ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಕೇಂದ್ರ ಸರ್ಕಾರ ಶಾಕ್: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ; ಕೆಜಿಗೆ 1 ರೂ ಹೆಚ್ಚಳ..!
ಕೇವಲ 48 ಗಂಟೆಗಳ ಅವಧಿಯಲ್ಲಿ ಇದು ಎರಡನೇ ಬಾರಿಯ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಹಾಗೂ ಆಟೋ-ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದಾರೆ.

ನವದೆಹಲಿ: ದೇಶದಲ್ಲಿ ಜನಸಾಮಾನ್ಯರ ಜೇಬಿಗೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಿಎನ್‌ಜಿ (CNG) ದರವನ್ನು ಪ್ರತಿ ಕೆಜಿಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಕೇವಲ 48 ಗಂಟೆಗಳ ಅವಧಿಯಲ್ಲಿ ಇದು ಎರಡನೇ ಬಾರಿಯ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಹಾಗೂ ಆಟೋ-ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದಾರೆ.
ಮೇ 15 ರಂದು ತೈಲ ಕಂಪನಿಗಳು ಸಿಎನ್‌ಜಿ ಬೆಲೆಯನ್ನು 2 ರೂಪಾಯಿ ಹೆಚ್ಚಿಸಿದ್ದವು. ಇದೀಗ ಮತ್ತೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಇದರೊಂದಿಗೆ ಎರಡು ದಿನಗಳಲ್ಲಿ ಒಟ್ಟು 3 ರೂಪಾಯಿ ಏರಿಕೆ ಕಂಡಂತಾಗಿದೆ.
ಪ್ರಮುಖ ನಗರಗಳ ಇಂದಿನ ಪರಿಷ್ಕೃತ ದರ ಪಟ್ಟಿ (ಪ್ರತಿ ಕೆಜಿಗೆ) ಇಂತಿದೆ...
ದೆಹಲಿ: ರೂ.80.09
ನೋಯ್ಡಾ ಮತ್ತು ಗಾಜಿಯಾಬಾದ್: ರೂ.88.70
ಗುರುಗ್ರಾಮ್: ರೂ.85.12
ಮುಂಬೈ (MMR): ರೂ.84.00
ಬೆಂಗಳೂರು: ರೂ.93.00 (ಸ್ಥಳೀಯ ತೆರಿಗೆಗೆ ಅನುಗುಣವಾಗಿ ವ್ಯತ್ಯಾಸವಿರುತ್ತದೆ)
ಈ ದರ ಏರಿಕೆಯ ಪರಿಣಾಮವಾಗಿ ಸಿಎನ್‌ಜಿ ಆಧಾರಿತ ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಖಾಸಗಿ ವಾಹನ ಬಳಕೆದಾರರ ದಿನನಿತ್ಯದ ವೆಚ್ಚ ಹೆಚ್ಚಾಗಲಿದೆ. ಸಾರಿಗೆ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚವೂ ಏರಿಕೆಯಾಗುವ ಸಾಧ್ಯತೆ ಇದ್ದು, ಇದರ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ದರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಪರಿಸ್ಥಿತಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಂಧನ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಆದರೆ, ನಿರಂತರ ದರ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ದಿನನಿತ್ಯದ ಪ್ರಯಾಣ ವೆಚ್ಚ ಹೆಚ್ಚಾಗುವುದರ ಜೊತೆಗೆ ಸರಕು ಸಾಗಣೆ ವೆಚ್ಚವೂ ಏರಿಕೆಯಾಗಲಿದ್ದು, ಅದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಸಿಎನ್‌ಜಿ ದರ ಹೆಚ್ಚಳದಿಂದ ವಿಶೇಷವಾಗಿ ಆಟೋ ಚಾಲಕರು ಮತ್ತು ಕ್ಯಾಬ್ ಸೇವೆ ನೀಡುವ ಚಾಲಕರ ಆದಾಯದ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ. ಇಂಧನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ದರ ಏರಿಕೆ ಅನಿವಾರ್ಯವಾಗಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



