'ನನ್ನ ಬಳಿ ಇರುವ ಅಸ್ತ್ರ...': ಖಾಸಗಿ ಸುದ್ದಿ ವಾಹಿನಿ ವಿರುದ್ಧ ಹರಿಹಾಯ್ದ ನಟ ರಕ್ಷಿತ್ ಶೆಟ್ಟಿ!
ತಮ್ಮ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ್ದ ಖಾಸಗಿ ಸುದ್ದಿವಾಹಿನಿಯೊಂದರ ವಿರುದ್ಧ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.

ಬೆಂಗಳೂರು: ತಮ್ಮ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ್ದ ಖಾಸಗಿ ಸುದ್ದಿವಾಹಿನಿಯೊಂದರ ವಿರುದ್ಧ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿಯವರು, ನಿಮ್ಮ ಬಳಿ ಇರುವ ಅಸ್ತ್ರ ಟಿಆರ್'ಪಿಗೋಸ್ಕರ ನಡೆಸುತ್ತಿರುವ ಒಂದು ಸುದ್ದಿ ವಾಹಿನಿ. ನನ್ನ ಬಳಿ ಇರುವ ಅಸ್ತ್ರ ಕೆಲಸದ ಮೇಲಿರೋ ನನ್ನ ಶ್ರದ್ಧೆ, ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿ, ನನ್ನ ಸಿನಿಮಾ ಹಾಗು ಜನಬೆಂಬಲ. ಇವೆರಡರಲ್ಲಿ ಜಯ ಯಾರಿಗೆ ಎಂದು ನೋಡಿ ಬಿಡೋಣ ಎಂದು ಸವಾಲು ಹಾಕಿದ್ದಾರೆ.
ನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲಾ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇ.90ರಷ್ಟು ಜನರು ಇಂದಿಗೂ ನನ್ನ ಜೊತೆಯಲ್ಲೇ ಇರುವರು. ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ. ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೇನೆ. ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೀನಿ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್ ಆಫೀಸರ್ ಇಂದ ಹಿಡಿದು, ಟೆಕ್ನಿಷಿಯನ್, ಡೈರೆಕ್ಟರ್ ಹಾಗೂ ಪ್ರತಿಯೊಬ್ಬ ನಿರ್ಮಾಪಕ ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲೂ ಮಾತನಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದು ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಹಲವಾರು ಕಾರ್ಯಕ್ರಮವನ್ನು ಮಾಡಿದ್ದಾರೆ. ನಾನು ಈ ಎಲ್ಲಾ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎಂಬ ನಂಬಿಕೆ ನನಗಿತ್ತು. ಇದೀಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು ಮಾಧ್ಯಮದ ನೈತಿಕ ಜವಾಬ್ದಾರಿಗಳನ್ನು ಮರೆತು, ವೈಯಕ್ತಿಕ ದಾಳಿ ನಡೆಸಿ ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದೆ. ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ. ಆದರೆ, 10 ದಿನಗಳ ಬಳಿಕ ಕೊಡುತ್ತೇನೆಂದು ತಿಳಿಸಿದ್ದಾರೆ.
ಈ 10 ದಿನಗಳ ವರೆಗೂ ನಾನು ಕೆಲಸ ಮಾಡಿದ ಪ್ರತೀಯೊಂದು ಸಿನಿಮಾ ಕುರಿತು ಯಾವ ಯಾವ ಸತ್ಯ ಹೊರಗೆ ಬರುತ್ತದೋ, ಅವರವರ ಬಾಯಿಯಿಂದಲೇ ಹೊರಬರಲಿ. ನಾನೂ ಕಾದು ನೋಡುತ್ತೇನೆ. ಜು.11 ರಂದು ಉತ್ತರ ನೀಡುತ್ತೇನೆ. ಕಾದು ನೋಡಿ. ಸತ್ಯ ಪ್ರಬಲವಾಗಿದೆ ಮತ್ತು ಮೇಲುಗೈ ಸಾಧಿಸಬೇಕು. ನನ್ನ ಎಲ್ಲಾ ಎಳು ಬೀಳುಗಳಲ್ಲಿ ನನ್ನ ಜೊತೆಗಿದ್ದ ನನ್ನ ಆತ್ಮೀಯರಿಗೂ, ಹಿತೈಷಿಗಳಿಗೂ ಅಭಿಮಾನಿ ಬಳಗಕ್ಕೂ ಚಿರಋಣಿ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


