#ಪ್ರಿಯಾಂಕಾರೆಡ್ಡಿ 'ಹತ್ಯಾಚಾರ': ಆಕ್ರೋಶ ಹೊರ ಹಾಕಿದ ತಾರೆಯರು!
ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಪಶುವೈದ್ಯೆಯ ಹತ್ಯೆಯ ವಿರುದ್ಧ ಸಿನಿ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಪಶುವೈದ್ಯೆಯ ಹತ್ಯೆಯ ವಿರುದ್ಧ ಸಿನಿ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ನಟ ಜಗ್ಗೇಶ್, ನಟ ಅನಿರುದ್ಧ್ ಸೇರಿದಂತೆ ದಕ್ಷಿಣ ಭಾರತದ ಹಲವು ಕಲಾವಿದರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, 'ಅಮಾಯಕಿ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ. ಇದು ಇಡೀ ಮನುಕುಲವನ್ನೇ ಕದಲಿಸುವ ವಿಚಾರ. ಪೈಶಾಚಿಕ ಕೃತ್ಯವೆಸಗಿ ಪ್ರಿಯಾಂಕಾಳನ್ನು ಕೊಂದ ಪಾಪಿಗಳನ್ನು ಪ್ರಾಣಿಗಳಿಗೆ ಹೋಲಿಸಿದರೆ ಅವು ಕೂಡ ನಾಚಿಕೆ ಪಟ್ಟುಕೊಳ್ಳುತ್ತವೆ ಎಂದಿದ್ದಾರೆ. ಅಲ್ಲದೆ ಈ ಸಮಾಜದಲ್ಲಿ ಮಹಿಳೆಯಾಗಿ ಇರುವುದೇ ಅಪರಾಧನಾ ಎಂದು ಪ್ರಶ್ನಿಸಿದ್ದಾರೆ. ಶಿಕ್ಷೆ ಆಗೋವರೆಗೂ ಹೋರಾಟ ನಡೆಸೋಣ ಎಂದು ಪಶುವೈದ್ಯೆಯ ದಾರುಣ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಟ್ವಿಟ್ಟರಿನಲ್ಲಿ, ಸುರಕ್ಷತೆ ಎಲ್ಲಿದೆ? ಕೆಟ್ಟ ವಿಷಯಗಳು ಹಾಗೂ ಹಿಂಸಾಚಾರವನ್ನು ನಿರ್ಲಕ್ಷಿಸುವುದರಿಂದ ಪರಿಹಾರ ಸಿಗುವುದಿಲ್ಲ. ನಿಮಗೆ ಅಸುರಕ್ಷತೆ ಎನಿಸಿದಾಗ ದಯವಿಟ್ಟು ಸಹಾಯಕ್ಕಾಗಿ ತಲುಪಿ. ಹಾಗೆಯೇ ನಿಮ್ಮ ಸಹಾಯದ ಅಗತ್ಯ ಇರುವವರ ಜೊತೆ ಇರಿ ಎಂದು ತೆಲಂಗಾಣ ರಾಜ್ಯದ ಪ್ರತಿ ಜಿಲ್ಲೆಯ ಪೊಲೀಸ್ ಠಾಣೆ ಫೋನ್ ನಂಬರ್ ಹಾಗೂ ಇಮೇಲ್ ಐಡಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಇನ್ನು ನಟ ಅನಿರುದ್ಧ್ ಅವರು ಕೂಡ ತಮ್ಮ ಎಫ್‍ಬಿಯಲ್ಲಿ, ವಿಕೃತ ಮನಸ್ಸುಗಳು ಬದಲಾಗುವವರೆಗೂ ಇಂತಹ ಹೇಯ ಕೃತ್ಯ ನಿಲ್ಲದು. ಹೆಣ್ಣನ್ನು ನೋಡಿದಾಗ ಹೆತ್ತವಳು