ಮಧ್ಯಪ್ರಾಚ್ಯ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 789 ಅಂಕ ಇಳಿಕೆ, 24 ಸಾವಿರಕ್ಕಿಂತ ಕೆಳಗೆ ಕುಸಿದ Nifty
ದೇಶೀಯ ಷೇರುಪೇಟೆಗೆ ಸದ್ಯ ಕಚ್ಚಾ ತೈಲ ಬೆಲೆ ಪ್ರಮುಖ ಅಲ್ಪಾವಧಿಯ ಅಪಾಯವಾಗಿ ಪರಿಣಮಿಸಿದೆ. ಅಮೆರಿಕ-ಇರಾನ್ ನಡುವೆ ಮತ್ತೆ ಉದ್ಭವಿಸಿರುವ ಸೇನಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆ ಶೇ.8ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಾದ ಪ್ರಮುಖ ಬೆಳವಣಿಗೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಇಂದು ತಲ್ಲಣಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ದಾಖಲಾಗಿದೆ.
ಹೂಡಿಕೆದಾರರ ವ್ಯಾಪಕ ಷೇರು ಮಾರಾಟದ ಒತ್ತಡದಿಂದಾಗಿ ಬಿಎಸ್‌ಇ ಸೆನ್ಸೆಕ್ಸ್ 789 ಅಂಕಗಳಷ್ಟು ಕುಸಿದರೆ, ಎನ್‌ಎಸ್‌ಇ ನಿಫ್ಟಿ 269 ಅಂಕಗಳನ್ನು ಕಳೆದುಕೊಂಡಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 788.52 ಅಂಕ ಕುಸಿದು 76,155.76ಕ್ಕೆ ತಲುಪಿತು. ಇದೇ ವೇಳೆ 50 ಷೇರುಗಳ ಎನ್‌ಎಸ್‌ಇ ನಿಫ್ಟಿ 269 ಅಂಕ ಇಳಿಕೆಯಾಗಿ 23,786.80ಕ್ಕೆ ತಲುಪಿತು.
ಸೆನ್ಸೆಕ್ಸ್‌ನ 30 ಕಂಪನಿಗಳ ಪೈಕಿ ಇಂಟರ್‌ಗ್ಲೋಬ್ ಏವಿಯೇಷನ್, ಎಟರ್ನಲ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫಿನ್‌ಸರ್ವ್ ಮತ್ತು ಬಜಾಜ್ ಫೈನಾನ್ಸ್ ಪ್ರಮುಖವಾಗಿ ಕುಸಿತ ಕಂಡವು. ಅದಾನಿ ಪೋರ್ಟ್ಸ್ ಹಾಗೂ ಸನ್ ಫಾರ್ಮಾ ಮಾತ್ರ ಏರಿಕೆ ಕಂಡ ಪ್ರಮುಖ ಷೇರುಗಳಾಗಿವೆ.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.0.76ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 95.37 ಅಮೆರಿಕನ್ ಡಾಲರ್‌ಗೆ ತಲುಪಿದೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಜಾಗತಿಕ ಬಾಂಡ್‌ಗಳ ಇಳುವರಿ ಹೆಚ್ಚಳವು ಹೂಡಿಕೆದಾರರ ಭಾವನೆ ಮೇಲೆ ಒತ್ತಡ ಹೇರುತ್ತಿದೆ ಎಂದು ಎನ್‌ರಿಚ್ ಮನಿಯ ಸಿಇಒ ಪೊನ್ಮುಡಿ ಆರ್. ಹೇಳಿದ್ದಾರೆ.
ಭಾರತದ ಆಂತರಿಕ ಆರ್ಥಿಕ ಬೆಳವಣಿಗೆ ಸ್ಥಿರವಾಗಿದ್ದರೂ, ಸದ್ಯದ ಮಾರುಕಟ್ಟೆ ದಿಕ್ಕನ್ನು ಭೌಗೋಳಿಕ ರಾಜಕೀಯ ಹಾಗೂ ಬಾಹ್ಯ ಆರ್ಥಿಕ ಅಪಾಯಗಳು ನಿರ್ಧರಿಸುವ ಸಾಧ್ಯತೆ ಹೆಚ್ಚಿದ್ದು, ಒಟ್ಟಾರೆ ಪರಿಸ್ಥಿತಿ ಎಚ್ಚರಿಕೆಯಿಂದ ನೋಡುವಂತಿದೆ ಎಂದು ತಿಳಿಸಿದ್ದಾರೆ.
