ಸ್ಯಾಂಡಲ್ ವುಡ್ ಚಿತ್ರದ ನಾಯಕ ನಟ ಆತ್ಮಹತ್ಯೆಗೆ ಯತ್ನ
ಬೆಂಗಳೂರಿನಲ್ಲಿ ನಾಯಕ ನಟನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ನಾಯಕ ನಟನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೌಡಿಗಳ ನಿಜ ಜೀವನದ ಕಥೆಯನ್ನಾಧರಿಸಿ ತಯಾರಾಗುತ್ತಿರುವ ಸಿದ್ದಾಪುರ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ನಟ ರಾಮ್ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಉದ್ಭವ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ಧಾಪುರ ಚಿತ್ರ ಹಣಕಾಸಿನ ಮುಗ್ಗಟ್ಟಿನಿಂದ ಅರ್ಧಕ್ಕೇ ನಿಂತುಹೋದ ಪರಿಣಾಮ ಖಿನ್ನತೆಗೊಳಗಾದ ನಾಯಕ ನಟ ಮತ್ತು ನಿರ್ಮಾಪಕ ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಚನ್ನಮ್ಮನ ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕತ್ರಿಗುಪ್ಪೆಯಲ್ಲಿ ನೆಲೆಸಿದ್ದ ನಲವತ್ತು ವರ್ಷದ ರಾಮ್ ಅವರನ್ನು ಇದೀಗ ಉದ್ಭವ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೂ ತುರ್ತು ಚಿಕಿತ್ಸಾ ಘಟಕದಲ್ಲಿಯೇ ರಾಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ರಾಮ್ ತಂದೆ-ತಾಯಿ ಸೇರಿದಂತೆ ಸಿದ್ಧಾಪುರ ಚಿತ್ರದ ನಿರ್ದೇಶಕ ಕೃಷ್ಣ ಮುಂತಾದವರು ನೆರೆದಿದ್ದಾರೆ.
ಮೂಲತಃ ದೇವನಹಳ್ಳಿಯವರಾದ ರಾಮ್, ಹಲವು ವರ್ಷಗಳಿಂದ ಕತ್ರಿಗುಪ್ಪೆಯಲ್ಲಿ ನೆಲೆಸಿದ್ದಾರೆ. ಸಿದ್ದಾಪುರ ಅವರ ಪ್ರಥಮ ಅಭಿನಯದ ಚಿತ್ರವಾಗಿದ್ದು, ಚಿತ್ರದ ಚಿತ್ರೀಕರಣ ಶೇ.40ರಷ್ಟು ಮುಗಿದಿದೆ. ಈ ನಡುವೆ ಚಿತ್ರದ ನಿರ್ಮಾಪಕರಾಗಿದ್ದ ಶ್ರೀನಿವಾಸ್ ಮುಂದಿನ ಚಿತ್ರೀಕರಣಕ್ಕೆ ಹಣ ಹೊಂದಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಚಿಂತೆಗೊಳಗಾಗಿದ್ದ ನಾಯಕ ನಟ ರಾಮ್ ತಾವೇ ಚಿತ್ರವನ್ನು ನಿರ್ಮಿಸಲು ಮುಂದಾದರು. ಈ ಸಂದರ್ಭದಲ್ಲಿ ಅವರ ತಂದೆ-ತಾಯಿ ತಮ್ಮ ಬಳಿ ಇದ್ದ ಸಾಕಷ್ಟು ಹಣವನ್ನು ನೀಡಿದ್ದರು. ಆದರೂ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ. ಬಳಿಕ ರಾಮ್ ತಮ್ಮ ಸ್ನೇಹಿತರ ಬಳಿ ಹಣಕ್ಕಾಗಿ ಕೇಳಿಕೊಂಡಿದ್ದರು. ಹಲವು ಸ್ನೇಹಿತರು ಹಣ ನೀಡಲು ಒಪ್ಪಿಕೊಂಡು ಆ ನಂತರ ಕೈಕೊಟ್ಟ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ನಿಂತುಹೋಗಿತ್ತು.
ಹೀಗಾಗಿ ತೀವ್ರ ಖಿನ್ನತೆಗೊಳಗಾದ ರಾಮ್ ಇಂದು ಬೆಳಗ್ಗೆ ಯಾರಿಗೂ ತಿಳಿಯದಂತೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ ಇನ್ನೂ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಇನ್ನೂ ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