ನೆನಪಾಗಬೇಕೇ ಹೊರತು ಕೆಟ್ಟ ಆಲೋಚನೆಗಳಲ್ಲ. ಅಕ್ಕ- ತಂಗಿಯರ ಮನಸ್ಸು, ದೇಹ ಸುಟ್ಟು ಅದ್ಯಾವ ಸುಖವ ಪಡೆವರೋ. ಆ ದಿನ ರಾತ್ರಿ ಆ ಹೆಣ್ಣು ಮಗಳು ಇದ್ದ ಸ್ಥಿತಿಯ ಅರೆ ಕ್ಷಣ ಊಹಿಸಿಕೊಂಡರೂ ಮುಂದಿನ ಕ್ಷಣದ ಊಹೆ ಬೇಡವೆನಿಸುವುದು. ಹೆಣ್ಣೆಂದರೆ ಪೂಜಿಸುವ ಪವಿತ್ರವಾದ ದೇವರ ಸೃಷ್ಟಿಯೇ ಹೊರತು ತಿಂದು ಬಿಸಾಡುವ ಹಣ್ಣಲ್ಲ. ಆ ಹೆಣ್ಣು ಮಗಳ ಮತ್ತೆ ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲವೆಂಬುದು ತಿಳಿದಿದೆ. ಆದರೆ ಕನಿಷ್ಟ ಪಕ್ಷ ಕಠಿಣ ಶಿಕ್ಷೆಯಿಂದಾದರೂ ಬೇರೆ ಕ್ರೂರ ಮನಸ್ಸುಗಳ ಒಳಗೆ ಭಯ ಮೂಡಿ ಮುಂದೆಂದೂ ಇಂತಹ ಹೇಯ ಕೃತ್ಯ ನಡೆಯದಿರಲಿ. ಹೆತ್ತವಳು ಹೆಣ್ಣು. ಜೊತೆಯಲ್ಲಿ ಹುಟ್ಟುವವಳು ಹೆಣ್ಣು. ಜೊತೆಯಾಗುವವಳು ಹೆಣ್ಣು. ನಮ್ಮ ಪ್ರತಿರೂಪವ ಹಡೆವವಳು ಹೆಣ್ಣು. ರಸ್ತೆಯಲ್ಲಿ ಒಬ್ಬ ಹೆಣ್ಣನ್ನು ನೋಡಿದಾಗ ಪ್ರತಿಯೊಬ್ಬ ಗಂಡು ಅಣ್ಣನಾಗಿ ನಿಂತರೆ ಯಾವ ಹೆಣ್ಣಿಗೂ ಇಂತಹ ಸ್ಥಿತಿ ಬಾರದು. ಕೆಟ್ಟ ಮನಸ್ಸುಗಳು ಬದಲಾಗಲಿ. ಕೆಟ್ಟ ಆಲೋಚನೆಗಳು ಬದಲಾಗಲಿ. ಕಷ್ಟವಾದರೂ, ಆ ತಂದೆ ತಾಯಿಗೆ ನೋವ ತಡೆಯುವ ಶಕ್ತಿ ನೀಡಿ ಬಿಡಲಿ ಭಗವಂತ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಅಂತೆಯೇ ನಟ ಜಗ್ಗೇಶ್ ಕೂಡ ಈ ಕುರಿತಂತೆ ಟ್ವೀಟ್ ಮಾಡಿದ್ದು, ಎಂದು ನಮ್ಮ ದೇಶದಲ್ಲಿ ಇಂಥ ಹೇಯಕೃತ್ಯದ ರಾಕ್ಷಸರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಬರುತ್ತದೋ ಅಲ್ಲಿಯವರೆಗು ಇಂಥ ಕೃತ್ಯ ತಡೆಯಲಾಗದು! "ಹೆಣ್ಣು ಕುಲವೆ ಸಾರ್ವಜನಿಕವಾಗಿ ಒಬ್ಬಂಟಿ ಪ್ರಯಾಣ ಕ್ಷೇಮವಲ್ಲಾ ಕಂದಮ್ಮಗಳೆ ಎಚ್ಚರ" ಸಾಧ್ಯವಾದಷ್ಟು ನಿರ್ಜನ ಪ್ರದೇಶದಲ್ಲಿ ಒಂಟಿ ಸಂಚಾರ ಮಾಡದಿರಿ! ನಿಮ್ಮ ರಕ್ಷಣೆಗೆ ಆಧುನಿಕ ಅವಿಷ್ಕಾರ ಬಳಸಿ!ಹರಿಓಂ. ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


