'ನಾನು ಯಾವತ್ತೂ ನಿಮಗೆ ಋಣಿ': ಮೊದಲ ಚಿತ್ರದ ನಿರ್ಮಾಪಕರು-ನಿರ್ದೇಶಕರಿಗೆ ರಾಕಿ ಬಾಯ್ ಧನ್ಯವಾದ!
ತಾವು ಸೀರಿಯಲ್ ಮಾಡುತ್ತಿದ್ದ ದಿನಗಳು ನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿಮಾದಲ್ಲಿ ನಾಯಕ ನಟನಾಗಿ ಆಯ್ಕೆಯಾಗಿದ್ದ ದಿನಗಳನ್ನು ಯಶ್ ನೆನೆಸಿಕೊಂಡರು.

ಕೆಜಿಎಫ್ 2 ಚಿತ್ರದ ಬಳಿಕ ದೀರ್ಘ ವಿರಾಮ ನಂತರ ಟಾಕ್ಸಿಕ್ ಚಿತ್ರದ ತಯಾರಿ ಬ್ಯುಸಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಇದೇ 28ರಂದು ತೆರೆ ಕಾಣುತ್ತಿರುವ 'ಮನದ ಕಡಲು' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾವು ಸೀರಿಯಲ್ ಮಾಡುತ್ತಿದ್ದ ದಿನಗಳು ನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿಮಾದಲ್ಲಿ ನಾಯಕ ನಟನಾಗಿ ಆಯ್ಕೆಯಾಗಿದ್ದ ದಿನಗಳನ್ನು ಯಶ್ ನೆನೆಸಿಕೊಂಡರು. ನಾನಿಂದು ಈ ಸ್ಥಾನದಲ್ಲಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ನಿರ್ಮಾಪಕರಾದ ಈ.ಕೃಷ್ಣಪ್ಪ, ಗಂಗಾಧರ್ ಮತ್ತು ನಿರ್ದೇಶಕ ಶಶಾಂಕ್. ನಾನು ಆ ದಿನಗಳನ್ನು ಎಂದಿಗೂ ಮರೆಯುವುದಿಲ್ಲ. ಅವರಿಗೆ ಋಣಿಯಾಗಿರುತ್ತೇನೆ, ಇಂದು ಕಾರ್ಯಕ್ರಮಕ್ಕೂ ಅದೇ ಕೃತಜ್ಞತೆಯನ್ನಿಟ್ಟುಕೊಂಡು ಬಂದಿದ್ದೇನೆ ಎಂದರು. ‘ಮನದ ಕಡಲು’ ಸಿನಿಮಾ ನಿರ್ದೇಶನ ಮಾಡಿದ್ದು ಯೋಗರಾಜ್ ಭಟ್.
ಇದನ್ನು ನಿರ್ಮಾಣ ಮಾಡಿದ್ದು ಈ. ಕೃಷ್ಣಪ್ಪ ಅವರು. ಮುಂಗಾರು ಮಳೆಯನ್ನು ಇದೇ ಜೋಡಿ ಮಾಡಿತ್ತು. ‘ಮೊಗ್ಗಿನ ಮನಸು’ ಸಿನಿಮಾಕ್ಕೆ ಆಯ್ಕೆ ಆದ ಸಂದರ್ಭವನ್ನು ವಿವರಿಸಿದ ಯಶ್, ನನಗೆ ಸಿನಿಮಾ ಮಾಡುವ ಆಸೆ ಇತ್ತು. ಎಲ್ಲರೂ ಆಫರ್ನೇನೋ ನೀಡುತ್ತಿದ್ದರು. ಆದರೆ, ಕಥೆ ಕೇಳಿದರೆ ‘ಅವಕಾಶ ಕೊಡುತ್ತಿರುವುದೇ ಹೆಚ್ಚು, ಕಥೆ ಬೇರೆ ಹೇಳಬೇಕಂತೆ. ಎಷ್ಟು ಧಿಮಾಕು’ ಎಂಬ ಹೇಳುತ್ತಿದ್ದರು. ‘ನಾನು ಏನು ಮಾಡುತ್ತಿದ್ದೇನೆ ಎಂಬುದು ಗೊತ್ತಿಲ್ಲದೆ ನನ್ನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದು ನಂಬುವವನು ನಾನು. ಈ ಕಾರಣದಿಂದ ಕಥೆ ಕೇಳೇ ಕೇಳುತ್ತೇನೆ ಎಂದು ಹೇಳುತ್ತಿದ್ದೆ ಎಂದರು.
