ನಟ ಪ್ರಭಾಸ್ ರಿಂದಾಗಿ ಬಾಹುಬಲಿ ಸಾಧ್ಯವಾಯಿತು: ನಿರ್ದೇಶಕ ರಾಜಮೌಳಿ
ನಟ ಪ್ರಭಾಸ್ ಅವರಿಂದಾಗಿಯೇ ಬಾಹುಬಲಿ ಚಿತ್ರ ಸಾಧ್ಯವಾಯಿತು ಎಂದು ಖ್ಯಾತ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಮುಂಬೈ: ನಟ ಪ್ರಭಾಸ್ ಅವರಿಂದಾಗಿಯೇ ಬಾಹುಬಲಿ ಚಿತ್ರ ಸಾಧ್ಯವಾಯಿತು ಎಂದು ಖ್ಯಾತ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.
ಮುಂಬೈನಲ್ಲಿ ಬಾಹುಬಲಿ-2 ಚಿತ್ರದ ಐಮ್ಯಾಕ್ಸ್ ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ರಾಜಮೌಳಿ ಅವರು, ಚಿತ್ರದ ನಾಯಕ ನಟ ಪ್ರಭಾಸ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪ್ರಭಾಸ್ ಅವರ ನೆರವು ಇಲ್ಲದೇ ಹೋಗಿದ್ದರೆ ಬಾಹುಬಲಿ ಚಿತ್ರವೇ ಸಾಧ್ಯವಾಗುತ್ತಿರಲಿಲ್ಲ. ಈ ಒಂದು ಚಿತ್ರಕ್ಕಾಗಿ ಪ್ರಭಾಸ್ ತಮ್ಮ ಜೀವನದ ಅಮೂಲ್ಯ ಮೂರುವರೆ ವರ್ಷ ಸಮಯವನ್ನು ಮುಡುಪಾಗಿಟ್ಟಿದ್ದರು. ಅವರ ಈ ಸಮರ್ಪಣಾ ಭಾವದಿಂದಲೇ ಬಾಹುಬಲಿ ಚಿತ್ರ ಸಾಧ್ಯವಾಯಿತು ಎಂದು ಹೇಳಿದ್ದಾರೆ.
ನನ್ನ ಪ್ರಕಾರ ಯಾವುದೇ ನಟ ಕೂಡ ಕೇವಲ ಒಂದು ಚಿತ್ರಕ್ಕಾಗಿ ಇಷ್ಟು ಪ್ರಮಾಣದ ಸಮಯ ಮತ್ತು ಸಮರ್ಪಣೆಯಿಂದ ಇರಲು ಸಾಧ್ಯವಿಲ್ಲ. ಬಾಹುಬಲಿ ಎಂಬ ದೊಡ್ಡ ಹಡಗಿನಲ್ಲಿ ನಾವು ಪ್ರಯಾಣಿಸುತ್ತಿದ್ದೇವೆ. ಬಾಹುಬಲಿ ಎಂಬ ಇಡೀ ಪ್ರಾಜೆಕ್ಟ್ ನಲ್ಲಿ ಇತರರಂತೆ ನಾನು ಕೂಡ ಓರ್ವ ಕಾರ್ಮಿಕ. ಬಾಹುಬಲಿ ಪ್ರಾಜೆಕ್ಟ್ ದೊಡ್ಡದೇ ಹೊರತು ನಿರ್ಮಾಪಕರಾಗಲಿ ಅಥವಾ ನಿರ್ದೇಶಕನಾದ ನಾನಲ್ಲ ಎಂದು ರಾಜಮೌಳಿ ಹೇಳಿದ್ದಾರೆ.
ಇದೇ ವೇಳೆ ಐಮ್ಯಾಕ್ಸ್ ಪೋಸ್ಟರ್ ಕುರಿತು ಮಾತನಾಡಿದ ರಾಜಮೌಳಿ, 15 ವರ್ಷಗಳ ಹಿಂದ ನಾನು ಐಮ್ಯಾಕ್ಸ್ ಮಾದರಿಯ ಮೊದಲ ಸಿನಿಮಾ ನೋಡಿದ್ದೆ. 70 ಎಂಎಂ ಚಿತ್ರಗಳನ್ನು ನೋಡಿ ಬೆಳೆದಿದ್ದ ನಮಗೆ ಐಮ್ಯಾಕ್ಸ್ ಚಿತ್ರ ಹೊಸ ಅನುಭವ ನೀಡಿತು. ಆಗಲೇ ನಿರ್ಧರಿಸಿದ್ದ ಜೀವನದಲ್ಲಿ ಒಮ್ಮೆಯಾದರೂ ಐಮ್ಯಾಕ್ಸ್ ಮಾದರಿಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎಂದು. ಇದೀಗ ಬಾಹುಬಲಿ ಮೂಲಕ ಆ ಕನಸು ಈಡೇರಿದೆ. ಬಾಹುಬಲಿ-2ವನ್ನು ಐಮ್ಯಾಕ್ಸ್ ಮಾದರಿ ಮೂಲಕ ಡಿಜಿಟಲಿ ಎಡಿಟ್ ಮಾಡಲಾಗಿದೆ. ಹೀಗಾಗಿ ಚಿತ್ರ ತುಂಬಾ ರಿಚ್ ಆಗಿ ಕಾಣಲಿದೆ. ಬಾಹುಬಲಿ-2 ಚಿತ್ರದ ಕಥೆಯೇ ಆ ಮಾದರಿಯ ತಂತ್ರಜ್ಞಾನ ಕೇಳುತ್ತದೆ ಎಂದು ಹೇಳಿದರು.
ಈಗಾಗಲೇ ದಾಖಲೆ ಪ್ರಮಾಣದ ಚಿತ್ರಮಂದಿರಗಳು ಬುಕ್ ಆಗಿವೆ. ಆದರೂ ಮತ್ತಷ್ಟು ಥಿಯೇಟರ್ ಗಳ ಅಗತ್ಯವಿದ್ದು, ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಅತೀ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಿದರೆ ಹೆಚ್ಚು ಮಂದಿ ವೀಕ್ಷಿಸುತ್ತಾರೆ. ಇದು ಪ್ರಸ್ತುತ ಬಿಸಿನೆಸ್ ತಂತ್ರಗಾರಿಕೆಯಾಗಿದ್ದು, ಇದನ್ನೇ ನಾವು ಕೂ ಅನುಸರಿಸುತ್ತಿದ್ದೇವೆ ಎಂದು ರಾಜಮೌಳಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


