ಮ ಕಿರುಚಾಟದ ಪ್ರವೃತ್ತಿ ತೋರಿಸಿದರು.
ರಣವೀರ್ ಸಿಂಗ್ ವೇದಿಕೆಯಿಂದ ರಿಷಬ್ ಶೆಟ್ಟಿಯತ್ತ ತಮಾಷೆಯಾಗಿ ಬೆರಳು ತೋರಿಸಿ, ಇಲ್ಲಿ ಯಾರಾದರೂ ಕಾಂತಾರ 3 ರಲ್ಲಿ ನನ್ನನ್ನು ನೋಡಲು ಬಯಸುತ್ತೀರಾ ಈ ವ್ಯಕ್ತಿಗೆ ಹೇಳಿ ಎಂದು ಕೇಳಿದರು.
ರಣವೀರ್ ಸಿಂಗ್ ಅವರ ವರ್ತನೆ ಬಹುತೇಕರಿಗೆ ಇಷ್ಟವಾಗಿಲ್ಲ.
ಕಾಂತಾರ ದೃಶ್ಯಕ್ಕೆ ರಣವೀರ್ ಅವರ ಪ್ರತಿಕ್ರಿಯೆ ನಿಜವಾಗಿಯೂ ಅನಗತ್ಯ ಮತ್ತು ಅಗೌರವ ಅನಿಸಿತು ಎಂದು ಒಬ್ಬರು ಬರೆದಿದ್ದಾರೆ.
ಮತ್ತೊಬ್ಬರು, ಕಾಂತಾರದಲ್ಲಿ ರಣವೀರ್ ಸಿಂಗ್ ಅಕ್ಷರಶಃ ದೈವ ಚಾಮುಂಡಿಯನ್ನು ಅಣಕಿಸುತ್ತಿದ್ದಾರೆ. ಈ ಚಲನಚಿತ್ರ ತಾರೆಯರು ಖ್ಯಾತಿ, ಹಣಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಹೋಗಬಹುದು ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು. ತುಳುನಾಡ ಪವಿತ್ರ ದೈವಾರಾಧನೆ ನಂಬಿಕೆಗಳಿಗೆ ಗೌರವ ನೀಡದಿರುವುದು ನಾಚಿಕೆಗೇಡು, ರಣವೀರ್ ಸಿಂಗ್ ಅವರ ವರ್ತನೆ ಕಂಡು ರಿಷಬ್ ಆನಂದಪಟ್ಟಿರುವುದು ಅಚ್ಚರಿ ತರುತ್ತಿದೆ ಎನ್ನುತ್ತಿದ್ದಾರೆ.
ರಣವೀರ್ ಸಿಂಗ್ ಅವರಿಗೆ ಕಾಂತಾರ ದೃಶ್ಯವನ್ನು ಅಣಕಿಸುವ ಕೆಲಸ ಬೇಕಿರಲಿಲ್ಲ. ಅವರಿಗೆ ದೈವವೇ ತಕ್ಕ ಬುದ್ಧಿ ಕಲಿಸುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಈ ಬಗ್ಗೆ ರಣವೀರ್ ಸಿಂಗ್ ಮತ್ತು ರಿಷಬ್ ಶೆಟ್ಟಿ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



