ವಾಣಿಜ್ಯ

ಸೈರಸ್ ಮಿಸ್ತ್ರಿ ವಜಾಕ್ಕೆ ನ್ಯಾನೋ ಕಾರು ಕಾರಣ?

ನಷ್ಟದಲ್ಲಿರುವ ಟಾಟಾ ನ್ಯಾನೋ ಘಟಕವನ್ನು ಮುಚ್ಚಲು ಮುಂದಾಗಿದ್ದಕ್ಕೇ ತಮ್ಮನ್ನು ಸಂಸ್ಥೆಯಲ್ಲಿ ದುರ್ಬಲರನ್ನಾಗಿಸಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಹೇಳಿದ್ದಾರೆ.

ಸೈರಸ್ ಮಿಸ್ತ್ರಿ ವಜಾಕ್ಕೆ ನ್ಯಾನೋ ಕಾರು ಕಾರಣ?
ನ್ಯಾನೋ ಕಾರು ಮತ್ತು ಟಾಟಾ ಸಂಸ್ಥೆ ಕಲಹ (ಸಂಗ್ರಹ ಚಿತ್ರ)
Published On :

ನವದೆಹಲಿ: ನಷ್ಟದಲ್ಲಿರುವ ಟಾಟಾ ನ್ಯಾನೋ ಘಟಕವನ್ನು ಮುಚ್ಚಲು ಮುಂದಾಗಿದ್ದಕ್ಕೇ ತಮ್ಮನ್ನು ಸಂಸ್ಥೆಯಲ್ಲಿ ದುರ್ಬಲರನ್ನಾಗಿಸಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಟಾಟಾ  ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಹೇಳಿದ್ದಾರೆ.

ದೇಶದ ವಾಣಿಜ್ಯ ಕ್ಷೇತ್ರದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ವಜಾ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸ್ವತಃ ವಜಾಗೊಂಡ  ಅಧ್ಯಕ್ಷ ಸೈರಸ್ ಮಿಸ್ತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟಾಟಾ ಸನ್ಸ್ ಅಧ್ಯಕ್ಷೀಯ ಮಂಡಳಿಗೆ ಸೈರಸ್ ಮಿಸ್ತ್ರಿ ಅವರು ಇ-ಮೇಲ್ ಮೂಲಕ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ತಮ್ಮ ಮತ್ತು ರತನ್ ಟಾಟಾ ನಡುವಿನ ಸಂಬಂಧ ಹಳಸಲು  ಕಾರಣವಾದ ಅಂಶಗಳ ಕುರಿತು ಚರ್ಚಿಸಿದ್ದಾರೆ. ಅಂತೆಯೇ ತಮ್ಮ ವಜಾಕ್ಕೆ ಕಾರಣವಾದ ಅಂಶಗಳನ್ನೂ ಕೂಡ ಮಿಸ್ತ್ರಿ ಬರೆದಿದ್ದು, ಸಂಸ್ಥೆಯಲ್ಲಿ ಯಾವ ರೀತಿ ತಮ್ಮ ಅಧಿಕಾರವನ್ನು  ಮೊಟಕುಗೊಳಿಸಲಾಯಿತು ಎಂಬ ಅಂಶವನ್ನು ಮಿಸ್ತ್ರಿ ಹೇಳಿದ್ದಾರೆ.

"ಟಾಟಾ ಸನ್ಸ್ ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ನನ್ನನ್ನು ದುರ್ಬಲನನ್ನಾಗಿ ಮಾಡಿ ಕೆಲಸಕ್ಕೆ ಬಾರದವನು ಎನ್ನುವ ರೀತಿಯಲ್ಲಿ ನಡೆಸಿಕೊಳ್ಳಲಾಗಿತ್ತು. ನನ್ನ ಅಧಿಕಾರದ ವ್ಯಾಪ್ತಿಯನ್ನು  ಮೊಟಕುಗೊಳಿಸಿ ನನ್ನ ಕೈ ಕಟ್ಟಿ ಹಾಕಲಾಗಿತ್ತು. ಸಂಸ್ಥೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಬದಲಾವಣೆ ತಂದು ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಸಲಾಗಿತ್ತು.  ಅಂತಿಮವಾಗಿ ತಮ್ಮ ವಜಾ ಪ್ರಕ್ರಿಯೆಯಲ್ಲೂ ಕೂಡ ಸಂಸ್ಥೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಯಾವೊಂದು ವಿವರಣೆಗೆ  ಆಸ್ಪದ ಇಲ್ಲದ ರೀತಿಯಲ್ಲಿ, ಸಂಸ್ಥೆಗಾಗಿ ನಾನು ದುಡಿದ ಸೇವೆಯನ್ನು ನಿರ್ಲಕ್ಷಿಸಿ ಕನಿಷ್ಠ ಸೌಜನ್ಯವೂ ತೋರದೆ ನನ್ನನ್ನು ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಯಿತು. ಆಕ್ಟೋಬರ್ 24ರಂದು  ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಂದ ನನಗೆ ಆಗಿರುವ ಆಘಾತ ಬಣ್ಣಿಸಲು ನನ್ನಲ್ಲಿ ಶಬ್ದಗಳೇ ಇಲ್ಲ’ ಎಂದು ಮಿಸ್ತ್ರಿ ನೋವು ತೋಡಿಕೊಂಡಿದ್ದಾರೆ.

