ಸ್ಫೋರ್ಟ್ಸ್ ಬ್ರಾ ಧರಿಸಿ ಪಾರ್ಕ್ ನಲ್ಲಿ ದೈಹಿಕ ಕಸರತ್ತು ಆರೋಪ; 'ಕಿರಿಕ್' ನಟಿ ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆಗೆ ಯತ್ನ
ಸ್ಫೋರ್ಟ್ಸ್ ಬ್ರಾ ಧರಿಸಿ ಪಾರ್ಕ್ ನಲ್ಲಿ ದೈಹಿಕ ಕಸರತ್ತು ನಡೆಸುತ್ತಿದ್ದ ಆರೋಪದ ಮೇರೆಗೆ ಸ್ಯಾಂಡಲ್ ವುಡ್ ನಟಿ ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರು: ಸ್ಫೋರ್ಟ್ಸ್ ಬ್ರಾ ಧರಿಸಿ ಪಾರ್ಕ್ ನಲ್ಲಿ ದೈಹಿಕ ಕಸರತ್ತು ನಡೆಸುತ್ತಿದ್ದ ಆರೋಪದ ಮೇರೆಗೆ ಸ್ಯಾಂಡಲ್ ವುಡ್ ನಟಿ ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಹೇಳಲಾಗಿದೆ.
ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದ ನಟಿ ಸಂಯುಕ್ತ ಹೆಗ್ಡೆ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ಮತ್ತೊಂದು ವಿವಾದ ಅವರನ್ನು ಸುದ್ದಿಗೆ ಗ್ರಾಸವಾಗುವಂತೆ ಮಾಡಿದೆ. ಪಾರ್ಕ್ ನಲ್ಲಿ ನಟಿ ಸಂಯುಕ್ತ ಹೆಗ್ಡೆ ದೇಹಕಾಣುವಂತಹ ಬಟ್ಟೆ ಧರಿಸಿದ್ದರು ಎಂಬ ಆರೋಪದ ಮೇರೆಗೆ ಸ್ಥಳೀಯರು ಅವರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೂ ಏನಿದು ಘಟನೆ?
ನಿನ್ನೆ ಸಂಜೆ ಬೆಂಗಳೂರಿನ ಅಗರ ಉದ್ಯಾನದಲ್ಲಿ ಸಂಯುಕ್ತಾ ಹೆಗ್ಡೆ ತಮ್ಮ ಸ್ನೇಹಿತೆಯರೊಂದಿಗೆ ವರ್ಕೌಟ್ ಮಾಡುತ್ತಿದ್ದರಂತೆ. ಸ್ಫೋರ್ಟ್ಸ್ ಬ್ರಾ ಧರಿಸಿದ್ದ ಇವರು ಹುಲಾ ಹೂಪ್ ಮಾಡುತ್ತಿದ್ದರಂತೆ. ಆಗ ಅಲ್ಲೇ ಇದ್ದ ಕವಿತಾ ರೆಡ್ಡಿ ಎಂಬ ಮಹಿಳೆ ಹಾಗೂ ಕೆಲ ಸ್ಥಳೀಯರು ಸಂಯುಕ್ತಾ ಅವರು ಅಸಭ್ಯ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾ ಕಿಡಿಕಾರಿದ್ದಾರೆ. ಅಲ್ಲದೆ ತಮ್ಮ ಮೊಬೈಲ್ ನಲ್ಲಿ ಸಂಯುಕ್ತ ಹೆಗ್ಡೆ ಅವರ ವಿಡಿಯೋ ಮಾಡಿದ್ದಾರೆ. ಈ ವೇಳೆಗಾಗಲೇ ಅಲ್ಲಿ ಜನ ಸೇರಿದ್ದು ಕೆಲ ಯುವಕರು ಮತ್ತು ಮಹಿಳೆಯರು ಸಂಯುಕ್ತ ಮತ್ತು ಆಕೆಯ ಸ್ನೇಹಿತರ ವಿರುದ್ಧ ಕಿಡಿಕಾರಿದ್ದಾರೆ. ಇದೇ ವೇಳೆ ಸಂಯುಕ್ತ ಕೂಡ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿಕೊಳ್ಳಲಾರಂಭಿಸಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಇಡೀ ಘಟನೆಯ ವಿವರ ನೀಡಿದ್ದಾರೆ.
ಇನ್ನು ಪರಿಸ್ಥಿತಿ ಹದಗೆಡುತ್ತಲೇ ಸಂಯುಕ್ತ ಮತ್ತು ಆಕೆಯ ಸ್ನೇಹಿತೆಯರನ್ನು ಸ್ಥಳೀಯರು ಪಾರ್ಕ್ ನಲ್ಲೇ ಕೂಡಿಹಾಕಿದ್ದಾರೆ ಎನ್ನಲಾಗಿದೆ. ಅವರು ಹೊರಗೆ ಹೋಗದಂತೆ ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇನ್ನು ಸ್ಟೋರ್ಟ್ಸ್ವೇರ್ ತೊಟ್ಟು ವರ್ಕೌಟ್ ಮಾಡುತ್ತಿರುವ ಸಂಯುಕ್ತಾರನ್ನು ಅಸಭ್ಯ ಉಡುಗೆ ತೊಟ್ಟು, ಕೆಟ್ಟದಾಗಿ ವರ್ತನೆ ಮಾಡುತ್ತಿರುವುದಾಗಿ ಕವಿತಾ ರೆಡ್ಡಿ ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಸಂಯುಕ್ತ ನಾವು ಯಾರಿಗೂ ತೊಂದರೆ ಕೊಟ್ಟಿರಲಿಲ್ಲ. ನಮ್ಮ ಪಾಡಿಗೆ ನಾವು ಅಭ್ಯಾಸ ಮಾಡುತ್ತಿದ್ದೆವು. ಆದರೆ ಕವಿತಾ ರೆಡ್ಡಿ ಎಂಬ ಮಹಿಳೆ ನಮ್ಮ ವಿಡಿಯೋ ತೆಗೆದು ಅಸಭ್ಯವಾಗಿ ನಿಂಧಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಯುಕ್ತ ಬೆನ್ನಿಗೆ ನಿಂತ ಸ್ಯಾಂಡಲ್ ವುಡ್
ಇನ್ನು ನಟಿ ಸಂಯುಕ್ತಹೆಗ್ಡೆ ವಿವಾದ ಸುದ್ದಿಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾಂಡಲ್ ವುಡ್ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ನಟಿಯರಾದ ಪರೂಲ್ ಯಾದವ್, ಮೇಘನಾ ಗಾಂವ್ಕರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಸಿಂಪಲ್ ಸುನಿ ಸೇರಿದಂತೆ ಹಲವರು ಸಂಯುಕ್ತ ಹೆಗ್ಡೆ ಪರವಾಗಿ ಮಾತನಾಡಿದ್ದು, ಹಲ್ಲೆಗೆ ಮುಂದಾಗಿದ್ದ ಕವಿತಾ ರೆಡ್ಡಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


