ಕೇವಲ 1,000 ರೂ ಸಾಲಕ್ಕೆ ಬರ್ಬರ ಹತ್ಯೆ: ಮರಕ್ಕೆ ಕಟ್ಟಿ ಕರೆಂಟ್ ಶಾಕ್ ಕೊಟ್ಟು ಕಾರ್ಮಿಕನ ಕೊಂದ ಗುತ್ತಿಗೆದಾರ!
ಕೇವಲ 1,000 ರೂಪಾಯಿ ಬಾಕಿ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರದ ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಸಾಲದ ಹಣ ವಾಪಸ್ ನೀಡುವ ವಿಚಾರದಲ್ಲಿ ಉಂಟಾದ ಗಲಾಟೆಗೆ ಓರ್ವ ಬಲಿಯಾಗಿದ್ದಾನೆ. ಆ ಕುರಿತ ವರದಿ ಇಲ್ಲಿದೆ:

ನಳಂದಾ (ಬಿಹಾರ): ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ. ಲಕ್ಷಾಂತರ ರೂಪಾಯಿ ಸಾಲ ಪಡೆದು ಬಹುಪಾಲು ತೀರಿಸಿದ್ದರೂ, ಕೇವಲ ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ದೇ ಆ ಬಡ ಕಾರ್ಮಿಕನ ಪಾಲಿಗೆ ಮರಣಶಾಸನವಾಯಿತು. ಅದರಲ್ಲೂ, ಹಣ ವಾಪಸ್ ನೀಡಿದರೂ ಕರುಣೆ ತೋರದ ದುರುಳರು, ಆತನನ್ನು ಮರಕ್ಕೆ ಕಟ್ಟಿ ಕರೆಂಟ್ ಶಾಕ್ ನೀಡಿ ಪತ್ನಿಯ ಕಣ್ಣೆದುರೇ ಚಿತ್ರಹಿಂಸೆ ಕೊಟ್ಟು ಕೊಂದು ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಕೊಲೆಯಾದ ದುರ್ದೈವಿಯನ್ನು ಮಹಾದಲಿತ ಸಮುದಾಯಕ್ಕೆ ಸೇರಿದ ಇಟ್ಟಿಗೆ ಭಟ್ಟಿ ಕಾರ್ಮಿಕ ಸುರೇಂದ್ರ ಮಾಂಜಿ ಎಂದು ಗುರುತಿಸಲಾಗಿದ್ದು, ಸುರೇಂದ್ರ ಮಾಂಜಿ ಇಟ್ಟಿಗೆ ಭಟ್ಟಿ ಗುತ್ತಿಗೆದಾರ ಮುಕೇಶ್ ಯಾದವ್ ಎಂಬಾತನಿಂದ ಸುಮಾರು 4.5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದರಲ್ಲಿ ಬಹುಪಾಲು ಹಣವನ್ನು ಮರುಪಾವತಿಸಿದ್ದರು. ಆದರೆ ಕೇವಲ 1,000 ರೂಪಾಯಿ ಮಾತ್ರ ಬಾಕಿ ಉಳಿದಿತ್ತು. ಇದೇ ಹಣದ ವಿಚಾರವಾಗಿ ಗುತ್ತಿಗೆದಾರ ಮತ್ತು ಕಾರ್ಮಿಕನ ನಡುವೆ ವಿವಾದ ಉಂಟಾಗಿತ್ತು ಎನ್ನಲಾಗಿದೆ.
ಮುಂದುವರೆದು, ಮೃತ ಸುರೇಂದ್ರ ಮಾಂಝಿ ಅವರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅತ್ಯಂತ ಭಯಾನಕ ವಿವರಗಳನ್ನು ಹಂಚಿಕೊಂಡಿದ್ದು, "1,000 ರೂಪಾಯಿ ಸಾಲದ ವಿವಾದದ ಹಿನ್ನೆಲೆಯಲ್ಲಿ ಆರೋಪಿಗಳು ನನ್ನ ಪತಿಯನ್ನು, ಕೆಲಸದ ನೆಪದಲ್ಲಿ ಸೆಪ್ಟೆಂಬರ್ 14 ರಂದು ಮನೆಯಿಂದ ಬಲವಂತವಾಗಿ ಎಳೆದೊಯ್ದು, ತೀವ್ರವಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಅವರನ್ನು ಮರಕ್ಕೆ ಕಟ್ಟಿ ಹಾಕಿ ಕರೆಂಟ್ ಶಾಕ್ (ವಿದ್ಯುತ್ ಆಘಾತ) ನೀಡುವ ಮೂಲಕ ಕ್ರೂರವಾಗಿ ಹೊಡೆದು ಸಾಯಿಸಿದ್ದಾರೆ" ಎಂದು ಆರೋಪಿಸಿದ್ದಾರೆ. ಇದರೊಂದಿಗೆ, "ಅವರು ನಮ್ಮನ್ನು ಹೊಡೆಯಲು ಪ್ರಾರಂಭಿಸಿದಾಗ ನಾವು ಆ ಬಾಕಿ ಇದ್ದ 1,000 ರೂಪಾಯಿ ಹಣವನ್ನು ಅವರಿಗೆ ಹಿಂದಿರುಗಿಸಿದೆವು. ಆದರೂ ಅವರು ಕರುಣೆ ತೋರದೆ ನನ್ನ ಕಣ್ಣೆದುರೇ ನನ್ನ ಪತಿಯನ್ನು ಹೊಡೆದು ಕೊಂದರು" ಎಂದು ಪತ್ನಿ ಕಣ್ಣೀರಿಟ್ಟಿದ್ದು, ಹಲ್ಲೆಯ ತೀವ್ರತೆಗೆ ಸುರೇಂದ್ರ ಮಾಂಜಿ ಸ್ಥಳದಲ್ಲೇ ಮೃತಪಟ್ಟಿದ್ದರು. ಪತ್ನಿ ನವಲೇಜಾ ದೇವಿ ಅವರು ಹೇಗೋ ಕೋಣೆಯ ಕಿಟಕಿಯಿಂದ ಜಿಗಿದು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಏತನ್ಮಧ್ಯೆ, ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಸುರೇಂದ್ರ ಮಾಂಜಿ ಅವರ ಮೃತದೇಹವನ್ನು ಗುಂಡಿಯೊಂದರಲ್ಲಿ ಹೂತು ಹಾಕಿದ್ದರು. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಬಿಹಾರ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಇನ್ನು, ಪತ್ನಿಯ ದೂರಿನನ್ವಯ ಪೊಲೀಸರು ಇಟ್ಟಿಗೆ ಭಟ್ಟಿ ಮಾಲೀಕ ಮುಕೇಶ್ ಯಾದವ್, ಮನೀಶ್, ದಿಲ್‌ಖುಶ್ ಮತ್ತು ಮೃತರ ಸೋದರಸಂಬಂಧಿ ಮೌಲಿ ದೇವಿ (ಈಕೆ ಆರೋಪಿಗಳಿಗೆ ಸಹಾಯ ಮಾಡಿದ್ದಾಳೆ ಎನ್ನಲಾಗಿದೆ) ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಜಮುಯಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರ ಗುಂಡು! ಬಂಧಿತರ ಸಂಖ್ಯೆ 3ಕ್ಕೆ ಏರಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