ದೇಶೀಯ ಷೇರುಪೇಟೆಗೆ ಸದ್ಯ ಕಚ್ಚಾ ತೈಲ ಬೆಲೆ ಪ್ರಮುಖ ಅಲ್ಪಾವಧಿಯ ಅಪಾಯವಾಗಿ ಪರಿಣಮಿಸಿದೆ. ಅಮೆರಿಕ-ಇರಾನ್ ನಡುವೆ ಮತ್ತೆ ಉದ್ಭವಿಸಿರುವ ಸೇನಾ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆ ಶೇ.8ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಇದರಿಂದ ಮಧ್ಯಪ್ರಾಚ್ಯದಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ-ಇರಾನ್ ಸಂಘರ್ಷ ತೀವ್ರಗೊಂಡಿರುವುದು ಹಾಗೂ ಇದರ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಒಂದೇ ರಾತ್ರಿಯಲ್ಲಿ ಶೇ.5ರಷ್ಟು ಏರಿಕೆಯಾಗಿ 96 ಡಾಲರ್‌ಗೆ ತಲುಪಿರುವುದು ಮಾರುಕಟ್ಟೆಯ ಭಾವನೆಗೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಏಷ್ಯಾದ ಮಾರುಕಟ್ಟೆಗಳಲ್ಲೂ ಬುಧವಾರ ಕುಸಿತ ಮುಂದುವರಿದಿದೆ. ದಕ್ಷಿಣ ಕೊರಿಯಾದ ಕೊಸ್ಪಿ ಶೇ.3ಕ್ಕೂ ಹೆಚ್ಚು ಕುಸಿದರೆ, ಜಪಾನ್‌ನ ನಿಕ್ಕಿ 225 ಸೂಚ್ಯಂಕ ಸುಮಾರು ಶೇ.3ರಷ್ಟು ಇಳಿಕೆಯಾಗಿದೆ. ಶಾಂಘೈ ಎಸ್‌ಎಸ್‌ಇ ಕಾಂಪೋಸಿಟ್ ಹಾಗೂ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕಗಳೂ ಇಳಿಕೆಯಲ್ಲಿ ವಹಿವಾಟು ನಡೆಸಿವೆ.
ಮಂಗಳವಾರ ಅಮೆರಿಕದ ಷೇರುಪೇಟೆಗಳೂ ಕುಸಿತದೊಂದಿಗೆ ವಹಿವಾಟು ಮುಗಿಸಿವೆ. ಎಸ್‌ಆ್ಯಂಡ್‌ಪಿ 500 ಸೂಚ್ಯಂಕ ಶೇ.0.7, ಡೌ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್ ಶೇ.0.8 ಹಾಗೂ ನಾಸ್ಡಾಕ್ ಶೇ.1ರಷ್ಟು ಕುಸಿದಿವೆ. ಏರುತ್ತಿರುವ ಇಂಧನ ಬೆಲೆಗಳು ಮತ್ತು ಬಾಂಡ್ ಇಳುವರಿಯಿಂದ ಹಣಕಾಸು ಪರಿಸ್ಥಿತಿ ಮತ್ತಷ್ಟು ಬಿಗಿಯಾಗುವ ಆತಂಕ ಹೂಡಿಕೆದಾರರಲ್ಲಿ ಮೂಡಿದೆ.
ಅಮೆರಿಕದ 10 ವರ್ಷಗಳ ಆರ್ಥಿಕ ಬಾಂಡ್ ಇಳುವರಿ ಸುಮಾರು ಶೇ.4.79ಕ್ಕೆ ಏರಿಕೆಯಾಗಿದ್ದು, 20 ತಿಂಗಳ ಗರಿಷ್ಠ ಮಟ್ಟದ ಸಮೀಪದಲ್ಲಿದೆ. ಹೆಚ್ಚುತ್ತಿರುವ ಇಂಧನ ವೆಚ್ಚ ಮತ್ತು ಜಾಗತಿಕ ಬಾಂಡ್ ಮಾರುಕಟ್ಟೆಯಲ್ಲಿನ ಮಾರಾಟದ ಪರಿಣಾಮವನ್ನು ಹೂಡಿಕೆದಾರರು ಮರುಮೌಲ್ಯಮಾಪನ ಮಾಡುತ್ತಿರುವುದರಿಂದ ಏಷ್ಯಾದ ಮಾರುಕಟ್ಟೆಗಳೂ ವಾಲ್ ಸ್ಟ್ರೀಟ್‌ನ ಕುಸಿತವನ್ನು ಅನುಸರಿಸಿವೆ ಎಂದು ಎಚ್‌ಎಸ್‌ಟಿ ವೆಲ್ತ್‌ನ ಸಂಸ್ಥಾಪಕ ಹಾಗೂ ಸಿಇಒ ಹರಿಸೆಲ್ವನ್ ರಾಧಾಕೃಷ್ಣನ್ ಹೇಳಿದ್ದಾರೆ.
ಮಂಗಳವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 1,143.38 ಕೋಟಿ ರೂ.ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆ ಅಂಕಿಅಂಶಗಳು ತಿಳಿಸಿವೆ.
ಮಂಗಳವಾರ ವಾರದ ಅವಧಿ ಮುಕ್ತಾಯದ ದಿನದಂದು ಸೆನ್ಸೆಕ್ಸ್ 12.99 ಅಂಕ ಅಥವಾ ಶೇ.0.02ರಷ್ಟು ಇಳಿಕೆಯಾಗಿ 76,944.28ಕ್ಕೆ ವಹಿವಾಟು ಮುಗಿಸಿತ್ತು. ನಿಫ್ಟಿ 24.60 ಅಂಕ ಅಥವಾ ಶೇ.0.10ರಷ್ಟು ಕುಸಿದು 24,055.80ಕ್ಕೆ ಅಂತ್ಯಗೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



