ಕಿಡ್ನಿ ಫೇಲ್ ಆದ ಬಾಲಕಿಯ ನೆರವಿಗೆ ಧಾವಿಸಿದ ಪವರ್ ಸ್ಟಾರ್ ಪುನೀತ್!
ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಪುಟ್ಟ ಬಾಲಕಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆರವಾಗಿದ್ದು, ಬಾಲಕಿಯ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.

ಬೆಂಗಳೂರು: ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಪುಟ್ಟ ಬಾಲಕಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆರವಾಗಿದ್ದು, ಬಾಲಕಿಯ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.
ಚನ್ನಗಿರಿಯ ಕುಮಾರ್ ಮತ್ತು ಮಂಜುಳಾ ದಂಪತಿಯ ಎರಡನೇ ಮಗಳು ಪ್ರೀತಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಜನವರಿಯಲ್ಲಿ ಪ್ರೀತಿಯ ಎರಡೂ ಕಿಡ್ನಿಗಳು ವಿಫಲವಾಗಿವೆ. ಬಾಲಕಿಯ ತಂದೆ ಕುಮಾರ್ ಬಟ್ಟೆಇಸ್ತ್ರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಹಿರಿಯ ಮಗಳನ್ನು ವಸತಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಆದರೆ ಕಿರಿಯ ಮಗಳಿಗೆ ಇದೀಗ ಅನಾರೋಗ್ಯ ಕಾಡುತ್ತಿದ್ದು, ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಿಡ್ನಿ ವೈಫಲ್ಯವಾಗಿರುವ ಕಾರಣ ಚಿಕಿತ್ಸೆ ದುಬಾರಿಯಾಗಿದ್ದು, ಚಿಕಿತ್ಸೆ ಹಣ ಹೊಂದಿಸಲಾಗದೇ ಭವಣೆ ಪಡುತ್ತಿದ್ದರು.
ಬಾಲಕಿ ಪ್ರೀತಿ ನಟ ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಪುನೀತ್ ರನ್ನು ಒಮ್ಮೆ ನೋಡಬೇಕು ಎಂದು ಹಂಬಲಿಸುತ್ತಿದ್ದಳಂತೆ. ಇದೇ ಸಂದರ್ಭದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮಾಧ್ಯಮಗಳ ಮೂಲಕ ಬಾಲಕಿಯ ವಿಚಾರ ತಿಳಿದಿದ್ದು, ಕುಮಾರ್ ಕುಟುಂಬಕ್ಕೆ ಕರೆ ಮಾಡಿದ ಪುನೀತ್, ತಾನು ಚನ್ನಗಿರಿಗೆ ಹೋಗಲು ಸಾಧ್ಯವಾಗದಿದ್ದುರಿಂದ ನೀವು ಬೆಂಗಳೂರಿಗೆ ಬರಲು ಸಾಧ್ಯವೇ ಎಂದು ಕೇಳಿದ್ದಾರೆ. ಇದಕ್ಕೆ ಕುಟುಂಬದವರು ಒಪ್ಪಿದ ಮೇಲೆ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ‘ಅಂಜನೀಪುತ್ರ' ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪ್ರೀತಿಯ ಕುಟುಂಬ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ಬಾಲಕಿಯ ಆಸೆ ನೆರವೇರಿಸಿದ ಪುನೀತ್, ಆಕೆಯ ಜೊತೆ ಕೆಲ ಸಮಯ ಕಳೆದಿದ್ದಾರೆ.
ಅಲ್ಲದೆ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿ ಅವಳ ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ಹೇಳಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಪ್ರೀತಿಯ ಚಿಕಿತ್ಸಾ ವೆಚ್ಚವನ್ನೂ ತಾನೇ ಭರಿಸುವುದಾಗಿ ಹೇಳಿದರು ಎಂದು ಪ್ರೀತಿಯ ಸೋದರ ಮಾವ ಹನುಮಂತಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


