ವಾಹನ ರದ್ದು ನೀತಿಗೆ ವಿತ್ತ ಸಚಿವಾಲಯ ಸಮ್ಮತಿ, ಈಗ ಜಿಎಸ್ಟಿ ಸಮಿತಿ ಮುಂದೆ
ವಾಯುಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ 15 ವರ್ಷಕ್ಕಿಂತಲೂ ಹಳೆಯ ವಾಹನಗಳ ಸಂಚಾರವನ್ನು ....

ನವದೆಹಲಿ: ವಾಯುಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ 15 ವರ್ಷಕ್ಕಿಂತಲೂ ಹಳೆಯ ವಾಹನಗಳ ಸಂಚಾರವನ್ನು ರದ್ದುಮಾಡುವ ಬಹು ನಿರೀಕ್ಷಿತ ನೀತಿಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು ಅದರ ದಾಖಲೆಗಳು ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ ಹೋಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ದೇಶದಲ್ಲಿ ವಾಹನಗಳಿಂದ ವಾಯುಮಾಲಿನ್ಯವಾಗುತ್ತಿರುವುದನ್ನು ತಡೆಗಟ್ಟಲು ಹಳೆ ವಾಹನಗಳ ಸಂಚಾರ ರದ್ದು ನೀತಿಯನ್ನು ತರುವುದಾಗಿ ಕೇಂದ್ರ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದರು. ಇದೀಗ ವಾಹನಗಳನ್ನು ತೆಗೆದುಹಾಕುವ ನೀತಿಗೆ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಸಂಪುಟ ಟಿಪ್ಪಣಿಯನ್ನು ಸಿದ್ದಪಡಿಸಲಾಗುತ್ತಿದೆ.
ಈ ನೀತಿ ಜಿಎಸ್ ಟಿ ಮಂಡಳಿಗೆ ಹೋಗಲಿದ್ದು ಅಲ್ಲಿ ರಾಜ್ಯಗಳು ಮತ್ತು ಕೇಂದ್ರದಿಂದ ರಿಯಾಯಿತಿ ದರಗಳು ನಿರ್ಧಾರವಾಗುತ್ತವೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುವ ರಿಯಾಯಿತಿ ದರಗಳನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿಗಳು ನಿರ್ಧರಿಸಲಿವೆ.
15 ವರ್ಷಗಳ ಹಳೆಯ ವಾಣಿಜ್ಯ ವಾಹನಗಳ ಸಂಚಾರವನ್ನು ಮೊದಲ ಹಂತದಲ್ಲಿ ತೆಗೆದುಹಾಕಲು ವಾಲ್ಯುಂಟರಿ ವೆಹಿಕಲ್ ಫ್ಲೀಟ್ ಮಾಡರ್ನೈಸೇಷನ್ ಪ್ರೊಗ್ರೆಮ್(ವಿ-ವಿಎಂಪಿ)ಯನ್ನು ಜಾರಿಗೆ ತರಲು ಹೆದ್ದಾರಿ ಸಚಿವಾಲಯ ಉತ್ಸುಕವಾಗಿದೆ.ವಾಹನಗಳಿಂದ ಹೊರಬರುವ ಹೊಗೆಯಿಂದ ಉಂಟಾಗುವ ದಟ್ಟ ವಾಯುಮಾಲಿನ್ಯವನ್ನು ತಡೆಗಟ್ಟಲು ಮತ್ತು ಆಟೊಮೊಬೈಲ್ ಉದ್ಯಮ ಶೇಕಡಾ 22ರಷ್ಟು ವಾರ್ಷಿಕ ಅಭಿವೃದ್ಧಿ ಕಾಣಲು ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಗಡ್ಕರಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ನೀತಿ ಜಾರಿಗೆ ಬಂದ ನಂತರ ಭಾರತ ದೇಶ ಆಟೊಮೊಬೈಲ್ ಉದ್ಯಮದ ಕೇಂದ್ರವಾಗಲಿದ್ದು ವಾಹನಗಳ ಬೆಲೆ ಕೂಡ ಕಡಿಮೆಯಾಗಲಿದೆ. ತೆಗೆದುಹಾಕಿದ ವಾಹನಗಳ ಬಿಡಿಭಾಗಗಳನ್ನು ಆಟೊಭಾಗಗಳ ಉತ್ಪಾದನೆಗೆ ಬಳಸಬಹುದು.
ಇದಕ್ಕೂ ಮುನ್ನ ರಸ್ತೆ, ಹೆದ್ದಾರಿ ಸಚಿವಾಲಯ ವಿ-ವಿಎಂಪಿಗಳ ಪರಿಕಲ್ಪನೆಯನ್ನು ಕಾರ್ಯದರ್ಶಿಗಳ ಸಮಿತಿಗೆ ಕಳುಹಿಸಿದೆ. ವಿ-ವಿಎಂಪಿ ನೀತಿಯಡಿ 28 ದಶಲಕ್ಷ ಹಳೆಯ ವಾಹನಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
ಪ್ರಧಾನ ಮಂತ್ರಿ ಸಚಿವಾಲಯ ಈ ಪ್ರಸ್ತಾವನೆ ಬಗ್ಗೆ ಉತ್ಸುಕವಾಗಿದ್ದು ಒಂದು ಬಾರಿ ಜಾರಿಗೆ ಬಂದ ನಂತರ ಮಾಲಿನ್ಯ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. 15 ವರ್ಷಕ್ಕೂ ಹಳೆಯ ಭಾರೀ ವಾಹನಗಳಿಂದ ಶೇಕಡಾ 65ರಷ್ಟು ಮಾಲಿನ್ಯ ವಾತಾವರಣದಲ್ಲಿ ಉಂಟಾಗುತ್ತದೆ ಎಂದು ನಂಬಲಾಗಿದೆ.
ಸುಮಾರು 15 ಲಕ್ಷ ಬೆಲೆಬಾಳುವ ಹೊಸ ವಾಣಿಜ್ಯ ವಾಹನಗಳನ್ನು ಖರೀದಿಸುವವರಿಗೆ ಈ ಹಿಂದಿನ ಪ್ರಸ್ತಾವನೆಯಂತೆ ಅವರ ಹಳೆಯ ವಾಹನಗಳನ್ನು ನೀಡಿದರೆ 5 ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡಲಿದೆ. ಪ್ರಸ್ತಾವನೆಯನ್ನು ಸ್ವೀಕರಿಸಿದ ನಂತರ 10,000 ಕೋಟಿ ರೂಪಾಯಿ ತೆರಿಗೆ ಸರ್ಕಾರಕ್ಕೆ ಬರಲಿದ್ದು ಆಟೊಮೊಬೈಲ್ ವಲಯಕ್ಕೆ ಉಪಯೋಗವಾಗಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


