ನಟ ನಿರಂಜನ್ ಗೆ ವಿಷ್ಣುದಾದ ಆಶೀರ್ವಾದ ಸಿಕ್ಕಿದೆ- ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಹೀರೋ ಆಗಿ ನಟಿಸಿರುವ 'ನಮ್ಮ ಹುಡುಗರು' ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಹೀರೋ ಆಗಿ ನಟಿಸಿರುವ 'ನಮ್ಮ ಹುಡುಗರು' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಶನಿವಾರ ಟೀಸರ್ ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭ ಕೋರಿದರು.
ನಂತರ ಮಾತನಾಡಿದ ಉಪೇಂದ್ರ, 'ಟೀಸರ್ ಅದ್ಭುತವಾಗಿದೆ. ಇದರಲ್ಲಿ ವಿಷ್ಣು ದಾದಾ ಅವರ ಕಟೌಟ್ ನಿಂದ ನಿರಂಜನ್ ಮೇಲೆ ಹೂವಿನ ಹಾರ ಬೀಳುವಂತೆ ಇಂಟ್ರೊಡಕ್ಷನ್ ಸೀನ್ ಮಾಡಲಾಗಿದೆ. ಅದು ಬಹಳ ಇಷ್ಟ ಆಯ್ತು, ನಿರಂಜನ್ ಮೊದಲು ಬಣ್ಣ ಹಚ್ಚಿದ್ದೇ ವಿಷ್ಣುವರ್ಧನ್ ಅವರ ಸಿನಿಮಾದಲ್ಲಿ. ನಿರಂಜನ್ ಬಹಳ ಅದೃಷ್ಟವಂತ. ವಿಷ್ಣುವರ್ಧನ್ ಅವರ 'ಬಳ್ಳಾರಿ ನಾಗ' ಚಿತ್ರದಲ್ಲಿ ಅವರ ಬಾಲ್ಯದ ಪಾತ್ರವನ್ನು ನಿರಂಜನ್ ಮಾಡಿದ್ದ. ಈಗ ಟೀಸರ್ ನಲ್ಲಿ ಈ ರೀತಿ ತೋರಿಸಿರುವುದು, ಅವರೇ ಇವನಿಗೆ ಆಶೀರ್ವಾದ ಮಾಡಿದಂತೆ ಇದೆ' ಎಂದು ಹೊಗಳಿದರು.
ನಾಯಕ ನಟ ನಿರಂಜನ್ ಮಾತನಾಡಿ, ಮೂರು ವರ್ಷದ ಹಿಂದೆ ಶುರುವಾದ ಜರ್ನಿ ಈಗ ಸಿನಿಮಾ ಸಂಪೂರ್ಣಗೊಂಡಿದ್ದು, ರಿಲೀಸ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದರ ಮೊದಲ ಭಾಗವಾಗಿ ಈಗ ಟೀಸರ್ ರಿಲೀಸ್ ಮಾಡಿದ್ದೇವೆ. ಈ ಸಿನಿಮಾದಲ್ಲಿ ನಾನು ಮಂಡ್ಯದ ಕಡೆಯು ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಭರಮ ಅನ್ನೋದು ನನ್ನ ಪಾತ್ರದ ಹೆಸರು. ನನ್ನ ಜರ್ನಿ ಶುರುವಾಗಿದ್ದೇ ವಿಷ್ಣು ಸರ್ ಅವರ 'ಬಳ್ಳಾರಿ ನಾಗ' ಸಿನಿಮಾದ ಮೂಲಕ. ಇದೀಗ ಸಿನಿಮಾದಲ್ಲೂ ಅವರಿಗೆ ಕನೆಕ್ಷನ್ ಇರುವಂತಹ ಸೀನ್ ಇದೆ. ಆ ಸೀನ್ ತುಂಬ ಹೈಲೈಟ್ ಆಗಿದೆ. ವಿಷ್ಣು ಅವರ ಆಶೀರ್ವಾದ ಇದೆ ನನಗೆ' ಎಂದು ಹೇಳಿಕೊಂಡರು.
ಚಿತ್ರದಲ್ಲಿ ನಾಯಕಿಯಾಗಿ ರಾಧ್ಯಾ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಚೊಚ್ಚಲ ಸಿನಿಮಾ. ಶರತ್ ಲೋಹಿತಾಶ್ವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ , ಆಲ್ ಓಕೆ ಅಲೋಕ್ ಮುಂತಾದವರು ನಟಿಸಿದ್ದಾರೆ. ಎಚ್.ಬಿ.ಸಿದ್ದು ಇದರ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ . ಚಿತ್ರವನ್ನು ಕೆ.ಕೆ. ಅಶ್ರಫ್ ನಿರ್ಮಾಣ ಮಾಡಿದ್ದಾರೆ. 'ನಮ್ಮ ಹುಡುಗರು' ಚಿತ್ರದ ಹಾಡುಗಳಿಗೆ ಅಭಿಮಾನ್ ರಾಯ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿದಾನಂದ್ ಛಾಯಾಗ್ರಹಣ ಮಾಡಿದ್ದು, ದೀಪು ಎಸ್. ಕುಮಾರ್ ಸಂಕಲನ ನಿಭಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


