ವಾಣಿಜ್ಯ

ಕಳೆದ 5 ವರ್ಷಗಳಲ್ಲಿ 100 ಕೋಟಿ ರೂ ಗೂ ಅಧಿಕ ಆದಾಯ ಘೋಷಿಸಿದ ಭಾರತೀಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!

ಆದಾಯ ತೆರಿಗೆ ರಿಟರ್ನ್‌ಗಳಲ್ಲಿ (ITR) 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಘೋಷಿಸಿದವರ ಸಂಖ್ಯೆ 2021-22ರ ಮೌಲ್ಯಮಾಪನ ವರ್ಷದಲ್ಲಿ 142 ಇದ್ದರೆ, ಅದು 2025-26ರಲ್ಲಿ 576ಕ್ಕೆ ಏರಿಕೆಯಾಗಿದೆ.

ಕಳೆದ 5 ವರ್ಷಗಳಲ್ಲಿ 100 ಕೋಟಿ ರೂ ಗೂ ಅಧಿಕ ಆದಾಯ ಘೋಷಿಸಿದ ಭಾರತೀಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ!
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಕಳೆದ ಐದು ವರ್ಷಗಳಲ್ಲಿ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಘೋಷಿಸಿದ ವ್ಯಕ್ತಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸಂಸತ್ತಿನಲ್ಲಿ ಮಂಡಿಸಿದ ಅಂಕಿ-ಅಂಶಗಳು ತಿಳಿಸಿವೆ.

ಅಧಿಕೃತ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ರಿಟರ್ನ್‌ಗಳಲ್ಲಿ (ITR) 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಘೋಷಿಸಿದವರ ಸಂಖ್ಯೆ 2021-22ರ ಮೌಲ್ಯಮಾಪನ ವರ್ಷದಲ್ಲಿ 142 ಇದ್ದರೆ, ಅದು 2025-26ರಲ್ಲಿ 576ಕ್ಕೆ ಏರಿಕೆಯಾಗಿದೆ. ಮೊದಲ ಬಾರಿಗೆ ಇಂತಹ ಅತಿ ಹೆಚ್ಚು ಆದಾಯ ಹೊಂದಿದವರ ಸಂಖ್ಯೆ 500ರ ಗಡಿ ದಾಟಿದೆ.

ದೇಶದಲ್ಲಿ ಆದಾಯ ಮತ್ತು ಸಂಪತ್ತು ಹೆಚ್ಚುತ್ತಿರುವುದು ಆದಾಯ ಅಸಮಾನತೆ, ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಬಿಲಿಯನೇರ್‌ಗಳ ಸಂಖ್ಯೆಯ ಮೇಲೆ ಬೀರುವ ಪರಿಣಾಮ ಕುರಿತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, 2025ರ ಆದಾಯ ತೆರಿಗೆ ಕಾಯ್ದೆ ಅಥವಾ ಹಿಂದಿನ 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ 'ಬಿಲಿಯನೇರ್' ಎಂಬ ಪದಕ್ಕೆ ಯಾವುದೇ ಕಾನೂನುಬದ್ಧ ವ್ಯಾಖ್ಯಾನವಿಲ್ಲ ಎಂದು ತಿಳಿಸಿದ್ದಾರೆ.

ಆದರೆ, ಕಳೆದ ಐದು ಮೌಲ್ಯಮಾಪನ ವರ್ಷಗಳಲ್ಲಿ ಐಟಿಆರ್‌ನಲ್ಲಿ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಘೋಷಿಸಿದ ವ್ಯಕ್ತಿಗಳ ವಿವರಗಳನ್ನು ಅವರು ನೀಡಿದರು.

ಆದಾಯ ಅಸಮಾನತೆ ಕಡಿಮೆ ಮಾಡಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ. 2023-24ರ ಗೃಹ ಬಳಕೆ ವೆಚ್ಚ ಸಮೀಕ್ಷೆ (HCES) ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, ಗ್ರಾಮೀಣ ಪ್ರದೇಶದ ಗಿನಿ ಗುಣಾಂಕ 2022-23ರ 0.266ರಿಂದ 0.237ಕ್ಕೆ ಹಾಗೂ ನಗರ ಪ್ರದೇಶದಲ್ಲಿ 0.314ರಿಂದ 0.284ಕ್ಕೆ ಇಳಿದಿದೆ. ಇದರಿಂದ ಗ್ರಾಮೀಣ-ನಗರ ಆದಾಯ ಅಸಮಾನತೆಯ ಅಂತರ ಕಡಿಮೆಯಾಗುತ್ತಿರುವುದು ಗೋಚರಿಸುತ್ತದೆ ಎಂದು ಅವರು ವಿವರಿಸಿದರು.

ಗಿನಿ ಗುಣಾಂಕ ಎಂದರೆ ಒಂದು ದೇಶದಲ್ಲಿ ಆದಾಯ ಅಥವಾ ಸಂಪತ್ತು ಜನರಲ್ಲಿ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ಅಳೆಯುವ ಅಂಕಿಅಂಶವಾಗಿದೆ. ಇದರ ಮೌಲ್ಯ 0ರಿಂದ 1ರವರೆಗೆ ಇರುತ್ತದೆ. 0 ಎಂದರೆ ಸಂಪೂರ್ಣ ಸಮಾನ ಹಂಚಿಕೆ, 1 ಎಂದರೆ ಸಂಪೂರ್ಣ ಅಸಮಾನ ಹಂಚಿಕೆಯನ್ನು ಸೂಚಿಸುತ್ತದೆ.

ಉದ್ಯೋಗ ಮಾರುಕಟ್ಟೆಯೂ ಕೋವಿಡ್‌ ಪೂರ್ವದ ಮಟ್ಟಕ್ಕಿಂತ ಉತ್ತಮ ಸ್ಥಿತಿಗೆ ಮರಳಿದೆ ಎಂದು ಸಚಿವರು ಹೇಳಿದರು. 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ನಿರುದ್ಯೋಗ ದರ 2022ರಲ್ಲಿ 3.6 ಶೇಕಡಾ ಇದ್ದದ್ದು, 2025ರಲ್ಲಿ 3.1 ಶೇಕಡಾಕ್ಕೆ ಇಳಿಕೆಯಾಗಿದೆ.

ಆದರೆ, ವಿಶ್ವ ಅಸಮಾನತೆ ವರದಿ-2026 ಪ್ರಕಾರ, ಭಾರತದಲ್ಲಿ ಆದಾಯ ಅಸಮಾನತೆ ಇನ್ನೂ ವಿಶ್ವದಲ್ಲೇ ಅತ್ಯಧಿಕ ಮಟ್ಟದಲ್ಲಿದ್ದು, ದೇಶದ ಅಗ್ರ 10 ಶೇಕಡಾ ಜನರು ರಾಷ್ಟ್ರೀಯ ಆದಾಯದ 58 ಶೇಕಡಾ ಪಾಲನ್ನು ಹೊಂದಿದ್ದರೆ, ಕೆಳಗಿನ 50 ಶೇಕಡಾ ಜನರಿಗೆ ಕೇವಲ 15 ಶೇಕಡಾ ಆದಾಯ ಮಾತ್ರ ಲಭಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.