ಸಿನಿಮಾ ಸುದ್ದಿ

ಡಬ್ಬಿಂಗ್ ಹೆಸರಿನಲ್ಲೊಂದು ಚಲನಚಿತ್ರ ವಾಣಿಜ್ಯ ಮಂಡಳಿ

ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಡಬ್ಬಿಂಗ್ ಪರ-ವಿರೋಧದ ವಿವಾದ ಇನ್ನೂ ಬಗೆಹರಿದಿಲ್ಲ. ಈ ನಡುವೆ ಈ ವಿವಾದ ಸಿನಿಮೀಯ...

ಡಬ್ಬಿಂಗ್ ಹೆಸರಿನಲ್ಲೊಂದು ಚಲನಚಿತ್ರ ವಾಣಿಜ್ಯ ಮಂಡಳಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಪರಭಾಷೆ ಚಿತ್ರಗಳ ಡಬ್ಬಿಂಗ್ ಪರ-ವಿರೋಧದ ವಿವಾದ ಇನ್ನೂ ಬಗೆಹರಿದಿಲ್ಲ. ಈ ನಡುವೆ ಈ ವಿವಾದ ಸಿನಿಮೀಯ ತಿರುವು ಪಡೆದುಕೊಂಡಿದೆ. ಕರ್ನಾಟಕ ಸಂಘಗಳ ನೋಂದಣಿ ಇಲಾಖೆಯಲ್ಲಿ ಡಬ್ಬಿಂಗ್ ಹೆಸರಿನಲ್ಲೊಂದು ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ನೋಂದಣಿ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಕನ್ನಡ ಚಿತ್ರಗಳ ನಿರ್ಮಾಪಕರೊಬ್ಬರು `ಕರ್ನಾಟಕ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ' ಹೆಸರಿನ ಸಂಸ್ಥೆಯನ್ನು ನೋಂದಣಿ ಮಾಡಿಸಿದ್ದಾರೆ. ಆದರೆ, ಈ ಸಂಸ್ಥೆಯನ್ನು ನೋಂದಣಿ ಮಾಡಿಸಿದ ವ್ಯಕ್ತಿ ಯಾರೆಂಬುದನ್ನು ನೋಂದಣಿ ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ.

ಇತ್ತೀಚೆಗಷ್ಟೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಬಂಡಾಯ ಎದ್ದು, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವ ಹೆಸರಿನಲ್ಲಿ ಪ್ರತ್ಯೇಕವಾದ ಮತ್ತೊಂದು ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪನೆಗೆ ಮುಂದಾಗಿದ್ದು ದೊಡ್ಡ ವಿವಾದವಾಯಿತು. ಈಗ ಅದರ ಬೆನ್ನಲ್ಲೇ ಕರ್ನಾಟಕ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಅಸ್ತಿತ್ವಕ್ಕೆ ತರುವ ಸಿದ್ಧತೆಗಳು ನಡೆಯುತ್ತಿವೆ.

ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮದಡಿ ಈ ಸಂಸ್ಥೆಯು ಅಧಿಕೃತವಾಗಿ ನೋಂದಣಿಗೊಂಡಿದ್ದು, ಬೆಂಗಳೂರು ನಗರ ಜಿಲ್ಲಾ ಸಹಕಾರ ಸಂಘಗಳ ನೋಂದಣಾಧಿಕಾರಿಗಳು ಇದಕ್ಕೆ ಅಧಿಕೃತ ಮುದ್ರೆ ಒತ್ತಿ, ಸಹಿ ಹಾಕಿದ್ದಾರೆ. ಮೊನ್ನೆಯಷ್ಟೇ `ಬಾಹುಬಲಿ'ಚಿತ್ರದ ಮೂಲಕ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್ ಬೇಕೆಂದು ವಾದ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ವಿರೋಧವೂ ವ್ಯಕ್ತವಾಗಿತ್ತು.

ಈ ಬೆಳವಣಿಗೆಗಳ ಬೆನ್ನಲ್ಲೇ, ಸರ್ಕಾರ ಇದಕ್ಕೆ ಅವಕಾಶ ನೀಡಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕರ್ನಾಟಕ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ, ನಂ, 220, 3ನೇ ಮಹಡಿ, 6ನೇ ಅಡ್ಡರಸ್ತೆ, ಆನಂದರಾವ್ ಬಡಾವಣೆ, ಗಾಂಧಿನಗರ, ಬೆಂಗಳೂರು ವಿಳಾಸದಲ್ಲಿ ಡಬ್ಬಿಂಗ್ ಪರ ಚಲನಚಿತ್ರ ವಾಣಿಜ್ಯ ಮಂಡಳಿ ಸಂಘಗಳ ಅಧಿನಿಯಮದಲ್ಲಿ ಇದು ನೋಂದಣಿಯಾಗಿದೆ.

ಜುಲೈ 17ರಂದು ಇದು ನೋಂದಣಿಯಾಗಿದ್ದು, ಸದರಿ ವಿಳಾಸದಲ್ಲಿ ಕಚೇರಿಯೂ ಆರಂಭವಾಗಿದೆ. ನಿರ್ಮಾಪಕ ಕೃಷ್ಣೇಗೌಡ ಎಂಬವರು ಇದರ ಸೂತ್ರಧಾರಿ. ಇತ್ತೀಚೆಗಷ್ಟೇ ಕೃಷ್ಣೇಗೌಡ, ನಿರ್ಮಾಪಕರನ್ನು ಕಾಪಾಡಿ' ಎಂದು ನಿರ್ಮಾಪಕರ ಸಂಘ ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಪಾಲಿಗೆ ಡಬ್ಬಿಂಗ್ ವಿವಾದ ಹೊತ್ತಿಕೊಂಡು ಹಲವು ವರ್ಷಗಳೇ ಕಳೆದಿವೆ.

ವರನಟ ಡಾ. ರಾಜ್ಕುಕಮಾರ್ ಕೂಡ ಡಬ್ಬಿಂಗ್ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದರು. ಕೆಲವು ನಿರ್ಮಾಪಕರು ಡಬ್ಬಿಂಗ್ ಪರವಾಗಿ ಧ್ವನಿ ಎತ್ತಿದ್ದರೂ, ಡಾ. ರಾಜ್ಕುವಮಾರ್ ವಿರೋಧಿಸಿದ ಕಾರಣಕ್ಕೆ ಡಬ್ಬಿಂಗ್ ಬೇಕು ಎನ್ನುವ ವಾದಕ್ಕೆ ಅಷ್ಟಾಗಿ ಆಗ ಮಾನ್ಯತೆ ಸಿಕ್ಕಿರಲಿಲ್ಲ. ಅಂದಿನಿಂದಲೂ ಅದು ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.