Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!
ಜಾಗತಿಕ ರಾಜಕೀಯ ಸಂಘರ್ಷ ಮತ್ತು ಪ್ರಮುಖ ಬ್ಯಾಂಕಿಂಗ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 2000 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 800 ಅಂಕಗಳಷ್ಟು ಪತನಗೊಂಡಿದೆ.

ಮುಂಬೈ: ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ರಕ್ತಪಾತವಾಗಿದ್ದು, ಕೇವಲ ಒಂದು ಗಂಟೆ ಅವಧಿಯಲ್ಲಿ ಹೂಡಿಕೆದಾರರ ಬರೊಬ್ಬರಿ 7.6 ಲಕ್ಷ ಕೋಟಿ ರೂ ನಷ್ಟವಾಗಿದೆ.
ಸತತ ಮೂರು ದಿನಗಳ ಕಾಲ ಲಾಭದಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆಗಳು ಗುರುವಾರ ಭಾರಿ ಕುಸಿತ ಕಂಡಿವೆ. ಜಾಗತಿಕ ರಾಜಕೀಯ ಸಂಘರ್ಷ ಮತ್ತು ಪ್ರಮುಖ ಬ್ಯಾಂಕಿಂಗ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 2000 ಅಂಕಗಳಷ್ಟು ಕುಸಿತ ಕಂಡರೆ, ನಿಫ್ಟಿ 800 ಅಂಕಗಳಷ್ಟು ಪತನಗೊಂಡಿದೆ.
ಇಂದು ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ರೆಡ್ ನಲ್ಲೇ ವಹಿವಾಟು ಆರಂಭವಾಯಿತು. ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದವು. ಇಂದಿನ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ 3.26%ರಷ್ಟು ಕುಸಿತವಾಗಿದೆ.
ಇಂದು ಸೆನ್ಸೆಕ್ಸ್ 2,496.89 ಅಂಕಗಳ ಕುಸಿತದೊಂದಿಗೆ 74,207.24 ಅಂಕಗಳಿಗೆ ಇಳಿಕೆಯಾಗಿದ್ದು, ಅಂತೆಯೇ ನಿಫ್ಟಿ 775.65 ಅಂಕಗಳ ಕುಸಿತದೊಂದಿಗೆ 23,002.15 ಅಂಕಗಳಿಗೆ ಇಳಿಕೆಯಾಗಿದೆ.
1 ಗಂಟೆಯಲ್ಲಿ 7.6 ಲಕ್ಷ ಕೋಟಿ ರೂ ನಷ್ಟ, ದಿನದಲ್ಲಿ 12.5 ಲಕ್ಷ ಕೋಟಿ ರೂ ನಷ್ಟ
ಬುಧವಾರದ ಅಂತ್ಯಕ್ಕೆ 438.63 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ, ಕೇವಲ ಒಂದು ಗಂಟೆಯಲ್ಲಿ 430.99 ಲಕ್ಷ ಕೋಟಿ ರೂಪಾಯಿಗಳಿಗೆ ಕುಸಿದುಹೋಗಿದೆ.
ಅಂದರೆ ಗುರುವಾರ ಒಂದೇ ಗಂಟೆಯಲ್ಲಿ ಹೂಡಿಕೆದಾರರ ಬರೊಬ್ಬರಿ 7.6 ಲಕ್ಷ ಕೋಟಿ ಬಂಡವಾಳ ನಷ್ಟವಾಗಿದೆ. ಅಂತೆಯೇ ಒಂದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸುಮಾರು 11.2 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ನಷ್ಟವಾಗಿದೆ.
ಇರಾನ್ ಯುದ್ಧದ ಎಫೆಕ್ಟ್
ಇರಾನ್ ಗಲ್ಫ್ ವಲಯದ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆಸಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಇದರಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $110ರ ಗಡಿ ದಾಟಿದ್ದು, ಭಾರತದಂತಹ ಆಮದು ಅವಲಂಬಿತ ದೇಶಗಳ ಮೇಲೆ ಒತ್ತಡ ಹೆಚ್ಚಿಸಿದೆ.
ಅಂತೆಯೇ ಕಚ್ಚಾ ತೈಲ ಏರಿಕೆ ಕೂಡ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದ್ದು, ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 112 ಡಾಲರ್ ದಾಟಿದೆ. ಭಾರತವು ತನ್ನ ತೈಲ ಅಗತ್ಯದ ಶೇಕಡಾ 80 ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುವುದರಿಂದ, ಈ ಬೆಲೆ ಏರಿಕೆಯು ಹಣದುಬ್ಬರ ಮತ್ತು ವಿತ್ತೀಯ ಕೊರತೆಯ ಮೇಲೆ ನೇರ ಪರಿಣಾಮ ಬೀರಲಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಅಧ್ಯಕ್ಷ ದಿಢೀರ್ ರಾಜಿನಾಮೆ
ಎಚ್‌ಡಿಎಫ್‌ಸಿ ಬ್ಯಾಂಕಿನ ಅಧ್ಯಕ್ಷರು ಹಠಾತ್ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ಯಾಂಕಿನ ಷೇರುಗಳು ತೀವ್ರ ಕುಸಿತ ಕಂಡಿವೆ. ಇದು ಇಡೀ ಬ್ಯಾಂಕಿಂಗ್ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಅಂತೆಯೇ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿಟ್ಟಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಹಣ ಹಿಂತೆಗೆಯಲು ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



