ವಿವಿಧ ಇಲಾಖೆಗಳ 72,186 ಹುದ್ದೆಗಳ ನೇರ ನೇಮಕಾತಿ! ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
2023-24ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40,009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ರಾಜ್ಯದ ಯುವ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂಪರ್ ಘೋಷಣೆಯೊಂದನ್ನು ಹೊರಡಿಸಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,186 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಧಿಕೃತ ಆದೇಶ ಹೊರಡಿಸಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಒಟ್ಟು 72,186 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಲಾಗಿದೆ.
2023-24ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40,009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಪೈಕಿ ಶೇಕಡಾ 80 ರಷ್ಟು ಹುದ್ದೆಗಳನ್ನು (ಅಂದರೆ 32,177 ಹುದ್ದೆಗಳು) ಭರ್ತಿ ಮಾಡಲು ಆರ್ಥಿಕ ಇಲಾಖೆಯು ಈಗಾಗಲೇ ಪರಿಭಾವಿತ ಸಹಮತಿ ನೀಡಿದೆ.
ಉನ್ನತ ಮಟ್ಟದ ಉಸ್ತುವಾರಿ ಮತ್ತು ಜವಾಬ್ದಾರಿ ಹಂಚಿಕೆ: ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಕೈಗೊಳ್ಳಲು ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದ್ದು, ಉಸ್ತುವಾರಿಗಾಗಿ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಆದೇಶ (ಸಂಖ್ಯೆ: CS/21/GEN/2026, ದಿನಾಂಕ: 24.06.2026) ಹೊರಡಿಸಲಾಗಿದೆ.
ಕೃಷಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಸಮಾಜ ಕಲ್ಯಾಣ, ಜಲಸಂಪನ್ಮೂಲ, ಕಂದಾಯ (ವಿಪತ್ತು ನಿರ್ವಹಣೆ), ಕಾರ್ಮಿಕ, ಇಂಧನ ಮತ್ತು ಲೋಕೋಪಯೋಗಿ ಸೇರಿದಂತೆ ಒಟ್ಟು 17 ಇಲಾಖೆಗಳ ನೇರ ನೇಮಕಾತಿ ಹುದ್ದೆಗಳ ಉಸ್ತುವಾರಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ವಹಿಸಲಾಗಿದೆ.
ಕೌಶಲ್ಯಾಭಿವೃದ್ಧಿ, ಅರಣ್ಯ, ಆರ್ಥಿಕ, ಆಹಾರ ಮತ್ತು ನಾಗರಿಕ ಸರಬರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಉನ್ನತ ಶಿಕ್ಷಣ, ಒಳಾಡಳಿತ, ವಸತಿ, ಪ್ರವಾಸೋದ್ಯಮ, ಸಾರಿಗೆ ಹಾಗೂ ನಗರಾಭಿವೃದ್ಧಿ ಸೇರಿದಂತೆ 34 ಇಲಾಖೆಗಳ ನೇರ ನೇಮಕಾತಿ ಹುದ್ದೆಗಳ ಮೇಲ್ವಿಚಾರಣೆ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಲಾಗಿದೆ.
ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ವೇಗವಾಗಿ ಮುಗಿಸಲು ಸರ್ಕಾರವು ಕಟ್ಟುನಿಟ್ಟಿನ ಕಾಲಮಿತಿಯನ್ನು ವಿಧಿಸಿದೆ: ಮುಂದಿನ 2 ತಿಂಗಳ ಒಳಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಮುಂದಿನ 4 ತಿಂಗಳ ಒಳಗಾಗಿ ಸಂಬಂಧಪಟ್ಟ ಪರೀಕ್ಷೆಗಳನ್ನು ನಡೆಸಬೇಕು. ಮುಂದಿನ 6 ತಿಂಗಳ ಒಳಗಾಗಿ ಒಟ್ಟಾರೆ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕಡ್ಡಾಯವಾಗಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವು ಕಟ್ಟುನಿಟ್ಟಿನ ಸೂಚನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



