ವಾಣಿಜ್ಯ

West Asia crisis: ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಕಸ್ಟಮ್ಸ್ ಸುಂಕ ವಿನಾಯ್ತಿ

ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಈ ಕ್ರಮ ತಾತ್ಕಾಲಿಕ ಹಾಗೂ ಪರಿಹಾರ ಕ್ರಮವಾಗಿದ್ದು, ಪ್ರಮುಖ ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳ ಲಭ್ಯತೆ ನಿರಂತರವಾಗಿ ಸಿಗಲು, ಕೈಗಾರಿಕೆಗಳ ವೆಚ್ಚ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ಜಾಗತಿಕ ಅಸ್ಥಿರತೆಯ ನಡುವೆ ಸರಬರಾಜು ಸರಪಳಿಗಳನ್ನು ರಕ್ಷಿಸಲು ಉದ್ದೇಶಿಸಲಾಗಿದೆ.

West Asia crisis: ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಕಸ್ಟಮ್ಸ್ ಸುಂಕ ವಿನಾಯ್ತಿ
ಪಶ್ಚಿಮ ಏಷ್ಯಾ ಯುದ್ಧದ ನಡುವೆ ಸಾಗಾಟ ಮಾರ್ಗಗಳಲ್ಲಿ ಉಂಟಾದ ವ್ಯತ್ಯಯದಿಂದ ರಸಗೊಬ್ಬರ, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲದ ಆಮದು ಕುರಿತು ಆತಂಕಗಳು ಹೆಚ್ಚಿವೆ.
Published On :

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾದ ವ್ಯತ್ಯಯಗಳ ಪರಿಣಾಮವನ್ನು ಕಡಿಮೆಗೊಳಿಸಲು, ಸರಬರಾಜು ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ದೇಶೀಯ ಕೈಗಾರಿಕೆ ಹಾಗೂ ಗ್ರಾಹಕರನ್ನು ರಕ್ಷಿಸಲು, ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಪೂರ್ಣ ಅಬಕಾರಿ ಸುಂಕ ವಿನಾಯಿತಿ ಜೂನ್ 30, 2026ರವರೆಗೆ ಇರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಈ ಕ್ರಮ ತಾತ್ಕಾಲಿಕ ಹಾಗೂ ಪರಿಹಾರ ಕ್ರಮವಾಗಿದ್ದು, ಪ್ರಮುಖ ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳ ಲಭ್ಯತೆ ನಿರಂತರವಾಗಿ ಸಿಗಲು, ಕೈಗಾರಿಕೆಗಳ ವೆಚ್ಚ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ಜಾಗತಿಕ ಅಸ್ಥಿರತೆಯ ನಡುವೆ ಸರಬರಾಜು ಸರಪಳಿಗಳನ್ನು ರಕ್ಷಿಸಲು ಉದ್ದೇಶಿಸಲಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷ ಹಿನ್ನೆಲೆಯಲ್ಲಿ ಸಾಗಾಟ ಮಾರ್ಗಗಳು ಮತ್ತು ಸರಬರಾಜು ಸರಪಳಿಗಳಲ್ಲಿ ವ್ಯತ್ಯಯ ಉಂಟಾಗಿದ್ದು, ರಸಗೊಬ್ಬರ, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಆಮದು ಕುರಿತು ಆತಂಕ ಹೆಚ್ಚಾಗಿದೆ. ಭಾರತವು ಇವುಗಳ ಪ್ರಮುಖ ಆಮದು ದೇಶವಾಗಿದೆ.

ಈ ಸುಂಕ ವಿನಾಯಿತಿಯಿಂದ ಪೆಟ್ರೋಕೆಮಿಕಲ್ ಮಧ್ಯವರ್ತಿ ವಸ್ತುಗಳ ಮೇಲೆ ಅವಲಂಬಿತವಾಗಿರುವ ಹಲವಾರು ಕ್ಷೇತ್ರಗಳಿಗೆ ಲಾಭವಾಗಲಿದೆ. ಪ್ಲಾಸ್ಟಿಕ್, ಪ್ಯಾಕೇಜಿಂಗ್, ವಸ್ತ್ರ, ಔಷಧ, ರಾಸಾಯನಿಕ, ವಾಹನ ಭಾಗಗಳು, ಎಲೆಕ್ಟ್ರಾನಿಕ್ಸ್ ಮತ್ತು ನಿರ್ಮಾಣ ಕ್ಷೇತ್ರಗಳು ಇದರ ಪ್ರಯೋಜನ ಪಡೆಯಲಿವೆ. ವಿಶೇಷವಾಗಿ PTA (ಪ್ಯುರಿಫೈಡ್ ಟೆರೆಫ್ಥಾಲಿಕ್ ಆಸಿಡ್), ಮೆಥನಾಲ್ ಮತ್ತು ಅಸೆಟಿಕ್ ಆಸಿಡ್ ಮೇಲೆ ಅವಲಂಬಿತವಾಗಿರುವ ವಸ್ತ್ರ, ಪ್ಯಾಕೇಜಿಂಗ್ ಮತ್ತು ಔಷಧ ಕ್ಷೇತ್ರಗಳಿಗೆ ಉತ್ಪಾದನಾ ವೆಚ್ಚದಲ್ಲಿ ತಕ್ಷಣದ ಪರಿಹಾರ ದೊರೆಯಲಿದೆ.