ಮಿಸ್ತ್ರಿ ವಜಾಕ್ಕೆ ನ್ಯಾನೋ ಕಾರಣ?
ಇನ್ನು ತಮ್ಮ ವಜಾ ಪ್ರಕ್ರಿಯೆ ಸಂಬಂಧ ನೋವಿನಿಂದಲೇ ಪತ್ರ ಬರೆದಿರುವ ಮಿಸ್ತ್ರಿ, 2012ರ ಡಿಸೆಂಬರ್‌ನಲ್ಲಿ ನಾನು ಅಧಿಕಾರವಹಿಸಿಕೊಂಡಾಗ ಅಧ್ಯಕ್ಷ ಹುದ್ದೆ ನಿಭಾಯಿಸುವಲ್ಲಿ ಮುಕ್ತ  ಸ್ವಾತಂತ್ರ್ಯ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಬಳಿಕ ಟಾಟಾ ಕುಟುಂಬ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ನನ್ನ ನೇಮಕದ ಬಳಿಕ ಟಾಟಾ ಕುಟುಂಬ ಮತ್ತು ಟಾಟಾ  ಸನ್ಸ್‌ನ ನಿರ್ದೇಶಕ ಮಂಡಳಿ ನಡುವಿನ ಸಂಬಂಧ ಕುರಿತು ನಿಯಮಗಳನ್ನು ಬದಲಿಸಲಾಗಿತ್ತು. ಇನ್ನು ನಿರ್ದೇಶಕ ಮಂಡಳಿ ಸಭೆಯಲ್ಲಿ ಭಾಗವಹಿಸುತ್ತಿದ್ದ ಕೆಲ ನಿರ್ದೇಶಕರು ರತನ್‌ ಟಾಟಾ  ಅವರಿಂದ ಸಲಹೆ ಸೂಚನೆಗಳನ್ನು ಪಡೆದು ಸಭೆಯ ಮಧ್ಯದಲ್ಲಿಯೇ ಹಠಾತ್ತಾಗಿ ನಿರ್ಗಮಿಸುತ್ತಿದ್ದರು. ಸಂಸ್ಥೆಯ ಅಧ್ಯಕ್ಷನಾದ ನನ್ನ ಮಾತಿಗೆ ಅಲ್ಲಿ ಬೆಲೆ ಇರಲಿಲ್ಲ ಎಂದು ಮಿಸ್ತ್ರಿ ದೂರಿದ್ದಾರೆ.ಟ

ಟಾಟಾ ಸಂಸ್ಥೆ ಹಲವು ವಿಚಾರಗಳಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದು, ವಾಣಿಜ್ಯ ವ್ಯವಹಾರದಲ್ಲಿ ಇಂತಹ ಸಂಬಂಧಗಳಿಂದಲೇ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸುತ್ತಿತ್ತು. ಪ್ರಮುಖವಾಗಿ  ಸಂಸ್ಥೆಯ ನಷ್ಟಕ್ಕೆ ಕಾರಣವಾಗಿದ್ದ ಟಾಟಾ ನ್ಯಾನೋ ಕಾರಿನ ಘಟಕವನ್ನು ಮುಚ್ಚಲು ನಾನು ನಿರ್ಧರಿಸಿದ್ದೆ. ಪ್ರತೀ ವರ್ಷ ನಾನೋ ಕಾರಿನ ಉತ್ಪಾದನೆ ಸರಿಸುಮಾರು 1 ಸಾವಿರ ಕೋಟಿ  ವ್ಯಯವಾಗಿತ್ತು. ಅದರಿಂದ ಆದಾಯ ಕೂಡ ಕಡಿಮೆಯಾಗುತ್ತಿತ್ತು. ಆದರೆ ಕಾರಿನ ಕುರಿತಂತೆ ಭಾವನಾತ್ಮಕ ಸಂಬಂಧ ಹೊಂದಿದ್ದ ಟಾಟಾ ಕುಟುಂಬ ನ್ಯಾನೋ ಘಟಕ ಸ್ಥಗಿತಕ್ಕೆ ವಿರೋಧ  ವ್ಯಕ್ತಪಡಿಸಿತ್ತು ಎಂದು ಮಿಸ್ತ್ರಿ ಹೇಳಿದ್ದಾರೆ.

ಇದಲ್ಲದೆ ಸಂಸ್ಥೆಯ ಐದು ಲಾಭದಾಯಕವಲ್ಲದ ಉದ್ದಿಮೆಗಳಿಂದ ದೈತ್ಯ ಟಾಟಾ  ಸಮೂಹದ ಸಂಪತ್ತು ರು. 1.18 ಲಕ್ಷ ಕೋಟಿಗಳಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದೂ ಮಿಸ್ತ್ರಿ ಪತ್ರದಲ್ಲಿ  ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.