ಆರ್ ಬಿಐ ವಿತ್ತೀಯ ನೀತಿ ಪ್ರಕಟ: ಬಡ್ಡಿ ದರ ಯಥಾಸ್ಥಿತಿ ಮುಂದುವರಿಕೆ, ಆರ್ಥಿಕ ಬೆಳವಣಿಗೆ ದರ ಶೇ.9.5 ಅಂದಾಜು
ಕೋವಿಡ್-19 ಅನಿಶ್ಚಿತತೆ, ಹಣದುಬ್ಬರದ ಏರಿಳಿತದ ನಡುವೆ ಆರ್ ಬಿಐ ವಿತ್ತೀಯ ನೀತಿ ಸಮಿತಿ ಶುಕ್ರವಾರ ಬಡ್ಡಿ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದರು.

ಮುಂಬೈ: ಕೋವಿಡ್-19 ಅನಿಶ್ಚಿತತೆ, ಹಣದುಬ್ಬರದ ಏರಿಳಿತದ ನಡುವೆ ಆರ್ ಬಿಐ ವಿತ್ತೀಯ ನೀತಿ ಸಮಿತಿ ಶುಕ್ರವಾರ ಬಡ್ಡಿ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದರು.
ಕಳೆದ ವರ್ಷದ ತ್ರೈಮಾಸಿಕದ ಅವಧಿಯಲ್ಲಿದ್ದಂತೆ ರೆಪೊ ದರವನ್ನು ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಮುಂದುವರಿಸಲಾಗಿದೆ. ಈ ಬಾರಿಯ ಹಣಕಾಸು ವರ್ಷದ ಆರಂಭದಲ್ಲಿ ನಡೆಸಲಾದ ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಕೂಡ ರೆಪೊ ಮತ್ತು ರಿವರ್ಸ್ ರೆಪೊ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸಲಾಗಿತ್ತು.
ಕಳೆದ ವರ್ಷ ಕೋವಿಡ್ ಸೋಂಕು ಉಂಟಾದ ನಂತರ ವಿತ್ತೀಯ ನೀತಿಯ ದರವನ್ನು ಆರ್ ಬಿಐ ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸುತ್ತಿರುವುದು ಇದು ಆರನೇ ಬಾರಿ. ಈ ಬಾರಿ ಕೂಡ ವಾಹನ, ಗೃಹ ಸಾಲದ ಬಡ್ಡಿದರವನ್ನು ಬದಲಾಯಿಸದೆ ಯಥಾಸ್ಥಿತಿ ಕಾಪಾಡಲಾಗಿದೆ.
ಕೋವಿಡ್ ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಮುಂದಿನ ವರ್ಷ ಮಾರ್ಚ್ 31ರವರೆಗೆ ಸೂಕ್ಷ್ಮ ವಲಯಗಳಿಗೆ 15 ಸಾವಿರ ಕೋಟಿ ರೂಪಾಯಿಗಳ ಪ್ರತ್ಯೇಕ ದ್ರವ್ಯತೆ ಹರಿವಿನ ಕೇಂದ್ರವನ್ನು ತೆರೆಯಲಾಗುವುದು. ಆರ್ ಬಿಐ ಸರ್ಕಾರದ ಭದ್ರತೆಗೆ ಜೂನ್ 17ರ ಹೊತ್ತಿಗೆ 40 ಸಾವಿರ ಕೋಟಿ ರೂಪಾಯಿಗಳನ್ನು ಪಡೆಯಲಿದ್ದು, ಎರಡನೇ ಹಣಕಾಸು ತ್ರೈಮಾಸಿಕದಲ್ಲಿ 1.20 ಲಕ್ಷ ಕೋಟಿ ರೂಪಾಯಿಗಳನ್ನು ಜಿ ವಲಯಕ್ಕೆ ತೆಗೆದುಕೊಳ್ಳಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಜಿಡಿಪಿ: 2021-22ನೇ ವರ್ಷದ ದೇಶದ ಜಿಡಿಪಿಯನ್ನು ಶೇಕಡಾ 9.5ರಷ್ಟು ಅಂದಾಜಿಸಲಾಗಿದೆ, ಈ ಹಿಂದೆ 10.5ರಷ್ಟು ಆರ್ ಬಿಐ ಆರ್ಥಿಕ ಅಭಿವೃದ್ಧಿಯನ್ನು ಅಂದಾಜಿಸಿತ್ತು. ಆದರೆ ಕೊರೋನಾ ಎರಡನೇ ಅಲೆ ದೇಶದ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಕುಂಠಿತಗೊಳಿಸಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರ ಮತ್ತು ಬ್ಯಾಂಕ್ ದರಗಳನ್ನು ಬದಲಾಯಿಸದೆ ಶೇಕಡಾ 4.25ರಷ್ಟು ನಿಗದಿಪಡಿಸಿದೆ.
ಹಿಂದಿನ ವರ್ಷಕ್ಕಿಂತ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು 1.6% ರಷ್ಟು ಏರಿಕೆಯಾಗಿದೆ ಆದರೆ ಇಡೀ ಹಣಕಾಸು ವರ್ಷದಲ್ಲಿ 7.3% ನಷ್ಟು ಕುಸಿತ ಕಂಡಿದೆ.
ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