ಈ ವಿನಾಯ್ತಿಯಲ್ಲಿ ಮೆಥನಾಲ್, ಅನೈಡ್ರಸ್ ಅಮೋನಿಯಾ, ಟೋಲುಯಿನ್, ಸ್ಟೈರಿನ್, ಡೈಕ್ಲೋರೋಮೀಥೇನ್ (ಮೆಥಿಲಿನ್ ಕ್ಲೋರೈಡ್), ವಿನೈಲ್ ಕ್ಲೋರೈಡ್ ಮೋನೋಮರ್, ಪಾಲಿಬ್ಯೂಟಾಡೈನ್, ಸ್ಟೈರಿನ್-ಬ್ಯೂಟಾಡೈನ್ ಹಾಗೂ ಅನ್‌ಸ್ಯಾಚ್ಯುರೇಟೆಡ್ ಪಾಲಿಯೆಸ್ಟರ್ ರೆಸಿನ್‌ಗಳಂತಹ ಪ್ರಮುಖ ಉತ್ಪನ್ನಗಳು ಒಳಗೊಂಡಿವೆ.

ಅದೇ ರೀತಿ, ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಪಾಲಿಕಾರ್ಬೊನೇಟ್, ಎಬಿಎಸ್ ಮತ್ತು ವಿಶೇಷ ಪಾಲಿಯುರಿಥೇನ್‌ಗಳಂತಹ ಉನ್ನತ ದರ್ಜೆಯ ಪಾಲಿಮರ್ ಮತ್ತು ರೆಸಿನ್‌ಗಳ ಸುಂಕ ರಹಿತ ಆಮದು ಲಾಭಕಾರಿಯಾಗಲಿದೆ. ಪಿವಿಸಿ ಮತ್ತು ಪಾಲಿಪ್ರೊಪಿಲೀನ್‌ನಂತಹ ಬಲ್ಕ್ ಪ್ಲಾಸ್ಟಿಕ್‌ಗಳಿಗೂ ವಿನಾಯಿತಿ ನೀಡಿರುವುದರಿಂದ ನಿರ್ಮಾಣ ಹಾಗೂ ಗ್ರಾಹಕ ವಸ್ತು ಮಾರುಕಟ್ಟೆಗಳಿಗೂ ಸಹ ರಕ್ಷಣೆ ದೊರೆಯಲಿದೆ.

ಜಾಗತಿಕ ವಸ್ತು ಬೆಲೆ ಏರಿಕೆಗೆ ತಡೆ ನೀಡುವ ಕ್ರಮವಾಗಿದ್ದು, ಅಗತ್ಯ ಕಚ್ಚಾ ವಸ್ತುಗಳನ್ನು ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಇದರಿಂದ ಉತ್ಪಾದಕರ ಮೇಲೆ ಲಾಭಾಂಶದ ಒತ್ತಡ ಕಡಿಮೆಯಾಗುವುದರ ಜೊತೆಗೆ ಅಂತಿಮ ಗ್ರಾಹಕರಿಗೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಹಾಯವಾಗಲಿದೆ.

ತೈಲ ಅಬಕಾರಿ ಸುಂಕ ದರ ಕಡಿತ

ಫೆಬ್ರವರಿ 28ರಿಂದ ಅಮೆರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ದಾಳಿ ನಡೆಸಿದ ಬಳಿಕ ಜಾಗತಿಕ ಕಚ್ಚಾ ತೈಲದ ಬೆಲೆ ಸುಮಾರು 50 ಶೇಕಡಾ ಏರಿಕೆಯಾಗಿದೆ.

ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಲು, ಕಳೆದ ವಾರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂಪಾಯಿ ಕಡಿತಗೊಳಿಸಿತ್ತು. ಇದರಿಂದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 3 ಶೇಕಡಾಕ್ಕೆ ಇಳಿದಿದ್ದು, ಡೀಸೆಲ್ ಮೇಲಿನ ಸುಂಕ ಶೂನ್ಯಕ್ಕೆ ತಲುಪಿದೆ. ಜೊತೆಗೆ ದೇಶೀಯ ಸರಬರಾಜು ಸ್ಥಿರಗೊಳಿಸಲು ಡೀಸೆಲ್ ಮೇಲೆ 21.50 ರೂಪಾಯಿ ಮತ್ತು ವಿಮಾನ ಇಂಧನ (ATF) ಮೇಲೆ 29.50 ರೂಪಾಯಿ ಪ್ರತಿ ಲೀಟರ್‌ಗೆ ರಫ್ತು ಸುಂಕ ವಿಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.