‘ಮೊಗ್ಗಿನ ಮನಸು’ ಸಿನಿಮಾದಲ್ಲಿ ರಾಧಿಕಾ ಪಂಡಿತ್ ನಟಿಸುತ್ತಿದ್ದಳು. ಆಗ ನನ್ನ ಗೆಳತಿಯಾಗಿದ್ದಳು, ಆಕೆ ಸಿನಿಮಾ ಮಾಡುತ್ತಿದ್ದೇನೆ ಎಂದಾಗ ಆಲ್ ದಿ ಬೆಸ್ಟ್ ಎಂದೆ. ಇನ್ನೊಂದು ವಾರ ಮಾತ್ರ ಶೂಟ್ ಬಾಕಿ ಇದೆ’ ಎಂದಳು. ಹಾಗಿದ್ದಾಗಲೇ ನಿರ್ಮಾಣ ಸಂಸ್ಥೆ ಕಡೆಯಿಂದ ನನಗೆ ಕರೆ ಬಂತು. ನೀವು ಹೀರೋ ಆಗಿ ನಟಿಸಬೇಕು ಎಂದು ತಂಡ ಕೇಳಿಕೊಂಡಿತ್ತು.
ರಾಧಿಕಾ ಒಂದು ವಾರ ಶೂಟ್ ಮಾತ್ರ ಇದೆ ಎಂದಿದ್ದರು. ಆದರೆ, ಇಲ್ಲಿ ನೋಡಿದ್ರೆ ನಿಮ್ಮ ಜೊತೆ ಮಾತನಾಡಬೇಕು ಎನ್ನುತ್ತಿದ್ದಾರೆ. ಯಾರೋ ಸುಮ್ಮನೆ ಆಟ ಆಡಿಸುತ್ತಿದ್ದಾರೆ ಎಂದು ಸುಮ್ಮನಾದೆ. ಆ ಬಳಿಕ ಮತ್ತೆ ಕರೆ ಬಂತು. ನಾನು ಹೋದೆ. ಹೀರೋಗೆ ಕಾಲು ಪೆಟ್ಟಾಗಿದ್ದರಿಂದ ಆ ಆಫರ್ ನಂಗೆ ಸಿಕ್ಕಿತು. ನಿರ್ದೇಶಕರಾದ ಶಶಾಂಕ್ ಕಥೆ ಹೇಳಿದರು, ಹಾಡುಗಳನ್ನು ಕೇಳಿಸಿದರು. ನಿರ್ಮಾಪಕ ಕೃಷ್ಣಪ್ಪ ನೀವು ಧಾರಾವಾಹಿಗಳಲ್ಲಿ ನಟಿಸೋ ಹುಡುಗ ಅಲ್ವ? ಒಳ್ಳೆದಾಗಲಿ ಎಂದು ಹಾರೈಸಿದರು. ಹೀಗಾಗಿ, ಇಂದಿಗೂ ಅವರ ಮೇಲೆ ಆ ಗೌರವ ಇದೆ. ನನಗೆ ಮೊದಲು ಅವಕಾಶ ಕೊಟ್ಟು ಬೆಳೆಸಿದ್ದಕ್ಕೆ ಇಂದು ನಾನಿಲ್ಲಿದ್ದೇನೆ ಎಂದರು.
ವ್ಯಕ್ತಿ ತಾನಾಗಿಯೇ ಬೆಳೆಯಲು ಸಾಧ್ಯವಿಲ್ಲ, ದೊಡ್ಡ ಗುರಿ ಇಟ್ಟುಕೊಂಡು ಸಾಗಬೇಕು. ಜವಾಬ್ದಾರಿ ಬೆಳೆಸಿಕೊಂಡು ಮುನ್ನಡೆಯಬೇಕು, ಚಿತ್ರರಂಗಕ್ಕೆ ಯುವ ನಟರು ಬರಬೇಕು ಎಂದರು.
ನೆರೆದಿದ್ದ ಅಭಿಮಾನಿಗಳು ಟಾಕ್ಸಿಕ್ ಬಗ್ಗೆ ಅಪ್ಡೇಟ್ ಕೊಡಿ ಎಂದು ಕೂಗುತ್ತಿದ್ದರು. ಆಗ ಯಶ್ ಇವತ್ತು ಮನದ ಕಡಲು ಚಿತ್ರದ ಬಗ್ಗೆ ಮಾತನಾಡೋಣ, ಈ ಚಿತ್ರದ ನಾಯಕ, ನಾಯಕಿಯರು ಹೊಸಬರು, ಅವರಿಗೆ ಅವಕಾಶ ಕೊಡಿ ಬೆಳೆಯಲಿ ಎಂದು ಕೇಳಿಕೊಂಡರು.
ನಿಮ್ಮ ಕೂಗಿಗೆ ನಾನು ಅಪಮಾನ ಮಾಡಲ್ಲ. ಕೆಲಸ ಮಾಡ್ತಿದ್ದೀನಿ. ನಿಮಗೆ ಟಾಕ್ಸಿಕ್ ಕೊಟ್ಟೇ ಕೊಡ್ತೀನಿ, ನನ್ನ ಮೇಲೆ ನಂಬಿಕೆ ಇಡಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



