ದೆಹಲಿ: ಬೆಳೆ ಹುಲ್ಲು ಸುಟ್ಟು ಮಾಲಿನ್ಯ ತಡೆ ಯೋಜನೆಗೆ 230 ದಶಲಕ್ಷ ಡಾಲರ್ ಸಾಲದು ಎಂದ ಅಧಿಕಾರಿಗಳು
ರೈತರ ಜಮೀನಿನಲ್ಲಿ ಬೆಳೆಗಳನ್ನು ಕಟಾವು ಮಾಡಿದ ನಂತರ ಅವುಗಳನ್ನು ಸುಟ್ಟುಹಾಕಿ ದೆಹಲಿ ಸುತ್ತಮುತ್ತ...

ನವದೆಹಲಿ: ರೈತರ ಜಮೀನಿನಲ್ಲಿ ಬೆಳೆಗಳನ್ನು ಕಟಾವು ಮಾಡಿದ ನಂತರ ಅವುಗಳನ್ನು ಸುಟ್ಟುಹಾಕಿ ದೆಹಲಿ ಸುತ್ತಮುತ್ತಲ ಭಾಗಗಳಲ್ಲಿ ವಾಯುಮಾಲಿನ್ಯ ಹೆಚ್ಚುವುದನ್ನು ತಡೆಗಟ್ಟಲು ಬೆಳೆ ಶೇಷ ಯೋಜನೆಗೆ ಎರಡು ವರ್ಷಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಮೊತ್ತ 230 ದಶಲಕ್ಷ ಡಾಲರ್ ಯೋಜನಾ ಸಲಹೆಗಾರರ ಅಂದಾಜು ವೆಚ್ಚಕ್ಕಿಂತ ಕಡಿಮೆಯಾಗಿದೆ ಮತ್ತು ದೆಹಲಿ ಸುತ್ತಮುತ್ತ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಇದರಿಂದ ಹೆಚ್ಚಿನ ಪ್ರಯೋಜನವಾಗದು ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸಚಿವ ಸಂಪುಟ ಈ ತಿಂಗಳಲ್ಲಿಯೇ ಯೋಜನೆಗೆ ಸಹಿ ಹಾಕುವ ಯೋಜನೆ ಹೊಂದಿದೆ ಎಂದು ಮೂವರು ಸರ್ಕಾರಿ ಅಧಿಕಾರಿಗಳು ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಟಾವಿನ ನಂತರ ಗದ್ದೆಗಳಿಗೆ ಹಾಕುವ ಬೆಂಕಿಯಿಂದ ವಾಯುಮಾಲಿನ್ಯ ಹೆಚ್ಚಾಗುವುದನ್ನು ತಡೆಯಲು ಕಳೆದ ನವೆಂಬರ್ ನಲ್ಲಿ ಸರ್ಕಾರದ ಸಲಹಾ ಗುಂಪು ನೀತಿ ಆಯೋಗ ಪ್ರತಿ ವರ್ಷ 600 ದಶಲಕ್ಷ ಡಾಲರ್ ವೆಚ್ಚ ಮಾಡಬೇಕೆಂದು ಯೋಜಿಸಿತ್ತು. ಆದರೆ ಇದೀಗ ಸರ್ಕಾರ ಬಿಡುಗಡೆ ಮಾಡುತ್ತಿರುವ ಮೊತ್ತ ಅಂದಾಜಿಗಿಂತ ತುಂಬಾ ಕಡಿಮೆಯಾಗಿದೆ. ಹಣವನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಕಟಾವಿನ ನಂತರ ಬೆಳೆಗಳಿಗೆ ಬೆಂಕಿ ಹಾಕಿದ್ದರಿಂದ ಕಳೆದ ನವೆಂಬರ್ ನಲ್ಲಿ ವಾಯುಮಾಲಿನ್ಯಕ್ಕೆ ಕಾಲುಭಾಗದಷ್ಟು ಕಾರಣವಾಗಿತ್ತು ಎಂದು ಕೇಂದ್ರ ಪರಿಸರ ಸಚಿವಾಲಯ ಕಳೆದ ವಾರ ಸಂಸತ್ತಿಗೆ ಹೇಳಿತ್ತು. ಬೆಂಕಿ ಬಿದ್ದು ಬೆಳೆನಾಶವಾಗುವುದರ ಜೊತೆ ಕೈಗಾರಿಕೆಗಳ ಮಾಲಿನ್ಯ, ವಾಹನಗಳಿಂದ ಹೊರಬರುವ ಹೊಗೆ, ಧೂಳು ಇತ್ಯಾದಿಗಳು ದೆಹಲಿ ನಗರಗಳನ್ನು ಸುತ್ತುವರಿದು ಇನ್ನಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಯಲ್ಲಿ ದೆಹಲಿ, ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶಗಳ ರೈತರಿಗೆ ಪರಿಹಾರದ ಹಣ ನೀಡುವುದಾಗಿದೆ. ಇದರಲ್ಲಿ ಬೆಳೆನಾಶಕ್ಕೆ ಶೇಕಡಾ 80ರಷ್ಟು ಪರಿಹಾರದ ಮೊತ್ತವನ್ನು ಹೊಂದಿರುತ್ತದೆ.
ಆದರೆ ಈ ಪರಿಹಾರದ ಮೊತ್ತವನ್ನು ಚಳಿಗಾಲ ಆರಂಭಕ್ಕೆ ನೀಡಬೇಕೆಂಬುದು ಅಧಿಕಾರಿಗಳ ಅಭಿಪ್ರಾಯ. ಬೆಳೆ ಶೇಷ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತಂದರೂ ಕೂಡ ಶೇಕಡಾ 20ರಿಂದ 25ರಷ್ಟಕ್ಕಿಂತ ಹೆಚ್ಚು ವಾಯುಮಾಲಿನ್ಯವನ್ನು ಕಡಿಮೆಮಾಡಬಹುದು ಎಂಬ ಭರವಸೆ ನಮಗಿಲ್ಲ. ದೆಹಲಿಯ ವಾಯುಮಾಲಿನ್ಯ ದಟ್ಟಣೆಯನ್ನು ಕಡಿಮೆ ಮಾಡಲು 5 ವರ್ಷಗಳಾದರೂ ಸಮಯ ಹಿಡಿಯಬಹುದು ಎನ್ನುತ್ತಾರೆ ಅಧಿಕಾರಿಗಳು.
ಈ ಬಗ್ಗೆ ಪ್ರಧಾನಿಯವರ ಕಚೇರಿಯನ್ನು ಇಮೇಲ್ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲಿಲ್ಲ. ಪರಿಸರ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


