ಇನ್ಫೋಸಿಸ್ ಸಿಒಒ ವೇತನ ಹೆಚ್ಚಳ; ನಾರಾಯಣ ಮೂರ್ತಿ ಅಸಮಾಧಾನ
ಇನ್ಫೋಸಿಸ್ ಸಂಸ್ಥೆಯಲ್ಲಿನ ಆಂತರಿಕ ಕಲಹ ಮುಂದುವರೆದಿದ್ದು, ಇದೀಗ ಸ್ವತಃ ಸಂಸ್ಥೆಯ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯಲ್ಲಿನ ಆಂತರಿಕ ಕಲಹ ಮುಂದುವರೆದಿದ್ದು, ಇದೀಗ ಸ್ವತಃ ಸಂಸ್ಥೆಯ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ಫೋಸಿಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು ಬಿ ಪ್ರವೀಣ್ ರಾವ್ ಅವರಿಗೆ ಅಗಾಧ ಮೊತ್ತದ ವೇತನ ಏರಿಕೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿರುವುದನ್ನು ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಪ್ರಶ್ನಿಸಿದ್ದಾರೆ. "ನಿರ್ದೇಶಕರ ಮಂಡಳಿಯ ಈ ಕ್ರಮವು ಸರಿಯಾದುದಲ್ಲ ಮತ್ತು ಇದರಿಂದ ಕಂಪೆನಿಯ ನೌಕರರಲ್ಲಿ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಳಿಯ ಮೇಲಿರುವ ವಿಶ್ವಾಸ ಕುಗ್ಗಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಗೆ ಇ-ಮೇಲ್ ರವಾನಿಸಿರುವ ನಾರಾಯಣ ಮೂರ್ತಿ ಅವರು, "ಇನ್ಫೋಸಿಸ್ ನಲ್ಲಿ ಈಗಿರುವ ಕಳಪೆ ಆಡಳಿತ ಮಟ್ಟದ ಪರಿಸ್ಥಿತಿಯಲ್ಲಿ, ಉನ್ನತ ಆಡಳಿತದ ಒಬ್ಬ ವ್ಯಕ್ತಿಗೆ ಮಂಡಳಿಯು ಈ ರೀತಿಯ ಔದಾರ್ಯ ತೋರಿಸಿರುವುದು ಸರಿಯಲ್ಲ. ಕಂಪೆನಿಯ ಹೆಚ್ಚಿನ ನೌಕರರಿಗೆ ಶೇ.6ರಿಂದ ಶೇ.8ರಷ್ಟು ಪರಿಹಾರವನ್ನು ಕೊಟ್ಟಿರುವಾಗ ಉನ್ನತ ಆಡಳಿತದ ಉನ್ನತ ಅಧಿಕಾರಿಗೆ ಶೇ.60ರಿಂದ ಶೇ.70ರಷ್ಟು ಪರಿಹಾರ ಮೊತ್ತವನ್ನು ಏರಿಸುವುದು ಸರಿಯಲ್ಲ ಎಂದು ಮೂರ್ತಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಗಳು, ಡೆಲಿವರಿ ಮ್ಯಾನೇಜರ್ ಗಳು, ವಿಶ್ಲೇಷಕರು, ಪ್ರೋಗ್ರಾಮರ್ ಗಳು, ಕ್ಷೇತ್ರ ಮಾರಾಟಗಾರರು, ಎಂಟ್ರಿ ಲೆವಲ್ ಎಂಜಿನಿಯರ್ ಗಳು, ಗುಮಾಸ್ತರುಸ ಹಾಗೂ ಆಫಿಸ್ ಬಾಯ್ಸ್ ಎಲ್ಲರೂ ಈ ವೇತನ ಪರಿಷ್ಕರಣೆಯಲ್ಲಿ ತಾರತಮ್ಯವಾಗಿದೆ ಎಂದು ಎಣಿಸುತ್ತಾರೆ. ಸಂಸ್ಥೆಯ ತಳಮಟ್ಟದ ಅಭಿವೃದ್ಧಿಯಲ್ಲಿ ಇವರ ಸೇವೆ ಪ್ರಮುಖವಾಗಿದ್ದು, ಇದೀಗ ಸಿಒಒ ವೇತನ ಏರಿಕೆ ಮೂಲಕ ಇವರನ್ನು ನಿರ್ಲಕ್ಷಿಸದಂತೆ ಆಗುತ್ತದೆ. ಸಂಸ್ಥೆಯ ಆಡಳಿತ ಮಂಡಳಿ ನೌಕರರ ವಿಶ್ವಾಸ ಕಳೆದುಕೊಳ್ಳುತ್ತದೆ ಎಂದು ಮೂರ್ತಿ ಹೇಳಿದ್ದಾರೆ.
ಇನ್ನು ಪ್ರಸ್ತುತ ತಮ್ಮ ಅಸಮಾಧಾನಕ್ಕೂ ಹಾಗೂ ಸಂಸ್ಥೆಯ ಸಿಒಒ ಪ್ರವೀಣ್ ರಾವ್ ಮತ್ತು ನನ್ನ ನಡುವಿನ ಸಂಬಂಧಕ್ಕೂ ಸಂಬಂಧವಿಲ್ಲ ಎಂದು ಹೇಳಿರುವ ಮೂರ್ತಿ, "ಪ್ರವೀಣ್ ಬಗ್ಗೆ ನನಗೆ ತುಂಬಾ ಒಲುಮೆ ಇದೆ. ಆತನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ಇನ್ಫೋಸಿಸ್ ನಲ್ಲಿ ನಾನಿರುವಷ್ಟು ಕಾಲವೂ ಆತನನ್ನು ಬೆಳೆಸಿದ್ದೆ. 2013ರಲ್ಲಿ ನಾನು ಇನ್ಫೋಸಿಸ್ ಗೆ ಮರಳಿದಾಗ ಆತ ಕಂಪೆನಿಯ ಕಾರ್ಯಕಾರಿ ಮಂಡಳಿಯಲ್ಲಿಯೂ ಇರಲಿಲ್ಲ. ಬಳಿಕ ಆತನನ್ನು ಮಂಡಳಿಗೆ ಸೇರಿಸಿಕೊಳ್ಳಲಾಯಿತು. ವಿಶಾಲ್ ಸಿಕ್ಕಾ ಅವರನ್ನು ಕಂಪೆನಿಯ ಸಿಇಓ ಹುದ್ದೆಗೆ ನೇಮಕ ಮಾಡಿಕೊಂಡಾಗ ಪ್ರವೀಣ್ ಅವರನ್ನು ಸಿಓಓ ಹುದ್ದೆಗೆ ಬಡ್ತಿ ನೀಡಲಾಯಿತು. ಹಾಗಿರುವಾಗ ಆತನಿಗೆ ಈಗ ಶೇ.60-70ರಷ್ಟು ಪರಿಹಾರ ಏರಿಸಿರುವ ಬಗೆಗಿನ ನನ್ನ ಆಕ್ಷೇಪಕ್ಕೂ ವೈಯಕ್ತಿಕವಾಗಿ ಪ್ರವೀಣ್ ಗೂ ಯಾವುದೇ ಸಂಬಂಧವಿಲ್ಲ' ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


