'ಕಿಲ್ಲಿಂಗ್ ವೀರಪ್ಪನ್'ಗೆ ಪರೂಲ್, ಯಜ್ಞಾ ನಾಯಕಿಯರು
ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ "ಕಿಲ್ಲಿಂಗ್ ವೀರಪ್ಪನ್"ನಲ್ಲಿ ನಟಿಯರಾದ ಪರೂಲ್ ಯಾದವ್ ಮತ್ತು ನಟಿ ಯಜ್ಞಾಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ.

ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುಭಾಷಾ ಚಿತ್ರ "ಕಿಲ್ಲಿಂಗ್ ವೀರಪ್ಪನ್"ನಲ್ಲಿ ನಟಿಯರಾದ ಪರೂಲ್ ಯಾದವ್ ಮತ್ತು ನಟಿ ಯಜ್ಞಾಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ.
ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ ರಾಮ್ ಗೋಪಾಲ್ ವರ್ಮಾ ಅವರ "ಕಿಲ್ಲಿಂಗ್ ವೀರಪ್ಪನ್" ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿದ್ದು ನಿಜವೇ ಆದರೂ, ಚಿತ್ರದ ಇತರೆ ಪಾತ್ರಗಳ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಚಿತ್ರತಂಡ ಆ ಬಗ್ಗೆ ವಿವರ ನೀಡಿದ್ದು, ನಟಿಯರಾದ ಯಜ್ಞಾಶೆಟ್ಟಿ ಮತ್ತು ನಟಿ ಪರೂಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಮೂಲಗಳ ಪ್ರಕಾರ ಪರೂಲ್ ಯಾದವ್ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ನಟಿ ಯಜ್ಞಾಶೆಟ್ಟಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ಚಿತ್ರದ ಕೇಂದ್ರ ಬಿಂದು ವೀರಪ್ಪನ್ ಪಾತ್ರಕ್ಕೆ ಯಾರು ಆಯ್ಕೆಯಾಗಬಹುದು ಎಂಬ ಪ್ರಶ್ನೆಗೆ ಚಿತ್ರತಂಡದಿಂದ ಬಂದ ಉತ್ತರ ರಂಗ ಪ್ರತಿಭೆ ಸಂದೀಪ್. ಮೂಲತಃ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲಿ ಪಳಗಿರುವ ಸಂದೀಪ್ ರನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವೀರಪ್ಪನ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ನಟಿ ಪರೂಲ್ ಯಾದವ್, "ರಾಮ್ ಗೋಪಾಲ್ ವರ್ಮಾ ಅವರ ಚಿತ್ರದಲ್ಲಿ ನಟಿಸುವುದು ನನ್ನ ಕನಸಾಗಿತ್ತು. ಇದೀಗ ಆ ಕನಸು ಈಡೇರುತ್ತಿದೆ. ಚಿತ್ರದ ಬಗ್ಗೆ ಈಗಗಾಲೇ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಪ್ರಸ್ತುತ ನನ್ನ ಪಾತ್ರದ ಬಗ್ಗೆ ವಿವರ ನೀಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಆದರೆ ಭಾರತೀಯ ಚಿತ್ರರಂಗದ ಖ್ಯಾತನಾಮರ ಚಿತ್ರವೊಂದರಲ್ಲಿ ನಾನು ಕೂಡ ಒಂದು ಪಾತ್ರ ಮಾಡುತ್ತಿದ್ದೇನೆ ಎಂಬುದೇ ಖುಷಿ" ಎಂದು ಹೇಳಿದ್ದಾರೆ. ಚಿತ್ರದ ಮತ್ತೋರ್ವ ನಾಯಕಿ ಯಜ್ಞಾಶೆಟ್ಟಿ ಕೂಡ ತಮ್ಮ ಪಾತ್ರದ ಬಗ್ಗೆ ತೀವ್ರ ಉತ್ಸುಕವಾಗಿದ್ದು, ನಿಜ ಜೀವನದ ಪಾತ್ರ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
"ಯಾವ ಕಾರಣಕ್ಕಾಗಿ ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೆ ನನ್ನನ್ನು ರಾಮ್ ಗೋಪಾಲ್ ವರ್ಮಾ ಆಯ್ಕೆ ಮಾಡಿದ್ದಾರೆ ಎಂದು ತಿಳಿದಿಲ್ಲ. ಆದರೆ ನನ್ನ ಆಯ್ಕೆ ಬಗ್ಗೆ ಸುದ್ದಿ ಬಂದಿದೆ. ಮುತ್ತುಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಲು ನಾನು ಸೂಕ್ತಳೇ ಎಂಬ ಪ್ರಶ್ನೆಯನ್ನು ನನ್ನಲ್ಲಿ ನಾನು ಕೇಳಿಕೊಂಡೆ. ಆದರೆ ನನ್ನ ಮೇಲೆ ನಂಬಿಕೆ ಇಟ್ಟು ನಿರ್ದೇಶಕರು ಆ ಪಾತ್ರದ ಜವಾಬ್ದಾರಿ ನೀಡಿದ್ದಾರೆ. ಹೀಗಾಗಿ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದೇನೆ" ಎಂದು ಯಜ್ಞಾ ಶೆಟ್ಟಿ ಹೇಳಿದರು. ಇನ್ನು ಚಿತ್ರದಲ್ಲಿ ಮೇಕಪ್ ಇಲ್ಲದೇ ನಟಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಒಂದು ವೇಳೆ ಮೇಕಪ್ ರಹಿತ ಅಭಿನಯ ಇಚ್ಛಿಸಿದರೆ ಖಂಡಿತಾ ನಾನು ಮಾಡಲು ಸಿದ್ಧಳಿದ್ದೇನೆ" ಎಂದು ಯಜ್ಞಾಶೆಟ್ಟಿ ಹೇಳಿದರು.
ಇದೇ ಜೂನ್ 27 ರಿಂದ ನಟಿ ಯಜ್ಞಾಶೆಟ್ಟಿ ಕಿಲ್ಲಿಂಗ್ ವೀರಪ್ಪನ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಅಂತೆಯೇ ಮತ್ತೊಂದು ಸಂತೋಷದ ಸುದ್ದಿಯೆಂದರೆ ಕನ್ನಡತಿ ನಟಿ ಯಜ್ಞಾಶೆಟ್ಟಿ ಹಾಲಿವುಡ್ ಹಾರುತ್ತಿದ್ದಾರಂತೆ. ಹಾಲಿವುಡ್ ನ ಖ್ಯಾತ ನಿರ್ದೇಶಕರೊಬ್ಬರು ಹಾಲಿವುಡ್ ಚಿತ್ರದಲ್ಲಿ ಅಭಿನಯಿಸುವ ಪ್ರಸ್ತಾವನೆ ತಂದಿದ್ದಾರಂತೆ. ಆದರೆ ಈ ಬಗ್ಗೆ ನಟಿ ಯಜ್ಞಾಶೆಟ್ಟಿ ಮಾತ್ರ ತುಟಿ ಬಿಚ್ಚುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


