ಇನ್ಫೋಸಿಸ್ ನಲ್ಲಿ ಟಾಟಾ ಮಾದರಿಯ ಬಿಕ್ಕಟ್ಟು: ವೇತನದ ಪ್ಯಾಕೇಜ್ ವಿಷಯದಲ್ಲಿ ಭಿನ್ನಾಭಿಪ್ರಾಯ
ಇತ್ತೀಚೆಗಷ್ಟೇ ಟಾಟಾ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಇನ್ಫೋಸಿಸ್ ನಲ್ಲೂ ಇದೇ ಮಾದರಿಯ ಬಿಕ್ಕಟ್ಟು ಎದುರಾಗುವ ಸೂಚನೆಗಳು ಕಂಡುಬಂದಿದೆ.

Published On :
ಬೆಂಗಳೂರು: ಇತ್ತೀಚೆಗಷ್ಟೇ ಟಾಟಾ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ಮಿಸ್ತ್ರಿ ರಾಜೀನಾಮೆ ನೀಡಿದ್ದರು. ಈಗ ಇನ್ಫೋಸಿಸ್ ನಲ್ಲೂ ಇದೇ ಮಾದರಿಯ ಬಿಕ್ಕಟ್ಟು ಎದುರಾಗುವ ಸೂಚನೆಗಳು ಕಂಡುಬಂದಿದೆ.
ಟಾಟಾ ಸಮೂಹದ ಸಂಸ್ಥೆಗಳಲ್ಲಿ ಉಂಟಾದಂತೆ ಇನ್ಫೋಸಿಸ್ ನಲ್ಲೂ ಸ್ಥಾಪಕ ಸದಸ್ಯರು ಹಾಗೂ ಹಾಲಿ ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಖಾಸಗಿ ಚಾನಲ್ ಒಂದಕ್ಕೆ ಸಂದರ್ಶನ ನೀಡಿರುವ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಮಾತುಗಳಲ್ಲಿ ವೇತನದ ಪ್ಯಾಕೇಜ್ ವಿಷಯವಾಗಿ ಸ್ಥಾಪಕ ಸದಸ್ಯರು ಹಾಗೂ ಹಾಲಿ ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬುದು ಸ್ಪಷ್ಟವಾಗಿದೆ.
ಸಂಸ್ಥೆಯನ್ನು ಬಿಟ್ಟು ಹೋಗುವ ಉದ್ಯೋಗಿಗಳಿಗೆ ಕೊನೆಯಲ್ಲಿ ಹೆಚ್ಚಿನ ವೇತನ ನೀಡಲಾಗುತ್ತಿದೆ ಹಾಗೂ ಆಡಳಿತದ ಗುಣಮಟ್ಟ ಕ್ಷೀಣಿಸುತ್ತಿರುವುದರ ಬಗ್ಗೆ ಸಂದರ್ಶನದಲ್ಲಿ ನಾರಾಯಣ ಮೂರ್ತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ನ ಸಿಇಒ ವಿಶಾಲ್ ಸಿಕ್ಕಾ ಅವರಿಗೆ ಕಳೆದ ವರ್ಷ ವೇತನ ಹೆಚ್ಚು ಮಾಡಿದುವುದರ ಹೊರತಾಗಿಯೂ ಈಗ ಒಟ್ಟು 11 ಮಿಲಿಯನ್ ಡಾಲರ್ ವೇತವನ್ನು ನೀಡುವ ಪ್ರಸ್ತಾವನೆಗೆ ನಾರಾಯಣ ಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾರಾಯಣ ಮೂರ್ತಿ ಅವರಂತೆಯೇ, ಮಾಜಿ ಸಿಇಒ ಮೋಹನ್ ದಾಸ್ ಪೈ ಸಹ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರ್ಪೊರೇಟ್ ವ್ಯವಹಾರಗಳಲ್ಲಿ ಪಾರದರ್ಶಕತೆಯ ಅಗತ್ಯವಿದೆ ಹಾಗೂ ನಾರಾಯಣ ಮೂರ್ತಿ ಅವರು ಎತ್ತಿರುವ ಪ್ರಶ್ನೆಗಳು ಸರಿಯಾಗಿವೆ ಎಂದು ಹೇಳಿದ್ದಾರೆ.
ಅತಿ ರಹಸ್ಯದ ರೀತಿಯಲ್ಲಿ ಇನ್ಫೋಸಿಸ್ ನ ಮಾಜಿ ಸಿಎಫ್ಒ ಗೆ ಹೆಚ್ಚು ಮೊತ್ತದ ಬೀಳ್ಕೊಡುಗೆ ವೇತನ (23 ಕೋಟಿ) ನೀಡಿರುವುದು ಸೂಕ್ತ ನಿರ್ಧಾರವಲ್ಲ, ಈ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕಿದೆ ಎಂದು ಮೋಹನ್ ದಾಸ್ ಪೈ ಹೇಳಿದ್ದಾರೆ. ನಾರಾಯಣ ಮೂರ್ತಿ ಅವರ ಹೇಳಿಕೆಗೆ ಮತೋರ್ವ ಸಿಎಫ್ಒ ಸಹ ಪೂರಕವಾಗಿ ಹೇಳಿಕೆ ನೀಡಿದ್ದು, ಅಧ್ಯಕ್ಷರಾದ ಆರ್ ಶೇಷಸಾಯಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇನ್ಫೋಸಿಸ್ ಸ್ಥಾಪಕ ಸದಸ್ಯರು ಶೇಷಸಾಯಿ ಅವರು ಹಾಗೂ ಆಡಳಿತ ಮಂಡಳಿ ಕೈಗೊಂಡ ನಿರ್ಧಾರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಥಾಪಕ ಸದಸ್ಯರ ವಿರೋಧದ ನಡುವೆ ಇನ್ಫೋಸಿಸ್ ನ ಆಡಳಿತ ಮಂಡಳಿ ಸದಸ್ಯೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಸಿಇಒ ಸಿಕ್ಕಾ ಬೆಂಬಲಕ್ಕೆ ನಿಂತಿದ್ದು, ಸಂಸ್ಥೆ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸಿಕ್ಕಾ ಅವರ ಕಾರ್ಯಕ್ಷಮತೆಯಲ್ಲಿ ನಂಬಿಕೆ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


